ದರ್ಶನ್‌ (Darshan) ನಟನೆಯ ಡೆವಿಲ್‌ ಸಿನಿಮಾ (Devil movie) ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ನಡುವೆ ಕಿಚ್ಚ ಸುದೀಪ್‌ (Kichcha Sudeep) ದರ್ಶನ್‌ ಅವರ ಡೆವಿಲ್‌ ಲುಕ್‌ ನೋಡುತ್ತಿರುವ ಫೋಟೋ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಅಂದ್ರೆ  ಇಬ್ಬರ ಹಳೆಯ ಸ್ನೇಹ ಮತ್ತೆ ಮುಂದುವರಿಯುತ್ತಾ?

ಒಂದು ಕಡೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್ ಡಲ್‌ ಆಗುತ್ತಿರುವ ಅವರ ಲುಕ್‌ಗೆ, ಕಳೆದುಕೊಳ್ತಿರುವ ಚಾರ್ಮ್‌ಗೆ ಸುದ್ದಿಯಾಗುತ್ತಲೇ ಇದ್ದಾರೆ. ಮೊನ್ನೆ ತಾನೆ ವಿಚಾರಣೆಗೆಂದು ಕೋರ್ಟ್‌ಗೆ ಹಾಜರಾದ ಅವರ ಕಳಾಹೀನ ಮುಖ ನೋಡಿದವರು ಇವರಿನ್ನು ಸಿನಿಮಾದಲ್ಲಿ ಮುಂದುವರಿಯೋದು ಸಾಧ್ಯನಾ ಎಂಬರ್ಥದಲ್ಲಿ ಮಾತನಾಡುತ್ತಿರುವುದು ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಆದರೆ ಈ ನಡುವೆ ಸುದೀಪ್‌ ಹಾಗೂ ದರ್ಶನ್‌ ಅವರ ಕಡಿದುಹೋದ ಬಂಧವನ್ನು ಮತ್ತೆ ಬೆಸೆಯುವಂಥಾ ಸಂಗತಿಯೊಂದು ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಅದನ್ನು ನೋಡಿ ಜನ ಸುದೀಪ್‌ ಹಾಗೂ ದರ್ಶನ್‌ ಮತ್ತೆ ಒಂದಾಗ್ತಾರ, ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಈ ಜೋಡಿ ಕಮಾಲ್‌ ಮಾಡುತ್ತಾ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ.

ಒಂದು ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ಕೆಲವು ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಆದರೂ ನಮ್ಮಿಬ್ಬರ ನಡುವೆ ಅಂಥಾದ್ದೇನಿಲ್ಲ, ಕೊಂಚ ಅಂತರ ಇದೆ ಅಷ್ಟೇ ಎಂದು ಸುದೀಪ್ ಹೇಳುತ್ತ ಬರುತ್ತಿದ್ದಾರೆ. ಆದ್ರೆ ಆ ಅಂತರ ಇತ್ತೀಚೆಗೆ ಕಡಿಮೆ ಆಗ್ತಿದೆಯಾ ಎಂಬುದೇ ಇಂಟರೆಸ್ಟಿಂಗ್‌ ವಿಚಾರ.‌

ಸುದೀಪ್‌ ಏನಂದಿದ್ರು?

ಇದಕ್ಕೆ ಪೂರಕವಾಗಿ ಕೆಲವು ಸಮಯದ ಹಿಂದೆ ಸುದೀಪ್‌ ಅವರು ದರ್ಶನ್‌ ಅವರ ಬಗ್ಗೆ ಕೊಂಚ ಮೃದುವಾಗಿ ಮಾತನಾಡಿದ್ದರು. ದರ್ಶನ್‌ ನಟನೆಯ 'ಡೆವಿಲ್‌' ಸಿನಿಮಾದ ಬಗ್ಗೆ ಮಾತನಾಡುತ್ತ, 'ಡೆವಿಲ್' ಚಿತ್ರಕ್ಕೆ ಒಳ್ಳೆದಾಗಲಿ. ಯಾವುದೇ ಚಿತ್ರ ಆದರೂ ಗೆಲ್ಲಬೇಕು. ಅವ್ರ ನೋವು ಅವರಿಗಿರುತ್ತೆ. ಅವ್ರ ಫ್ಯಾನ್ಸ್‌ಗೂ ನೋವಿದೆ. ಇಂತಹ ಸಮಯದಲ್ಲಿ ನಾವು ಮಾತನಾಡುವುದು ತಪ್ಪಾಗುತ್ತದೆ. ವೈಯಕ್ತಿಕವಾಗಿ ಯಾರದ್ದೇ ವಿಚಾರದಲ್ಲಿ ತಲೆ ಹಾಕಲು ನನಗಿಷ್ಟ ಇಲ್ಲ. ಕೆಲವು ವಿಚಾರದಲ್ಲಿ ನಾವು ಮಾತನಾಡುವುದು ತಪ್ಪಾಗುತ್ತದೆ. ಮಾತನಾಡುವುದು ಮತ್ತಷ್ಟು ಕೆಡಿಸಿಬಿಡುತ್ತದೆ. ಖಂಡಿತ ದರ್ಶನ್ ಜೊತೆ ಒಳ್ಳೆ ಕ್ಷಣಗಳನ್ನು ಕಳೆದಿದ್ದೇನೆ, ಬಳಿಕ ಏನಾಯ್ತು, ಅದಕ್ಕೆ ಕಾರಣ ಏನು ಎನ್ನುವುದು ಯಾರಿಗೂ ಬೇಕಾಗಲ್ಲ. ನಮಗೆ ಗೊತ್ತಿರುತ್ತದೆ. ಸೂರ್ಯ, ಚಂದ್ರ ಎರಡೂ ತಮ್ಮ ತಮ್ಮ ಜಾಗದಲ್ಲಿ ಚೆಂದವಾಗಿಯೇ ಇರುತ್ತದೆ' ಎಂದು ಮಾರ್ಮಿಕವಾಗಿ ಹೇಳಿದ್ದರು.

ಇದೀಗ ದರ್ಶನ್‌ ಅವರ 'ಡೆವಿಲ್‌' ಸಿನಿಮಾದ ಲುಕ್‌ ಅನ್ನು ಸುದೀಪ್‌ ತನ್ನ ಮೊಬೈಲ್‌ನಲ್ಲಿ ನೋಡುತ್ತಿರುವ ಫೋಟೋವೊಂದು ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಒಂದಿಷ್ಟು ಮಂದಿ ಸುದೀಪ್‌ ಅವರಿಗೂ ದರ್ಶನ್‌ ಅವರ ಡೆವಿಲ್‌ ಸಿನಿಮಾದ ಬಗ್ಗೆ ಕುತೂಹಲವಿದೆ ಎಂದರೆ, ಇನ್ನೂ ಕೆಲವರು ಇದು ದರ್ಶನ್‌ ಸ್ನೇಹಕ್ಕೆ ಸುದೀಪ್‌ ಎದುರು ನೋಡುತ್ತಿರುವುದನ್ನು ಸೂಚಿಸುತ್ತದೆ ಎಂದಿದ್ದಾರೆ.

ಆದರೆ ಈ ಬಗ್ಗೆ ಸರ್ಚ್‌ ಮಾಡಿ ನೋಡಿದಾಗ ಇದೊಂದು ಹಳೆಯ ಫೋಟೋ, ಇದರಲ್ಲಿ ಸುದೀಪ್‌ ಬೇರೇನನ್ನೋ ನೋಡುತ್ತಿದ್ದಾರೆ ಅನ್ನೋದು ಗೊತ್ತಾಗಿದೆ. ಎಐ ಮೂಲಕ ಜಾಣ ಸಿನಿಪ್ರೇಮಿಗಳು ದರ್ಶನ್‌ ಅವರ ಡೆವಿಲ್‌ ಸಿನಿಮಾದ ಲುಕ್‌ ಅನ್ನು ಸುದೀಪ್‌ ನೋಡುವಂತೆ ಎಡಿಟ್‌ ಮಾಡಿದ್ದಾರೆ.

ಇದು ಈ ಕ್ಷಣಕ್ಕೆ ಈ ಇಬ್ಬರೂ ಸ್ಟಾರ್‌ ನಟರ ಅಭಿಮಾನಿಗಳಿಗೆ ನಿರಾಸೆ ಮೂಡಿದೆ. ಆದರೆ ಇತ್ತೀಚೆಗೆ ಈ ಇಬ್ಬರು ನಟರೂ ಪರಸ್ಪರರ ಬಗ್ಗೆ ಕಟುವಾಗಿ ಮಾತನಾಡುತ್ತಿಲ್ಲ. ಇಬ್ಬರಿಗೂ ಇಬ್ಬರ ಬಗ್ಗೆ ಮೃದು ಧೋರಣೆ ಇದೆ. ಹೀಗಾಗಿ ಈ ಫೋಟೋ ಫೇಕ್‌ ಆದರೂ ಇದರಲ್ಲಿರುವ ಭಾವನೆ ಆದಷ್ಟು ಬೇಗ ಸತ್ಯವಾಗಲಿ ಅಂತ ಒಂದಿಷ್ಟು ಮಂದಿ ಸಜ್ಜನ ಸಿನಿಮಾ ಪ್ರೇಮಿಗಳು ಹಾರೈಸುತ್ತಿದ್ದಾರೆ. ಇನ್ನೊಂದೆಡೆ ದರ್ಶನ್‌ ಜೈಲುವಾಸದ ನಡುವೆಯೂ ಅವರ ನಟನೆಯ 'ಡೆವಿಲ್‌' ಸಿನಿಮಾ ಡಿಸೆಂಬರ್‌ ಮೊದಲ ಭಾಗದಲ್ಲಿ ತೆರೆಗೆ ಅಪ್ಪಳಿಸಲಿದೆ.