ಬಾಲಿವುಡ್ ನಟ ಸೋನು ಸೂದ್ ವಿರುದ್ಧ 10 ಲಕ್ಷದ ವಂಚನೆ ಪ್ರಕರಣದಲ್ಲಿ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಬಾಲಿವುಡ್ ನಟ ಸೋನು ಸೂದ್ ಹೊಸ ಕಾನೂನು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುವ ನಟ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪಂಜಾಬಿನ ಲುಧಿಯಾನದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ಸೋನು ಸೂದ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದಾರೆ. ಸೋನು ಸೂದ್ ಪದೇ ಪದೇ ಸಮನ್ಸ್ ಹೊರಡಿಸಿದರೂ ಕೋರ್ಟ್ ಗೆ ಹಾಜರಾಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ನಟ ಸೋನು ಸೂದ್ ವಿರುದ್ಧ ವಾರೆಂಟ್
ಈ ಪ್ರಕರಣ 10 ಲಕ್ಷ ರೂಪಾಯಿ ವಂಚನೆಗೆ ಸಂಬಂಧಿಸಿದೆ. ಲುಧಿಯಾನದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ಎಂಬ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಮೋಹಿತ್ ಶುಕ್ಲಾ ಎಂಬಾತ ನಕಲಿ ರೇಜಿಗಾರ್ ಕಾಯಿನ್‌ನಲ್ಲಿ ಹೂಡಿಕೆ ಮಾಡಲು ಆಮಿಷವೊಡ್ಡಿ ವಂಚಿಸಿದ್ದಾನೆ ಎಂದು ರಾಜೇಶ್ ಖನ್ನಾ ದೂರಿದ್ದಾರೆ. ರಾಜೇಶ್ ತಮ್ಮ ದೂರಿನಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಪ್ರಕರಣದಲ್ಲಿ ಸೋನು ಸೂದ್ ಸಾಕ್ಷಿ ಹೇಳಬೇಕಿತ್ತು. ಸೋನು ಸೂದ್‌ಗೆ ಹಲವು ಬಾರಿ ಸಮನ್ಸ್ ಕಳುಹಿಸಲಾಗಿದ್ದರೂ, ಅವರು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲಿಲ್ಲ. ಹೀಗಾಗಿ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಶೀಘ್ರದಲ್ಲೇ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಪಾಪ್‌ಕಾರ್ನ್ ವ್ಯಾಪಾರಿಗೆ ಸಹಾಯ ಹಸ್ತ ಚಾಚಿ, ಬದುಕು ಬದಲಿಸುವ ಭರವಸೆ ಇತ್ತ ನಟ ಸೋನು ಸೂದ್
ಸೋನು ಸೂದ್ ಹೇಳಿದ್ದೇನು?
ಈ ವಾರೆಂಟ್ ಅನ್ನು ಮುಂಬೈನ ಓಶಿವಾರ ಪೊಲೀಸ್ ಠಾಣೆ, ಅಂಧೇರಿ ವೆಸ್ಟ್‌ಗೆ ಕಳುಹಿಸಲಾಗಿದೆ. ಸೋನು ಸೂದ್‌ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10 ರಂದು ನಡೆಯಲಿದೆ. ಮಾಧ್ಯಮವೊಂದಕ್ಕೆ ಮಾತನಾಡಿದ ಸೋನು ಸೂದ್, “ನಾನು ಯಾವುದರ ಬ್ರ್ಯಾಂಡ್ ಅಂಬಾಸಿಡರ್ ಅಲ್ಲ. ನಾನು ಈಗಾಗಲೇ ನನ್ನ ವಕೀಲರ ಮೂಲಕ ಉತ್ತರಿಸಿದ್ದೇನೆ ಮತ್ತು ಫೆಬ್ರವರಿ 10 ರಂದು ಮತ್ತೆ ಉತ್ತರಿಸುತ್ತೇನೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲ ಏನೆಂದು ನನಗೆ ತಿಳಿದಿಲ್ಲ. ಕೆಲವರು ಪ್ರಚಾರ ಪಡೆಯಲು ಹೀಗೆ ಮಾಡುತ್ತಿದ್ದಾರೆ” ಎಂದಿದ್ದಾರೆ.
