ನಟಿ ಪ್ರೀತಿ ಜಿಂಟಾ 'ಭಕ್ತ' ಪದಗಳ ಬಳಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕೇರಳ ಕಾಂಗ್ರೆಸ್, ಪ್ರೀತಿ ಜಿಂಟಾ ಅವರ 18 ಕೋಟಿ ರೂ. ಸಾಲವನ್ನು ಬಿಜೆಪಿ ಮನ್ನಾ ಮಾಡಿದೆ ಎಂದು ಆರೋಪಿಸಿತ್ತು. ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಪ್ರೀತಿ, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ ಎಂದಿದ್ದಾರೆ. ಅಲ್ಲದೆ, ತಮ್ಮ ಸಾಲವನ್ನು ತೀರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸುಖಾ ಸುಮ್ಮನೆ ಜಗಳಕ್ಕೆ ಹೋಗುವುದು ಸರಿಯಲ್ಲ ಎಂದು ಹೇಳಿದ್ದಾರೆ.

 ಬಾಲಿವುಡ್ ನಟಿ ಮತ್ತು ಉದ್ಯಮಿ ಪ್ರೀತಿ ಜಿಂಟಾ ಕೂಡ ತಮ್ಮ ಮುಕ್ತ ಅಭಿಪ್ರಾಯಗಳು ಮತ್ತು ಹೇಳಿಕೆಗಳಿಂದ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಿಷಯಗಳ ಬಗ್ಗೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು, ಇತ್ತೀಚಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚಾಗಿರುವ ಭಕ್ತ್​ ಮತ್ತು ಅಂಧ್​ಭಕ್ತ್​ ಶಬ್ದಗಳ ಬಗ್ಗೆ ಕಿಡಿ ಕಾರಿದ್ದರು. ಯಾರದ್ದಾದರೂ ಬಗ್ಗೆ ಒಳ್ಳೆಯ ಮಾತನಾಡಿದ್ರೆ ಎಷ್ಟು ಪೇ ಮಾಡಿದ್ದಾರೆ ಕೇಳ್ತಾರೆ, ನಮ್ಮದೇ ಪ್ರಧಾನಿಯನ್ನು ಶ್ಲಾಘಿಸಿದರೆ ಭಕ್ತರು ಎನ್ನುವ ಲೇಬಲ್​ ಕಟ್ಟುತ್ತಾರೆ, ದೇವರು, ಹಿಂದೂ ಧರ್ಮ ಅಥವಾ ಭಾರತೀಯತೆಯ ಬಗ್ಗೆ ಮಾತನಾಡಿದರೆ ಅಂಧ ಭಕ್ತರು ಎನ್ನುತ್ತಾರೆ. ಯಾಕೆ ಹೀಗಾಗುತ್ತಿದೆ ಎಂದು ನಟಿ ಪ್ರಶ್ನಿಸಿದ್ದರು. ಇಷ್ಟಾಗುತ್ತಿದ್ದಂತೆಯೇ ಕಾಂಗ್ರೆಸ್​ ನಟಿಯ ವಿರುದ್ಧ ಕೆಂಗಣ್ಣು ಬಿಟ್ಟಿದೆ! ಪ್ರೀತಿ ಅವರ 18 ಕೋಟಿ ರೂ. ಸಾಲವನ್ನು ಮನ್ನಾ ಮಾಡಲು ಬಿಜೆಪಿ ಸಹಾಯ ಮಾಡಿದೆ ಎಂದು ಕೇರಳ ಕಾಂಗ್ರೆಸ್​ ಟ್ವೀಟ್​ ಮೂಲಕ ಹೇಳಿತ್ತು. ಇದು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. 

ಇದೀಗ ಇದೇ ವಿಷಯವಾಗಿ ಪ್ರೀತಿ ಅಭಿಮಾನಿಯೊಬ್ಬರು ಆಕೆಗೆ ಪ್ರಶ್ನೆ ಕೇಳಿದ್ದಾರೆ. ವಿನಾಕಾರಣ ಆರೋಪ ಮಾಡಿರುವುದಕ್ಕಾಗಿ ರಾಹುಲ್​ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಅಷ್ಟೇ ಸೌಮ್ಯವಾಗಿ ಪ್ರತಿಕ್ರಿಯೆ ನೀಡಿದ್ದು, ಬೇರೆಯವರ ಕೃತ್ಯಗಳಿಗೆ ನಾನು ಜವಾಬ್ದಾರಳಲ್ಲ. ರಾಹುಲ್ ಗಾಂಧಿಯವರಿಗೂ ನನಗೂ ಯಾವುದೇ ಸಮಸ್ಯೆ ಇಲ್ಲ, ಆದ್ದರಿಂದ ಅವರು ಶಾಂತಿಯಿಂದ ಬದುಕಲು ಬಿಡಿ, ನಾನು ಕೂಡ ಶಾಂತಿಯಿಂದ ಬದುಕುತ್ತೇನೆ. ಸಮಸ್ಯೆಗಳನ್ನು ಅಥವಾ ಯಾವುದೇ ಸಮಸ್ಯೆಗಳನ್ನು ನೇರವಾಗಿ ನಿಭಾಯಿಸುವುದರಲ್ಲಿ ನಾನು ನಂಬಿಕೆ ಇಡುತ್ತೇನೆ ಮತ್ತು ಸಣ್ಣ ಜಗಳಗಳ ಮೂಲಕ ಅಲ್ಲ ಎಂದು ಉತ್ತರಿಸಿದ್ದಾರೆ. ಈ ಮೂಲಕ, ಸುಖಾ ಸುಮ್ಮನೆ ಕಾಲು ಕೆದರಿ ಜಗಳಕ್ಕೆ ಹೋಗುವುದು ಸರಿಯಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ. 

ಪ್ರಧಾನಿಯ ಹೊಗಳಿದ್ರೆ ಭಕ್ತರು, ಹೆಮ್ಮೆಯ ಹಿಂದೂ ಅಂದ್ರೆ ಅಂಧಭಕ್ತರು: ನಟಿ ಪ್ರೀತಿ ಜಿಂಟಾ ಹೇಳಿದ್ದೇನು ಕೇಳಿ..


ವಾಸ್ತವವಾಗಿ, ಕೇರಳ ಕಾಂಗ್ರೆಸ್ ಒಂದು ಪೋಸ್ಟ್ ಹಂಚಿಕೊಂಡಿತ್ತು. ಇದರಲ್ಲಿ 'ಪ್ರೀತಿ ಜಿಂಟಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಜೆಪಿಗೆ ನೀಡಿದ್ದಾರೆ. ಪ್ರತಿಯಾಗಿ ಅವರ 18 ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಅದರಲ್ಲಿ ಬರೆಯಲಾಗಿತ್ತು. ಇದರ ವಿರುದ್ಧ ಪ್ರೀತಿ ಇದಾಗಲೇ ವಾಗ್ದಾಳಿ ನಡೆಸಿದ್ದರು. ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಾನೇ ನಡೆಸುತ್ತೇನೆ ಮತ್ತು ನಕಲಿ ಸುದ್ದಿಗಳನ್ನು ಪ್ರಚಾರ ಮಾಡಿದ್ದಕ್ಕೆ ನೀವು ನಾಚಿಕೆಪಡಬೇಕು. ಯಾರೂ ನನ್ನ ಯಾವುದೇ ಸಾಲವನ್ನು ಮನ್ನಾ ಮಾಡಿಲ್ಲ ಎಂದು ಹೇಳಿದ್ದರು. 

ಯಾವುದೇ ರಾಜಕೀಯ ಪಕ್ಷ ಅಥವಾ ಅದರ ಪ್ರತಿನಿಧಿಗಳು ನನ್ನ ಹೆಸರು ಮತ್ತು ಚಿತ್ರಗಳನ್ನು ಬಳಸಿಕೊಂಡು ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಮತ್ತು ಆಧಾರರಹಿತ ಗಾಸಿಪ್ ಮತ್ತು ಕ್ಲಿಕ್‌ಬೈಟ್‌ಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ನನಗೆ ಆಘಾತ ತಂದಿದೆ. ಸಾಲವನ್ನು ತೆಗೆದುಕೊಂಡಿರುವುದು ನಿಜ. ಆದರೆ ಹತ್ತು ವರ್ಷಗಳ ಹಿಂದೆಯೇ ಅದನ್ನು ಮರುಪಾವತಿ ಮಾಡಲಾಗಿದೆ. ಅದರ ಬಗ್ಗೆ ದಾಖಲೆಗಳೂ ಇವೆ. ವಿನಾಕಾರಣ ತಪ್ಪು ಸಂದೇಶ ಹರಡುವುದನ್ನು ನಿಲ್ಲಿಸಿ ಎಂದಿದ್ದರು. ಇದೀಗ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರ ಬಗ್ಗೆ ಪ್ರೀತಿ ಪ್ರತಿಕ್ರಿಯೆ ನೀಡಿದ್ದಾರೆ. 

ಕಾಂಗ್ರೆಸ್‌ಗೆ ಮಂಗಳಾರತಿ ಮಾಡಿದ ಪ್ರೀತಿ ಜಿಂಟಾ, ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಪಕ್ಷ