ಇದಾಗಲೇ ಹಲವು ದಾಖಲೆಗಳನ್ನು ಮುರಿದಿರುವ ಪಠಾಣ್​ ಜುಲೈ 13ರಂದು ಮತ್ತೆ 3 ಸಾವಿರ ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ. ಏನಿದು ಹೊಸ ವಿಷಯ?  

ಪಠಾಣ್​ ಚಿತ್ರದ (Pathaan Movie) ಭರ್ಜರಿ ಯಶಸ್ಸಿನ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಒಂದರ ಮೇಲೊಂದರಂತೆ ಫ್ಲಾಪ್​ ಸಿನಿಮಾ ನೀಡಿ ಮೂರ್ನಾಲ್ಕು ವರ್ಷ ಬ್ರೇಕ್​ ತೆಗೆದುಕೊಂಡಿದ್ದ ನಟ ಶಾರುಖ್​ ಖಾನ್​ ಹಿಂದೆಂದೂ ಕಾಣದಂತೆ ಭರ್ಜರಿ ಯಶಸ್ಸು ಕಂಡ ಚಿತ್ರವಿದು. ಮಾತ್ರವಲ್ಲದೇ ಹಲವಾರು ದಾಖಲೆಗಳನ್ನು ಮಾಡಿದ ಪಠಾಣ್​ ಮಕಾಡೆ ಮಲಗಿದ್ದ ಬಾಲಿವುಡ್​ಗೆ ಜೀವ ತುಂಬಿದೆ. ಇದಾಗಲೇ ಹಲವಾರು ಬಾರಿ ಶಾರುಖ್​ ಫ್ಯಾನ್ಸ್​ ಈ ಚಿತ್ರವನ್ನು ನೋಡಿಯೂ ಆಗಿದೆ. ಕೇಸರಿ ಬಿಕಿನಿ ತೊಟ್ಟು ಬೇಷರಂ ರಂಗ್​ ಎಂದು ಹಾಡಿದ್ದ ದೀಪಿಕಾ ಪಡುಕೋಣೆಯ ಬಟ್ಟೆ ವಿವಾದ ಸೃಷ್ಟಿಸಿದ್ದ ನಡುವೆಯೂ ಕೆಲವೊಂದು ಬದಲಾವಣೆ ಮಾಡುವುದರ ಮೂಲಕ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಭಾರತ ಮಾತ್ರವಲ್ಲದೇ, ಹಲವಾರು ದೇಶಗಳಲ್ಲಿಯೂ ಈ ಚಿತ್ರ ಇದಾಗಲೇ ಅಬ್ಬರಿಸಿದೆ. ಕಳೆದ ಏಪ್ರಿಲ್​ 6ರ ಅಂಕಿಅಂಶದ ಪ್ರಕಾರ, ಪಠಾಣ್​ ಚಲನಚಿತ್ರವು ಭಾರತದಲ್ಲಿ 82 ಮಿಲಿಯನ್ ಡಾಲರ್​ ಅರ್ಥಾತ್​ ಸುಮಾರು 654 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, ಸಾಗರೋತ್ತರ ದೇಶಗಳಲ್ಲಿ 50 ಮಿಲಿಯನ್​ ಡಾಲರ್​ ಅರ್ಥಾತ್​ ಸುಮಾರು 396 ಕೋಟಿ ರೂಪಾಯಿ ಹಾಗೂ ವಿಶ್ವಾದ್ಯಂತ ಒಟ್ಟು 130 ಮಿಲಿಯನ್​ ಡಾಲರ್​ ಅರ್ಥಾತ್​ 1,050 ಕೋಟಿ ರೂಪಾಯಿ ಸಂಗ್ರಹಿಸಿದೆ. 

 ಇಷ್ಟೆಲ್ಲಾ ಆದರೂ ಚಿತ್ರ ಒಟ್ಟಾರೆಯಾಗಿ ಕೆಜಿಎಫ್​-2 (KGF 2) ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಏಕೆಂದರೆ, ಯಶ್​ ನಟನೆಯ ‘ಕೆಜಿಎಫ್​ 2’ ಸಿನಿಮಾ 1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಆದರೆ ಶಾರುಖ್​ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಂದಿದ್ದು, ಯಶ್​ ಫ್ಯಾನ್ಸ್​ಗೆ ಸ್ವಲ್ಪ ಆತಂಕ ಕಾಡುತ್ತಿದೆ. ಏಕೆಂದರೆ, ಕೆಜಿಎಫ್​-2 ದಾಖಲೆಯನ್ನು ಪಠಾಣ್​ ಮುರಿಯುವ ಎಲ್ಲಾ ಸಾಧ್ಯತೆಯೊಂದು ಇದೀಗ ಕಂಡುಬಂದಿದೆ. ಅದೇನೆಂದರೆ, ಜುಲೈ 13ರಂದು ರಷ್ಯಾ, ತಜಿಕಿಸ್ತಾನ್​, ಅಜರ್​ಬೈಜಾನ್​ ಸೇರಿದಂತೆ ಕೆಲ ದೇಶಗಳಲ್ಲಿ ‘ಪಠಾಣ್​’ ಸಿನಿಮಾ ತೆರೆಕಾಣಲಿದೆ. ಇದಕ್ಕಾಗಿ 3 ಸಾವಿರ ಪರದೆಗಳು ಮೀಸಲಾಗಿವೆ.

SSMB 29: ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದ ಆಮೀರ್​ ಖಾನ್​ ಟಾಲಿವುಡ್​ಗೆ ಹಾರಿದ್ರಾ?

ಹೌದು. ಇದಾಗಲೇ ಹಲವು ದೇಶಗಳಲ್ಲಿ ಅಬ್ಬರಿಸಿರೋ ಪಠಾಣ್​, ಈಗ ಮತ್ತು ಕೆಲವು ದೇಶಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. 1050 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಖುಷಿಯಲ್ಲಿ ತೇಲಾಡುತ್ತಿರುವ ಶಾರುಖ್​ ಖಾನ್, ಇದೀಗ ಕೆಜಿಎಫ್​-2 ದಾಖಲೆಯನ್ನು ಮುರಿಯುವಲ್ಲಿ ದಾಪುಗಾಲು ಇಟ್ಟಿದ್ದಾರೆ. ಅಂದಾಜು 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಆದ್ದರಿಂದ ಸಹಜವಾಗಿ ಇದರ ಕಲೆಕ್ಷನ್​ ಹೆಚ್ಚಾಗಲಿದೆ. ಕೆಲವೇ ದಿನಗಳ ಹಿಂದೆ ‘ಪಠಾಣ್​’ ಸಿನಿಮಾವನ್ನು ಬಾಂಗ್ಲಾದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಈಗ ರಷ್ಯಾದಲ್ಲೂ ಅದೇ ರೀತಿ ಜನಮೆಚ್ಚುಗೆ ಸಿಗಬಹುದು ಎಂಬ ನಿರೀಕ್ಷೆ ಇದೆ. ಇದಾಗಲೇ 1050 ಕೋಟಿ ರೂಪಾಯಿ ದಾಟಿದ್ದು, ಕೆಜಿಎಫ್​ 2ನ 1200 ಕೋಟಿ ರೂಪಾಯಿ ದಾಟುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಇದೊಂದು ರೀತಿಯಲ್ಲಿ ಕೌತುಕ ನಿರ್ಮಿಸಿದೆ. 

ಸದ್ಯ ಶಾರುಖ್​ ಪಠಾಣ್​ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಜವಾನ್​ ಚಿತ್ರದ ಯಶಸ್ಸಿನ ಕನಸು ಕಾಣುತ್ತಿದ್ದಾರೆ. ‘ಜವಾನ್’ (Jawan) ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಆಕ್ಷನ್ ಥ್ರಿಲ್ಲರ್ ಶೈಲಿಯ ‘ಜವಾನ್​’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಬಜೆಟ್​ನ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕಿದ್ದು, ಇದನ್ನು ಶಾರುಖ್ ಖಾನ್ ಅವರ ‘ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್’ ಸಂಸ್ಥೆ ನಿರ್ಮಿಸುತ್ತಿದೆ.

Shilpa Shetty Birthday: ಶಿಲ್ಪಾ ಜತೆ ಸಂಬಂಧ, ಟ್ವಿಂಕಲ್​ ಜತೆ ಮದ್ವೆ, ಅಕ್ಷಯ್​ ಮಹಾಮೋಸ ಬಯಲು!

 ಜವಾನ್​ನ ನಿರ್ದೇಶನದ ಹೊಣೆ ಹೊತ್ತಿದ್ದಾರೆ ಕಾಲಿವುಡ್​ನ ಜನಪ್ರಿಯ ನಿರ್ದೇಶಕರಾದ ಅಟ್ಲಿ ಕುಮಾರ್. ‘ಜವಾನ್’ ಚಿತ್ರದ ಮೇಲೆಯೂ ಪಠಾಣ್​ನಂತೆಯೇ ನಿರೀಕ್ಷೆಗಳು ಹೆಚ್ಚಾಗಿರುವುದರಿಂದ, ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿವೆ. ದೊಡ್ಡ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿರುವ ಸುದ್ದಿ ಬಂದಿದೆ. ‘ಜವಾನ್’ ಚಿತ್ರದ ಒಟಿಟಿ, ಸ್ಯಾಟಿಲೈಟ್ ಮತ್ತು ಆಡಿಯೋ ಹಕ್ಕುಗಳಿಗೆ ಬೇರೆಬೇರೆ ಸಂಸ್ಥೆಗಳು ದೊಡ್ಡ ಆಫರ್ ನೀಡಿವೆ ಎನ್ನಲಾಗುತ್ತಿದೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ.