KGF 2 ಬಿಡುಗಡೆ ಬೆನ್ನಲ್ಲೇ ಪ್ರಶಾಂತ್ ನೀಲ್ 'ಸಲಾರ್' ಚಿತ್ರದಿಂದ ಬಂತು ಭರ್ಜರಿ ಸುದ್ದಿ
ಕನ್ನಡದ ಪ್ರತಿಷ್ಟಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್-2 ಬಿಡುಗಡೆ ಬೆನ್ನಲ್ಲೇ ಇದೀಗ ಮತ್ತೊಂದು ಸಿನಿಮಾದ ಅಪ್ ಡೇಟ್ ಹೊರಬಿದ್ದಿದೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಟೀಸರ್ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಕನ್ನಡದ ಪ್ರತಿಷ್ಟಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್(Hombale Films) ಸದ್ಯ ಕೆಜಿಎಫ್-2(KGF 2) ಸಿನಿಮಾ ಸಂಭ್ರಮದಲ್ಲಿದೆ. ವಿಶ್ವದಾದ್ಯಂತ ಕೆಜಿಎಫ್-2 ಸಿನಿಮಾದೆ ಸದ್ದು. ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಕೆಜಿಎಫ್-2 ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಹಿಂದಿ ಭಾಗದಲ್ಲಿ ದಾಖಲೆ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ಮಂದಿಗೆ ಕೆಜಿಎಫ್-2 ಶಾಕ್ ನೀಡಿದೆ. ಕೆಜಿಎಫ್-2 ಸಿನಿಮಾ ಸಂಭ್ರಮಾಚರಣೆಯ ನಡುವೆ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಬಹುನಿರೀಕ್ಷೆಯ ಸಿನಿಮಾದ ಅಪ್ ಡೇಟ್ ನೀಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮತ್ತೊಂದು ನಿರೀಕ್ಷೆಯ ಸಿನಿಮಾ ಸಲಾರ್. ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್(Prashanth Neel) ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಬಾಹುಬಲಿ ಸ್ಟಾರ್ ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿರುವ ಸಲಾರ್ ಸಿನಿಮಾದ ಟೀಸರ್ ಬಿಡುಗಡೆ ಬಗ್ಗೆ ಹೊಸ ಮಾಹಿತಿ ಬಹಿರಂಗವಾಗಿದೆ. ಅಂದಹಾಗೆ ಬಹುನಿರೀಕ್ಷೆಯ ಸಲಾರ್ ಚಿತ್ರದ ಟೀಸರ್ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಮೇ ತಿಂಗಳ ಕೊನೆಯ ವಾರದಲ್ಲಿ ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ವೈರಲ್ ಆಗಿದೆ.
ಈ ಬಗ್ಗೆ ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. 'ಸಲಾರ್ ಟೀಸರ್ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಕೆಜಿಎಫ್ ಮತ್ತು ಕೆಜಿಎಫ್2 ಸಿನಿಮಾ ನಿರ್ಮಾಣ ಮಾಡಿದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಪ್ಯಾನ್ ಇಂಡಿಯಾ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದಾರೆ. ಮೇ ತಿಂಗಳ ಕೊನೆಯವಾರದಲ್ಲಿ ಟೀಸರ್ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ' ಎಂದು ಹೇಳಿದ್ದಾರೆ.
'ಸಲಾರ್' ರಿಮೇಕ್ ಸಿನಿಮಾನಾ, ಪಾರ್ಟ್-2 ಕೂಡ ಬರ್ತಿದ್ಯಾ?, ಪ್ರಶಾಂತ್ ನೀಲ್ ಪ್ರತಿಕ್ರಿಯೆ
ಈಗಾಗಲೇ ಸಲಾರ್ ಸಿನಿಮಾ ಚಿತ್ರೀಕರಣ 30ರಷ್ಟು ಮುಗಿಸಿದ್ದಾರೆ. ಸಲಾರ್ ಕನ್ನಡ ಉಗ್ರಂ ಸಿನಿಮಾದ ರಿಮೇಕ್ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಪ್ರಶಾಂತ್ ಇತ್ತೀಚಿಗಷ್ಟೆ ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದರು. ಕೆಜಿಎಫ್2 ಪ್ರಚಾರದ ವೇಳೆ ಮಾತನಾಡಿದ್ದ ಪ್ರಶಾಂತ್ ನೀಲ್, ನಾನು ಮಾಡುವ ಎಲ್ಲಾ ಸಿನಿಮಾಗಳಲ್ಲಿ ಉಗ್ರಂನ ಕೆಲವು ಛಾಯೆಗಳನ್ನು ಹೊಂದಿರುತ್ತದೆ. ಅದು ನನ್ನ ಶೈಲಿ. ಆದರೆ ಸಲಾರ್ ಒಂದು ತಾಜಾ ಕಥೆ. ಇದು ಉಗ್ರಂ ರಿಮೇಕ್ ಅಥವಾ ರೂಪಾಂತರವಲ್ಲ ಎಂದು ಹೇಳಿದ್ದರು.
ಇನ್ನು ಸಲಾರ್ ಸಿನಿಮಾ ಪಾರ್ಟ್-1 ಮತ್ತು ಪಾರ್ಟ್-2 ಆಗಿ ಬಿಡುಗಡೆಯಾಗುತ್ತಿದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ಬಗ್ಗೆ ಕೂಡ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಮಯದಲ್ಲಿ ಸಲಾರ್ ಸಿನಿಮಾವನ್ನು ಪಾರ್ಟ್-1 ಮತ್ತು ಪಾರ್ಟ್-2 ಮಾಡುವ ಬಗ್ಗೆ ಪ್ಲಾನ್ ಮಾಡಿಲ್ಲ ಎಂದು ಹೇಳಿದ್ದರು.
KGF 2 ಮುಂದೆ ಯಾವ ಬಾಹುಬಲೀನೂ ಇಲ್ಲ, ಕೊನೆಯ ಟ್ವಿಸ್ಟ್ ನೋಡಿದ್ರೆ KGF 3 ಪಕ್ಕಾ! ಸಿನಿಮಾ ಹೈಲೈಟ್ಸ್ ಏನು?
ಸದ್ಯ ಶೇ 30ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಉಳಿದ ಭಾಗವನ್ನು ಈ ವರ್ಷದ ಅಂತ್ಯದಲ್ಲೇ ಮುಕ್ತಾಯಗೊಳಿಸಿ ಮುಂದಿನ ವರ್ಷ ಬೇಸಿಗೆ ಸಮಯದಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ ಸಿನಿಮಾತಂಡ. ಅಂದಹಾಗೆ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಬಳಿ ಸಾಲು ಸಾಲು ಸಿನಿಮಾಗಳಿವೆ. ರಾಧೆ ಶ್ಯಾಮ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಪ್ರಭಾಸ್ ಆದಿಪುರುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಾಗ್ ಅಶ್ವಿನ್ ಅವರ ಸಿನಿಮಾ ಕೂಡ ಕೈಯಲ್ಲಿದೆ. ಈ ಎಲ್ಲಾ ಸಿನಿಮಾಗಳ ಜೊತೆಗೆ ಪ್ರಭಾಸ್, ಪ್ರಶಾಂತ್ ನೀಲ್ ಜೊತೆ ಸಲಾರ್ ಕೂಡ ಮಾಡುತ್ತಿದ್ದಾರೆ. ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಬಳಿಕ ಜೂ.ಎನ್ ಟಿ ಆರ್ ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ.