ಭಾರತದ RRR ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ
ರಾಜಮೌಳಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ವೈರಲ್ ಹಾಡಿಗೆ ಆಸ್ಕರ್ ಪ್ರಶಸ್ತಿ. ದೀಪಿಕಾ ಪಡುಕೋಣೆಯಿಂದ ಮೆಚ್ಚುಗೆಯ ಮಾತು...
ಡಿಫರೆಂಟ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಆರ್‌ಆರ್‌ಆರ್ (RRR) ಚಿತ್ರದ ನಾಟು ನಾಟು ಹಾಡಿಗೆ ಒರಿಜಿನಲ್ ಸಾಂಗ್ ಕ್ಯಾಟಗರಿಯ ಆಸ್ಕರ್ 2023 ಪ್ರಶಸ್ತಿ ಪಡೆದುಕೊಂಡಿದೆ. ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ, ನಟ ಜೂ.ಎನ್‌ಟಿಆರ್, ರಾಮ್ ಚರಣ್, ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಮಾರ್ಚ್ 13ರಂದು ಲಾಸ್ ಎಂಜಲೀಸ್‌ನಲ್ಲಿ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯತ್ತಿದೆ. ಈ ವೇದಿಕೆಯಲ್ಲಿ 'ನಾಟು ನಾಟು' ಲೈವ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ಇದಕ್ಕೂ ಮುನ್ನ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಟು ನಾಟು ನೃತ್ಯ, ಸಂಗೀತ ಹಾಡು ಅಲ್ಲದೇ ಈ ಚಿತ್ರ ಭಾರತೀಯ ಸ್ವಾತಂತ್ರ್ಯ ಕ್ರಾಂತಿಕಾರಿಗಳ ಕಥೆಯನ್ನು ಆಧರಿಸಿದೆ ಎನ್ನುವಾಕ ಸಭೆಯಲ್ಲಿ ಚಪ್ಪಾಳೆ ಮೊಳಗಿತ್ತು. 2022ರ ಮಾರ್ಚ್ 25ಕ್ಕೆ 'RRR' ಸಿನಿಮಾ ರಿಲೀಸ್ ಆಗಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ, ಸಿನಿಮಾ ಬಾಕ್ಸಾಫೀಸ್ ಚಿಂದಿ ಉಡಾಯಿಸಿತ್ತು.
'ಥ್ಯಾಂಕ್ಯೂ ಅಕಾಡಮಿ. ಕಾರ್ಪೆಂಟರ್ಸ್‌ಗಳನ್ನು ಕೇಳಿಸಿಕೊಂಡು ಬೆಳೆದವರು ನಾವು. ಈಗ ಕೈಯಲ್ಲಿ ಆಸ್ಕರ್ ಹಿಡಿದುಕೊಂಡು ನಿಂತಿರುವೆ. 'ನನ್ನ ತಲೆಯಲ್ಲಿ ಮನಸ್ಸಿನಲ್ಲಿ ಒಂದೇ ಆಸೆ ಇದ್ದಿದ್ದು....ಅದೇ ಆಸೆ ರಾಜಮೌಳಿ ಮತ್ತು ಅವರ ಫ್ಯಾಮಿಲಿಗೂ ಇತ್ತು..ಆರ್‌ಆರ್‌ಆರ್ ಸಿನಿಮಾ ಗೆಲ್ಲಬೇಕು. ಏಕೆಂದರೆ ಇದು ಭಾರತದ ಹೆಮ್ಮೆ. ಪ್ರಪಂಚದಲ್ಲಿ ಅತಿ ಎತ್ತರಕ್ಕೆ ಕರೆದುಕೊಂಡು ಹೋಗಿದೆ,' ಎಂದು ಹಾಡಿನ ಮೂಲಕ ಎಂ.ಎಂ. ಕೀರವಾಣಿ
ಪ್ರಶಸ್ತಿ ಪಡೆದು, ಸಂತಸ ವ್ಯಕ್ತ ಪಡಿಸಿದ್ದಾರೆ.
ಆರ್‌ಆರ್‌ಆರ್ ಚಿತ್ರಕ್ಕೆ ನಾಟು ನಾಟು ಹಾಡು ಬರೆಯಲು ಎಷ್ಟು ಕಷ್ಟವಾಗಿತ್ತು? ಎಂದು ಪ್ರಶ್ನೆ ಮಾಡಿದಾಗ 'ತೆಲುಗು ಭಾಷೆಯಲ್ಲಿ ಒಟ್ಟು 56 ಅಕ್ಷರಗಳಿವೆ. ನಮ್ಮ ಭಾಷೆಯಲ್ಲಿ ತುಂಬಾ ಪದಗಳಿದೆ, ತುಂಬಾ ಎಕ್ಸ್‌ಪ್ರೆಶನ್ ಮತ್ತು ಫೀಲಿಂಗ್‌ಗಳಿಂದ ತುಂಬಿಕೊಂಡಿವೆ. ತೆಲುಗು ಮ್ಯೂಸಿಕಲ್ ಭಾಷೆಯಾಗಿದ್ದು, ತುಂಬಾ ಸಾಹಿತ್ಯಗಳನ್ನು ಹೊಂದಿದೆ. ಸಾಮಾನ್ಯ ಪದ ಬರೆದರೂ ಸಂಗೀತದ ತರ ಇರುತ್ತೆ. ಭಾಷೆ ಗೊತ್ತಿರುವವರು ಹಾಡು ಇಷ್ಟ ಪಡುತ್ತಾರೆ. ಭಾಷೆ ಗೊತ್ತಿಲ್ಲದವರು ಅದರಲ್ಲಿರುವ ಮ್ಯೂಸಿಕ್ ಇಷ್ಟ ಪಡುತ್ತಾರೆ' ಎಂದಿದ್ದಾರೆ ಚಂದ್ರಬೋಸ್.
ಚಂದ್ರಬೋಸ್ ಸಾಹಿತ್ಯ ಬರೆದಿರುವ 'ನಾಟು ನಾಟು' ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕೀರವಾಣಿಯವರ ಮಗ ಕಾಲ ಭೈರವ ಹಾಡಿದ್ದರು. 'ನಾಟು ನಾಟು' ಹಾಡು ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಕಥೆ ಸ್ವಾತಂತ್ರ್ಯಪೂರ್ವ ಕಾಲಘಟ್ಟದ್ದು. ಆ ಕಾಲದಲ್ಲಿದ್ದ ಜಾನಪದ ಮಾದರಿಯ ಹಾಡನ್ನೇ ಟಪ್ಪಾಂಗುಚ್ಚಿ ಸ್ಟೈಲ್‌ನಲ್ಲಿ ಬಹಳ ಸೊಗಸಾಗಿ ಪ್ರೆಸೆಂಟ್ ಮಾಡಿದ್ದು, ಈ ಹಾಡಿನ ಹೆಚ್ಚುಗಾರಿಕೆ. ಈ ಹಾಡಿಂದು ಒಂದು ತೂಕವಾದರೆ, ಅದಕ್ಕೆ ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಹಾಕಿರೋ ಜಬರ್ದಸ್ತ್ ಸ್ಟೆಪ್ಸ್‌ಗೆ ಮತ್ತೊಂದು ತೂಕ. ಈ ಇಬ್ಬರೂ ದಿಗ್ಗಜ ನಟರ ಅದ್ಭುತ ಸ್ಟೆಪ್ಸ್ ಹಾಡಿನ ಹೆಚ್ಚುಗಾರಿಕೆಯನ್ನು ಹೆಚ್ಚಿಸಿದೆ. ಜಗತ್ಪ್ರಸಿದ್ಧವಾಗುವಂತೆ ಮಾಡಿದ್ದಾರೆ.
'Original Song' ಕ್ಯಾಟಗರಿಯಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದರೆ, elephant whisperers ಎಂಬ ನೈಜ ಕಥೆಯಾಧಾರಿತ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಒಲಿದಿದ್ದು ಭಾರತೀಯರ ಸಂತೋಷವನ್ನು ಇಮ್ಮಡಿಗೊಳಿಸಿದೆ.