ಬಾಲಿವುಡ್‌ ನಟ ಸೈಫ್ ಅಲಿ ಖಾನ್‌ರನ್ನು ಆಸ್ಪತ್ರೆಗೆ ತಲುಪಿಸಿ ಪ್ರಾಣ ಉಳಿಸಿದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗಾಯಕ ಮಿಕಾ ಸಿಂಗ್ ರಾಣಾ ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಸೈಫ್ ಕೂಡ ರಾಣಾ ಅವರಿಗೆ ಧನ್ಯವಾದ ಅರ್ಪಿಸಿ ಐವತ್ತು ಸಾವಿರ ರೂಪಾಯಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಹನ್ನೊಂದು ಸಾವಿರ ರೂಪಾಯಿ ನೀಡಿ ಸನ್ಮಾನಿಸಿದ್ದಾರೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ (Bollywood actor Saif Ali Khan) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಅವರ ಮನೆಗೆ ನುಗ್ಗಿದ್ದ ಕಳ್ಳ, ಸೈಫ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ಮೈತುಂಬ ಗಾಯ ಮಾಡ್ಕೊಂಡು ಪ್ರಾಣಾಪಾಯದಲ್ಲಿದ್ದ ಸೈಫ್ ಅಲಿ ಖಾನ್ ಪ್ರಾಣ ಉಳಿಸಿದ್ದು ಆಟೋ ಚಾಲಕ. ಸೈಫ್ ಅಲಿ ಖಾನ್ ಅವರನ್ನು ಆಟೋದಲ್ಲಿ ಆಸ್ಪತ್ರೆ ಮುಟ್ಟಿಸಿದ್ದು ಭಜನ್ ಸಿಂಗ್ ರಾಣಾ (Bhajan Singh Rana). ಆಟೋ ಚಾಲಕ ಭಜನ್ ಸಿಂಗ್ ರಾಣಾ ತಮ್ಮ ಕೆಲಸದಿಂದ ಈಗ ಪ್ರಸಿದ್ಧಿಗೆ ಬಂದಿದ್ದಾರೆ. ಅವರ ಧೈರ್ಯವನ್ನು ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಸೈಫ್ ಆಸ್ಪತ್ರೆ ತಲುಪಿದ್ದರಿಂದ ಪ್ರಾಣ ಉಳಿದಿದೆ ಎಂದು ವೈದ್ಯರು ಹೇಳಿದ್ದರು. ಆಸ್ಪತ್ರೆಯಲ್ಲಿಯೇ ರಾಣಾಗೆ ಸೈಫ್ ಧನ್ಯವಾದ ಹೇಳಿದ್ರು. ಮನೆಗೆ ಬರುವ ಮುನ್ನ ರಾಣಾ ಅವರನ್ನು ಭೇಟಿಯಾಗಿದ್ದ ಸೈಫ್ ಹಾಗೂ ಅವರ ಕುಟುಂಬ ಅವರಿಗೆ ಧನ್ಯವಾದ ಅರ್ಪಿಸಿತ್ತು. ಯಾವುದೇ ಸಮಯದಲ್ಲಿ ಯಾವುದೇ ಸಮಸ್ಯೆ ಬಂದ್ರೂ ತನ್ನ ಬಳಿ ಬರುವಂತೆ ಸೈಫ್, ರಾಣಾಗೆ ಹೇಳಿದ್ದಾರೆ. ಅಲ್ಲದೆ 50 ಸಾವಿರ ರೂಪಾಯಿ ನೀಡಿದ್ದಾರೆ ಎನ್ನಲಾಗಿದೆ. 

ಸೈಫ್ ಹಾಗೂ ರಾಣಾ ಜೊತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಅನೇಕರು ಆಟೋ ಚಾಲಕನಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸೈಫ್ ಅಲಿ ಖಾನ್ ಪ್ರಾಣ ಉಳಿಸಿರುವ ರಾಣಾ ಬಗ್ಗೆ ಪ್ರಸಿದ್ಧ ಗಾಯಕ ಮಿಕಾ ಸಿಂಗ್ (singer Mika Singh) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಾಣಾ ಕೆಲಸವನ್ನು ಮಿಕಾ ಸಿಂಗ್ ಶ್ಲಾಘಿಸಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿ ಮಿಕಾ ಸಿಂಗ್, ಭಾರತದ ನೆಚ್ಚಿನ ಸೂಪರ್‌ಸ್ಟಾರ್ ಉಳಿಸಿದ್ದಕ್ಕಾಗಿ ರಾಣಾ, ಕನಿಷ್ಠ 11 ಲಕ್ಷ ರೂಪಾಯಿಗಳ ಬಹುಮಾನಕ್ಕೆ ಅರ್ಹರು ಎಂದು ನಾನು ನಂಬುತ್ತೇನೆ. ಅವರ ವೀರ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಾಧ್ಯವಾದರೆ, ದಯವಿಟ್ಟು ಅವರ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಿ. ಮೆಚ್ಚುಗೆಯ ಸಂಕೇತವಾಗಿ ನಾನು ಅವರಿಗೆ 1 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲು ಬಯಸುತ್ತೇನೆ ಎಂದು ಮಿಕಾ ಸಿಂಗ್ ಬರೆದಿದ್ದಾರೆ.

15,000 ಕೋಟಿ ಮೌಲ್ಯದ ಕುಟುಂಬದ ಆಸ್ತಿ ಕಳೆದುಕೊಳ್ಳಲಿದ್ದಾರಾ ಸೈಫ್ ಅಲಿ ಖಾನ್?

ಅಲ್ಲದೆ ಸೈಫ್ ಅಲಿ ಖಾನ್, ಭಜನ್ ಸಿಂಗ್ ರಾಣಾಗೆ 50 ಸಾವಿರ ರೂಪಾಯಿ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸೈಫ್ ಭಾಯ್, ಭಜನ್ ಸಿಂಗ್ ರಾಣಾ ಅವರಿಗೆ 11 ಲಕ್ಷ ರೂಪಾಯಿ ನೀಡಿ. ಅವರು ರಿಯಲ್ ಹೀರೋ. ಮುಂಬೈ ಆಟೋ ಚಾಲಕರಿಗೆ ಜಿಂದಾಬಾದ್ ಎಂದು ಬರೆದುಕೊಂಡಿದ್ದಾರೆ. 

ಸೈಫ್ ಭೇಟಿ ಬಳಿಕ ಆಟೋ ಚಾಲಕ ಹೇಳಿದ್ದೇನು? ಆ ಮಾತಿನಿಂದ ಖುಷಿಯಾಯ್ತು ಎಂದ ಭಜನ್ ಸಿಂಗ್ ರಾಣಾ

ಇದಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತರೊಬ್ಬರು ಭಜನ್ ಸಿಂಗ್ ರಾಣಾ ಅವರನ್ನು ಸನ್ಮಾನಿಸಿದ್ದಾರೆ. ಅವರಿಗೆ 11 ಸಾವಿರ ರೂಪಾಯಿ ನೀಡಿ, ಅವರ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ. ಸೈಫ್ ಅಲಿ ಖಾನ್ ಅವರನ್ನು ಆಟೋದಲ್ಲಿ ಕುಳಿಸಿಕೊಂಡಿದ್ದ ಭಜನ್ ಸಿಂಗ್ ರಾಣಾಗೆ ಆಗ ತಾನು ಜೀವ ಉಳಿಸ್ತಿರುವ ವ್ಯಕ್ತಿ ಸೂಪರ್ ಸ್ಟಾರ್ ಎಂಬುದು ತಿಳಿದಿರಲಿಲ್ಲ. ಸೈಫ್ ಭೇಟಿಯಿಂದ ಖುಷಿಯಾಗಿರುವ ಭಜನ್ ಸಿಂಗ್, ಧನ್ಯವಾದ ಹೇಳಿದ್ದಾರೆ. ಸೈಫ್ ಅಲಿ ಖಾನ್ ನನಗೆ ಕರೆ ಮಾಡಿ ನನ್ನನ್ನು ಆಹ್ವಾನಿಸಿದ್ದರು. ನಾನು ಅಲ್ಲಿಗೆ ಹೋದಾಗ ಸೈಫ್ ಜೊತೆ ಅವರ ಕುಟುಂಬಸ್ಥರು ನನ್ನನ್ನು ಗೌರವದಿಂದ ನೋಡಿದ್ರು. ಅವರು ನನ್ನ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಅವರಿಗೆ ಸಹಾಯ ಮಾಡಿದ್ದು ನನಗೆ ಖುಷಿ ನೀಡಿದೆ. ಇದು ಹೆಮ್ಮೆಯ ವಿಷ್ಯ. ಸದಾ ನನ್ನ ಸಹಾಯಕ್ಕೆ ಸಿದ್ಧ ಎಂದು ಸೈಫ್ ಅಲಿ ಖಾನ್ ನನಗೆ ಹೇಳಿದ್ದಾರೆಂದು ಭಜನ್ ಸಿಂಗ್ ರಾಣಾ ತಮ್ಮ ಸಂತೋಷವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.