ಸೈಫ್ ಆಲಿ ಖಾನ್ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ಅಸಲಿಯಲ್ಲ ಅನ್ನೋ ಸ್ಫೋಟಕ ಹೇಳಿಕೆಯನ್ನು ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಮ್ ತಂದೆ ಹೇಳಿದ್ದಾರೆ. ತಂದೆಯ ಸ್ಫೋಟಕ ಹೇಳಿಕೆ ಇದೀಗ ಮತ್ತಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಮುಂಬೈ(ಜ.24) ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಿನ ದಾಳಿಯ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರವಿಲ್ಲ. ಇತ್ತ ಅರೆಸ್ಟ್ ಮಾಡಿರುವ ಆರೋಪಿ ವಿಚಾರಣೆ ತೀವ್ರಗೊಂಡಿದೆ. ಇದರ ನಡುವೆ ಸೈಫ್ ಮೇಲಿನ ದಾಳಿಯನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಈ ಬೆಳವಣಿಗೆ ನಡುವೆ ಈ ದಾಳಿ ಪ್ರಕರಣದ ದಿಕ್ಕು ಬದಲಿಸುವ ಹೇಳಿಕೆಯನ್ನು ಪೊಲೀಸ್ ವಶದಲ್ಲಿರುವ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಮ್ ತಂದೆ ಶರೀಫುಲ್ ಫಕೀರ್ ನೀಡಿದ್ದಾರೆ. ಪೊಲೀಸರು ಅರೆಸ್ಯ್ ಮಾಡಿರುವ ಆರೋಪಿ, ಸೈಫ್ ಮೇಲೆ ದಾಳಿ ಮಾಡಿದ ವ್ಯಕ್ತಿಯಲ್ಲ. ಇದು ವ್ಯವಸ್ಥಿತಿ ಷಡ್ಯಂತ್ರ ಎಂದು ಶರೀಫುಲ್ ಫಕೀರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸೈಫ್ ಆಲಿ ಖಾನ್ ಮೇಲೆ ದಾಳಿದ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಮ್ ತಂದೆ ಇತ್ತೀಚೆಗೆ IANS ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಮುಂಬೈ ಪೊಲೀಸರು ಅಸಲಿ ಆರೋಪಿ ಬದಲು, ಆರೋಪಿಯಂತೆ ಹೋಲುವ ನನ್ನ ಮಗನನ್ನು ಬಂಧಿಸಿದ್ದಾರೆ. ಸೈಫ್ ಮನೆಗೆ ನುಗ್ಗಿ ದಾಳಿ ಮಾಡಿ ಎಸ್ಕೇಪ್ ಆಗುತ್ತಿರುವ ಸಿಸಿಟಿವಿ ದೃಶ್ಯಗಳಿವೆ. ಈ ದೃಶ್ಯಗಳಲ್ಲಿ ಆರೋಪಿ ಉದ್ದ ಕೂದಲು ಹೊಂದಿದ್ದಾನೆ. ನನ್ನ ಮಗ ಯಾವತ್ತೂ ಉದ್ದು ಕೂದಲು ಹೊಂದಿಲ್ಲ. ಇಷ್ಟೇ ಅಲ್ಲ ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕ್ಲೀನ್ ಶೇವ್ ಮಾಡಿದ ಮುಖ ಸಿಸಿಟಿವಿಯಲ್ಲಿ ಕಾಣುತ್ತಿದೆ. ಆದರೆ ನನ್ನ ಮಗನ ಮುಖಕ್ಕೂ ಆರೋಪಿ ಮುಖಕ್ಕೆ ಹೋಲಿಕೆ ಇದೆ. ಇದೇ ಕಾರಣಕ್ಕೆ ಪೊಲೀಸರು ಅಸಲಿ ಆರೋಪಿ ಬದಲು ನನ್ನ ಮಗ ಮೊಹಮ್ಮದ್ ಶರೀಫುಲ್ ಇಸ್ಲಾಮ್‌ನನ್ನು ಬಂಧಿಸಿದ್ದಾರೆ ಎಂದು ಶರೀಫುಲ್ ಫಕೀರ್ ಹೇಳಿದ್ದಾರೆ.
ನನ್ನ ಮಗ ಪೊಲೀಸರಿಗೆ ಸುಲಭ ತುತ್ತು. ಕಾರಣ ಆತ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ. ಬಾಂಗ್ಲಾದೇಶದಲ್ಲಿನ ರಾಜಕೀಯ ಪರಿಸ್ಥಿತಿ, ಇಲ್ಲಿನ ಆರ್ಥಿಕ ಪರಿಸ್ಥಿತಿಯಿಂದ ಬೇರೆ ದಾರಿ ಕಾಣದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಾನೆ, ಇದು ನಿಜ. ಇದೇ ಕಾರಣದಿಂದ ಪೊಲೀಸರು ಸುಲಭವಾಗಿ ಮಗನನ್ನು ಟಾರ್ಗೆಟ್ ಮಾಡಿದ್ದಾರೆ. ಸಿಸಿಟಿವಿಯಲ್ಲಿಕಾಣುವ ಆರೋಪಿಗೂ ನನ್ನ ಮಗನಿಗೆ ಕಲ ಹೋಲಿಕೆ ಇದೆ. ಆದರೆ ದಿಟ್ಟಿಸಿ ನೋಡಿದರೆ ಸುಲಭವಾಗಿ ಇಬ್ಬರು ಬೇರೆ ಬೇರೆ ಅನ್ನೋದು ಪತ್ತೆ ಹಚ್ಚಲು ಹೆಚ್ಚು ಸಮಯ ಬೇಕಾಗಿಲ್ಲ ಎಂದು ತಂದೆ ಶರೀಫುಲ್ ಫಕೀರ್ ಹೇಳಿದ್ದಾರೆ.
ನನಗೆ ಮೂವರು ಮಕ್ಕಳು. ಮೊದಲ ಮಗ ಢಾಕಾದಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡನೇ ಮಗ ಶರೀಫುಲ್ ಇಸ್ಲಾಮ್ 10ನೇ ತರಗತಿ ಅರ್ಧಕ್ಕೆ ಬಿಟ್ಟು ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಕೆಲಸಕ್ಕೆ ಸೇರಿದ.ಆದರೆ ಇಲ್ಲಿ ಸರಿಯಾದ ಕೆಲಸ ಸಿಗಲಿಲ್ಲ. ಸಿಕ್ಕ ಕೆಲಸದಲ್ಲಿ ಸಂಬಳವೂ ಸಿಗಲಿಲ್ಲ. ಹೀಗಾಗಿ ಅಕ್ರಮವಾಗಿ ಭಾರತ ಪ್ರವೇಶ ಮಾಡಿದ್ದಾನೆ. ಶರೀಫುಲ್ ಇಸ್ಲಾಮ್ ಸಂಬಂಳಕ್ಕಾಗಿ ಕೆಲಸ ಮಾಡುತ್ತಿದ್ದಾನೆ. ನಾವು ಅತ್ಯಂತ ಬಡವರು, ಆದರೆ ಕಳ್ಳತನ, ಅಪರಾಧ ಮಾಡುವ ಕುಟುಂಬವಲ್ಲ ಎಂದು ಶರೀಫುಲ್ ಫಕೀರ್ ಹೇಳಿದ್ದಾರೆ.
ನನ್ನ ಮಗನ ಬಂಧನ ರಾಜತಾಂತ್ರಿಕ ವಿಚಾರವಾಗಿದೆ. ಇಲ್ಲ ಸಲ್ಲದ ಆರೋಪ ಹೊರಿಸಿ ನನ್ನ ಮಗನ ಬಂಧಿಸಿದ್ದಾರೆ. ಈ ವಿಚಾರವನ್ನು ವಿದೇಶಾಂತ ಇಲಾಖೆಯಲ್ಲಿ ಪ್ರಶ್ನಿಸುತ್ತೇನೆ. ಅಕ್ರಮವಾಗಿ ಭಾರತ ಪ್ರವೇಶ ಮಾಡಿರುವುದು ತಪ್ಪು. ಆದರೆ ಸದ್ಯ ಆತನ ಬಂಧಿಸಿರುವ ಪ್ರಕರಣ ನಕಲಿ. ಈ ಪ್ರಕರಣದಲ್ಲಿ ಸಹೋದರನ ಸಿಲುಕಿಸಲಾಗಿದೆ ಎಂದು ಆರೋಪಿ ಅಣ್ಣ ರೊಹುಲ್ ಶರೀಫುಲ್ ಹೇಳಿದ್ದಾರೆ.
ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ತೆರಳಿದ ಶರೀಫುಲ್ ಇಸ್ಲಾಮ್, ನಮ್ಮ ಕುಟುಂಬಸ್ಥರ ಮನೆಯಲ್ಲಿ ಆಶ್ರಯ ಪಡೆಯಲು ಬಯಸಿದ್ದ. ಆದರೆ ಅವರು ನಿರಾಕರಿಸಿದ್ದರು. ಬಂಗಾಳದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಮುಂಬೈಗೆ ಸ್ಥಳಾಂತರಗೊಂಡಿದ್ದ. ಮುಂಬೈನ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ.ಸಂಬಳದಲ್ಲಿ ಈತ 10,000 ಬಾಂಗ್ಲಾದೇಶಿ ಟಾಕಾ ಹಣವನ್ನು ಹವಾಲಾ ಎಜೆಂಟ್ ಮೂಲಕ ಕಳುಹಿಸಿದ್ದ. ಕಾರಣ ಬೇರೆ ಯಾವುದೇ ರೀತಿಯಲ್ಲಿ ಆತನಿಗೆ ಹಣ ಕಳುಹಿಸಲು ಸಾಧ್ಯವಿಲ್ಲ. ಅಕ್ರಮ ಪ್ರವೇಶ, ಹವಾಲ ಮೂಲಕ ಹಣ ಕಳುಹಿಸಿರುವುದು ಸೇರಿದಂತೆ ಹಲವು ಕಾನೂನು ಬಾಹಿರ ಕೆಲಸ ಮಾಡಿದ್ದಾನೆ. ಆದರೆ ಆತ ಕ್ರಿಮಿನಲ್ ಅಲ್ಲ ಎಂದು ತಂದೆ ಶರೀಫುಲ್ ಫಕೀರ್ ಹೇಳಿದ್ದಾರೆ.
