ನನ್ನ ಜನ್ಮದಿನದಂದು ಅಂದರೆ ಆ.4 ರಂದು ನನ್ನ ಹೀರೋ ಗಾಂಧಿಯನ್ನು ಪ್ರತಿನಿಧಿಸುವ ‘ರಘುಪತಿ ರಾಘವ’ ಹಾಡಿನ ಆಲ್ಬಂ ಬಿಡುಗಡೆ ಮಾಡಿದೆ ಎಂದರು ಗ್ರ್ಯಾಮಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್.

ನನ್ನ ಜನ್ಮದಿನದಂದು ಅಂದರೆ ಆ.4 ರಂದು ನನ್ನ ಹೀರೋ ಗಾಂಧಿಯನ್ನು ಪ್ರತಿನಿಧಿಸುವ ‘ರಘುಪತಿ ರಾಘವ’ ಹಾಡಿನ ಆಲ್ಬಂ ಬಿಡುಗಡೆ ಮಾಡಿದೆ ಎಂದರು ಗ್ರ್ಯಾಮಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್.

- ನನಗೆ, ನನ್ನಂಥಾ ಅನೇಕರಿಗೆ ಗಾಂಧೀಜಿ ಹೀರೋ. ಅವರಂತೆ ನಾನು ಸ್ಫೂರ್ತಿಯಾಗಿಸಿಕೊಂಡಿರುವ ಇನ್ನೊಬ್ಬ ಆಧುನಿಕ ಸಂತ ನೋಬೆಲ್‌ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್‌ ಸತ್ಯಾರ್ಥಿ. ಒಮ್ಮೆ ಒಂದು ವೇದಿಕೆಯಲ್ಲಿ ಕೈಲಾಶ್‌ ಸತ್ಯಾರ್ಥಿ ಅವರನ್ನು ಭೇಟಿಯಾಗುವ ಅವಕಾಶ ಒದಗಿ ಬಂತು. ಒಂದರ್ಧ ಗಂಟೆ ಅವರು ಮಾತಿಗೆ ಸಿಕ್ಕಿದ್ದರು. ಆ ವೇಳೆ ‘ಗಾಂಧಿ’ ಯನ್ನು ಅಂದರೆ ಗಾಂಧಿ ತತ್ವವನ್ನು ಇಂದಿನ ಜಗತ್ತಿಗೆ ಮತ್ತೆ ಮತ್ತೆ ಕರೆತರುವ ಅಗತ್ಯತೆಯನ್ನು ಮನಗಂಡೆವು. ಅಂದೇ ನಾವಿಬ್ಬರೂ ‘ಗಾಂಧಿ’ ತತ್ವವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಲ್ಬಂ ಮಾಡುವ ಕಾರ್ಯಕ್ಕೆ ಕಟಿಬದ್ಧರಾದೆವು.

- ಇದು ಎರಡು ವರ್ಷಗಳ ಸತತ ಪ್ರಯತ್ನ. ಈ ವೇಳೆ ನಮ್ಮ ತಂಡ ಭಾರತದಾದ್ಯಂತ ಓಡಾಡಿ ಅಲ್ಲಿನ ಅನನ್ಯತೆಯನ್ನು ಚಿತ್ರೀಕರಿಸಿಕೊಂಡಿತು. ಇದಕ್ಕೆ ಕೈಲಾಶ್‌ ಸತ್ಯಾರ್ಥಿ ಅವರು ಕೈ ಜೋಡಿಸಿದರು. ‘ಗಾಂಧಿ’ ಎಂಬ ಕೇಂದ್ರ ತತ್ವವನ್ನಿಟ್ಟು ಆಲ್ಬಂ ಮಾಡುವ ಪ್ರಕ್ರಿಯೆ ಭರದಿಂದ ನಡೆಯಿತು. ಕೈಲಾಶ್‌ ಸತ್ಯಾರ್ಥಿ ಅವರ ಅನುಭವದಲ್ಲಿ ಮಿಂದ ಮಾತುಗಳೊಂದಿಗೆ ‘ಕಂಪ್ಯಾಶನ್‌’ ಅಂದರೆ ‘ಸಹಾನುಭೂತಿ’ ಅನ್ನುವ ಆಲ್ಬಂ ಮಾಡಿದೆವು. ಇದರ ಜೊತೆಗೆ ಗಾಂಧಿ ಬಗೆಗಿನ ಕೈಲಾಶ್‌ ಸತ್ಯಾರ್ಥಿ ಅವರ ಚಿಂತನೆಗಳ ಲಹರಿಯನ್ನೂ ಹೊರತಂದೆವು. ಇವು ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿವೆ.

- ನನ್ನ ಜನ್ಮದಿನದಂದು ಅಂದರೆ ಆ.4 ರಂದು ನನ್ನ ಹೀರೋ ಗಾಂಧಿಯನ್ನು ಪ್ರತಿನಿಧಿಸುವ ‘ರಘುಪತಿ ರಾಘವ’ ಹಾಡಿನ ಆಲ್ಬಂ ಬಿಡುಗಡೆ ಮಾಡಿದೆ. ನಮ್ಮ ನೆಲದ ಸೌಹಾರ್ದತೆ, ವೈವಿಧ್ಯತೆಯಲ್ಲಿ ಏಕತೆಯ ವಿಚಾರಗಳನ್ನಿಟ್ಟು ಈ ಆಲ್ಬಂ ಬಿಡುಗಡೆ ಮಾಡಿದ್ದೇನೆ.

- ನೀವು ಈ ಆಲ್ಬಂ ಅನ್ನು ನೋಡಿದರೆ ನಮ್ಮ ದೇಶವನ್ನು ಪ್ರತಿನಿಧಿಸುವ ಅನೇಕ ಸ್ಥಳಗಳನ್ನು ಕಾಣಬಹುದು. ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳ, ವಾರಾಣಸಿ, ಅಜ್ಮೀರದ ದರ್ಗಾ, ದೆಹಲಿನ ಚರ್ಚ್‌ಗಳು, ಜೈಸಲ್ಮೇರ್‌, ರಾಜಸ್ಥಾನ, ಕರ್ನಾಟಕದ ಒಂದಿಷ್ಟು ದೇವಾಲಯಗಳು ಹೀಗೆ ಹಲವು ಧಾರ್ಮಿಕತೆಯ ಚೌಕಟ್ಟನ್ನು ಮೀರಿ ಆಧ್ಯಾತ್ಮಿಕತೆಗೆ ಹತ್ತಿರವಾಗುವ ತಾಣಗಳನ್ನು ಸೇರಿಸಿದ್ದೇನೆ.

- ‘ಗಾಂಧಿ’ ಬಗೆಗೆ ಇಷ್ಟೆಲ್ಲ ಮ್ಯೂಸಿಕಲ್‌ ವರ್ಕ್‌ ಮಾಡಲು ಕಾರಣ ಇಂದಿನ ಜಗತ್ತಿನ ಸ್ಥಿತಿ. ದ್ವೇಷ, ಹಿಂಸೆ, ಮನುಷ್ಯ ಸಂಬಂಧವನ್ನು ಹೀನವಾಗಿಸುವ ಟ್ರೋಲ್‌ಗಳು, ಕೊಳ್ಳುಬಾಕತನಕ್ಕೆ ಪರಿಹಾರ ಹುಡುಕಲೇ ಬೇಕಾದ ತುರ್ತು ಇದೆ. ಜನರ ಮನಸ್ಥಿತಿಯನ್ನು ಉನ್ನತಿಯತ್ತ ಕೊಂಡೊಯ್ಯಲು ಗಾಂಧಿ ತತ್ವ ಬೇಕೇ ಬೇಕಾಗಿದೆ. ಅದನ್ನು ಜನರ ಮನಸ್ಸಿಗೆ ನಾಟಿಸುವ ಆಶಯ ಈ ಆಲ್ಬಂನದ್ದು.