ಹೈದರಾಬಾದ್(ಫೆ.08)‌: ‘ಬಾಹುಬಲಿ’ ಸಿನಿಮಾ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದ ಪ್ರಸಿದ್ಧ ಚಿತ್ರ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಚಲನಚಿತ್ರ 2021ರ ಅ.13ರಂದು ತೆರೆ ಕಾಣಲಿದೆ. ವಿಶೇಷ ಎಂದರೆ, ಬಿಡುಗಡೆಗೆ ಇನ್ನೂ 8 ತಿಂಗಳು ಬಾಕಿ ಇರುವಾಗಲೇ ಬಿಡುಗಡೆ ಹಕ್ಕಿನ ಮೂಲಕವೇ ಚಿತ್ರ ತಂಡ 500 ಕೋಟಿ ರು. ಗಳಿಸುವ ಅಂದಾಜಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳ ಭಾಷೆಯ ಸಿನಿಮಾ ಹಕ್ಕನ್ನು 348 ಕೋಟಿ ರು.ವರೆಗೂ ಖರೀದಿಸಲು ವಿತರಕರು ಬಂದಿದ್ದಾರೆ ಎನ್ನಲಾಗಿದೆ. ಬಾಹುಬಲಿ-2 ಸಿನಿಮಾದ ದಕ್ಷಿಣ ಭಾರತ ಬಿಡುಗಡೆ ಹಕ್ಕು 215 ಕೋಟಿ ರು.ಗೆ ಬಿಕರಿಯಾಗಿತ್ತು. ಅದಕ್ಕೆ ಹೋಲಿಸಿದರೆ ‘ಆರ್‌ಆರ್‌ಆರ್‌’ಗೆ ಅದಕ್ಕಿಂತಲೂ ಬೇಡಿಕೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಹಿಂದಿ ಆವೃತ್ತಿಯ ಬಿಡುಗಡೆ ಮೂಲಕ ಚಿತ್ರ ತಂಡ 100 ಕೋಟಿ ರು. ಗಳಿಸುವ ವಿಶ್ವಾಸದಲ್ಲಿದೆ. ವಿದೇಶಿ ವಿತರಣೆ ಹಕ್ಕನ್ನು ಈಗಾಗಲೇ 70 ಕೋಟಿ ರು.ಗೆ ಮಾರಾಟ ಮಾಡಲಾಗಿದೆ. ಈ ಎಲ್ಲವನ್ನೂ ಸೇರಿಸಿದರೆ ಬಿಡುಗಡೆಗೆ ಮುನ್ನವೇ ಸಿನಿಮಾ ತಂಡಕ್ಕೆ ಅಂದಾಜು 500 ಕೋಟಿ ರು. ಗಳಿಕೆ ಖಚಿತವಾದಂತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

1900ರಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮರಾಜು ಹಾಗೂ ಕೊಮರಮ್‌ ಭೀಮ್‌ ಅವರ ಕಥಾನಕ ಹೊಂದಿರುವ ಈ ಸಿನಿಮಾದಲ್ಲಿ ಜೂನಿಯರ್‌ ಎನ್‌ಟಿಆರ್‌, ರಾಮ್‌ಚರಣ್‌, ಅಲಿಯಾ ಭಟ್‌, ಅಜಯ್‌ ದೇವಗನ್‌ ನಟಿಸುತ್ತಿದ್ದಾರೆ.