ಬಿಡುಗಡೆ ದಿನವೇ ಆನ್‌ಲೈನ್‌ನಲ್ಲಿ ಜವಾನ್ ಚಿತ್ರ ಸೋರಿಕೆ: ಡೌನ್‌ಲೋಡ್ ಮಾಹಿತಿಯೂ ವೈರಲ್!
ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಜವಾನ್ ಚಿತ್ರ ಇಂದು ಬಿಡುಗಡೆಯಾಗಿದ್ದು, ಆನ್ಲೈನ್ನಲ್ಲಿಯೂ ಸೋರಿಕೆ ಆಗಿದೆ. ಡೌನ್‌ಲೋಡ್ ಮಾಹಿತಿಯೂ ವೈರಲ್ ಆಗುತ್ತಿರುವುದು ಚಿತ್ರಕ್ಕೆ ಭಾರಿ ಹಿನ್ನಡೆ ಉಂಟುಮಾಡಿದೆ.
ಬ್ಲಾಕ್ಬಸ್ಟರ್ ಎಂದು ಸಾಬೀತಾಗಿರೋ ಪಠಾಣ್ (Pathaan) ಚಿತ್ರಕ್ಕೇ ಪೈಪೋಟಿ ಒಡ್ಡುವಂತೆ ಜವಾನ್ ಚಿತ್ರ ನಿರೀಕ್ಷೆ ಹುಟ್ಟಿಸಿತ್ತು. ಈ ಚಿತ್ರವನ್ನು ಭಾರಿ ಯಶಸ್ವಿಗೊಳಿಸಲು ವಿದೇಶಗಳಲ್ಲಿಯೂ ಬಹಳ ತಯಾರಿ ನಡೆಸಲಾಗಿತ್ತು, ವಿಭಿನ್ನ ರೀತಿಯಲ್ಲಿ ಪ್ರಚಾರವನ್ನೂ ಮಾಡಲಾಗಿತ್ತು. ಚಿತ್ರದ ಪ್ರಮೋಷನ್ಗೇ ಕೋಟಿ ಕೋಟಿ ಹಣ ಸುರಿಯಲಾಗಿತ್ತು. ಎಂಟು ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿರುವ ಶಾರುಖ್ ಅವರನ್ನು ನೋಡಲು ಜನ ಬಹಳ ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ಇಂದು ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆಯಾಗಿದೆ. ಇಂದು ಬೆಳಿಗ್ಗೆ 6 ಗಂಟೆಗೆ ವೀಕ್ಷಿಸಲು ಅಭಿಮಾನಿಗಳು ಚಿತ್ರಮಂದಿರಗಳು ಸೇರಿದ್ದಾರೆ. ಥಿಯೇಟರ್‌ನ ಹೊರಗೆ ನೃತ್ಯ ಮಾಡುತ್ತಿದ್ದಾರೆ, ಪಟಾಕಿಗಳನ್ನು ಸಿಡಿಸುತ್ತಿದ್ದಾರೆ.
ಈ ಚಿತ್ರ ಚೆನ್ನಾಗಿದೆ ಎಂದು ಇದಾಗಲೇ ಹಲವಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಟ್ವಿಟರ್ನಲ್ಲಿ (Twitter) ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನೂ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆರಂಭಿಕ ವರದಿಗಳ ಪ್ರಕಾರ ಬೆಳಗಿನ ಪ್ರದರ್ಶನಗಳು ಬಹುತೇಕ ಹೌಸ್‌ಫುಲ್ ಆಗಿದ್ದು, ದೊಡ್ಡ ಆಕ್ಷನ್ ಅದ್ದೂರಿಯನ್ನು ವೀಕ್ಷಿಸಲು ಯುವಕರು ಮತ್ತು ಹಿರಿಯರು ಗುಂಪುಗಳಲ್ಲಿ ಸೇರುತ್ತಿದ್ದಾರೆ. ಅಭೂತಪೂರ್ವ ಜವಾನ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ವ್ಯಾಪಾರ ತಜ್ಞರು ನಿರೀಕ್ಷಿಸುತ್ತಿದ್ದಾರೆ. ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆದಿದೆ ಈ ಚಿತ್ರ.
ಶಾರುಖ್ಗೂ ಸಂಚಕಾರ ತಂದ ಸನಾತನ ಧರ್ಮದ ವಿವಾದ: ಜವಾನ್ ಚಿತ್ರಕ್ಕೆ ಬಾಯ್ಕಾಟ್ ಬಿಸಿ!
ಇವೆಲ್ಲವುಗಳ ಹೊರತಾಗಿ ಪೈರಸಿ ಕಾಟ ಜವಾನ್ (Jawan) ಅನ್ನೂ ಬಿಟ್ಟಿಲ್ಲ. ಉಚಿತ ಡೌನ್‌ಲೋಡ್ (Free Download) ಮತ್ತು ವೀಕ್ಷಣೆಗಾಗಿ ಪೂರ್ಣ ಎಚ್‌ಡಿ ಆವೃತ್ತಿಯಲ್ಲಿ ಜವಾನ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿಬಿಟ್ಟಿದೆ. ತಮಿಳುರಾಕರ್ಸ್, ಟೆಲಿಗ್ರಾಮ್, ಫಿಲ್ಮಿಜಿಲ್ಲಾ ಮತ್ತು ಇತರ ಪೈರಸಿ ಸೈಟ್‌ಗಳಲ್ಲಿ ಜವಾನ್ ಸೋರಿಕೆಯಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್ ಸಂಖ್ಯೆಗಳು ಹಿಟ್ ಆಗಬಹುದು ಎಂದೇ ಊಹಿಸಲಾಗುತ್ತಿದೆ. ಚಲನಚಿತ್ರವು ಸೋರಿಕೆಯಾದ ಆವೃತ್ತಿ ಮತ್ತು ಇದು ಮುಂದಿನ ದಿನಗಳಲ್ಲಿ ಚಿತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರಗಳು ಅಥವಾ ವೆಬ್ ಸರಣಿಗಳನ್ನು ವೀಕ್ಷಿಸದಂತೆ ಚಿತ್ರತಂಡ ಮನವಿ ಮಾಡಿಕೊಳ್ಳುತ್ತಿದೆ. ಸುಮಾರು ಎರಡೂವರೆ ಸಾವಿರ ರೂಪಾಯಿಗಳ ಟಿಕೆಟ್ ಖರೀದಿ ಮಾಡುವುದಕ್ಕಿಂತಲೂ ಪುಕ್ಕಟೆ ಈ ಚಿತ್ರವನ್ನು ವೀಕ್ಷಿಸಲು ಸಿಕ್ಕರೆ ಜನರು ಸುಮ್ಮನೆ ಬಿಡುತ್ತಾರೆಯೇ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಇತ್ತೀಚೆಗೆ, ರಜನಿಕಾಂತ್ ಅವರ ಜೈಲರ್ (Jailer), ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಸನ್ನಿ ಡಿಯೋಲ್ ಅವರ ಗದರ್ 2 ಮತ್ತು ಅಕ್ಷಯ್ ಕುಮಾರ್ ಅವರ OMG 2 ಕೂಡ ಇದೇ ರೀತಿ ಸಂಕಷ್ಟ ಅನುಭವಿಸಿತ್ತು. ಇದೀಗ ಜವಾನ್ ಸರದಿಯಾಗಿದೆ. ಚಿತ್ರಕ್ಕೆ ಯಾವುದೇ ಸಮಸ್ಯೆ ಆಗದಂತೆ ಶಾರುಖ್ ಖಾನ್ ಮತ್ತು ಕುಟುಂಬ ಸಹಿತ ತಿರುಪತಿಗೆ ಹೋಗಿ ಬಂದಿದ್ದರು. ಆದರೆ ಇದಾದ ಬಳಿಕ ನಿರ್ಮಾಪಕ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ಜವಾನ್ ಚಿತ್ರದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಈ ಚಿತ್ರವನ್ನು ಬೈಕಾಟ್ ಮಾಡುವ ಟ್ರೆಂಡ್ ಕೂಡ ಇದಾಗಲೇ ಶುರುವಾಗಿದೆ. ಇದರ ನಡುವೆಯೇ ಈಗ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ದೊಡ್ಡ ತಲೆನೋವಾಗಿದೆ.
'ಜವಾನ್' ಚಿತ್ರ ವೀಕ್ಷಣೆಗೆ ಬರ್ತಿದ್ದಾರೆ 36 ಗರ್ಲ್ಫ್ರೆಂಡ್ಸ್, 72 ಎಕ್ಸ್ ಲವರ್ಸ್: ಏನಿದು ವಿಷ್ಯ?