ಸರಿಯಾಗಿ ಹದಿನೈದು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಮದುವೆಯಾದರು. 2018ರ ಸೆಪ್ಟೆಂಬರ್ 18ರಿಂದ 2026ರ ಫೆಬ್ರವರಿ 26 ತನಕ ಅವರನ್ನು ಸೋಷಿಯಲ್ ಮೀಡಿಯಾದ ಸತ್ಪ್ರಜೆಗಳು ಎಷ್ಟು ಸಾಧ್ಯವೋ ಅಷ್ಟು ಹಿಂಸಿಸಿದ್ದರು.

ಸರಿಯಾಗಿ ಹದಿನೈದು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಮದುವೆಯಾದರು. 2018ರ ಸೆಪ್ಟೆಂಬರ್ 18ರಿಂದ 2026ರ ಫೆಬ್ರವರಿ 26 ತನಕ ಅವರನ್ನು ಸೋಷಿಯಲ್ ಮೀಡಿಯಾದ ಸತ್ಪ್ರಜೆಗಳು ಎಷ್ಟು ಸಾಧ್ಯವೋ ಅಷ್ಟು ಹಿಂಸಿಸಿದ್ದರು. ಹೆಣ್ಣಿನ ಘನತೆ, ಸ್ವಾತಂತ್ರ್ಯ, ಆಯ್ಕೆಯನ್ನು ಕಾಪಾಡುವುದಕ್ಕೆ ಹೊಸ ಹೊಸ ಕಾನೂನುಗಳೂ ತಿದ್ದುಪಡಿಗಳೂ ಬಂದರೂ ಅವ್ಯಾವುವೂ ರಶ್ಮಿಕಾ ಕಣ್ಣೀರು ಒರೆಸಲಿಲ್ಲ. ರಶ್ಮಿಕಾ ಒಬ್ಬರೇ ಆ ಅವಮಾನವನ್ನೆಲ್ಲ ಎದುರಿಸಿ ನಿಂತರು. ದಿಟ್ಟತನ ತೋರಿದರು.

Add Asianetnews Kannada as a Preferred SourcegooglePreferred

ಅಂಥ ಪರಿಸ್ಥಿತಿಯಲ್ಲಿ ಹೇಗಿರಬೇಕು ಅನ್ನುವುದನ್ನು ತನ್ನನ್ನು ಪ್ರೀತಿಸುವ ಅಸಂಖ್ಯಾತರಿಗೆ ತೋರಿಸಿಕೊಟ್ಟರು. ಅವರು ಮದುವೆಯಾದ ಹೊತ್ತಲ್ಲಿ ಅನೇಕರು ರಶ್ಮಿಕಾ ದಿಟ್ಟತನ, ಸಂಯಮ ಮತ್ತು ಸಜ್ಜನಿಕೆಯನ್ನು ಮೆಚ್ಚಿಕೊಂಡು ಮಾತಾಡಿದರು. ರಶ್ಮಿಕಾ ಮಂದಣ್ಣ ಇನ್ನಾದರೂ ಸುಖವಾಗಿರಲಿ ಎಂದು ಹಾರೈಸಿದರು. ಹೆಣ್ಣು, ಅದರಲ್ಲೂ ಸಾರ್ವಜನಿಕ ಜೀವನದಲ್ಲಿರುವ ಹೆಣ್ಣು ಸುಖವಾಗಿದ್ದರೆ, ಸಾಮಾಜಿಕ ಜಾಲತಾಣಕ್ಕೆ ನಿದ್ದೆ ಬರುತ್ತದೆಯೇ?

ಏಳು ವರ್ಷಗಳ ಹಿಂದೆ ರಶ್ಮಿಕಾ ತಾಯಿ ಮಾತಾಡಿದ್ದಾರೆ ಎನ್ನಲಾದ ವಿಡಿಯೋವನ್ನು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ತೇಲಿಬಿಡಲಾಯಿತು. ಮತ್ತೊಂದು ಬಲಿಪಶುವನ್ನು ತಯಾರು ಮಾಡುವ ಹುನ್ನಾರ ನಡೆಯಿತು. ರಶ್ಮಿಕಾರ ಮೇಲೆ ಅಪಾರ ಪ್ರೀತಿಯಿದೆ ಎಂದು ತೋರಿಸುವ ಹೊತ್ತಲ್ಲೇ, ಮತ್ತೊಬ್ಬರನ್ನು ಚುಚ್ಚಲಿಕ್ಕೆ ಸಿದ್ಧತೆಗಳು ಶುರುವಾದವು. ಸೋಷಿಯಲ್ ಮೀಡಿಯಾ ಸಂಭ್ರಮದಿಂದ ಅದನ್ನು ಹಂಚಿಕೊಂಡು ನೆಮ್ಮದಿಯಾಗಿ ನಿದ್ದೆ ಮಾಡಿತು.

ಈಗ ರಶ್ಮಿಕಾ ಮೊದಲ ಬಾರಿಗೆ ಮನಸ್ಸು ತೆರೆದಿಟ್ಟಿದ್ದಾರೆ. ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಅದು ಹೀಗಿದೆ :

ನನ್ನ ಈವರೆಗಿನ ಪಯಣದಲ್ಲಿ ಜತೆಗಿದ್ದ ಎಲ್ಲ ಪ್ರಿಯರೇ ಹಾಗೂ ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲರೇ, ಎಂಟು ವರ್ಷಗಳಿಂದ ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮದ ಕೆಲವು ವಲಯಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿದ್ದೀರಿ, ಕಿರುಕುಳ ಕೊಟ್ಟಿದ್ದೀರಿ, ನನ್ನನ್ನು ಗುರಿಯಾಗಿಟ್ಟುಕೊಂಡು ಸುದ್ದಿಯ ದಾಳಿ ಮಾಡಿದ್ದೀರಿ. ನನ್ನ ಮಾತನ್ನು ಬೇರೆ ಥರ ಅರ್ಥೈಸಿದ್ದನ್ನು, ಅದರಿಂದ ಸುಳ್ಳು ಕತೆಗಳನ್ನು ಕಟ್ಟಿದ್ದನ್ನು, ಸೋಷಿಯಲ್ ಮೀಡಿಯಾದಲ್ಲಿ ಮೆರೆಯಲು ನನ್ನ ವಿರುದ್ಧ ದ್ವೇಷ ಸಾಧಿಸಿದ್ದನ್ನು ನಾನು ನೋಡಿದ್ದೇನೆ.

ಇದೆಲ್ಲ ನನ್ನನ್ನು ನೋಯಿಸಿದ್ದರೂ ನಾನು ಮೌನ ಮತ್ತು ತಾಳ್ಮೆಯಿಂದಿದ್ದೆ. ಸಾರ್ವಜನಿಕ ಜೀವನದಲ್ಲಿ ಇದ್ದ ನಂತರ ಟೀಕೆ ಸಹಜ ಅಂತ ಸುಮ್ಮನಿದ್ದೆ. ನನ್ನ ಪಾಡಿಗೆ ಸಂತೋಷವಾಗಿದ್ದುಕೊಂಡು ಹತ್ತಿರದವರಿಗೆ ಸಂತೋಷ ಕೊಡುತ್ತಾ ನಿಜಾಯಿತಿಯಿಂದ ಜೀವಿಸಿದರೆ ಎಲ್ಲ ಸರಿಯಾಗುತ್ತೆ ಅಂತ ಭಾವಿಸಿದ್ದೆ. ಆದರೆ, ಎಲ್ಲವೂ ಸುಳ್ಳಾಯಿತು. ಕಳೆದ 24 ಗಂಟೆಗಳಲ್ಲಿ ಆಗಿದ್ದನ್ನು ನಾನು ಕಡೆಗಣಿಸಲಿಕ್ಕೆ ಸಾಧ್ಯವೇ?

ಎಂಟು ವರ್ಷಗಳ ಹಿಂದಿನದ್ದು ಎನ್ನಲಾದ ಒಂದು ಖಾಸಗಿ ಮಾತುಕತೆಯನ್ನು ಯಾರೋ ದಾಖಲಿಸಿಕೊಂಡು, ಆ ಮಾತುಕತೆಯಲ್ಲಿ ಭಾಗಿಯಾದವರ ಸಮ್ಮತಿ ಕೇಳದೆ, ಅವರಿಗೆ ತಿಳಿಸದೇ ಹಂಚುತ್ತಿದ್ದಾರೆ. ಆಡಿದ ಮಾತುಗಳ ಆಯ್ದ ಭಾಗಗಳನ್ನು ಮತ್ತೊಂದು ವಿವಾದ ಸೃಷ್ಟಿಸಲೆಂದೇ ಹಂಚಲಾಗುತ್ತಿದೆ. ನನ್ನ ಬದುಕಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಯ ಹೊತ್ತಲ್ಲೇ ಇದನ್ನು ಮಾಡಿರುವುದು ಕೂಡ ಪಿತೂರಿಯೇ.

ಇಷ್ಟೂ ನೀಚರಿರಲು ಸಾಧ್ಯವೇ? ನನ್ನ ಕುಟುಂಬವನ್ನೂ ಯಾರ ಜತೆಗೆ ನನಗೆ ಸೌಹಾರ್ದ ಸ್ನೇಹವಿದೆಯೋ ಅವರನ್ನೂ ಹೀಗೆ ಮಾಡುವ ಮೂಲಕ ಮುಜುಗರಕ್ಕೆ ತಳ್ಳಿದ್ದಾರೆ. ಇದು ಖಾಸಗಿತನದ ಮೇಲಿನ ಆಕ್ರಮಣ, ಮಾನನಷ್ಟ ಹಾಗೂ ದಾರಿತಪ್ಪಿಸುವ ಸುದ್ದಿಯ ಪ್ರಸಾರ. ನಾವು ಎಲ್ಲ ಮರೆತು ಮುಂದೆ ಹೋಗುತ್ತಿದ್ದರೂ ಕೆಲವರು ದ್ವೇಷ ಕಾರುತ್ತಾ, ವಿವಾದ ಸೃಷ್ಟಿಸುತ್ತಾ ಮತ್ತೊಬ್ಬರ ಘನತೆ ಮತ್ತು ಶಾಂತಿಯನ್ನು ಕದಡುತ್ತಿದ್ದಾರೆ.

ಈ ಎಂಟು ವರ್ಷ ಸುಮ್ಮನಿದ್ದೆ, ಈಗ ಒಂದು ಗೆರೆಯೆಳೆದುಕೊಂಂಡಿದ್ದೇನೆ. ಅದನ್ನು ದಾಟಿದರೆ ನಾನು ಸುಮ್ಮನಿರಲಾರೆ. ಈ ಸುದ್ದಿಯನ್ನು ಹಂಚುತ್ತಿರುವ ಎಲ್ಲರಿಗೂ ಕೂಡಲೇ ಅದನ್ನು ನಿಲ್ಲಿಸುವಂತೆ, ಹಾಕಿದ ಸುದ್ದಿಯನ್ನು ತೆಗೆಯುವಂತೆ ಕೇಳಿಕೊಳ್ಳುತ್ತಿದ್ದೇನೆ. ಇದಕ್ಕೆ 24 ಗಂಟೆಗಳ ಕಾಲಾವಕಾಶ. ಹಾಗೆ ಮಾಡದೇ ಹೋದರೆ, ನಾಳೆಯಿಂದ, ಕಾನೂನು ಕ್ರಮ ಆರಂಭವಾಗುತ್ತದೆ. ಲೀಗಲ್ ನೋಟೀಸ್ ಬರಲಿದೆ. ಮೊಕದ್ದಮೆ ಹೂಡಲಾಗುತ್ತದೆ. ಹೀಗೆ ಮಾಡದೇ ಬೇರೆ ದಾರಿಯಿಲ್ಲ ನನಗೆ.

ನಿನ್ನೆಯಷ್ಟೇ ರಮ್ಯ ಕೋರ್ಟಿನ ಮುಂದೆ ನಿಂತು ಸಾಕ್ಷಿ ಹೇಳಿ ಬಂದರು. ಸ್ತ್ರೀಪೀಡಕರಿಗೆ ತಕ್ಕ ಶಾಸ್ತಿ ಆಗಬೇಕು ಅಂದರು. ಮೊನ್ನೆಮೊನ್ನೆ ಸಪ್ತಮಿ ಗೌಡ ನಿಮ್ಮ ಕಣ್ಣುಗಳನ್ನು ತೊಳೆದುಕೊಳ್ಳಿ ಅಂತ ಸೋಷಿಯಲ್ ಮೀಡಿಯಾದ ಸತ್ಪ್ರಜೆಗಳಿಗೆ ಬುದ್ಧಿ ಹೇಳಿದರು. ಅದಕ್ಕೂ ಮುಂಚೆ ಮೇಘನಾ, ರಕ್ಷಿತಾ, ಶ್ರುತಿ ಹರಿಹರನ್, ಶ್ರುತಿ, ಭಾವನಾ- ನೊಂದವರು ಒಬ್ಬಿಬ್ಬರಲ್ಲ. ಹೆಣ್ಣನ್ನು ನೋಯಿಸುವುದು ಮತ್ತು ಅವಮಾನಿಸುವುದು ಸೋಷಿಯಲ್ ಮೀಡಿಯಾಕ್ಕೆ ಬಹಳ ಇಷ್ಟವಾದ ಕ್ರೀಡೆ. ಅದನ್ನು ಅದು ದಿನವೂ ಆಡುತ್ತಿರುತ್ತದೆ.

ಇವತ್ತು ರಶ್ಮಿಕಾ ಮಂದಣ್ಣ ಬರೆದಿರುವ ಪತ್ರದಲ್ಲಿರುವ ನೋವು ಸ್ಪಷ್ಟವಾಗಿ ಕಾಣಿಸುತ್ತಿದೆ. ಅದು ಹೆಣ್ಮಕ್ಕಳೇ ಮುಂದುವರಿಸಿಕೊಂಡು ಹೋಗಬೇಕಾದ ಚಳವಳಿಯಾಗಬೇಕಿದೆ ಎನ್ನುವುದನ್ನೂ ಈಚೀನ ಘಟನೆಗಳು ಹೇಳುತ್ತಿವೆ. ಚಿತ್ರಪ್ರಭ ರಶ್ಮಿಕಾ ಮಂದಣ್ಣ ಅವರ ಜತೆಗೆ ನಿಲ್ಲುತ್ತದೆ ಮತ್ತು ಅವರ ದಿಟ್ಟತನಕ್ಕೆ ಮೆಚ್ಚುಗೆ ಸೂಚಿಸುತ್ತದೆ.