ಚಾಕು ಇರಿತಕ್ಕೊಳಗಾದ ನಂತರ ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದ್ದಾರೆ.
ಮುಂಬೈ: ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ನಟ ಸೈಫ್ ಅಲಿ ಖಾನ್ ಭೇಟಿಯಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಭಜನ್ ಸಿಂಗ್ ಅವರನ್ನು ಸೈಫ್ ಅಲಿ ಖಾನ್ ಕರೆಸಿಕೊಂಡಿದ್ದರು. ಭಜನ್ ಸಿಂಗ್ ರಾಣಾ ಹೆಗಲ್ಮೇಲೆ ಕೈ ಹಾಕಿ ಸೈಫ್ ಅಲಿ ಖಾನ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಭಜನ್ ಸಿಂಗ್ ರಾಣಾ ಸಹ ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ.
ಸೈಫ್ ಅಲಿ ಖಾನ್ ಭೇಟಿ ಬಳಿಕ ಮಾತನಾಡಿರುವ ಆಟೋ ಚಾಲಕ ಭಜನ್ ಸಿಂಗ್, ಮೊದಲು ಅವರ ಪಿಎ ಕಾಲ್ ಮಾಡಿ, ಭೇಟಿ ಮಾಡುವ ಸಮಯ ಹೇಳಿದ್ದರು. ಆಸ್ಪತ್ರೆ ಒಳಗೆ ಹೋಗುತ್ತಿದ್ದಂತೆ ಅಲ್ಲಿದ್ದ ಸೈಫ್ ಅಲಿ ಖಾನ್ ಕುಟುಂಬಸ್ಥರು, ಥ್ಯಾಂಕ್ ಯು ಎಂದು ಹೇಳಿದರು. ಅಲ್ಲಿ ಅವರ ಮಕ್ಕಳು ಸೇರಿದಂತೆ ತುಂಬಾ ಜನರಿದ್ದರು. ನಾನು ಹೆಚ್ಚು ಸಿನಿಮಾ ನೋಡದ ಕಾರಣ ನನಗೆ ಹಲವರ ಪರಿಚಯ ಇರಲಿಲ್ಲ. ವಾರ್ಡ್ ಒಳಗೆ ಹೋದಾಗ ಸೈಫ್ ಮತ್ತು ಅವರ ತಾಯಿ ಸಹ ಇದ್ದರು. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ತಾಯಿ-ಮಗ ಧನ್ಯವಾದಗಳನ್ನು ಸಲ್ಲಿಸಿದರು. ನನ್ನನ್ನು ಕರೆಸಿ ಮಾತನಾಡಿದ್ದಕ್ಕೆ ತುಂಬಾ ಖುಷಿಯಾಯ್ತು.
ಸೈಫ್ ಅಲಿ ಖಾನ್ ಆರೋಗ್ಯ ಸುಧಾರಣೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಆಟೋದಲ್ಲಿ ಹೋಗುವಾಗ ನಿಧಾನಕ್ಕೆ ಹೋಗು ಎಂದು ಸೈಫ್ ಹೇಳುತ್ತಿದ್ದರು. ಗಾಯವಾಗಿದ್ದರಿಂದ ಸೈಫ್ ಅಲಿ ಖಾನ್ ಅವರಿಗೆ ನೀವು ಆಗುತ್ತಿತ್ತು. ಮುಂದೆ ಯಾವುದೇ ಸಹಾಯ ಬೇಕಾದ್ರೂ ತಮ್ಮನ್ನ ಭೇಟಿಯಾಗುವಂತೆ ಹೇಳಿದ್ದು ಖುಷಿಯಾಯ್ತು. ಸೆಲ್ಫಿ ಕೇಳಿದಾಗ ತಮ್ಮ ಸಹಾಯಕನಿಗೆ ಹೇಳಿ ನನ್ನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು ಎಂದು ಭಜನ್ ಸಿಂಗ್ ಹೇಳಿದರು.
ಜನವರಿ 16ರ ಬೆಳಗಿನ ಜಾವ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿತ್ತು. ಮನೆಯಲ್ಲಿ ಯಾವುದೇ ಕಾರ್ ಲಭ್ಯವಿರದ ಕಾರಣ, ಗಾಯಗೊಂಡಿದ್ದ ಸೈಫ್ ಅಲಿ ಖಾನ್ ಅವರನ್ನು ಆಟೋ ಮೂಲಕ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಭಜನ್ ಸಿಂಗ್ ರಾಣಾ ಯಾವುದೇ ಶುಲ್ಕ ಪಡೆಯದೇ ಹಿಂದಿರುಗಿದ್ದರು.
ಜನವರಿ 16ರ ಬೆಳಗಿನ ಜಾವ ಮಹಿಳೆಯೊಬ್ಬರು ಸಹಾಯಕ್ಕಾಗಿ ಆಟೋ ಕೂಗುತ್ತಿದ್ದರು. ಈ ವೇಳೆ ನಾನು ಅಲ್ಲಿಗೆ ಹೋದೆ. ಬಿಳಿ ಕುರ್ತಾ ಮತ್ತು ಪೈಜಾಮಾ ಧರಿಸಿದ್ದ ವ್ಯಕ್ತಿ ಆಟೋ ಒಳಗೆ ಕುಳಿತು, ಆಸ್ಪತ್ರೆ ತಲುಪಲು ಎಷ್ಟು ಸಮಯ ಆಗುತ್ತೆ ಅಂತ ಕೇಳಿದರು. ನಾನು 8-10 ನಿಮಿಷ ಎಂದೇಳಿ ಆಟೋ ಸ್ಟಾರ್ಟ್ ಮಾಡಿದೆ. ಅಲ್ಲಿಯವರೆಗೂ ಆಟೋದಲ್ಲಿರೋ ವ್ಯಕ್ತಿ ಸೈಫ್ ಅಲಿ ಖಾನ್ ಎಂದು ಗೊತ್ತಾಗಲಿಲ್ಲ ಎಂದು ಭಜನ್ ಸಿಂಗ್ ಹೇಳಿದ್ದರು.
ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಮಲಗಿ ನಾನು ಸೈಫ್ ಅಲಿ ಖಾನ್ ಎಂದು ಹೇಳಿದಾಗಲೇ ಗಾಯಾಳು ವ್ಯಕ್ತಿ ಸೈಫ್ ಅಲಿ ಖಾನ್ ಎಂದು ಗೊತ್ತಾಯ್ತು. ನಾನು ಯಾವುದೇ ಹಣ ಪಡೆಯದೇ ಆಸ್ಪತ್ರೆಯಿಂದ ಹೊರ ಬಂದೆ ಎಂದು ಆಟೋ ಚಾಲಕ ಹೇಳಿದ್ದರು. ಹಣ ಯಾಕೆ ಪಡೆಯಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಜೀವ ಮುಖ್ಯ ಎಂದು ಹೇಳಿದ್ದರು.
ಸಂಸ್ಥೆಯಿಂದ ನಗದು ಬಹುಮಾನ
ಖಾಸಗಿ ಸಂಸ್ಥೆಯೊಂದು ಭಜನ್ ಸಿಂಗ್ ರಾಣಾ ಅವರನ್ನು ಸನ್ಮಾನಿಸಿ 11 ಸಾವಿರ ರೂಪಾಯಿ ಚೆಕ್ ವಿತರಿಸಿ ಗೌರವಿಸಿದೆ. ಆಟೋ ಚಾಲಕ ಭಜನ್ ಸಿಂಗ್ ರಾಣಾ ಮೂಲತಃ ಉತ್ತರಾಖಂಡದವರಾಗಿದ್ದು, ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ. ಸೈಫ್ ಅಲಿ ಖಾನ್ ಪ್ರಕರಣದ ನಂತರ ಭಜನ್ ಸಿಂಗ್ ರಾಣಾ ಹೆಸರು ಮುನ್ನಲೆಗೆ ಬಂದಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್
ಲೀಲಾವತಿ ಆಸ್ಪತ್ರೆಯಲ್ಲಿ ಕಳೆದ 5 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ನಟ ಸೈಫ್ ಅಲಿಖಾನ್ ಜನವರಿ 21ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯ ವೈದ್ಯರು ಅವರನ್ನು ಕೆಲ ದಿನಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿಗೆ ಸೂಚಿಸಿದ್ದಾರೆ. ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದ ಸೈಫ್ ಬಾಂದ್ರಾದಲ್ಲಿರುವ ಸದ್ಗುರು ಶರಣ್ ನಿವಾಸಕ್ಕೆ ಮರಳಿದರು. ಈ ವೇಳೆ ಕುತ್ತಿಗೆ ಮತ್ತು ಕೈಗೆ ಅವರು ಬ್ಯಾಂಡೇಜ್ ಹಾಕಿದ್ದು ಕಂಡುಬಂತು. ಆದರೆ ಯಾವುದೇ ಆಯಾಸ, ಬಳಲಿಕೆಯ ಲಕ್ಷಣ ಅವರಲ್ಲಿ ಕಂಡುಬರಲಿಲ್ಲ. ಆರೋಗ್ಯವಂತನಂತೆ ಅವರು ಮನೆ ಪ್ರವೇಶ ಮಾಡಿದ್ದು ವಿಶೇಷವಾಗಿತ್ತು.
ಜ.16ರಂದು ಬಾಂಗ್ಲಾದೇಶಿ ವ್ಯಕ್ತಿಯಿಂದ ಇರಿತಕ್ಕೊಳಗಾಗಿದ್ದ ಸೈಫ್ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕೈ, ಕುತ್ತಿಗೆ, ಹಾಗೂ ಬೆನ್ನಿನ ಭಾಗದಲ್ಲಿ ಗಾಯಗಳಾಗಿತ್ತು. ಅದರಲ್ಲಿಯೂ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿತ್ತು. 1 ದಿನ ಐಸಿಯುನಲ್ಲಿದ್ದ ಅವರನ್ನು ನಂತರ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ವೈದ್ಯರು ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿದ ಪರಿಣಾಮ ಸೈಫ್ ಚೇತರಿಸಿಕೊಂಡಿದ್ದಾರೆ.
