Oscar 2023: ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿದಂತೆ RRRಗೆ ಅಭಿನಂದನೆಗಳ ಮಹಾಪೂರ
ಆಸ್ಕರ್ ಗೆದ್ದು ಬೀಗುತ್ತಿರುವ ಆರ್ ಆರ್ ಆರ್ ಹಾಗೂ ದಿ ಎಲಿಫೆಂಟ್ ವಿಸ್ಪರ್ಸ್ ತಂಡಕ್ಕೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
95ನೇ ಅಕಾಡೆಮಿ ಅವಾರ್ಡ್ ಸಮಾರಂಭಕ್ಕೆ ಅದ್ದೂರಿ ತೆರೆಬಿದ್ದಿದೆ. ಈ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಬಂದಿರುವುದು ವಿಶೇಷ. ಆಸ್ಕರ್ ಭಾರತೀಯ ಪಾಲಿಗೆ ದೂರದ ಮಾತಾಗಿತ್ತು. ಆದರೀಗ ಕಾಲ ಬದಲಾಗಿದೆ. ಭಾರತೀಯ ಸಿನಿಮಾರಂಗ ಕೂಡ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಭಾರತೀಯ ಸಿನಿಮಾಗಳು ಸಹ ವಿಶ್ವದ ಗಮನ ಸೆಳೆಯುತ್ತಿವೆ. ಪ್ರತಿಷ್ಠಿತ ಆಸ್ಕರ್‌ನಲ್ಲಿ ಭಾರತದ ಸಿನಿಮಾ ಕೂಡ ರಾರಾಜಿಸುವ ಸಮಯ ಬಂದಿದೆ. ಸೌತ್ ಸಿನಿಮಾರಂಗದ ಹೆಮ್ಮೆ, ಖ್ಯಾತ ನಿರ್ದೇಶಕ ರಾಜಮೌಳಿ ಎಲ್ಲವೂ ಸಾಧ್ಯ ಎನ್ನುವುದನ್ನು ನಿರೂಪಿಸಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು.. ಹಾಡು ಈ ಬಾರಿಯ ಆಸ್ಕರ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಗೆದ್ದು ಬೀಗಿದೆ. ಇದರ ಜೊತೆಗೆ ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರ್ಸ್' ಕೂಡ ಆಸ್ಕರ್ ಮುಡಿಗೇರಿಸಿಕೊಂಡಿದೆ.
ಆಸ್ಕರ್ ಗೆದ್ದು ಬೀಗಿರುವ ಭಾರತೀಯರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್ ಆರ್ ಆರ್ ತಂಡಕ್ಕೆ ಹಾಗೂ ದಿ ಎಲಿಫೆಂಟ್ ವಿಸ್ಪರ್ಸ್ ತಂಡಕ್ಕೆ ಗಣ್ಯರು, ಅಭಿಮಾನಿಗಳು ದೇಶದ ಜನತಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಬಸರಾಜ ಬೊಮ್ಮಾಯಿ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ನೋದಿ ಟ್ವೀಟ್ ಮಾಡಿ, ಅಸಾಧಾರಾಣ ಎಂದು ಹೇಳಿದ್ದಾರೆ. 'ನಾಟು ನಾಟು' ಜನಪ್ರಿಯತೆ ಈಗ ಜಾಗತಿಕವಾಗಿದೆ. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡಾಗಿದೆ. ಎಂಎಂ ಕೀರವಾಣಿ, ಸಾಹಿತಿ ಚಂದ್ರಬೋಸ್ ಅವರಿಗೆ ಅಭಿನಂದನೆಗಳು. ಈ ಪ್ರತಿಷ್ಠಿತ ಗೌರವಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳು. ಭಾರತ ಹೆಮ್ಮೆ ಪಡುತ್ತಿದೆ' ಎಂದು ಹೇಳಿದ್ದಾರೆ.
ಇನ್ನೂ 'ದಿ ಎಲಿಫೆಂಟ್ ವಿಸ್ಪರ್ಸ್' ತಂಡಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ. 'ದಿ ಎಲಿಫೆಂಟ್ ವಿಸ್ಪರ್ಸ್' ಇಡೀ ತಂಡಕ್ಕೆ ಅಭಿನಂದನೆಗಳು. ಅವರ ಕೆಲಸ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಪ್ರಾಮುಖ್ಯತೆಯನ್ನು ಅದ್ಭುತವಾಗಿ ಎತ್ತಿ ತೋರಿಸುತ್ತದೆ' ಎಂದು ಹೊಗಳಿದ್ದಾರೆ.
ಬಸವರಾಜ್ ಬೊಮ್ಮಾಯಿ ಟ್ವೀಟ್
ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. 'ಆರ್ ಆರ್ ಆರ್ ಸಿನಿಮಾದ ನಾಟು ನಾಟು..ಹಾಡು ಅಕಾಡೆಮಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಗೆದ್ದ ರಾಜಮೌಳಿ ಹಾಗೂ RRR ಇಡೀ ತಂಡಕ್ಕೆ ಅಭಿನಂದನೆಗಳು. ಈ ಮಾಸ್ಟರ್ ಪೀಸ್‌ನ ಸೃಷ್ಟಿಕರ್ತ ಎಂಎಂ ಕೀರವಾಣಿ ಅವರಿಗೂ ಅಭಿನಂದನೆ. ಜಗತ್ತು ನಮ್ಮ ಸಿನಿಮಾವನ್ನು ಗಮನಿಸುತ್ತಿದೆ ಮತ್ತು ಪ್ರಶಂಸಿಸುತ್ತಿದೆ' ಎಂದು ಹೇಳಿದ್ದಾರೆ.
ಇನ್ನು 'ದಿ ಎಲಿಫೆಂಟ್ ವಿಸ್ಪರ್ಸ್' ತಂಡಕ್ಕೆ ಟ್ವೀಟ್ ಮಾಡಿ, 'ಗುನೀತ್ ಮೊಂಗಾ ಅವರ 'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಈ ಚಿತ್ರವು ಎರಡು ಆನೆಗಳ ನಡುವಿನ ಅವಿನಾಭಾವ ಸಂಬಂಧವನ್ನು ಚಿತ್ರಿಸುತ್ತದೆ. ಗುನೀತ್ ಮೊಂಗಾ ಮತ್ತು ತಂಡಕ್ಕೆ ಅಭಿನಂದನೆಗಳು' ಎಂದು ಹೇಳಿದ್ದಾರೆ.
ಆಸ್ಕರ್ ಪ್ರಶಸ್ತಿ ಮನೆಗೆ ಬರ್ತಿದೆ
ಸಂತಸ ಹಂಚಿಕೊಂಡ ರಾಮ್ ಚರಣ್, 'ನಾವು ಗೆದ್ದಿದ್ದೇವೆ. ನಾವು ಭಾರತೀಯ ಚಿತ್ರರಂಗವಾಗಿ ಗೆದ್ದಿದ್ದೇವೆ. ನಾವೇ ಗೆದ್ದೆವು. ಆಸ್ಕರ್ ಪ್ರಶಸ್ತಿಗಳು ಮನೆಗೆ ಬರುತ್ತಿವೆ' ಎಂದು ಹೇಳಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ
ತೆಲುಗು ಸ್ಟಾರ್ ಚಿರಂಜೀವಿ ಮಗನ ಸಾಧನೆ ಹಾಗೂ ರಾಜಮೌಳಿ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ಆಸ್ಕರ್ ಪ್ರಶಸ್ತಿಗಳು ಭಾರತಕ್ಕೆ ಇನ್ನೂ ಕನಸಾಗಿದ್ದವು ಆದರೆ ಒಬ್ಬ ವ್ಯಕ್ತಿಯ ದೃಷ್ಟಿ, ಧೈರ್ಯ ಮತ್ತು ದೃಢವಿಶ್ವಾಸಕ್ಕಾಗಿ. ಒಂದು ಬಿಲಿಯನ್ ಭಾರತೀಯರ ಹೃದಯಗಳು ಹೆಮ್ಮೆ ಮತ್ತು ಕೃತಜ್ಞತೆಯಿಂದ ತುಂಬಿವೆ. ತಂಡದ ಪ್ರತಿಯೊಬ್ಬ ಸದಸ್ಯರಿಗೂ ಅಭಿನಂದನೆಗಳು' ಎಂದು ಹೇಳಿದ್ದಾರೆ.