ಮಹಾಕುಂಭದಲ್ಲಿ ಖ್ಯಾತಿ ಗಳಿಸಿದ ಮೊನಾಲಿಸಾ ಬೋಸ್ಲೆ ಹಿಂದಿ ಸಿನಿಮಾದಲ್ಲಿ ಅವಕಾಶ ಪಡೆದಿದ್ದಳು. ಆದರೆ ಆಕೆಯನ್ನು ಬಳಸಿಕೊಳ್ಳುತ್ತಿರುವ ವ್ಯಕ್ತಿಗಳ ಬಗ್ಗೆ ಅನುಮಾನಗಳು ಮೂಡುತ್ತಿವೆ, ನಿರ್ಮಾಪಕನ ವಿವಾದಗಳಿಂದ ಆಕೆಯ ಭವಿಷ್ಯ ಅತಂತ್ರವಾಗುವತ್ತ ಸಾಗುತ್ತಿದೆ.

ಮಹಾಕುಂಭದ ಮೊನಾಲಿಸಾ ಎಂದೇ ಖ್ಯಾತಳಾದ ಮೊನಾಲಿಸಾ ಬೋಸ್ಲೆ, ತನ್ನ ಸೋಶಿಯಲ್‌ ಮೀಡಿಯಾ ಖ್ಯಾತಿಯ ಪರಿಣಾಮ ಒಂದು ಹಿಂದಿ ಫಿಲಂನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಳು. ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ತನ್ನ ದ್ರಾಕ್ಷಿಯಂಥ ಕಂಗಳಿಂದ ಮೋಡಿ ಮಾಡಿ ದೇಶದ ಕೋಟ್ಯಂತರ ಜನರನ್ನು ತನ್ನ ಕಡೆ ಸೆಳೆದುಕೊಂಡದ್ದೇನೋ ನಿಜ. ಆದರೆ ಆಕೆಯನ್ನು ಈಗ ತಮ್ಮ ಉಪಯೋಗಕ್ಕೆ ಬಳಸಿಕೊಳ್ತಾ ಇರೋ ವ್ಯಕ್ತಿಗಳನ್ನು ನೋಡಿದರೆ, ಆಕೆಯ ಭವಿಷ್ಯ ಕಷ್ಟವಿದೆ ಎನ್ನಿಸಲು ಶುರುವಾಗಿದೆ. ಯಾಕೆಂದರೆ ಈಕೆಯನ್ನು ಹಾಕಿಕೊಂಡು ಸಿನಿಮಾ ಮಾಡ್ತೀನಿ ಎಂದು ಹೇಳುವ ನಿರ್ಮಾಪಕ ಒಂದು ಕಾಂಟ್ರವಸ್ರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಅವನೀಗ ಕೆಲವು ಯುಟ್ಯೂಬರ್‌ಗಳ ಮೇಲೆ ಕೇಸ್‌ ಹಾಕಿದ್ದಾನೆ. ಅದ್ಯಾಕೆ ಎಂದರೆ ಆತನ ಬಗ್ಗೆ ನಿಜ ಹೇಳಿದ್ದಕ್ಕಾಗಿ!

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ 16 ವರ್ಷದ ಬಾಲಕಿ ಮೊನಾಲಿಸಾ ಭೋಸ್ಲೆ, ಪ್ರಯಾಗ್ರಾಜ್ ಮಹಾಕುಂಭದ ಸಮಯದಲ್ಲಿ ತನ್ನ ಅದ್ಭುತ ಸೌಂದರ್ಯದಿಂದ ವ್ಯಾಪಕ ಗಮನ ಸೆಳೆದಿದ್ದಳು. ʼದಿ ಡೈರಿ ಆಫ್ ವೆಸ್ಟ್ ಬೆಂಗಾಲ್‌ʼ ಎಂಬ ಸಿನಿಮಾ ಮಾಡಿ ಪ್ರೇಕ್ಷಕರಿಂದ ಒದೆಸಿಕೊಂಡಿದ್ದ ಸನೋಜ್ ಮಿಶ್ರಾ ಎಂಬಾತ ತನ್ನ ನಿರ್ದೇಶನದ ಮುಂಬರುವ ಚಲನಚಿತ್ರ ʼದಿ ಡೈರಿ ಆಫ್ ಮಣಿಪುರʼದಲ್ಲಿ ಆಕೆಗೆ ಒಂದು ಪ್ರಮುಖ ಪಾತ್ರ ಕೊಡುವುದಾಗಿ ಹೇಳಿದ್ದ. ಅದಕ್ಕಾಗಿ ಮುಂಬಯಿಗೆ ಆಕೆಯನ್ನು ಕರೆಸಿಕೊಂಡು ತರಬೇತಿ ಕೂಡ ನೀಡಲು ಆರಂಭಿಸಿದ್ದ. ಈಗ ಅದ್ಯಾರೋ ಕೆಲವು ಯುಟ್ಯೂಬರ್‌ಗಳು, ಈ ಸನೋಜ್‌ ಮಿಶ್ರಾ ಯಾವ ಫಿಲಂ ಅನ್ನೂ ಸರಿಯಾಗಿ ಮಾಡಲೇ ಇಲ್ಲವೆಂದೂ, ತಾನು ಫಿಲಂ ಮಾಡುತ್ತೇನೆಂದು ಬುರುಡೆ ಬಿಟ್ಟು ಕಲಾವಿದರನ್ನು ಯಾಮಾರಿಸುತ್ತಾನೆಂದೂ ಟೀಕಿಸಿ ವಿಡಿಯೋ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಮಿಶ್ರಾ ಈಗ ಅವರ ಮೇಲೆ ಕೇಸುಗಳನ್ನು ಹಾಕಿದ್ದಾನೆ. 

ಮಿಶ್ರಾ ಯೂಟ್ಯೂಬ್ ಚಾನೆಲ್ ಮಾಲೀಕರು ಸೇರಿದಂತೆ ಐದು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾನೆ. ಅವರು ತನ್ನ ಮಾನಹಾನಿ ಮಾಡಿದ್ದಾರೆ; ನನ್ನ ಚಲನಚಿತ್ರ ನಿರ್ಮಾಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾನೆ. ಮುಂಬೈನ ಉಪನಗರದ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಐವರು ಆರೋಪಿಗಳು ಮಿಶ್ರಾ ವಿರುದ್ಧ ಚಿತ್ರದ ಬಜೆಟ್ ಮತ್ತು ಇತರ ಅಂಶಗಳ ಬಗ್ಗೆ ಗಂಭೀರ ಆರೋಪಗಳನ್ನು ಎತ್ತಿದ್ದಾರೆ. ಅವರಲ್ಲಿ ಒಬ್ಬರು, ಮಿಶ್ರಾ ಅವರ ಯಾವುದೇ ಚಲನಚಿತ್ರಗಳು ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ ಮತ್ತು ಈತನ ಯೋಜನೆಯಲ್ಲಿ ಕೆಲಸ ಮಾಡುವುದರಿಂದ 16 ವರ್ಷ ವಯಸ್ಸಿನ ಮೊನಾಲಿಸಾ ಭೋಸ್ಲೆಯ ವೃತ್ತಿಜೀವನಕ್ಕೆ ಹಾನಿಯಾಗಬಹುದು ಎಂದು ಸೂಚಿಸಿದ್ದರು. 

ಮಿಶ್ರಾ ಈ ಆರೋಪಗಳನ್ನು ಅಲ್ಲಗಳೆದಿದ್ದಾನೆ. ಈ ವ್ಯಕ್ತಿಗಳು ತಮ್ಮ ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಹೀಗೆ ಮಾಡುತ್ತಿದ್ದಾರೆ ಎಂದಿದ್ದಾನೆ. ದಿ ಡೈರಿ ಆಫ್ ಮಣಿಪುರವನ್ನು ತಡೆಯುವ ಪ್ರಯತ್ನದಲ್ಲಿ ತನ್ನ ಬಗ್ಗೆ ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ ಎಂದಿದ್ದಾನೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಮಹಾಕುಂಭದ ವೈರಲ್ ಹುಡುಗಿ ಮೋನಾಲಿಸಾ ಡಾನ್ಸ್​ಗೆ ಫ್ಯಾನ್ಸ್ ಫುಲ್ ಫಿದಾ! ಒಂದೇ ತಾಸಿಗೆ ಎಷ್ಟು ಮಿಲಿಯನ್ ವೀವ್ಸ್ ಬಂದಿದೆ ನೋಡಿ!

ಅದೇನೂ ಇರಲಿ, ಈ ಸನೋಜ್‌ ಮಿಶ್ರಾ ಬಾಲಿವುಡ್‌ನಲ್ಲಿ ದೊಡ್ಡ ಹೆಸರೇನಲ್ಲ. ಈತ ಮಾಡಿದ ಯಾವ ಫಿಲಂ ಕೂಡ ಬಿಡುಗಡೆಯಾದ ದಾಖಲೆಯೂ ಇಲ್ಲ, ಪ್ರೇಕ್ಷಕರು ಅದನ್ನು ನೋಡಿದ ದಾಖಲೆಯೂ ಇಲ್ಲ. ಇಂಥವನ ಮಾತಿಗೆ ಮೊನಾಲಿಸಾ ಹೇಗೆ ಮರುಳಾದಳೋ ಗೊತ್ತಿಲ್ಲ. ಈತ ಮೊನಾಲಿಸಾ ಹೆಸರು ಹೇಳಿಕೊಂಡು ಎತ್ತುವಳಿ ಮಾಡುವ ಗಿರಾಕಿ ಇರಲೂಬಹುದು. ಬಹುಶಃ ಮೊನಾಲಿಸಾಗೆ ಇಂಥ ವಿಚಾರಗಳಲ್ಲಿ ಗೈಡ್‌ ಮಾಡುವವರು ಯಾರೂ ಇಲ್ಲವೆಂದು ಕಾಣುತ್ತದೆ. ಅದಕ್ಕೆ ಇನ್ನೊಂದು ಉದಾಹರಣೆ, ಕೇರಳದ ಕ್ರಿಮಿನಲ್‌ ಒಬ್ಬನ ಜ್ಯುವೆಲ್ಲರಿ ಕಾರ್ಯಕ್ರಮಕ್ಕೆ ಮೊನಾಲಿಸಾ ಹೋದದ್ದು. ಮೊನಾಲಿಸಾ ಹೀಗೆ ಹೆಸರು ಕೆಡಿಸಿಕೊಳ್ಳುತ್ತ ಹೋಗುತ್ತಿರುವುದು ನೋಡಿದರೆ, ಕುಂಭದಿಂದ ಬಂದ ಖ್ಯಾತಿ ಕುಂಭದೊಂದಿಗೇ ಮಾಯವಾಗುವ ದಿನಗಳು ದೂರವಿಲ್ಲ. 

ದಕ್ಷಿಣ ಭಾರತದ ನಟಿಯ ಬಾಲಿವುಡ್ ಅವಕಾಶ ಕಿತ್ತುಕೊಂಡ ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ!