Asianet Suvarna News Asianet Suvarna News

ಸಾವಿನ ಸೂಚನೆ ಸಿಗ್ತಿದ್ದಂತೆಯೇ ರಾಮ ಮಂದಿರದ ಉದ್ಘಾಟನೆಗಾಗಿ ಭಜನೆ ರೆಕಾರ್ಡ್​ ಮಾಡಿದ ಲತಾ ದೀದಿ!

ರಾಮನ ಮೇಲೆ ಅಪಾರ ಭಕ್ತಿ ಹೊಂದಿದ್ದ ಲತಾ ಮಂಗೇಶ್ಕರ್​ ಅವರು ರಾಮ ಮಂದಿರ ಉದ್ಘಾಟನೆಯ ದಿನಕ್ಕಾಗಿ ಕೊನೆಯ ದಿನಗಳಲ್ಲಿ ಒಂದಿಷ್ಟು ಹಾಡುಗಳನ್ನು ರಿಕಾರ್ಡ್​ ಮಾಡಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ. 
 

Lata Mangeshkar Record Ram Bhajans For Ayodhya Ram Mandir Inauguration suc
Author
First Published Oct 6, 2023, 7:28 PM IST

ಲತಾ ಮಂಗೇಶ್ಕರ್​... ಭಾರತ ಕಂಡ ಅದ್ವಿತೀಯ ಗಾಯಕಿ. 36 ಭಾಷೆಗಳಲ್ಲಿ 25 ಸಾವಿರ ಹಾಡನ್ನು ಹಾಡಿದ್ದಾರೆ. ‘ನೈಟಿಂಗೇಲ್ ಆಫ್ ಇಂಡಿಯಾ’, ‘ಕ್ವೀನ್ ಆಫ್ ದಿ ಮೆಲೋಡಿ’, ‘ವಾಯ್ಸ್ ಆಫ್ ದಿ ಮಿಲೇನಿಯಮ್’, ‘ವಾಯ್ಸ್ ಆಫ್ ದಿ ನೇಷನ್’ ಸೇರಿ ಹಲವು ಬಿರುದುಗಳಿಂದ ಅವರು ಗುರುತಿಸಿಕೊಂಡಿದ್ದರು. ಹುಡುಗಿಯಾಗಿದ್ದಾಗಿನಿಂದಲೇ ಹಾಡಲು ಶುರು ಮಾಡಿದ್ದ ಲತಾ ಅವರ ಕಂಠ ಅವರ 90ನೇ ವಯಸ್ಸಿನಲ್ಲಿಯೂ ಅಷ್ಟೇ ಸುಮಧುರವಾಗಿತ್ತು ಎಂದರೆ ಅವರ ಕಂಠಸಿರಿ ಅದೆಂಥದ್ದು ಎಂದು ತಿಳಿಯಬಹುದು. 2022ರ ಫೆಬ್ರುವರಿ 6ರಂದು ಈ ಗಾನಕೋಗಿಲೆ ಸಂಗೀತ ಲೋಕದಲ್ಲಿ ಲೀನರಾದರು. ಇದೀಗ  ಅವರ ಕುಟುಂಬದ ಆಪ್ತರಿಂದ ಒಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ಅದೇನೆಂದರೆ, ಲತಾ ದೀದಿ ಅವರು ಕೊನೆಯ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರು ಶ್ರೀರಾಮನ ಭಜನೆ, ಶ್ಲೋಕಗಳನ್ನು ರೆಕಾರ್ಡ್ ಮಾಡಿದ್ದರಂತೆ. ರಾಮ ಮಂದಿರ  ಉದ್ಘಾಟನೆ ವೇಳೆ ತಾವು ಹಾಡಿದ ಶ್ಲೋಕಗಳು, ಭಜನೆಗಳು ಪ್ರಸಾರ ಕಾಣಬೇಕು ಎಂಬುದು ಅವರ ಉದ್ದೇಶವಾಗಿತ್ತು ಎನ್ನಲಾಗಿದೆ.

ಅಂದಹಾಗೆ,  ಅಯೋಧ್ಯೆಯಲ್ಲಿ ಗಾನ ಕೋಗಿಲೆ, ಲತಾ ಮಂಗೇಶ್ಕರ್ ಚೌಕವನ್ನು ಕಳೆದ ವಷ್ಧ ಸೆಪ್ಟೆಂಬರ್​ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು  ಉದ್ಘಾಟಿಸಿದ್ದಾರೆ.  ಈ ಚೌಕವನ್ನು ಅಭಿವೃದ್ಧಿಪಡಿಸಲು ಉತ್ತರ ಪ್ರದೇಶ ಸರ್ಕಾರವು 7.9 ಕೋಟಿ ರೂ. ವೆಚ್ಚ ಮಾಡಿದೆ. ನಾಲ್ಕು ರಸ್ತೆಗಳನ್ನು ಒಂದುಗೂಡಿಸುವ ಈ ಚೌಕದಲ್ಲಿ 40 ಅಡಿ ಉದ್ದ ಹಾಗೂ 12 ಮೀಟರ್ ಎತ್ತರದ ವೀಣೆಯನ್ನು ಪ್ರತಿಷ್ಠಾಪಿಸಲಾಗಿದೆ. ಅಯೋಧ್ಯೆ ನಗರದಲ್ಲಿ ಇದೊಂದು ಆಕರ್ಷಣೀಯ ಚೌಕವಾಗಿ ರೂಪುಗೊಂಡಿದೆ. ಈ ಚೌಕ ಉದ್ಘಾಟನೆ ಕುರಿತು ಮಾತನಾಡಿದ್ದ ಪ್ರಧಾನಿ ನರೇಂದ್ರ  ಮೋದಿಯವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಾಗ ಲತಾ ದೀದಿ ಅವರು ನನಗೆ ಕರೆ ಮಾಡಿದ್ದರು. ಆಗ ಅವರು ಎಮೋಷನಲ್ ಆಗಿದ್ದರು.  ರಾಮ್ ಪೌಡಿ ಮತ್ತು ಸರಯೂ ನದಿಯ ಹತ್ತಿರದಲ್ಲೇ ಲತಾ ಮಂಗೇಶ್ಕರ್ ಚೌಕ ನಿರ್ಮಿಸಲಾಗಿದೆ. ಲತಾ ಚೌಕಕ್ಕೆ ಇದಕ್ಕಿಂತ ಮತ್ತೊಂದು ಉತ್ತಮ ಜಾಗ ಸಿಗಲಾರದು. ಲತಾ ದೀದಿ ಹಾಡಿದ ಭಜನೆಗಳಿಂದಾಗಿ ರಾಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾನೆ ಎಂದು ಹೇಳಿದ್ದರು.

ಬರಿಗಾಲಲ್ಲಿ ನಡೆದು ದೀಕ್ಷೆ ಮುಗಿಸಿದ ಸೂಪರ್​ಸ್ಟಾರ್​ ರಾಮ್​ ಚರಣ್​: ಮುಗಿಬಿದ್ದ ಫ್ಯಾನ್ಸ್​

ಇದೀಗ ಲತಾ ಅವರು ರಾಮ ಮಂದಿರದ ಉದ್ಘಾಟನೆಗಾಗಿ ಶ್ರೀರಾಮನ ಭಜನೆ, ಶ್ಲೋಕಗಳನ್ನು ರೆಕಾರ್ಡ್ ಮಾಡಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ‘ಲತಾ ಅವರಿಗೆ ರಾಮನ ಮೇಲೆ ಅಪಾರ ಅಭಿಮಾನ. ಅವರು ಕೊನೆಯ ದಿನಗಳಲ್ಲಿ ರಾಮ ಭಜನೆ ರೆಕಾರ್ಡ್ ಮಾಡಿದ್ದರು. ಅವರಿಗೆ ಆ ಸಂದರ್ಭದಲ್ಲಿ ನಿಲ್ಲಲ್ಲೂ ಆಗುತ್ತಿರಲಿಲ್ಲ. ಆಗ ಮ್ಯೂಸಿಕ್ ಕಂಪೋಸರ್ ಮಯೂರೇಶ್ ಪೈಗೆ ಮನೆಗೆ ಬರುವಂತೆ ಹೇಳಿದರು. ಕೆಲವು ರಾಮ ಭಜನೆ, ಶ್ಲೋಕಗಳನ್ನು ಆಯ್ಕೆ ಮಾಡಿ ಅವುಗಳನ್ನು ಹಾಡಿ, ರೆಕಾರ್ಡ್ ಮಾಡಿದರು. ರಾಮ ಮಂದಿರ ಉದ್ಘಾಟನೆ ಸಂದರ್ಭಕ್ಕಾಗಿ ಅವರು ಇದನ್ನು ರೆಕಾರ್ಡ್ ಮಾಡಿದ್ದರು. ರಾಮ ಮಂದಿರ ಉದ್ಘಾಟನೆ ವೇಳೆ ಇದನ್ನು ಪ್ರಸಾರ ಮಾಡಬೇಕು ಎಂಬುದು ಅವರ ಉದ್ದೇಶ ಆಗಿತ್ತು’ ಎಂದು ಬಾಲಿವುಡ್ ಸಂಗೀತಗಾರ ಮಯೂರೇಶ್ ಪೈ ಹೇಳಿದ್ದಾರೆ. 

ಈ ಕುರಿತು ಇನ್ನಷ್ಟು ಮಾಹಿತಿ ನೀಡಿರುವ ಅವರು,  ರಾಮ ಮಂದಿರದಲ್ಲಿ ತಮ್ಮ ಧ್ವನಿ ಕೇಳಬೇಕು ಎಂಬುದು ಲತಾ ಅವರ ಆಸೆ ಆಗಿತ್ತು. ಈ ಕಾರಣಕ್ಕೆ ಆರೋಗ್ಯ ಕೈ ಕೊಡುತ್ತಿದ್ದ ಸಂದರ್ಭದಲ್ಲೇ ರೆಕಾರ್ಡಿಂಗ್ ಶುರುಮಾಡಿದ್ದರು. ನಾನು ನೋಡಿದ ಧೈರ್ಯವಂತ ಮಹಿಳೆ ಅವರು ಎಂದರು.  ಅಂದಹಾಗೆ, 2024ರ ಜನವರಿ ತಿಂಗಳಲ್ಲಿ ರಾಮ ಮಂದಿರ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಈ ವಿಶೇಷ ಸಂದರ್ಭಕ್ಕಾಗಿ ಲತಾ ಮಂಗೇಶ್ಕರ್ ಅವರು ಭಜನೆಗಳನ್ನು ಸಿದ್ಧಪಡಿಸಿಟ್ಟಿದ್ದರು. ರಾಮ ಮಂದಿರ ಉದ್ಘಾಟನೆಯನ್ನು ನೋಡುವ ಭಾಗ್ಯ ಲತಾ ದೀದಿ ಅವರಿಗೆ ಇಲ್ಲವಾದರೂ ಅವರ ಕಂಠಸಿರಿಯಿಂದ ಮೂಡಿಬಂದ ರಾಮ ನಾಮವನ್ನು ಕೇಳುವ ಭಾಗ್ಯ ಕೋಟ್ಯಂತರ ಶ್ರೋತ್ರುಗಳಿಗೆ ಸಿಗಲಿದೆ ಎನ್ನುವುದೇ ಖುಷಿಯ ಸಮಾಚಾರ. 

ನಕ್ಷತ್ರಕ್ಕೆ ಸಾನ್ಯಾ ಅಯ್ಯರ್​ ಹೆಸರು: ಪುನೀತ್​, ಸುದೀಪ್​ ಬಳಿಕ ನಟಿಗೆ ಫ್ಯಾನ್ಸ್​ ಗೌರವ

Follow Us:
Download App:
  • android
  • ios