ಮದುವೆಗೂ ಮುನ್ನ ಪರಿಣಿತಿ- ರಾಘವ್ ಚಡ್ಡಾ ಸೂಫಿ ನೈಟ್: ಭಾವಿ ದಂಪತಿ ಭರ್ಜರಿ ಡ್ಯಾನ್ಸ್
ಇದೇ 23 ಮತ್ತು 24 ರಂದು ವಿವಾಹ ಆಗಲಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಅವರ ಮದುವೆ ಮುನ್ನಾದಿನಗಳ ಸೂಫಿ ನೈಟ್ ಭರ್ಜರಿಯಾಗಿ ನಡೆದಿದೆ.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಮದುವೆಗೆ ಕೌಂಟ್ಡೌನ್ ಶುರುವಾಗಿದೆ. ಇದೇ 23 ಮತ್ತು 24 ರಂದು ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ನಡೆಯಲಿದೆ. 30ನೇ ತಾರೀಖಿನಂದು ತಾಜ್ ಚಂಡೀಗಢದಲ್ಲಿ ರಿಸೆಪ್ಷನ್ ನಡೆಯಲಿದ್ದು, ಅದರ invitation card ವೈರಲ್ ಆಗಿದೆ. ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ ಈ ಮದುವೆ ನಡೆಯಲಿದೆ. ಈ ಹೋಟೆಲ್ನ ದಿನದ ಬಾಡಿಗೆ ಗರಿಷ್ಠ 10 ಲಕ್ಷದವರೆಗೆ ಇದೆ. ಈ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ನಡೆಯಲಿದೆ. ಪರಿಣಿತಿ ಚೋಪ್ರಾ ಅವರ ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ವಿವಾಹದ ಭಾಗವಾಗಲಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಅದ್ದೂರಿ ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಕೌಂಟರ್ ಭಗವಂತ್ ಮಾನ್ ಮತ್ತು ಇತರರು ಭಾಗವಹಿಸುವ ಸಾಧ್ಯತೆ ಇದೆ.
ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಈ ಜೋಡಿಯ ಮದುವೆಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದರು. ಎಂಗೇಜ್ಮೆಂಟ್ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದರ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು. ವಿವಾಹಕ್ಕೂ ಮೊದಲು ಹಲವಾರು ಸಂಪ್ರದಾಯಗಳು ಶುರುವಾಗಿವೆ. ಅದರಲ್ಲಿ ಒಂದು ಸೂಫಿ ನೈಟ್. ದೆಹಲಿಯ ರಾಘವ್ ಮನೆಯಲ್ಲಿ ಸೂಫಿ ನೈಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ರಾಘವ್ ಅವರ ಮನೆಯನ್ನು ಸುಂದರವಾಗಿ ಅಲಂಕರಿಸಲಾಗಿದೆ.
ಕಾರ್ಯಕ್ರಮದಲ್ಲಿ ಬಾಲಿವುಡ್ ಮತ್ತು ರಾಜಕೀಯದ ದಿಗ್ಗಜರು ಜಮಾಯಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ, ಅವರ ಸಹೋದರ ಸಿದ್ಧಾರ್ಥ್, ರಾಜ್ಯಸಭಾ ಸದಸ್ಯ ಮತ್ತು ಆಟಗಾರ ಹರ್ಭಜನ್ ಸಿಂಗ್ ಅವರಂತಹ ಅನೇಕ ಅತಿಥಿಗಳು ಕೂಟದ ಭಾಗವಾಗಿದ್ದಾರೆ. ಮಧು ಚೋಪ್ರಾ ಅವರು ತಮ್ಮ ಸೊಸೆ ಪರಿಣಿತಿ ಚೋಪ್ರಾ ಅವರ ವಿಶೇಷ ಸಮಾರಂಭದಲ್ಲಿ ಬಿಳಿ ಹೂವಿನ ಮುದ್ರಿತ ಸೂಟ್ ಧರಿಸಿ ಕಾಣಿಸಿಕೊಂಡರು. ಸಹೋದರ ಸಿದ್ಧಾರ್ಥ್ ಸ್ಟೈಲಿಶ್ ಕಪ್ಪು ಇಂಡೋ-ವೆಸ್ಟರ್ನ್ ಸೂಟ್‌ನಲ್ಲಿ ಕಾಣಿಸಿಕೊಂಡರು. ಇಬ್ಬರೂ ಕೂಡ ಪಾಪರಾಜಿಗಳಿಗೆ ಪೋಸ್ ಕೊಟ್ಟಿದ್ದಾರೆ. ಇದಲ್ಲದೆ, ಪರಿಣಿತಿ ಮತ್ತು ರಾಘವ್ ಅವರ ವಿನ್ಯಾಸಕ ಪವನ್ ಸಚ್‌ದೇವ ಮತ್ತು ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಕೂಡ ಪರಿಣಿತಿ-ರಾಘವ್ ಅವರ ಸೂಫಿ ನೈಟ್‌ಗೆ ಹಾಜರಾಗಿದ್ದರು.
ಅಂದಹಾಗೆ ಈ ಜೋಡಿ ಪಂಜಾಬಿ ಪದ್ಧತಿಯಂತೆ ಸೆಪ್ಟೆಂಬರ್ 24 ರಂದು ಇಬ್ಬರೂ ವಿವಾಹವಾಗಲಿದೆ. ರಾಘವ್-ಪರಿಣಿತಿ ವಿವಾಹದ ಆರತಕ್ಷತೆ ಸೆಪ್ಟೆಂಬರ್ 30 ರಂದು ನಡೆಯಲಿದೆ. ಹಳದಿ ಶಾಸ್ತ್ರ, ಮೆಹಂದಿ ಮತ್ತು ಸಂಗೀತವು ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದೆ. ಮದುವೆಯ ನಂತರ, ಹರಿಯಾಣದ ಗುರುಗ್ರಾಮ್‌ನಲ್ಲಿ ಆರತಕ್ಷತೆ ನಡೆಯಲಿದ್ದು, ಈ ಮದುವೆಗೆ 200 ಕ್ಕೂ ಹೆಚ್ಚು ಅತಿಥಿಗಳು ಮತ್ತು 50 ಕ್ಕೂ ಹೆಚ್ಚು ವಿವಿಐಪಿ ಅತಿಥಿಗಳಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಉಜ್ಜಯಿನಿಯ ಮಹಾಕಾಲ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಸೀರೆಯುಟ್ಟ ಪರಿಣಿತಿ ಅಪ್ಪಟ ಗೃಹಿಣಿಯಂತೆಯೇ ವಿಡಿಯೋದಲ್ಲಿ ಕಂಗೊಳಿಸುತ್ತಿದ್ದರೆ, ರಾಘವ್ ಚಡ್ಡಾ ಅವರೂ ರಾಜಕಾರಣಿ ಹೊರತಾಗಿ ಪಂಚೆತೊಟ್ಟು ಮಂದಿರಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರೂ ಮಾಲೆ ಧರಿಸಿ ಕುಂಕುಮ ಹಚ್ಚಿಕೊಂಡು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ಹಾಗೂ ನಂತರ ಹೊರಕ್ಕೆ ಬಂದಿರುವ ದೃಶ್ಯ ವೈರಲ್ ಆಗಿದ್ದವು.