ಪಠಾಣ್ನ ಮೊದಲಾರ್ಧ ಮಾತ್ರ ಥಿಯೇಟರ್ನಲ್ಲಿ ನೋಡಿ ಎಂದ ಶಾರುಖ್!
ಪಠಾಣ್ ಚಿತ್ರ ಭಾರಿ ಯಶಸ್ಸು ಕಾಣುತ್ತಲೇ ಶಾರುಖ್ ಖಾನ್ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಅವರು, ಚಿತ್ರದ ಅರ್ಧಭಾಗ ಮಾತ್ರ ನೋಡಿ ಎಂದರು. ಇದಕ್ಕೆ ಕಾರಣವೇನು?
'ಪಠಾಣ್' (Pathaan) ಚಿತ್ರದ ಭಾರೀ ಗಳಿಕೆಯ ನಡುವೆ ಶಾರುಖ್ ಖಾನ್ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಈ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಶನಿವಾರ ಮತ್ತೊಮ್ಮೆ ಶಾರುಖ್ ಖಾನ್ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಲು #AskSRK ಅಧಿವೇಶನವನ್ನು ಆಯೋಜಿಸಿದರು. ತಮಗೆ ಏನಾದರೂ ಪ್ರಶ್ನೆ ಕೇಳಿ ಎಂಬುದಾಗಿ ಕಳೆದೊಂದು ತಿಂಗಳಿನಲ್ಲಿ 'ಆಸ್ಕ್ ಎಸ್ಆರ್ಕೆ' ಹ್ಯಾಷ್ಟ್ಯಾಗ್ ಮೂಲಕ ಶಾರುಖ್ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದು, ಇದೀಗ ಅದನ್ನು ಪುನಃ ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ, ಶಾರುಖ್ (Shah Rukh Khan) ಅವರ ಅಭಿಮಾನಿಗಳು ಅವರಿಗೆ ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದ್ದು, ಕೆಲವೊಂದಕ್ಕೆ ಶಾರುಖ್ ತಮಾಷೆಯ ರೀತಿಯಲ್ಲಿ ಉತ್ತರಿಸಿದ್ದಾರೆ. ಅದರಲ್ಲಿ ಕೆಲವೊಂದು ಪ್ರಶ್ನೆ ಮತ್ತು ಉತ್ತರಗಳು ಕುತೂಹಲ ಮೂಡಿಸುತ್ತಿವೆ. ಪಠಾಣ್ ಚಿತ್ರದ ಆದಾಯ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿರುವ ಕಾರಣ, ಅದರ ನಿಜವಾದ ಆದಾಯ ಎಷ್ಟು ಎಂದು ಒಬ್ಬ ಪ್ರಶ್ನಿಸಿದ್ದರೆ, ಇನ್ನೊಬ್ಬ ನೀವು ನಾಯಕನಿಂದ ಅಪ್ಪ ಆಗುವುದು ಯಾವಾಗ ಎಂದು ಪ್ರಶ್ನಿಸಿದ್ದಾನೆ. ಹೀಗೆ ಕೆಲವು ಕುತೂಹಲದ ಪ್ರಶ್ನೆ ಮತ್ತು ಉತ್ತರಗಳನ್ನು ಇಲ್ಲಿ ತಿಳಿಸಲಾಗಿದೆ.
ಡಿವೋರ್ಸ್ ಆಗಿಲ್ಲ, ಮತ್ತೊಂದು ಮಗದೊಂದು ಮದುವೆಯಾದ ಬಾಲಿವುಡ್ ಸ್ಟಾರ್ಸ್
ಒಬ್ಬ ಬಳಕೆದಾರರು, ಸರ್ ಪಠಾಣ್ ಚಿತ್ರದ ನಿಜವಾದ ಗಳಿಕೆ ಎಷ್ಟು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶಾರುಖ್, ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಪ್ರಶ್ನೆಗೆ ಉತ್ತರವಾಗಿ, ಶಾರುಖ್ '5000 ಕೋಟಿ ಪ್ರೀತಿ, 3000 ಕೋಟಿ ಮೆಚ್ಚುಗೆ, 3250 ಕೋಟಿ ಅಪ್ಪುಗೆಗಳು, 2 ಬಿಲಿಯನ್ ಸ್ಮೈಲ್ಸ್ (smiles) ಮತ್ತು ಎಣಿಕೆ ನಡೆಯುತ್ತಿದೆ...ನಿಮ್ಮ ಅಕೌಂಟೆಂಟ್ ಏನು ಹೇಳುತ್ತಿದೆ? " ಎಂದು ಪ್ರತಿಕ್ರಿಯೆ ನೀಡಿದ್ದು ಇದು ಅಭಿಮಾನಿಗಳ ಮನ ಗೆದ್ದಿದೆ. ಅದೇ ರೀತಿ ಇನ್ನೊಬ್ಬ ಬಳಕೆದಾರ... ಸರ್ ಇದಾಗಲೇ ನಿಮಗೆ ದೊಡ್ಡ ದೊಡ್ಡ ಮಕ್ಕಳು ಇದ್ದಾರೆ. ಚಿತ್ರದಲ್ಲಿ ನಾಯಕನ ಬದಲು ನಟ ಅಥವಾ ನಟಿಯ ತಂದೆಯ ಪಾತ್ರವನ್ನು ಯಾವಾಗ ಮಾಡುತ್ತೀರಿ ಎಂದು ಕಾಲೆಳೆದಿದ್ದಾನೆ. ಅದಕ್ಕೆ ಶಾರುಖ್, ‘ನೀವು ತಂದೆಯಾಗಿರಿ, (Father) ನಾನು ಸದಾ ಹೀರೋನೇ’ ಎಂದು ಬರೆದುಕೊಂಡಿದ್ದಾರೆ.
ಮತ್ತೋರ್ವ ಬಳಕೆದಾರರು, 'ನಾನು ಪಠಾಣ್ ಚಿತ್ರವನ್ನು 5 ಬಾರಿ ನೋಡಿದ್ದೇನೆ ಮತ್ತು ಇನ್ನೂ 5 ಬಾರಿ ನೋಡಬೇಕೆಂದು ಬಯಸುತ್ತೇನೆ. 700 ಕೋಟಿ ಕಲೆಕ್ಷನ್ನಲ್ಲಿ ನನಗೂ ಏನಾದರೂ ಸಿಗಬಹುದೆ? ಎಂದಿದ್ದಾರೆ. ಅದಕ್ಕೆ ಶಾರುಖ್ ಖಾನ್, 'ಇಲ್ಲ. ಜಸ್ಟ್ ಎಂಟರ್‌ಟೈನ್‌ಮೆಂಟ್, (Entertainment) ಎಂಟರ್‌ಟೈನ್‌ಮೆಂಟ್, ಎಂಟರ್‌ಟೈನ್‌ಮೆಂಟ್. ಹಣಕ್ಕಾಗಿ ಸ್ವಲ್ಪ ಬೇರೆ ಕೆಲಸ ಮಾಡಿರಿ ಹ್ಹಹ್ಹಹ್ಹ...' ಎಂದು ಉತ್ತರಿಸಿದ್ದಾರೆ. ಎಲ್ಲಕ್ಕಿಂತ ಗಮನ ಸೆಳೆದ ಇನ್ನೊಂದು ಟ್ವೀಟ್ ಎಂದರೆ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆ. ಅವರು 'ಪಠಾಣ್ ಚಿತ್ರದ ಮೊದಲಾರ್ಧ ಚೆನ್ನಾಗಿದೆ ಆದರೆ ದ್ವಿತೀಯಾರ್ಧವು ನಿರಾಶೆಗೊಳಿಸುತ್ತದೆ. ನಿಮ್ಮ ಅಭಿಪ್ರಾಯವೇನು?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಬುದ್ಧಿವಂತಿಕೆಯಿಂದ ಉತ್ತರಿಸಿರೋ ಶಾರುಖ್, ಹೌದಾ, ತೊಂದರೆಯೇನಿಲ್ಲ. ಎಲ್ಲವೂ ಅವರವರ ದೃಷ್ಟಿಕೋನ. ನೀವೊಂದು ಕೆಲಸ ಮಾಡಿ. ಪಠಾಣ್ ಮೊದಲಾರ್ಧವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ ಮತ್ತು ಈ ವಾರ ಒಟಿಟಿಯಲ್ಲಿ ಬೇರೆ ಯಾವುದಾದರೂ ಚಿತ್ರದ ದ್ವಿತೀಯಾರ್ಧವನ್ನು ವೀಕ್ಷಿಸಿ ಎಂದು ಬರೆದಿದ್ದಾರೆ. ಇದನ್ನು ಅರ್ಧಂಬರ್ಧ ಓದಿದ ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ. ಕೊನೆಗೆ ಕಾರಣ ತಿಳಿದು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ.
ಅಬ್ಬಬ್ಬಾ...! ಈ ನಟನ ಲವ್ ಬ್ರೇಕಪ್ ಪತ್ರ 13 ಲಕ್ಷ ರೂ.ಗೆ ಮಾರಾಟ...
ಅಂದಹಾಗೆ, ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಪಠಾಣ್' ಆಕ್ಷನ್ ಡ್ರಾಮಾ (Action Drama) ಚಿತ್ರವಾಗಿದ್ದು, ಶಾರುಖ್ ಖಾನ್ ಜೊತೆಗೆ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ (Deepika Padukone) ನಟಿಸಿದ್ದಾರೆ. 10 ದಿನಗಳಲ್ಲಿ ಈ ಚಿತ್ರ ಭಾರತದಲ್ಲಿ 378 ಕೋಟಿ ರೂ.ಗೂ ಹೆಚ್ಚು ಮತ್ತು ವಿಶ್ವಾದ್ಯಂತ ರೂ.700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.