ಹಲವು ವಿವಾದಗಳ ನಡುವೆ ಪಠಾಣ್​ ಚಿತ್ರ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಚಿತ್ರತಂಡಕ್ಕೆ ಇನ್ನೊಂದು ಶಾಕ್​ ಎದುರಾಗಿದೆ. ಅದೇನು ಗೊತ್ತಾ? 

ಪಠಾಣ್​ ಚಿತ್ರಕ್ಕೆ ಸದ್ಯ ಗ್ರಹಚಾರ ಸರಿಯಿದ್ದಂತೆ ಕಾಣುತ್ತಿಲ್ಲ. ಕೇಸರಿ ಬಣ್ಣದ ಬಿಕಿನಿಯಿಂದಾಗಿ ಬೈಕಾಟ್​ ಬಿಸಿ ಅನುಭವಿಸಿ ಇನ್ನೂ ಭಯದಲ್ಲಿಯೇ ಇರುವ ಈ ಚಿತ್ರತಂಡಕ್ಕೆ ಈಗ ಮತ್ತೊಂದು ಭೀತಿ ಎದುರಾಗಿದೆ. ಇದೆ 10ರಂದು ಬಿಡುಗಡೆಯಾದ ಟ್ರೈಲರ್​​ ಸಾಕಷ್ಟು ಸದ್ದು ಮಾಡುತ್ತಿದ್ದರೂ, ಚಿತ್ರದಲ್ಲಿ ಅನೇಕ ಕತ್ತರಿ ಪ್ರಯೋಗ ಮಾಡಿದ್ದರೂ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಎಂದು ಭಯದಲ್ಲಿ ಇರುವ ಪಠಾಣ್​ಗೆ ಈಗ ಠಕ್ಕರ್​ ನೀಡ ಹೊರಟಿದೆ 'ಗಾಂಧಿ ಗೋಡ್ಸೆ ಏಕ್ ಯುದ್ಧ್' ಚಿತ್ರ.

ಘಾಯಲ್​, ದಾಮಿನಿಯಂತಹ ಬ್ಲಾಕ್‌ಬಸ್ಟರ್ (Blockbuster) ಚಿತ್ರಗಳನ್ನು ನೀಡಿದ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಸುಮಾರು 9 ವರ್ಷಗಳ ನಂತರ ಮರಳುತ್ತಿದ್ದಾರೆ. ಈ ಬಾರಿ ಅವರು ತಮ್ಮ 'ಗಾಂಧಿ ಗೋಡ್ಸೆ ಏಕ್ ಯುದ್ಧ್' (Gandhi Ghodse Ek Yuddh) ಚಿತ್ರದ ಮೂಲಕ ಪುನರಾಗಮನ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್​ ಲಾಂಚ್ ಆಗಿತ್ತು. ಇದಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಈ ಚಿತ್ರ ಇದೇ ತಿಂಗಳ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ವಿಷಯ ಏನಪ್ಪಾ ಎಂದರೆ, ಪಠಾಣ್​ ಚಿತ್ರ ಬಿಡುಗಡೆಯಾಗುತ್ತಿರುವುದು ಜ.25ರಂದು. ಈ ಚಿತ್ರ 26ರಂದು. ಸಹಜವಾಗಿ ಗಾಂಧಿ ಗೋಡ್ಸೆಯ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರದ ಬಗ್ಗೆ ಜನರು ಸಾಕಷ್ಟು ಕುತೂಹಲ ಇರಿಸಿಕೊಂಡಿದ್ದಾರೆ. ಇದರಿಂದಾಗಿ ಈ ಚಿತ್ರ ಪಠಾಣ್​ಗೆ ಠಕ್ಕರ್​ ಕೊಡುವ ಸಾಧ್ಯತೆ ಇದೆ ಎಂದೇ ಬಾಲಿವುಡ್​ ದಿಗ್ಗಜರು ಹೇಳುತ್ತಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಪಠಾಣ್​ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗುತ್ತಿದೆ.

'ಬೇಷರಂ ರಂಗ್' ವಿವಾದ ನಂತರ, ಟ್ರೈಲರ್‌ನಲ್ಲಿ ಕೇಸರಿ ಲುಂಗಿಯಲ್ಲಿ ದೀಪಿಕಾ ಪಡುಕೋಣೆ!

ಮುಂಬೈನಲ್ಲಿ (Mumbai) ಈಚೆಗೆ ನಡೆದಿದ್ದ ಚಿತ್ರದ ಟ್ರೈಲರ್​ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಸಂತೋಷಿ ಅವರು, ಶಾರುಖ್ ಖಾನ್ ಅವರ ಚಿತ್ರ ಪಠಾಣ್ ಜೊತೆಗಿನ ಘರ್ಷಣೆಯ ಬಗ್ಗೆ ಮಾತನಾಡಿದರು. ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು 'ನಮ್ಮ ಚಿತ್ರವು ಅಂತಹ ವಿಷಯಗಳು ಮತ್ತು ಚಲನಚಿತ್ರಗಳಲ್ಲಿ ಆಸಕ್ತಿ ಹೊಂದಿರುವ ಜನರಿಗಾಗಿ. ಎರಡೂ ಚಿತ್ರಗಳು ಒಂದಕ್ಕೊಂದು ವಿಭಿನ್ನವಾಗಿವೆ. ಹಾಗಾಗಿ ನಾನು ಅಂತಹ ಚಿತ್ರಗಳ ಬಗ್ಗೆ ಟೆನ್ಷನ್ ತೆಗೆದುಕೊಳ್ಳುವುದಿಲ್ಲ. ಅರ್ಜುನನಿಗೆ ಹೇಗೆ ಮೀನಿನ ಕಣ್ಣಿನ ಮೇಲೆ ಮಾತ್ರ ದೃಷ್ಟಿ ಇತ್ತೋ ನಮ್ಮ ಚಿತ್ರ ಕೂಡ ಹಾಗೆಯೇ. ಅದಕ್ಕಾಗಿ ಪಠಾಣ್​ (Pathaan) ಜೊತೆ ಕಂಪೇರ್​ ಮಾಡುವುದು ಸರಿಯಲ್ಲ' ಎಂದಿದ್ದರು. ಆದರೆ ಅದೇ ಇನ್ನೊಂದೆಡೆ ಪಠಾಣ್​ ಚಿತ್ರತಂಡಕ್ಕೆ ಇದರಿಂದ ಸ್ವಲ್ಪ ಭಯ ಶುರುವಾಗಿದೆ ಎಂದು ಸುದ್ದಿಯಿದೆ. 

ಅಂದಹಾಗೆ 'ಗಾಂಧಿ ಗೋಡ್ಸೆ ಏಕ್ ಯುದ್ಧ್' ಚಿತ್ರವು ಗಾಂಧೀಜಿ ಮತ್ತು ನಾಥೂರಾಮ್​ ಗೋಡ್ಸೆ (Nathuram Godse) ಅವರು ಸೈದ್ಧಾಂತಿಕ ನಿಲುವಿನ ಕುರಿತು ಹೇಳುತ್ತದೆ. ಈ ವಿಚಾರವನ್ನು ಇಟ್ಟುಕೊಂಡು ರಾಜ್​ಕುಮಾರ್ ಸಂತೋಷಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದೊಂದು ಕಾಲ್ಪನಿಕ ಕಥೆ ಎಂದೂ ಅವರು ಹೇಳಿದ್ದಾರೆ. 'ನಾಥೂರಾಮ್ ಗೋಡ್ಸೆ ಗುಂಡು ಹಾರಿಸಿದ ನಂತರದಲ್ಲಿ ಗಾಂಧೀಜಿ ಬದುಕಿದ್ದರೆ ಏನಾಗುತ್ತಿತ್ತು ಎಂಬ ಕಲ್ಪನೆಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಗಾಂಧಿ ಹಾಗೂ ಗೋಡ್ಸೆ ಯಾವ ರೀತಿಯ ಸೈದ್ಧಾಂತಿಕ ನಿಲುವನ್ನು ಹೊಂದಿದ್ದರು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿನ್ಮಯ್ ಮಂಡ್ಲೇಕರ್ ಅವರು ಗೋಡ್ಸೆಯಾಗಿ ಹಾಗೂ ದೀಪಕ್ ಅಂತಾನಿ ಅವರು ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ' ಎಂದು ಅವರು ಹೇಳಿದ್ದಾರೆ. ಆದರೆ ಟ್ರೈಲರ್​​ (Trailer) ನೋಡಿದ ಜನರ ಹುಚ್ಚು ಹೆಚ್ಚಾಗಿದ್ದು, ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. 

ಏಕೆಂದರೆ ಈ ಟ್ರೈಲರ್​​ ಅಷ್ಟು ಕುತೂಹಲದಿಂದ ಕೂಡಿದೆ. ಗೋಡ್ಸೆ ಗಾಂಧೀಜಿಯವರ (Gandhiji) ಮೇಲೆ ಗುಂಡು ಹಾರಿಸಿದರೂ ಅವರು ಬದುಕುತ್ತಾರೆ. ಗೋಡ್ಸೆ ಅರೆಸ್ಟ್ ಆಗುತ್ತಾರೆ. ಗೋಡ್ಸೆಯನ್ನು ಭೇಟಿ ಮಾಡಬೇಕು ಎಂಬ ಇಚ್ಛೆಯನ್ನು ಗಾಂಧಿ ವ್ಯಕ್ತಪಡಿಸಿ ಇಬ್ಬರ ಭೇಟಿ ಆಗುತ್ತದೆ. ಇಬ್ಬರ ಮಧ್ಯೆ ಸೈದ್ಧಾಂತಿಕ ಯುದ್ಧ ನಡೆಯುತ್ತದೆ. ಇದನ್ನು ಟ್ರೇಲರ್​ನಲ್ಲಿ ತೋರಿಸಲಾಗಿದ್ದು ಚಿತ್ರದ ಕುರಿತು ಕುತೂಹಲ ಮೂಡಿಸಿದೆ. ಎಆರ್​ ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮನಿಲಾ ಸಂತೋಷಿ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 

ಕರೀನಾ ಕಪೂರ್‌ಗ್ಯಾಕೆ ರಾಹುಲ್ ಜೊತೆ ಡೇಟಿಂಗ್ ಮಾಡೋ ಆಸೆ?

ಈ ಚಿತ್ರವನ್ನು ಶಾರುಖ್ ಖಾನ್ ಕೂಡ ಹೊಗಳಿದ್ದಾರೆ. ಮಾತ್ರವಲ್ಲದೇ ಸಂತೋಷಿ ಅವರನ್ನು ಶಾರುಖ್​ ಶ್ಲಾಘಿಸಿದ್ದಾರೆ. ಅವರು ತುಂಬಾ ಒಳ್ಳೆಯ ವ್ಯಕ್ತಿ, ತುಂಬಾ ಕಷ್ಟಪಟ್ಟು ಕೆಲಸ ಮಾಡುವ ನಟ, ಅವರಿಗೆ ನಾನು ಶುಭ ಹಾರೈಸುತ್ತೇನೆ, ಯಶ್ ರಾಜ್ ಬಹಳ ದೊಡ್ಡ ಬ್ಯಾನರ್ ಹಾಗೂ ಬಹಳ ಪ್ರತಿಷ್ಠಿತ ಕಂಪೆನಿ ಎಂದಿರುವ ಶಾರುಖ್​ (Shah rukh Khan) ಚಿತ್ರಕ್ಕೆ ಶುಭ ಹಾರೈಸಿದ್ದಾರೆ. 250 ಕೋಟಿ ರೂಪಾಯಿ ವೆಚ್ಚದ ಪಠಾಣ್​ಗೆ ಗಾಂಧಿ ಗೋಡ್ಸೆ ಠಕ್ಕರ್​ ಕೊಡುತ್ತಾ ಎನ್ನುವುದೇ ಈಗಿರುವ ಪ್ರಶ್ನೆ.