'ಆರ್‌ಆರ್‌ಆರ್' ಚಿತ್ರದ ಹೊಸ ಹಾಡು ರಿಲೀಸ್: ರಾಮ್ ಚರಣ್, ಜ್ಯೂ.ಎನ್‌ಟಿಆರ್ ಜಬರ್ದಸ್ತ್ ಡ್ಯಾನ್ಸ್
ಆರ್‌ಆರ್‌ಆರ್ ಚಿತ್ರತಂಡ ಚಿತ್ರದ ನಾಟು ನಾಟು ಹಾಡನ್ನು 5 ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಕನ್ನಡ ವರ್ಷನ್‌ನಲ್ಲಿ ಹಳ್ಳಿ ನಾಟು ಹಾಡು ಕೂಡ ಯೂಟ್ಯೂಬ್‌ನಲ್ಲಿ ಸಖತ್ ಸೌಂಡು ಮಾಡುತ್ತಿದೆ. ಈ ಹಾಡಿಗೆ ರಾಮ್ ಚರಣ್ ಮತ್ತು ಜ್ಯೂ.ಎನ್‌ಟಿಆರ್ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ.
ಎಸ್.ಎಸ್.ರಾಜಮೌಳಿ (SS Rajamouli) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್' (RRR) (ರೈಸ್–ರೋರ್–ರಿವೋಲ್ಟ್) ಚಿತ್ರ ಈಗಾಗಲೇ ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದ ಫಸ್ಟ್‌ಲುಕ್, ಪೋಸ್ಟರ್, ಪ್ರೋಮೋ ಹಾಗೂ ಹಾಡುಗಳು ಸಹ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡಿದೆ. ಈ ಚಿತ್ರದಲ್ಲಿ ರಾಮ್ ಚರಣ್ (Ram Charan) ಮತ್ತು ಜ್ಯೂ.ಎನ್‌ಟಿಆರ್ (NTR) ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅಲಿಯಾ ಭಟ್ (Alia Bhatt) ಸಹ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇದೀಗ ಚಿತ್ರತಂಡ ಚಿತ್ರದ ಹೊಸ ಲಿರಿಕಲ್ ಸಾಂಗ್ (Lyrical Song) ಬಿಡುಗಡೆ ಮಾಡಿದೆ.
ಹೌದು! 'ಆರ್‌ಆರ್‌ಆರ್' ಚಿತ್ರತಂಡ ಚಿತ್ರದ 'ನಾಟು ನಾಟು' (Naatu Naatu) ಹಾಡನ್ನು 5 ಭಾಷೆಗಳಲ್ಲಿ ರಿಲೀಸ್ ಮಾಡಿದೆ. ಕನ್ನಡ ವರ್ಷನ್‌ನಲ್ಲಿ 'ಹಳ್ಳಿ ನಾಟು' (Halli Naatu) ಹಾಡು ಕೂಡ ಯೂಟ್ಯೂಬ್‌ನಲ್ಲಿ (YouTube) ಸಖತ್ ಸೌಂಡು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಈ ಹಾಡಿಗೆ ರಾಮ್ ಚರಣ್ ಮತ್ತು ಜ್ಯೂ.ಎನ್‌ಟಿಆರ್ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಅಜಾದ್ ವರದರಾಜ್ (Azad Varadaraj) ಕನ್ನಡ ವರ್ಷನ್‌ಗೆ ಸಾಹಿತ್ಯ ರಚಿಸಿದ್ದು, ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ದನಿಯಲ್ಲಿ ಹಾಡು ಮೂಡಿಬಂದಿದೆ. ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (M.M. Keeravaani) ಅವರು ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಜ್ಯೂ.NTR ಹಣೆಯಿಂದ ರಕ್ತ, ರಾಮ್ ಚರಣ್ ಪೊಲೀಸ್: RRR ಚಿತ್ರದ ಸಣ್ಣ ತುಣುಕು
ಈ ಹಿಂದೆ ಸ್ನೇಹಿತರ ದಿನಾಚರಣೆ ಪ್ರಯುಕ್ತ 'ಆರ್‌ಆರ್‌ಆರ್' ಚಿತ್ರತಂಡ ಸ್ಪೆಷಲ್ ಹಾಡೊಂದನ್ನು ಸ್ನೇಹಿತರಿಗೆಂದೇ ಬಿಡುಗಡೆ ಮಾಡಿತ್ತು. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ 'ದೋಸ್ತಿ' ಹಾಡು (Dosti Song) ಬಿಡುಗಡೆ ಮಾಡಲಾಗಿತ್ತು. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್‌ಚರಣ್ ಕಾಣಿಸಿಕೊಂಡಿದ್ದರು. ತೆಲುಗು ಹಾಡನ್ನು ಹೇಮಚಂದ್ರ, ತಮಿಳು ಹಾಡನ್ನು ಅನಿರುದ್ಧ ರವಿಚಂದ್ರನ್, ಮಲಯಾಳಂ ಹಾಡನ್ನು ವಿಜಯ್ ಯೇಸುದಾಸ್, ಹಿಂದಿ ಹಾಡನ್ನು ಅಮಿತ್ ತ್ರಿವೇದಿ ಹಾಡಿದ್ದರು. ಆದರೆ ಕನ್ನಡ ಹಾಡನ್ನು ಕೇರಳದ ಗಾಯಕ ಯಾಜೀನ್ ನಿಜರ್ ಹಾಡಿದ್ದರು.
ಇತ್ತೀಚೆಗಷ್ಟೇ ಚಿತ್ರದ ಗ್ಲಿಂಪ್ಸ್ (Glimpse) ವಿಡಿಯೋ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಭರ್ಜರಿ ವೀಕ್ಷಣೆ ಪಡೆದಿತ್ತು.ಗ್ಲಿಂಪ್ಸ್ ವಿಡಿಯೋದಲ್ಲಿ ಅಪ್ಪಟ ದೇಶಿ ಸಿನಿಮಾದಂತಿರುವ ಪಾತ್ರಗಳು ಸಿನಿರಸಿಕರ ಮನಸೆಳೆದಿತ್ತು. ಡಿವಿವಿ ದಾನಯ್ಯ (DVV Danayya) ಚಿತ್ರವನ್ನು ನಿರ್ಮಾಣ ಮಾಡಿದ್ದು, ಈ ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ (Ajay Devgn) ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಲಿವಿಯಾ ಮೋರಿಸ್ (Olivia Morris), ಸಮುದ್ರಕನಿ (Samuthirakani), ಅಲಿಸನ್ ಡೂಡಿ (Alison Doody) ಹಾಗೂ ರೇ ಸ್ಟೀವನ್ಸನ್ (Ray Stevenson) ನಟಿಸಿದ್ದಾರೆ.
RRR ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿದ ನಿರ್ದೇಶಕ ರಾಜ್‌ಮೌಳಿ!
ಡಿವಿವಿ ಎಂಟರ್‌ಟೈನ್ಮೆಂಟ್ (DVV Entertainment) ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ 'ಆರ್‌ಆರ್‌ಆರ್' ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗಲಿದೆ. ಬಿಗ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಜನವರಿ 7, 2022ರಂದು ವಿಶ್ವದಾದ್ಯಂತ 'ಆರ್‌ಆರ್‌ಆರ್' ಬಿಡುಗಡೆಯಾಗಲಿದೆ.