ತೆಲುಗು ಗೊತ್ತಿದ್ದವರಿಗೆ 'ನಾಟು ನಾಟು' ಅರ್ಥ ಇಷ್ಟ, ಗೊತ್ತಿಲ್ಲದವರಿಗೆ ಮ್ಯೂಸಿಕ್ ಇಷ್ಟ: ಚಂದ್ರಬೋಸ್- ಕೀರವಾಣಿ ರಿಯಾಕ್ಷನ್
ಆಸ್ಕರ್ 2023 ಹಿಡಿದು ಸಂಭ್ರಮಿಸುತ್ತಿರುವ ಚಂದ್ರಬೋಸ್ ಮತ್ತು ಕೀರವಾಣಿ. ಹೆಮ್ಮೆಯಿಂದ ಭಾರತದ ಬಗ್ಗೆ ಹೇಳಿದ ಮಾತುಗಳಿದು....
ಆಸ್ಕರ್ 2023ರ ಸಾಲಿನಲ್ಲಿ ಅತ್ಯುತ್ತಮ ಮೂಲ ಹಾಡು ಪ್ರಶಸ್ತಿಯನ್ನು ನಾಟು ನಾಟು ಹಾಡು ಪಡೆದುಕೊಂಡಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ಈ ಚಿತ್ರ ಸಾಲು ಸಾಲು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸಂಗೀತ ನಿರ್ದೇಶಕ ಕೀರವಾಣಿ ಮತ್ತು ಗೀತ ರಚನೆಕಾರ ಚಂದ್ರಬೋಸ್ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅವಾರ್ಡ್ ಪಡೆದ ನಂತರ ತಮ್ಮ ಸಂಭ್ರಮವನ್ನು ಆಸ್ಕರ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
'ಆಸ್ಕರ್ ಅವಾರ್ಡ್ ಪಡೆದಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ದೇಶ ಭಾರತ ಮತ್ತು ನಮ್ಮ ಆರ್‌ಆರ್‌ಆರ್ ಚಿತ್ರತಂಡಕ್ಕೆ ಇದು ಹೆಮ್ಮೆಯ ಕ್ಷಣ. ನಾನು ಕ್ಲೌಡ್ 9ನಲ್ಲಿರುವೆ...ಜನರ ಆಶೀರ್ವಾದ ನಮಗೆ ಸಿಕ್ಕಿದೆ. ಈ ಹೆಮ್ಮೆಯ ಪ್ರಶಸ್ತಿಯನ್ನು ನಮಗೆ ಕೊಟ್ಟಿರುವುದಕ್ಕೆ ನನ್ನ ಮಾತೃಭಾಷೆ, ನಮ್ಮ ಸಂಸ್ಕತಿ ನನ್ನ ದೇಶವನ್ನು ಪ್ರತಿನಿಧಿಸಿದೆ. ತೆಲುಗು ಚಿತ್ರರಂಗ ಇಂಥ ಮಹಾನ್ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಖುಷಿ ಇದೆ,' ಎಂದು ಕೀರವಾಣಿ ಮಾತನಾಡಿದ್ದಾರೆ.
RRR ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ
'ತೆಲುಗು ಭಾಷೆಯಲ್ಲಿ ಒಟ್ಟು 56 ಅಕ್ಷರಗಳಿವೆ. ನಮ್ಮ ಭಾಷೆಯಲ್ಲಿ ತುಂಬಾ ಪದಗಳಿವೆ. ತುಂಬಾ ಭಾವನೆಗಳು (Expressions) ಮತ್ತು ಫೀಲಿಂಗ್‌ಗಳಿಂದ (Emotions) ತುಂಬಿಕೊಂಡಿವೆ. ತೆಲುಗು ಮ್ಯೂಸಿಕಲ್ ಭಾಷೆಯಾಗಿದ್ದು ತುಂಬಾ ಸಾಹಿತ್ಯಮಯವಾಗಿದೆ. ಸಾಮಾನ್ಯ ಪದ ಬರೆದರೂ ಸಂಗೀತದಂತೆಯೇ ಇರುತ್ತದೆ. ಭಾಷೆ ಗೊತ್ತಿರುವವರು ಹಾಡು ಇಷ್ಟ ಪಡುತ್ತಾರೆ. ಭಾಷೆ ಗೊತ್ತಿಲ್ಲದವರು ಅದರಲ್ಲಿರುವ ಮ್ಯೂಸಿಕ್ ಇಷ್ಟ ಪಡುತ್ತಾರೆ. ಮೊದಲು ಭಾರತಕ್ಕೆ ತೆರಳಿ ನನ್ನ ಪತ್ನಿ ಮತ್ತು ಮಕ್ಕಳಿಗೆ ಈ ಅವಾರ್ಡ್ ತೋರಿಸಬೇಕು,' ಎಂದು ಚಂದ್ರಬೋಸ್ ಹೆಮ್ಮೆಯ ಕ್ಷಣವನ್ನು ಹಂಚಿಕೊಂಡಿದ್ದಾರೆ.
'ಭಾರತಕ್ಕೆ ಆರ್‌ಆರ್‌ಆರ್ ಚಿತ್ರತಂಡಕ್ಕೆ ಆಸ್ಕರ್ ಬಂದಿರುವುದು ಕೇವಲ ಅರಂಭವಷ್ಟೇ..ವಿಶ್ವಾದ್ಯಂತ ಅದರಲ್ಲೂ ಪಾಶ್ಚಾತ್ಯ ದೇಶಗಳು (Western Nations) ಭಾರತದ ಸಂಗೀತವನ್ನು ಗುರುತಿಸಬೇಕು. ನಮ್ಮ ಏಷ್ಯಾದ ಸಂಗೀತವನ್ನು ಗುರುತಿಸುವಂತೆ ಆಗಬೇಕು. ಇಲ್ಲಿಂದ ನಮ್ಮ ಅವಕಾಶಗಳು ಹೆಚ್ಚಾಗಲಿ ನಮ್ಮ ಸಂಸ್ಕೃತಿ ನಮ್ಮ ಹಾಡುಗಳು ಮತ್ತಷ್ಟು ಜನಪ್ರಿಯವಾಗಲಿವೆ. ನಾಟು ನಾಟು ಹಾಡು ಶುದ್ಧ ದಕ್ಷಿಣ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಚಂದ್ರಬೋಸ್ ಅದ್ಭುತ ಪದಗಳನ್ನು ಬಳಸಿ, ಹಾಡು ಬರೆದಿದ್ದಾರೆ, ಮೆರಗು ಹೆಚ್ಚಿಸಲು ಪ್ರೇಮ್ ನೃತ್ಯ ಸಂಯೋಜನೆ ಮಾಡಿದ್ದಾರೆ. ತಂಡದ ಪರಿಶ್ರಮದಿಂದ ನಾವು ಈ ಸ್ಥಾನಕ್ಕೆ ಬಂದು ನಿಂತಿರುವುದು. ಹಾಗೂ ಇಂಥ ದೊಡ್ಡ ಪ್ರಶಸ್ತಿಯನ್ನು ನಮ್ಮ ತಾಯಿನಾಡಿಗೆ ತೆಗೆದುಕೊಂಡು ಹೋಗುತ್ತಿರುವುದು,' ಎಂದು ಕೀರವಾಣಿ ಆಸ್ಕರ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಭಾವುಕರಾಗಿದ್ದಾರೆ.
'ಹಾಡಿನಲ್ಲಿ ಬಳಸಿರುವ ಪ್ರತಿಯೊಂದೂ ಸಾಲುಗಳನ್ನು ನನ್ನ ಹಳ್ಳಿಯಲ್ಲಿ ನಾನು ಅನುಭವಿಸಿರುವೆ,' ಎಂದಿದ್ದಾರೆ ಚಂದ್ರಬೋಸ್.
ನಾಟು ನಾಟು ಹಾಡನ್ನು ಉಕ್ರೇನ್‌ನಲ್ಲಿ ಶೂಟ್ ಮಾಡಲಾಗಿತ್ತು. ಚಿತ್ರತಂಡ ತಿಂಗಳ ಕಾಲ ಬೀಡುಬಿಟ್ಟು ಸಾಂಗ್ ಸೆರೆ ಹಿಡಿದಿದ್ದರು. ಪ್ರೇಮ್ ರಕ್ಷಿತ್ ಕೊರಿಯೋಗ್ರಫಿಯಲ್ಲಿ ಚರಣ್, ತಾರಕ್ ಟಪ್ಪಾಂಗುಚಿ ಸ್ಟೆಪ್ಸ್ (Step) ಹಾಕಿ ರಂಗೇರಿಸಿದ್ದರು. ಇದಕ್ಕಿಂತಲೂ ಕಷ್ಟದ ಸ್ಟೆಪ್ಸ್ ಮಾಡಿ, ಇಬ್ಬರಿಗೂ ಅನುಭವ ಇತ್ತು. ಆದರೆ ಇಬ್ಬರೂ ಒಂದೇ ರೀತಿಯಲ್ಲಿ ಡ್ಯಾನ್ಸ್ (Dance) ಮಾಡೋಕೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ಈ ಹಾಡನ್ನು ಚಿತ್ರೀಕರಿಸಲು ಸುಮಾರು 18 ರೀ ಟೇಕೆ ತೆಗದೆುಕೊಳ್ಳಲಾಗಿತ್ತು.
ಆಸ್ಕರ್ 2023 ಸಮಾರಂಭಕ್ಕೆ ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟಿದ್ದು ಈ ವರ್ಷದ ಆಸ್ಕರ್ ಪ್ರಶಸ್ತಿ ಸಮಾರಂಭದ ಕಳೆ ಹೆಚ್ಚಿಸಿತ್ತು. ಅದರಲ್ಲೂ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾಟು ನಾಟು ಹಾಡಿನ ಪ್ರದರ್ಶನವಿರುವಾಗ ಹೆಮ್ಮೆಯಿಂದ ಭಾರತೀಯ ಸಿನಿಮಾವೊಂದರ ಸಹಾಸಗಾಥೆ ಹಾಗೂ ಕಥೆಯ ಸಾರಾಂಶವನ್ನು ಹೆಮ್ಮೆಯಿಂದ ಹೇಳಿದರು. ವಿದೇಶಿ ವೇದಿಕೆಯಲ್ಲಿ ಭಾರತೀಯ ಕ್ರಾಂತಿಕಾರಿಗಳ ಬಗ್ಗೆ ದೀಪಿಕಾ ಮಾತನಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ಸಿನಿ ರಂಗದ ಬಗ್ಗೆ ಜಗತ್ತಿನ ನಂಬಿಕೆಯೇ ಬದಲಾಗುವಂತೆ ಮಾಡಿವೆ ಈ ವರ್ಷದ ಭಾರತಕ್ಕೆ ಸಂದ ಆಸ್ಕರ್ ಪ್ರಶಸ್ತಿಗಳು.