ವಿಮಾನ ಸಿಬ್ಬಂದಿಯಿಂದ ಶ್ರದ್ಧಾ ಕಪೂರ್ ಅವರ ವೈಯಕ್ತಿಕ ವಿಡಿಯೋ ರಹಸ್ಯವಾಗಿ ಚಿತ್ರೀಕರಿಸಿದ ಘಟನೆಗೆ ರವೀನಾ ಟಂಡನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಗೌಪ್ಯತೆಯನ್ನು ಗೌರವಿಸುವಂತೆ ಅವರು ಮನವಿ ಮಾಡಿದ್ದಾರೆ.
1991ರ ಆಕ್ಷನ್-ಡ್ರಾಮಾ ಚಿತ್ರ ಪತ್ತರ್ ಕೆ ಫೂಲ್ ಮೂಲಕ ಸಲ್ಮಾನ್ ಖಾನ್ ಎದುರು ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ ನಟಿ ರವೀನಾ ಟಂಡನ್, ಇತ್ತೀಚೆಗೆ ಶ್ರದ್ಧಾ ಕಪೂರ್ ಅವರ ವೈಯಕ್ತಿಕ ಬದುಕಿಗೆ ಧಕ್ಕೆಯಾದ ಘಟನೆಯ ಕುರಿತು ವಿಮಾನ ಸಿಬ್ಬಂದಿಯನ್ನು ಕಟ್ಟುನಿಟ್ಟಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಸಾರ್ವಜನಿಕ ಸ್ಥಳದಲ್ಲಿ ವೈಯಕ್ತಿಕ ಬದುಕನ್ನು ಗೌರವಿಸಲು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಶ್ರದ್ಧಾ ತಮ್ಮ ಗೆಳೆಯ, ಬರಹಗಾರ ರಾಹುಲ್ ಮೋದಿ ಅವರೊಂದಿಗೆ ಪ್ರಯಾಣಿಸುತ್ತಿರುವ ದೃಶ್ಯಗಳು ವೈರಲ್ ಆಗಿತ್ತು, ವಿಮಾನಯಾನ ಸಿಬ್ಬಂದಿಯೊಬ್ಬರು ಅವರ ವಿಡಿಯೋವನ್ನು ರಹಸ್ಯವಾಗಿ ಶೂಟ್ ಮಾಡಿರುವ ವಿಚಾರ ಆಮೇಲೆ ಬೆಳಕಿಗೆ ಬಂತು. ವೈರಲ್ ಆದ ಕ್ಲಿಪ್‌ನಲ್ಲಿ, ಶ್ರದ್ಧಾ ತಮ್ಮ ಫೋನ್‌ನಲ್ಲಿ ತಮ್ಮ ಗೆಳೆಯನಿಗೆ ಏನೋ ತೋರಿಸುತ್ತಿದ್ದಂತೆ, ರಾಹುಲ್ ಅವರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ವಿಮಾನ ಸಿಬ್ಬಂದಿ ಕ್ಯಾಮೆರಾ ಕಡೆಗೆ ನಗುತ್ತಾ, ನಂತರ ಅದನ್ನು ದಂಪತಿಯತ್ತ ತಿರುಗಿಸುತ್ತಾನೆ. ಈ ವಿಡಿಯೋ ಕೊನೆಗೆ ಶ್ರದ್ಧಾ ಅವರ ಕ್ಲೋಸ್-ಅಪ್ ಫೋಟೋದಿಂದ ಮುಕ್ತಾಯವಾಗುತ್ತದೆ.
ಈ ವಿಡಿಯೋ ವಿರುದ್ಧ ಕಿಡಿಕಾರಿದ ರವೀನಾ ಟಂಡನ್, ಸಾಮಾಜಿಕ ಜಾಲತಾಣದ ಕಾಮೆಂಟ್ ವಿಭಾಗದಲ್ಲಿ, ಇದು ಗೌಪ್ಯತೆಯ ಸಂಪೂರ್ಣ ಉಲ್ಲಂಘನೆ. ಯಾರನ್ನಾದರೂ ಶೂಟ್ ಮಾಡುವ ಮೊದಲು ಅವರ ಅನುಮತಿ ಪಡೆಯುವುದು ಅತ್ಯಂತ ಅಗತ್ಯ. ವಿಮಾನ ಸಿಬ್ಬಂದಿಯಿಂದ ಇಂತಹ ವರ್ತನೆ ನಿರೀಕ್ಷಿಸಲಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಮತ್ತೊಂದೆಡೆ, ಶ್ರದ್ಧಾ ಕಪೂರ್ ಇತ್ತೀಚೆಗೆ ತಮ್ಮ ವಿಭಿನ್ನ ನೃತ್ಯದ ಚಲನಗಳನ್ನು ತೋರಿಸುವ ಮನರಂಜನೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಬೆನ್ನ ಹಿಂದೆ ರಾಹುಲ್ ಮೋದಿ ಇರುವುದನ್ನು ಗಮನಿಸಿದ್ದಾರೆ. ವಿಡಿಯೋಗೆ ಶ್ರದ್ಧಾ, “ಕೌನ್ ಮಾಯ್ಕಲಾಲ್ ಮೇರಿ ಭಂಕಸ್ ರೋಕ್ ಸಕ್ತಾ ಹೈ?” (ನನ್ನ ಅಸಂಬದ್ಧತೆಯನ್ನು ತಡೆಯಲು ಯಾರಾದರೂ ಧೈರ್ಯವಿದೆಯೇ?) ಎಂದು ಶೀರ್ಷಿಕೆ ನೀಡಿದ್ದಾರೆ.
ಕಳೆದ ವರ್ಷ ಜಾಮ್ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ಪೂರ್ವವಿವಾಹ ಸಮಾರಂಭದಲ್ಲಿ ಶ್ರದ್ಧಾ ಮತ್ತು ರಾಹುಲ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ರಾಹುಲ್ ಮೋದಿ ಪ್ಯಾರ್ ಕಾ ಪಂಚ್ನಾಮಾ 2, ಸೋನು ಕೆ ಟಿಟು ಕಿ ಸ್ವೀಟಿ ಮತ್ತು ಶ್ರದ್ಧಾ-ರಣಬೀರ್ ಕಪೂರ್ ನಟನೆಯ ತು ಜೂಠಿ ಮೈ ಮಾರ್ ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಶ್ರದ್ಧಾ ಮತ್ತು ರಾಹುಲ್, 2023ರ ರೋಮ್ಯಾಂಟಿಕ್ ಹಾಸ್ಯ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಭೇಟಿಯಾದರು. ಆ ನಂತರ ಅವರ ಸ್ನೇಹವು ನಿಧಾನವಾಗಿ ಪ್ರೀತಿಯಾಗಿ ಬದಲಾಯ್ತು ಎಂದು ಹೇಳಲಾಗುತ್ತಿದೆ.
