ಇಂದು (01 ಡಿಸೆಂಬರ್) ಕೊಯಮತ್ತೂರಿನಲ್ಲಿ ಸಮಂತಾ-ರಾಜ್ ನಿಡಿಮೋರು ಮದುವೆ ಎನ್ನಲಾಗುತ್ತಿದೆ. ಇದು ನಿಜವೇ ಅಥವಾ ಕೇವಲ ಪ್ರಚಾರದ ತಂತ್ರವೇ ಎಂಬುದು ಇನ್ನಷ್ಟೇ ತಿಳಿಯಲಿದೆ.. ಸಮಂತಾ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಈ ಮದುವೆಯ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ. ಇನ್ನೇನು ಸ್ವಲ್ಪ ಹೊತ್ತು..

ಸಮಂತಾ ರುತ್ ಪ್ರಭು ಹಾಗೂ ರಾಜ್ ನಿಡಿಮೋರು ಮದುವೆ ಫಿಕ್ಸ್?

ಬೆಂಗಳೂರು: ಟಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಸದ್ಯಕ್ಕೆ ಕೇಳಿಬರುತ್ತಿರುವ ಅತಿದೊಡ್ಡ ಬ್ರೇಕಿಂಗ್ ನ್ಯೂಸ್ ಎಂದರೆ ಅದು ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಎರಡನೇ ಮದುವೆಯ ವಿಚಾರ. 'ದಿ ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಮತ್ತು ಸಮಂತಾ ಪ್ರೇಮ ಸಂಬಂಧದಲ್ಲಿದ್ದಾರೆ ಎಂಬ ಗುಸುಗುಸು ಪಿಸುಮಾತುಗಳು ಕಳೆದ ಕೆಲವು ತಿಂಗಳುಗಳಿಂದ ಗಾಂಧಿನಗರದಿಂದ ಬಾಲಿವುಡ್‌ವರೆಗೂ ಹರಿದಾಡುತ್ತಲೇ ಇತ್ತು. ಇದೀಗ ಈ ಸುದ್ದಿ ಮತ್ತೊಂದು ಸ್ವರೂಪ ಪಡೆದುಕೊಂಡಿದ್ದು, ಈ ಜೋಡಿ ಸದ್ದಿಲ್ಲದೇ ಹಸೆಮಣೆ ಏರಲು ಸಜ್ಜಾಗಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ.

ಡಿಸೆಂಬರ್ 1 ರಂದೇ ಕಲ್ಯಾಣ?

ಹೌದು, ಕೇಳಿಬರುತ್ತಿರುವ ಲೇಟೆಸ್ಟ್ ಗಾಸಿಪ್‌ಗಳ ಪ್ರಕಾರ, ಸಮಂತಾ ಮತ್ತು ನಿರ್ದೇಶಕ ರಾಜ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ನಿರ್ಧರಿಸಿದ್ದಾರಂತೆ. ಫಿಲ್ಮಿಬೀಟ್ ವರದಿಯ ಪ್ರಕಾರ, ಇಂದು ಸೋಮವಾರ, ಅಂದರೆ 01 ಡಿಸೆಂಬರ್ 2025ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಅದ್ದೂರಿ ಮದುವೆಯ ಬದಲಾಗಿ, ಅತ್ಯಂತ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಲು ಇಬ್ಬರೂ ಪ್ಲಾನ್ ಮಾಡಿದ್ದಾರಂತೆ.

ಇವರಿಬ್ಬರ ಮದುವೆಗೆ ಆಯ್ಕೆಯಾಗಿರುವ ಸ್ಥಳವೂ ಕುತೂಹಲ ಮೂಡಿಸಿದೆ. ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿರುವ ಸಮಂತಾ, ಕೊಯಮತ್ತೂರಿನಲ್ಲಿರುವ ಪ್ರಸಿದ್ಧ 'ಈಶ ಯೋಗ ಕೇಂದ್ರ'ದಲ್ಲಿ (Isha Yoga Centre) ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಸಮಂತಾ ಆಗಲಿ ಅಥವಾ ರಾಜ್ ಆಗಲಿ ಇಲ್ಲಿಯವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಅಥವಾ ಮದುವೆಯ ಆಮಂತ್ರಣ ಪತ್ರಿಕೆಯೂ ಹೊರಬಂದಿಲ್ಲ.

ಮಾಜಿ ಪತ್ನಿಯ 'ಕ್ರಿಪ್ಟಿಕ್' ಪೋಸ್ಟ್ ಮತ್ತು ಅನುಮಾನ!

ಒಂದೆಡೆ ಸಮಂತಾ ಮದುವೆಯ ಸಂಭ್ರಮದ ಸುದ್ದಿ ವೈರಲ್ ಆಗುತ್ತಿದ್ದರೆ, ಇನ್ನೊಂದೆಡೆ ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡೇ (Shhyamali De) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕೆಲವು ಸಾಲುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಮದುವೆಯ ವದಂತಿ ಜೋರಾಗುತ್ತಿದ್ದಂತೆಯೇ ಶ್ಯಾಮಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಲೇಖಕ ಮೈಕೆಲ್ ಬ್ರೂಕ್ಸ್ ಅವರ ಹೇಳಿಕೆಯೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, "ಹತಾಶ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ" (Desperate people do desperate things) ಎಂದು ಬರೆಯಲಾಗಿದೆ. ನೆಟ್ಟಿಗರು ಈ ಪೋಸ್ಟ್ ಅನ್ನು ರಾಜ್ ಮತ್ತು ಸಮಂತಾ ಅವರ ಮದುವೆಗೆ ಲಿಂಕ್ ಮಾಡುತ್ತಿದ್ದು, ಇದು ಮಾಜಿ ಪತಿಗೆ ನೀಡಿದ ಪರೋಕ್ಷ ಟಾಂಗ್ ಎಂದು ವಿಶ್ಲೇಷಿಸುತ್ತಿದ್ದಾರೆ.

ಇಷ್ಟೇ ಅಲ್ಲದೆ, ಕೆಲವು ದಿನಗಳ ಹಿಂದಷ್ಟೇ ಶ್ಯಾಮಲಿ ಅವರು 'ಗತಕಾಲದ ಋಣ' ಅಥವಾ 'ಋಣಾನುಬಂಧ'ದ ಬಗ್ಗೆಯೂ ಒಂದು ನಿಗೂಢ ಪೋಸ್ಟ್ ಹಾಕಿದ್ದರು. "ಹಳೆಯ ಋಣಗಳ ಬಂಧದಿಂದ (ಋಣಾನುಬಂಧ), ಒಬ್ಬ ವ್ಯಕ್ತಿ ಸಾಕುಪ್ರಾಣಿಗಳು, ಸಂಗಾತಿ, ಮಕ್ಕಳು ಮತ್ತು ಮನೆಯೊಂದಿಗೆ ಸಂಪರ್ಕ ಹೊಂದುತ್ತಾನೆ. ಆ ಕರ್ಮದ ಋಣಗಳು ತೀರಿದಾಗ, ಆ ಸಂಬಂಧಗಳು ಕೊನೆಗೊಳ್ಳುತ್ತವೆ ಮತ್ತು ಅದರೊಂದಿಗೆ ಸಂಬಂಧಿಸಿದ ಸುಖ-ದುಃಖಗಳೂ ನಿಲ್ಲುತ್ತವೆ," ಎಂದು ಬರೆದುಕೊಂಡಿದ್ದರು. ಮದುವೆಯ ಸುದ್ದಿಯ ಸಮಯದಲ್ಲಿಯೇ ಈ ರೀತಿಯ ಪೋಸ್ಟ್‌ಗಳು ಬರುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವೃತ್ತಿಜೀವನದಲ್ಲೂ ಒಂದಾದ ಜೋಡಿ:

ವೈಯಕ್ತಿಕ ಜೀವನದ ಹೊರತಾಗಿಯೂ, ಸಮಂತಾ ಮತ್ತು ರಾಜ್ ವೃತ್ತಿಪರವಾಗಿಯೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಸಮಂತಾ ಅವರ ಬ್ರ್ಯಾಂಡ್ ಲಾಂಚ್ ಕಾರ್ಯಕ್ರಮದಲ್ಲಿ ರಾಜ್ ಮತ್ತು ಸಮಂತಾ ಪರಸ್ಪರ ಅಪ್ಪಿಕೊಂಡಿರುವ ಫೋಟೋ ವೈರಲ್ ಆಗಿತ್ತು. ಇದನ್ನು ಕಂಡ ಅಭಿಮಾನಿಗಳು ಇವರಿಬ್ಬರು ತಮ್ಮ ಸಂಬಂಧವನ್ನು "ಇನ್ಸ್ಟಾ ಅಫಿಷಿಯಲ್" ಮಾಡಿದ್ದಾರೆ ಎಂದು ಮಾತನಾಡಿಕೊಂಡಿದ್ದರು. ಅಲ್ಲದೆ, ನಂದಿನಿ ರೆಡ್ಡಿ ನಿರ್ದೇಶನದ ಮುಂಬರುವ ತೆಲುಗು ಆಕ್ಷನ್ ಡ್ರಾಮಾ 'ಮಾ ಇಂಟಿ ಬಂಗಾರಂ' ಚಿತ್ರವನ್ನು ಇಬ್ಬರೂ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ, ಡಿಸೆಂಬರ್ 1 ರಂದು ಕೊಯಮತ್ತೂರಿನಲ್ಲಿ ನಿಜಕ್ಕೂ ಮದುವೆ ನಡೆಯಲಿದೆಯೇ ಅಥವಾ ಇದು ಕೇವಲ ಪ್ರಚಾರದ ತಂತ್ರವೇ ಎಂಬುದು ಸೋಮವಾರ, ಅಂದರೆ ಇಂದು ತಿಳಿಯಲಿದೆ. ಸಮಂತಾ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಈ ಮದುವೆಯ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ.