ಚಿತ್ರನಟರ, ಕ್ರಿಕೆಟ್​ ತಾರೆಯರು ಬಳಸಿಬಿಟ್ಟ ವಸ್ತುಗಳನ್ನು ಪ್ರಸಾದ ಎಂದು ಖರೀದಿ ಮಾಡುವವರ ನಡುವೆಯೇ, ಈ ಖ್ಯಾತ ನಟನ ಬ್ರೇಕಪ್​ ಲೆಟರ್​​ 13 ಲಕ್ಷ ರೂ.ಗೆ ಹರಾಜು ಆಗಿದೆ. ಅಂಥದ್ದೇನಿತ್ತು ನೋಡಿ!

ಚಿತ್ರನಟರ, ಕ್ರಿಕೆಟಿಗರು ಬಳಸಿಬಿಟ್ಟ ಬಟ್ಟೆ, ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ಹರಾಜು ಆಗುವುದು ಹೊಸ ವಿಷಯವೇನಲ್ಲ. ಏಕೆಂದರೆ ಹಲವರಿಗೆ ಇವರೇ ದೇವರ ಸಮಾನ. ಜಾತ್ರೆಗಳ ಸಂದರ್ಭದಲ್ಲಿ ದೇವರ ವಸ್ತುಗಳನ್ನು ಹರಾಜು ಹಾಕುವ ಪದ್ಧತಿ ಇದೆ. ದೇವರ ಮೇಲಿನ ಭಕ್ತಿ, ಶ್ರದ್ಧೆಯಿಂದ ಆ ವಸ್ತುಗಳನ್ನು ಜನರು ಹೆಚ್ಚಿನ ದುಡ್ಡುಕೊಟ್ಟು ಪಡೆದುಕೊಂಡು ಪುನೀತರಾಗುತ್ತಾರೆ. ಆದರೆ ಇನ್ನು ಕೆಲವರಿಗೆ ಹಾಗಲ್ಲ. ಚಿತ್ರತಾರೆಯರು, ಕ್ರಿಕೆಟಿಗರೇ ಅವರ ಪಾಲಿನ ದೇವರುಗಳು. ಆದ್ದರಿಂದ ಅವರು ಬಳಸಿ ಬಿಟ್ಟದ್ದನ್ನೆಲ್ಲಾ ಪ್ರಸಾದ ಎಂದು ತಂದು ಮನೆಯಲ್ಲಿ ಇಟ್ಟುಕೊಂಡು ಖುಷಿಪಡುವ ವರ್ಗವೇ ಸಾಕಷ್ಟಿದೆ. ಅದೇ ರೀತಿ ಇದೀಗ, ಚಿತ್ರ ನಟನೊಬ್ಬನ ಬ್ರೇಕಪ್​ ಲೆಟರ್ ಕೂಡ ಅದೇ ರೀತಿ ದೊಡ್ಡ ಮೊತ್ತಕ್ಕೆ ಹರಾಜು ಆಗಿರುವ ಕುತೂಹಲದ ಘಟನೆ ನಡೆದಿದೆ.

ನಾಯಕನೊಬ್ಬ ತನ್ನ ಗೆಳತಿಯಿಂದ ಬ್ರೇಕ್​ ಅಪ್​ ಮಾಡಿಕೊಂಡ ಬಳಿಕ ಬರೆದಿರುವ ಪತ್ರವೊಂದು ಈಗ ಭಾರಿ ಸದ್ದು ಮಾಡುತ್ತಿದೆ. ಈ ಬ್ರೇಕ್​ ಅಪ್​ ಲೆಟರ್​ ಹರಾಜಿಗೆ ಇಡಲಾಗಿದ್ದು, ಇದು 15 ಸಾವಿರ ಡಾಲರ್​ ಅಂದರೆ ಸುಮಾರು 13 ಲಕ್ಷ ರೂಪಾಯಿಗೂ ಅಧಿಕ ಮೊತ್ತಕ್ಕೆ ಹರಾಜು ಆಗಿದೆ. ಹಾಲಿವುಡ್​​ನ ಜನಪ್ರಿಯ ನಟ ಯುವಜನಾಂಗದ ಸೆ*ಕ್ಸ್‌ ಸಿಂಬಾಲ್ ಎಂದೇ ಬಿಂಬಿತನಾಗಿದ್ದ ನಟ ಮರ್ಲಾನ್ ಬ್ರಾಂಡೊ (Marlon Brando). ಎ ಸ್ಟ್ರೀಟ್‌‌ ಕಾರ್ ನೇಮ್ಡ್ ಡಿಸೈರ್ ಚಿತ್ರದಲ್ಲಿನ ಸ್ಟಾನ್ಲೆ ಕೊವಲಾಸ್ಕಿ ಪಾತ್ರ ಮತ್ತು ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ ಗಳಿಸಿ ವಿಶ್ವಖ್ಯಾತಿ ಗಳಿಸಿರುವ ಈ ನಟ, ಆನ್ ದಿ ವಾಟರ್‌ಫ್ರಂಟ್‌ ಚಿತ್ರದಲ್ಲಿ ತನ್ನ ಟೆರಿ ಮಲಾಯ್ ಪಾತ್ರಕ್ಕೆ ಆಸ್ಕರ್ ಪ್ರಶಸ್ತಿಯನ್ನು ಪಡೆದಂಥವರು. ಸಿನಿಮಾ ಕ್ಷೇತ್ರದಲ್ಲಿರುವ ಬಹುತೇಕ ಎಲ್ಲಾ ಪ್ರಶಸ್ತಿಗಳನ್ನೂ ಬಾಚಿಕೊಂಡು ಹಲವಾರು ದಶಕಗಳವರೆಗೆ ಚಿತ್ರರಂಗವನ್ನು ಆಳಿರುವ ಈ ನಟನಿಗೆ 2004ರಲ್ಲಿ 80ನೇ ವರ್ಷಕ್ಕೆ ಮೃತಪಟ್ಟಿದ್ದಾರೆ. 2004 ರಲ್ಲಿ ನಿಧನರಾದ ಬ್ರಾಂಡೊ ಅವರನ್ನು 20 ನೇ ಶತಮಾನದ ಅತ್ಯಂತ ಪ್ರಭಾವಶಾಲಿ ತಾರೆಗಳಲ್ಲಿ ಪರಿಗಣಿಸಲಾಗಿದೆ. ಆರು ದಶಕಗಳ ವೃತ್ತಿಜೀವನದಲ್ಲಿ, ಅವರು ಎರಡು ಆಸ್ಕರ್‌ಗಳು, ಎರಡು ಗೋಲ್ಡನ್ ಗ್ಲೋಬ್‌ಗಳು ಮತ್ತು ಮೂರು ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದರು.

ಇವರು ಮೃತಪಟ್ಟು 20 ವರ್ಷಗಳ ಬಳಿಕ ಇವರು 1940ರ ಸುಮಾರಿಗೆ ಗೆಳತಿಗೆ ಬರೆದಿದ್ದ ಬ್ರೇಕಪ್​ ಲೆಟರ್​ ಸದ್ದು ಮಾಡುತ್ತಿದೆ. ಮರ್ಲಾನ್ ಬ್ರಾಂಡೊ ಅವರು ಬರೆದಿದ್ದ ಈ ಪತ್ರದಲ್ಲಿ ತನ್ನ ಗೆಳತಿಯ (Lover) ಜೊತೆ ಏಕೆ ಬ್ರೇಕಪ್​ ಮಾಡಿಕೊಳ್ಳುತ್ತಿದ್ದೇನೆ ಎಂಬುದಾಗಿ ಅವರು ವಿವರಿಸಿದ್ದಾರೆ. ಫ್ರೆಂಚ್ ನಟಿ ಸೊಲಾಂಜ್ ಪೊಡೆಲ್ ಅವರಿಗೆ ಬರೆದಿರುವ ಬ್ರೇಕಪ್ ಪತ್ರ ಇದಾಗಿದೆ. ನ್ಯೂಯಾರ್ಕ್‌ನಲ್ಲಿ ಎ ಸ್ಟ್ರೀಟ್‌ಕಾರ್ ನೇಮ್ಡ್ ಡಿಸೈರ್ ತಯಾರಿಕೆಯ ಸಮಯದಲ್ಲಿ ಇಬ್ಬರೂ ಭೇಟಿಯಾಗಿದ್ದರು. ನಂತರ ಅವರ ಪ್ರೀತಿ ನಿಧಾನವಾಗಿ ಅರಳಿತು. ಆದರೆ ಸ್ವಲ್ಪ ಸಮಯದ ನಂತರ ಇಬ್ಬರ ನಡುವಿನ ಸಂಬಂಧ ಹಾಳಾಗಿತ್ತು. ಆ ಸಮಯದಲ್ಲಿ ಪತ್ರವೊಂದನ್ನು ಬರೆದಿದ್ದು, ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಬ್ರಾಂಡೊ ಹಾಲಿವುಡ್‌ನಲ್ಲಿ ಪ್ರಚಂಡ ಸ್ಟಾರ್‌ಡಮ್ ಗಳಿಸಿದ್ದರೆ, ಪೊಡೆಲ್ ಛಾಯಾಗ್ರಾಹಕರಾಗಿದ್ದರು. ಇಬ್ಬರ ನಡುವಿನ ಸಂಬಂಧ ಹದಗೆಡುತ್ತಲೇ ಸ್ನೇಹಿತೆಯ ಜೊತೆ ಬ್ರೇಕಪ್​ ಮಾಡಿಕೊಳ್ಳಲು ಬ್ರಾಂಡೊ ನಿರ್ಧರಿಸಿದರು. ಬ್ರಾಂಡೊ ಈ ಪತ್ರದಲ್ಲಿ, 'ದಯವಿಟ್ಟು ಈ ಪತ್ರವನ್ನು ಮುಕ್ತ ಹೃದಯದಿಂದ ಸ್ವೀಕರಿಸು. ಏಕೆಂದರೆ ಮೂರು ಬಾರಿ ಬರೆದಿರುವುದು ಸರಿಯಾಗದೇ, ಬಹಳ ಯೋಚನೆ ಮಾಡಿ ನಾಲ್ಕನೇ ಬಾರಿಗೆ ಪ್ರಾಮಾಣಿಕವಾಗಿ ಬರೆದಿರುವೆ. ಆದ್ದರಿಂದ ನೀನು ನನ್ನನ್ನು ಸಂಪೂರ್ಣ ಬೋರ್ ಎಂದು ಪರಿಗಣಿಸುವುದಿಲ್ಲ ಎಂಬ ವಿಶ್ವಾಸ ನನಗೆ ಇದು. ನಾನು ನಿನಗೆ ನನ್ನ ಬಗ್ಗೆ ವಿವರಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ. ಅವಮಾನವನ್ನು ಬಯಸುವುದಿಲ್ಲ' ಎಂದು ಪತ್ರದಲ್ಲಿ ಬ್ರಾಂಡೊ ತನ್ನ ಗೆಳತಿಗೆ ಕ್ಷಮೆಯಾಚಿಸುವ ಮೂಲಕ ಬ್ರೇಕಪ್​ ಮಾಡಿಕೊಂಡಿದ್ದರು. ನೀನು ಯಾವಾಗಲೂ ವಾತ್ಸಲ್ಯಪೂರ್ವಕವಾಗಿ ಇರುವಾಕೆ. ನಿನ್ನ ಬಗ್ಗೆ ಗೌರವ ಮತ್ತು ಮೆಚ್ಚುಗೆ ಇದೆ. ಅದು ನನ್ನ ಹೃದಯದಲ್ಲಿ ಶಾಶ್ವತವಾಗಿ ಇರಲಿದೆ ಎಂದೂ ಅದರಲ್ಲಿ ಬರೆಯಲಾಗಿದೆ.