ಸಿನಿಮಾದಲ್ಲಿ ರಜನಿಕಾಂತ್ ಅವರ ಪಾತ್ರದಷ್ಟೇ ಪವರ್ ಫುಲ್ ಆಗಿದ್ದು, ಖಳನಾಯಕಿಯಾಗಿ ಮಿಂಚಿದ 'ನೀಲಾಂಬರಿ' ಪಾತ್ರ. ನಟಿ ರಮ್ಯಾ ಕೃಷ್ಣನ್ ತಮ್ಮ ಅಭಿನಯದ ಮೂಲಕ ಆ ಪಾತ್ರಕ್ಕೆ ಜೀವ ತುಂಬಿ ಅಮರವಾಗಿಸಿದ್ದಾರೆ. ಆದರೆ, ಈ ಐಕಾನಿಕ್ ಪಾತ್ರಕ್ಕೆ ರಮ್ಯಾ ಕೃಷ್ಣ ಅವರು ಮೊದಲ ಆಯ್ಕೆಯಾಗಿರಲಿಲ್ಲವಂತೆ! 

ರಮ್ಯಾ ಕೃಷ್ಣ ಬದಲು ಬೇರೆ ನಟಿ ಆಯ್ಕೆಯಾಗಿತ್ತು!

ಚೆನ್ನೈ: ದಕ್ಷಿಣ ಭಾರತದ ಸಿನಿ ಇತಿಹಾಸದಲ್ಲೇ ಅಳಿಸಲಾಗದ ಛಾಪು ಮೂಡಿಸಿದ ಸಿನಿಮಾ ಎಂದರೆ ಅದು ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ಬ್ಲಾಕ್ ಬಸ್ಟರ್ ಹಿಟ್ 'ಪಡೆಯಪ್ಪ'. 90ರ ದಶಕದಲ್ಲಿ ತೆರೆಕಂಡು ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆದಿದ್ದ ಈ (Padeyappa) ಸಿನಿಮಾ ಈಗ ಮತ್ತೆ ಭರ್ಜರಿಯಾಗಿ ರಿ-ರಿಲೀಸ್ ಆಗಲು ಸಜ್ಜಾಗುತ್ತಿದೆ. ಈ ಸಂಭ್ರಮದ ನಡುವೆಯೇ ತಲೈವಾ ರಜನಿಕಾಂತ್ ಅಭಿಮಾನಿಗಳಿಗೆ ಅಚ್ಚರಿಯ ವಿಷಯವೊಂದನ್ನು ಬಾಯಿಬಿಟ್ಟಿದ್ದಾರೆ. ಈ ಸತ್ಯವನ್ನು ಕೇಳಿ ಅಭಿಮಾನಿಗಳು ಹುಬ್ಬೇರಿಸುವುದು ಖಂಡಿತ!

ಸಿನಿಮಾದಲ್ಲಿ ರಜನಿಕಾಂತ್ ಅವರ ಪಾತ್ರದಷ್ಟೇ ಪವರ್ ಫುಲ್ ಆಗಿದ್ದು, ಖಳನಾಯಕಿಯಾಗಿ ಮಿಂಚಿದ 'ನೀಲಾಂಬರಿ' ಪಾತ್ರ. ನಟಿ ರಮ್ಯಾ ಕೃಷ್ಣ (Ramya Krisha) ಅವರು ತಮ್ಮ ಅಭಿನಯದ ಮೂಲಕ ಆ ಪಾತ್ರಕ್ಕೆ ಜೀವ ತುಂಬಿ ಅಮರವಾಗಿಸಿದ್ದಾರೆ. ಆದರೆ, ನಿಮಗೆ ಗೊತ್ತೇ? ಈ ಐಕಾನಿಕ್ ಪಾತ್ರಕ್ಕೆ ರಮ್ಯಾ ಕೃಷ್ಣನ್ ಅವರು ಮೊದಲ ಆಯ್ಕೆಯಾಗಿರಲಿಲ್ಲವಂತೆ! ಹೌದು, ಖುದ್ದು ರಜನಿಕಾಂತ್ ಅವರೇ ಈ ಗುಟ್ಟನ್ನು ಈಗ ರಟ್ಟು ಮಾಡಿದ್ದಾರೆ.

ಐಶ್ವರ್ಯಾ ರೈಗಾಗಿ ಕಾಯಲು ಸಿದ್ಧವಿದ್ದ ರಜನಿ!

ಪಡೆಯಪ್ಪ ಚಿತ್ರದ ಮರು ಬಿಡುಗಡೆಯ ಹಿನ್ನೆಲೆಯಲ್ಲಿ ಬಿಡುಗಡೆಯಾದ ವಿಶೇಷ ವಿಡಿಯೋವೊಂದರಲ್ಲಿ ಮಾತನಾಡಿರುವ ರಜನಿಕಾಂತ್, "ನಾವು ನೀಲಾಂಬರಿ ಪಾತ್ರಕ್ಕೆ ಮೊದಲು ಅಂದುಕೊಂಡಿದ್ದು ವಿಶ್ವಸುಂದರಿ ಐಶ್ವರ್ಯಾ ರೈ (Aishwarya Rai) ಅವರನ್ನು. ಆ ಪಾತ್ರದ ಗತ್ತು ಮತ್ತು ಗಾಂಭೀರ್ಯಕ್ಕೆ ಐಶ್ವರ್ಯಾ ಸೂಕ್ತ ಎಂದು ಭಾವಿಸಿದ್ದೆವು. ಅವರನ್ನು ಸಂಪರ್ಕಿಸಲು ನಾವು ಸಾಕಷ್ಟು ಕಷ್ಟಪಟ್ಟೆವು," ಎಂದು ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ರಜನಿ ಮುಂದುವರಿಯುತ್ತಾ, "ಆ ಪಾತ್ರ ಅಷ್ಟು ಪ್ರಬಲವಾಗಿತ್ತು. ಒಂದು ವೇಳೆ ಐಶ್ವರ್ಯಾ ರೈ ಆ ಪಾತ್ರ ಮಾಡಲು ಒಪ್ಪಿದ್ದರೆ, ಅವರಿಗೋಸ್ಕರ ನಾನು ಬರೋಬ್ಬರಿ 2 ರಿಂದ 3 ವರ್ಷಗಳ ಕಾಲ ಕಾಯಲೂ ಸಿದ್ಧನಿದ್ದೆ. ಯಾಕೆಂದರೆ ಆ ಪಾತ್ರ ಕ್ಲಿಕ್ ಆಗುವುದು ನಮಗೆ ಅನಿವಾರ್ಯವಾಗಿತ್ತು," ಎಂದು ಹೇಳುವ ಮೂಲಕ ಅಂದೇ ಐಶ್ವರ್ಯಾ ರೈ ಮೇಲಿದ್ದ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕೈತಪ್ಪಿದ ಅವಕಾಶ, ರಮ್ಯಾ ಕೃಷ್ಣ ಎಂಟ್ರಿ

ಆದರೆ, ದುರದೃಷ್ಟವಶಾತ್ ಐಶ್ವರ್ಯಾ ರೈ ಅವರು ಆ ಸಮಯದಲ್ಲಿ ಈ ಪಾತ್ರ ಮಾಡಲು ಆಸಕ್ತಿ ತೋರಿಸಲಿಲ್ಲವಂತೆ. ಐಶ್ವರ್ಯಾ ರೈ ನೋ ಎಂದ ಮೇಲೆ, ಚಿತ್ರತಂಡ ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್ ಅವರಂತಹ ಘಟಾನುಘಟಿ ನಟಿಯರನ್ನು ಸಂಪರ್ಕಿಸಲು ಯೋಚಿಸಿತ್ತು. ಆದರೆ ರಜನಿಕಾಂತ್ ಅವರಿಗೆ ಬೇಕಿದ್ದದ್ದು ಕಣ್ಣಲ್ಲಿ ಬೆಂಕಿ ಉಗುಳುವ ಮತ್ತು ದೇಹದಲ್ಲಿ ಅಹಂಕಾರವನ್ನು ಹೊತ್ತು ನಡೆಯುವ ನಟಿ.

ಆಗ ನಿರ್ದೇಶಕ ಕೆ.ಎಸ್. ರವಿಕುಮಾರ್ ಅವರು ರಮ್ಯಾ ಕೃಷ್ಣನ್ ಅವರ ಹೆಸರನ್ನು ಸೂಚಿಸಿದರು. ಅಂತಿಮವಾಗಿ ರಮ್ಯಾ ಕೃಷ್ಣ ನೀಲಾಂಬರಿಯಾಗಿ ಪರದೆ ಮೇಲೆ ಆರ್ಭಟಿಸಿದರು. ಇಂದಿಗೂ ಆ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಮುಂದೆ ಹಲವು ವರ್ಷಗಳ ನಂತರ ಶಂಕರ್ ನಿರ್ದೇಶನದ 'ಎಂದಿರನ್' (ರೋಬೋಟ್) ಸಿನಿಮಾದಲ್ಲಿ ರಜನಿ ಮತ್ತು ಐಶ್ವರ್ಯಾ ಜೋಡಿಯಾಗಿ ನಟಿಸಿದ್ದು ಈಗ ಇತಿಹಾಸ.

ಬರ್ತಿದೆ 'ಪಡೆಯಪ್ಪ-2'!

ಇದೇ ವಿಡಿಯೋದಲ್ಲಿ ರಜನಿಕಾಂತ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಪಡೆಯಪ್ಪ ಚಿತ್ರದ ಸಿಕ್ವೆಲ್ ಅಥವಾ ಮುಂದುವರಿದ ಭಾಗದ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದಾರೆ. ಹೌದು, 'ನೀಲಾಂಬರಿ: ಪಡೆಯಪ್ಪ 2' ಎಂಬ ಶೀರ್ಷಿಕೆಯಡಿ ಚಿತ್ರವನ್ನು ನಿರ್ಮಿಸಲು ಚರ್ಚೆಗಳು ನಡೆಯುತ್ತಿವೆಯಂತೆ. ಚಿತ್ರದ ಕಥೆಯ ಬಗ್ಗೆ ತಂಡ ಈಗಲೇ ಚರ್ಚೆ ನಡೆಸುತ್ತಿದ್ದು, ಸ್ಕ್ರಿಪ್ಟ್ ಅಂತಿಮಗೊಂಡ ತಕ್ಷಣ ಸಿನಿಮಾ ಕೆಲಸಗಳು ಶುರುವಾಗಲಿವೆ ಎಂದು ತಲೈವಾ ಸುಳಿವು ನೀಡಿದ್ದಾರೆ.

ಒಟ್ಟಿನಲ್ಲಿ, ಅಂದು ಐಶ್ವರ್ಯಾ ರೈ ಮಾಡಬೇಕಿದ್ದ ಪಾತ್ರವನ್ನು ರಮ್ಯಾ ಕೃಷ್ಣನ್ ಮಾಡಿ ಗೆದ್ದರು. ಈಗ ಪಡೆಯಪ್ಪ ಮತ್ತೆ ಅಬ್ಬರಿಸಲು ಬರುತ್ತಿದ್ದು, ಅದರ ಜೊತೆಗೆ ಭಾಗ-2 ರ ಸುದ್ದಿಯೂ ಸೇರಿರುವುದು ರಜನಿ ಅಭಿಮಾನಿಗಳ ಪಾಲಿಗೆ ಹಬ್ಬದ ಊಟ ಸಿಕ್ಕಂತಾಗಿದೆ.