ಮಲೆಯಾಳಂ ನಟ ಶೈನ್ ಟಾಮ್ ಚಾಕೋ ಅವರ ಕಾರು ಅಪಘಾತಕ್ಕೀಡಾಗಿದ್ದು, ಅವರ ತಂದೆ ಸಿಪಿ ಚಾಕೋ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ನಟಿಯರಿಂದ ಲೈಂಗಿಕ ಕಿರುಕುಳದ ಆರೋಪಕ್ಕೆ ಒಳಗಾಗಿದ್ದ ಹಾಗೂ ಡ್ರಗ್ ಸೇವನೆ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾಗಿ ಬಿಡುಗಡೆಯಾಗಿದ್ದ ಮಲೆಯಾಳಂ ನಟ ಶೈನ್ ಟಾಮ್ ಚಾಕೋ ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಈ ದುರಂತದಲ್ಲಿ ಅವರ ತಂದೆ ಸಿಪಿ ಚಾಕೋ ನಿಧನರಾಗಿದ್ದಾರೆ. ನಟನಿಗೂ ಹಾಗೂ ಅವರ ತಾಯಿ ಮರಿಯಾ ಕಾರ್ಮೆಲ್‌ ಅವರಿಗೂ ಈ ಅಪಘಾತದಲ್ಲಿ ಗಂಭೀರ ಗಾಯಗಳಾಗಿವೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.

ಶೈನ್ ಟಾಮ್ ಚಾಕೋ ಅವರು ಕುರುತಿ, ಜಿಗರ್‌ಥಾಂಡ ಡಬಲ್ ಎಕ್ಸ್ ಮುಂತಾದ ಸಿನಿಮಾಗಳಲ್ಲಿನ ತಮ್ಮ ಅಮೋಘ ನಟನೆಯಿಂದ ಗಮನ ಸೆಳೆದಿದ್ದರು. ಧರ್ಮಪುರಿ ಜಿಲ್ಲೆಯ ಪರಯೂರ್ ಸಮೀಪ ಈ ಅಪಘಾತ ನಡೆದಿದ್ದು, ಈ ಸ್ಥಳ ಪಾಲಕೋಡೆಗೆ ಸಮೀಪದಲ್ಲಿದ್ದೆ. ನಟ ಶೈನ್ ಚಾಕೋ ಹಾಗೂ ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಹೆದ್ದಾರಿಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.

ಈ ದುರಂತದಲ್ಲಿ ಶೈನ್ ಚಾಕೋ ತಂದೆ ಸಿಪಿ ಚಾಕೊ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಶೈನ್ ಟಾಮ್ ಚಾಕೊ, ಅವರ ತಾಯಿ ಮತ್ತು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ವ್ಯಕ್ತಿಯೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಧರ್ಮಪುರಿ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಎಸ್ ಮಹೇಶ್ವರನ್ ಪ್ರತಿಕ್ರಿಯಿಸಿದ್ದು, ಶೈನ್ ಟಾಮ್ ಚಾಕೊ ಅವರ ತಂದೆಯ ಸಾವನ್ನು ದೃಢಪಡಿಸಿದರು ಹಾಗೂ ನಟ ಶೈನ್ ಟಾಮ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶೈನ್ ಚಾಕೋ ಅವರ ಕುಟುಂಬದ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೂಡಲೇ ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿಕುಟುಂಬಕ್ಕೆ ಸಹಾಯ ಮಾಡುತ್ತೇವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇತ್ತೀಚೆಗೆ ಕೇರಳದ ಅಲಪುಝಾದಲ್ಲಿ ಅಬಕಾರಿ ಇಲಾಖೆ ಮಾದಕವಸ್ತು ಸಾಗಣೆ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಶೈನ್ ಮಾದಕವಸ್ತು ಪ್ರಕರಣದಲ್ಲಿ ಆರೋಪಿಯಾಗಿದ್ದರು.ಆದರೆ ಪ್ರಕರಣದ ವಿಚಾರಣೆ ನಡೆಸಿದ ಅಲಪುಝಾ ಸೆಷನ್ಸ್ ನ್ಯಾಯಾಲಯವು ಶೈನ್ ಅದರಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿತು.

ಕಮ್ಮಟಿಪಾದಂ, ಇಷ್ಕ್, ಲವ್, ಕುರುಪ್, ಭೀಷ್ಮ ಪರ್ವಂ ಮತ್ತು ಬಾಜೂಕಾ ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಶೈನ್ ಹೆಸರುವಾಸಿಯಾಗಿದ್ದಾರೆ. ಕೊನೆಯದಾಗಿ ಶೈನ್‌ ಚಾಕೋ ಅಲಪುಝಾ ಜಿಮ್ಖಾನಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಅವರು ದಸರಾ ಸಿನಿಮಾದ ಮೂಲಕ ತೆಲುಗು ಸಿನಿಮಾಗೂ ಪಾದಾರ್ಪಣೆ ಮಾಡಿದರು ಮತ್ತು ನಂತರ ರಂಗಬಲಿ, ದೇವರ, ಡಾಕು ಮಹಾರಾಜ್ ಮತ್ತು ರಾಬಿನ್‌ಹುಡ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.