ರಾಮಾಯಣ ಸಿನಿಮಾ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ್ರೂ ಅನೇಕರ ಟೀಕೆ ಇನ್ನೂ ಮುಗಿದಿಲ್ಲ. ಸಾಯಿ ಪಲ್ಲವಿ ಸೀತೆ ರೂಪವನ್ನು ಕೆಲವರು ಇಷ್ಟಪಟ್ಟಿಲ್ಲ. ಅದಕ್ಕೀಗ ನಟಿ ಉತ್ತರ ನೀಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿಪಲ್ಲವಿ ಸದ್ಯ ರಾಮಾಯಣ ಸಿನಿಮಾ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಅವರು ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಸೀತೆ ಲುಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಕೆಲವರು ಸೀತೆಯ ಪಾತ್ರಕ್ಕೆ ಅವರ ರೂಪ ಸೂಕ್ತವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಮೇಕಪ್‌ ಕೂಡ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೀಗ ಸಾಯಿ ಪಲ್ಲವಿ ಉತ್ತರ ನೀಡಿದ್ದಾರೆ.

ವಿ ದಿ ವುಮೆನ್ ಕಾರ್ಯಕ್ರಮದಲ್ಲಿ ಪತ್ರಕರ್ತೆ ಬರ್ಖಾ ದತ್ ಅವರೊಂದಿಗೆ ಮಾತನಾಡಿದ ಸಾಯಿಪಲ್ಲವಿ, ಸೀತೆಯ ಪಾತ್ರಕ್ಕೆ ತಮ್ಮ ಆಯ್ಕೆ ಹಾಗೂ ತಮ್ಮ ಲುಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಸೀತೆಯ ಪಾತ್ರದ ಬಗ್ಗೆ ಟೀಕೆಗಳಿಗೆ ಸಾಯಿಪಲ್ಲವಿ ಉತ್ತರ

ಸೀತಾ ಮಾತೆ ಹೇಗೆ ಕಾಣಿಸಿಕೊಳ್ಳಬೇಕು ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತನಾಡಿದ ಸಾಯಿಪಲ್ಲವಿ, ಇಂತಹ ಟೀಕೆಗಳಿಂದ ಆತ್ಮವಿಶ್ವಾಸ ಕುಗ್ಗಬಾರದು ಎಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ನನಗೆ ತಿಳಿದಿದೆ. ಸೀತಾ ಮಾತೆ ಎಷ್ಟು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬಿತ್ಯಾದಿ ಅಭಿಪ್ರಾಯಗಳನ್ನು ನೋಡಿದ್ದೇನೆ. ಆದರೆ, ಇಂತಹ ಮಾತುಗಳಿಂದ ನಿಮ್ಮ ಆತ್ಮವಿಶ್ವಾಸವೇ ಕುಗ್ಗುತ್ತಿದ್ದರೆ, ಸಮಸ್ಯೆ ನಿಮ್ಮಲ್ಲಿದೆ ಎಂದರ್ಥ. ನಿಮ್ಮನ್ನು ನೀವು ಮಾನಸಿಕವಾಗಿ ಗಟ್ಟಿಗೊಳಿಸಿಕೊಳ್ಳಬೇಕು ಎಂದಿದ್ದಾರೆ.

ಅಲ್ಲದೆ, ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯಗಳಿರುತ್ತವೆ. ಆದರೆ, ಇತರರ ಅಭಿಪ್ರಾಯಗಳಿಂದ ನಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಬಾರದು. ನಮ್ಮೊಳಗೆ ಆತ್ಮವಿಶ್ವಾಸ ಮತ್ತು ಗಟ್ಟಿತನ ಇದ್ದರೆ ಜಗತ್ತಿನ ಟೀಕೆಗಳನ್ನು ಎದುರಿಸಬಹುದು ಎಂದಿದ್ದಾರೆ.

ಸೀತೆಯ ಪಾತ್ರ ಬದಲಾವಣೆ

ಸೀತೆಯ ಪಾತ್ರದಲ್ಲಿ ನಟಿಸಿದ ಬಳಿಕ ತಮ್ಮ ಜೀವನದಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಾಯಿಪಲ್ಲವಿ, ಪ್ರತಿಯೊಂದು ಸಿನಿಮಾದ ಪಾತ್ರವೂ ಕಲಾವಿದರ ಮೇಲೆ ಒಂದಲ್ಲ ಒಂದು ರೀತಿಯ ಪ್ರಭಾವ ಬೀರುತ್ತದೆ ಎಂದಿದ್ದಾರೆ. ನನ್ನ ಜೀವನ ಯಾವಾಗಲೂ ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಕ್ಕೆ ಸಾಗುವ ಪ್ರಯಾಣವಾಗಿದೆ. ಪ್ರತಿಯೊಂದು ಪಾತ್ರವೂ ನಿಮ್ಮೊಳಗೆ ಒಂದಷ್ಟು ಬದಲಾವಣೆಗಳನ್ನು ತರುತ್ತದೆ. ಆ ಪಾತ್ರದ ಒಂದು ಸಣ್ಣ ಭಾಗವನ್ನು ನೀವು ನಿಮ್ಮ ಹೃದಯದಲ್ಲಿ ಉಳಿಸಿಕೊಂಡಿರುತ್ತೀರಿ. ನನ್ನಲ್ಲೂ ಕೆಲವು ಬದಲಾವಣೆಗಳಾಗಿವೆ. ಆದರೆ, ಅವೆಲ್ಲವೂ ವೈಯಕ್ತಿಕವಾದವು ಎಂದಿದ್ದಾರೆ.

ನೋ ಮೇಕಪ್ ಲುಕ್ ಬಗ್ಗೆ ನಟಿ ಹೇಳಿದ್ದೇನು?

ನನ್ನ ವೃತ್ತಿಜೀವನದ ಆರಂಭದಲ್ಲಿ ನನ್ನ ರೂಪದ ಬಗ್ಗೆ ನನಗೂ ಅಭದ್ರತೆಯ ಭಾವನೆ ಇತ್ತು. ಆದರೆ, ಕಾಲಕ್ರಮೇಣ ಪ್ರೇಕ್ಷಕರು ಮತ್ತು ಕಲಾವಿದರ ನಡುವೆ ಒಂದು ರೀತಿಯ ಸಂಬಂಧವಿರುತ್ತದೆ ಎಂಬುದು ಅರ್ಥವಾಯಿತು. ಪ್ರೇಕ್ಷಕರು ನೈಜವಾದದ್ದನ್ನು ನೋಡಲು ಬಯಸುತ್ತಾರೆ. ಹಾಗಾಗಿ ನೈಜ ಪರಿಸ್ಥಿತಿಗಳಲ್ಲಿ ಬದುಕುವ ನೈಜ ಮಹಿಳೆಯರ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ಅಲ್ಲದೆ, ಮುಖಕ್ಕೆ ಫೌಂಡೇಶನ್ ಅಥವಾ ಕನ್ಸೀಲರ್ ಹಚ್ಚಿಕೊಂಡಾಗ ತಾನು ಬೇರೆಯದೇ ವ್ಯಕ್ತಿಯಂತೆ ಕಾಣಿಸುತ್ತೇನೆ ಎಂಬ ಭಾವನೆ ಮೂಡುತ್ತದೆ. ಹಾಗಾಗಿ ಸಹಜ ರೂಪದಲ್ಲಿರಲು ಇಷ್ಟಪಡುತ್ತೇನೆ ಎಂದಿದ್ದಾರೆ.