RRR ಮತ್ತು ಕಾಶ್ಮೀರ್ ಫೈಲ್ಸ್ ನೋಡಿದ್ರಾ ಯಶ್?, ರಾಕಿಂಗ್ ಸ್ಟಾರ್ ಉತ್ತರವೇನು?
ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಈ ವರ್ಷದ 2 ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಾದ ಆರ್ ಆರ್ ಆರ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣ ಈ ಎರಡು ಸಿನಿಮಾಗಳನ್ನು ವೀಕ್ಷಿಸಿಲ್ಲ ಎಂದು ಹೇಳಿದ್ದಾರೆ.
ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಪ್ಯಾನ್ ಇಂಡಿಯಾ ಹೀರೋ ಯಶ್(Yash) ಸದ್ಯ ಬಹುನಿರೀಕ್ಷೆಯ ಕೆಜಿಎಫ್-2(KGF 2) ಸಿನಿಮಾ ಬಿಡುಗಡೆಯ ತಯಾರಿಯಲ್ಲಿದ್ದಾರೆ. ವಿಶ್ವದಾದ್ಯಂತ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಕೆಜಿಎಫ್-2 ಸಿನಿಮಾ ಏಪ್ರಿಲ್ 14ರಂದು(April 14) ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದು, ಉತ್ತರ ಭಾರತದ ಕಡೆ ಪಯಣ ಬೆಳೆಸಿದೆ. ಆಂಗ್ಲ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ಸಿನಿಮಾತಂಡದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಂದರ್ಶನದ ವೇಳೆ ರಾಕಿಂಗ್ ಸ್ಟಾರ್ ಯಶ್ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಾದ ಆರ್ ಆರ್ ಆರ್(RRR) ಮತ್ತು ದಿ ಕಾಶ್ಮೀರ್ ಫೈಲ್ಸ್(The Kashmir Files) ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿರುವ ಈ ಎರಡು ಸಿನಿಮಾಗಳನ್ನು ಇನ್ನು ನೋಡಿಲ್ಲ ಎಂದು ಯಶ್ ಹೇಳಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಯಶ್ ಇತ್ತೀಚಿನ ಎರಡು ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳನ್ನು ನೋಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ರಾಕಿಂಗ್ ಸ್ಟಾರ್, 'ನಾನು ಇನ್ನೂ ಆರ್ ಆರ್ ಆರ್ ಅಥವಾ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ವೀಕ್ಷಿಸಿಲ್ಲ. ನೋಡಲು ಇಷ್ಟಪಡುತ್ತೇನೆ. ಆದರೀಗ ಕೆಜಿಎಫ್ 2 ಪ್ರಚಾರದಲ್ಲಿ ಬ್ಯುಸಿಯಾಗಿದ್ದೇನೆ. ಸಿನಿಮಾ ನೋಡಲು ಸಮಯವಿಲ್ಲ. ಈಗ ಕೆಜಿಎಫ್ ಅನ್ನು ಮಾತ್ರ ನೋಡುತ್ತಿದ್ದೇನೆ' ಎಂದು ಹೇಳಿದರು.
ಇದೇ ಸಮಯದಲ್ಲಿ ಯಶ್ ಬಾಲಿವುಡ್ ವರ್ಸಸ್ ಪ್ರಾದೇಶಿಕ ಸಿನಿಮಾ ಚರ್ಚೆಯ ಬಗ್ಗೆಯೂ ಮಾತನಾಡಿದರು. 'ಬಾಲಿವುಡ್ ವರ್ಸಸ್ ಪ್ರಾದೇಶಿಕ ಸಿನಿಮಾ ಚರ್ಚೆ ಎನ್ನುವುದು ಹಳೆಯದು. ಪ್ರೇಕ್ಷಕರು ವಿಕಸನಗೊಂಡಿದ್ದಾರೆ, ನಾವು ಮುಂದುವರೆಯಬೇಕು. ಇದು ಡಬ್ಬಿಂಗ್ ಸಿನಿಮಾ ಎಂದು ಹೇಳಿದರೆ ನನಗೆ ಇಷ್ಟವಾಗುವುದಿಲ್ಲ. ಡಬ್ಬಿಂಗ್ ಮಾಡಲು ಸಹ ಪ್ರಯತ್ನ ಪಡಲಾಗುತ್ತಿದೆ. ಇದು ಬಹುಭಾಷೆೆಗಳಲ್ಲಿ ಲಭ್ಯವಿರುವ ಭಾರತೀಯ ಸಿನಿಮಾವಾಗಿದೆ' ಎಂದಿದ್ದಾರೆ.
KGF 2; ದೆಹಲಿ ಬಳಿಕ ಮುಂಬೈನಲ್ಲಿ ಯಶ್, ಸಂಜಯ್ ದತ್, ರವೀನಾ ಭರ್ಜರಿ ಪ್ರಚಾರ
ಇನ್ನು ಆರ್ ಆರ್ ಆರ್ ಮತ್ತು ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಹೇಳುವುದಾದರೆ, ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ. ಕಡಿಮೆ ಬಜೆಟ್ ನಲ್ಲಿ ಬಂದ ಈ ಸಿನಿಮಾ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. 90ರ ದಶಕದಲ್ಲಿ ಕಾಶ್ಮೀರ ಪಂಡಿತರ ಹತ್ಯೆ ಮತ್ತು ದೌರ್ಜನ್ಯದ ಬಗ್ಗೆ ಇರುವ ಸಿನಿಮಾವಾಗಿದೆ. ಈ ಸಿನಿಮಾಗೆ ಪ್ರೇಕ್ಷಕರ ಜೊತೆಗೆ ಅನೇಕ ಗಣ್ಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ವಿವೇಕ್ ಅಗ್ನಿಹೋತ್ರಿ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ.
ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ನಟನೆಯ ಆರ್ ಆರ್ ಆರ್ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರ್ಚ್ 25ರಂದು ತೆರೆಗೆ ಬಂದಿರುವ ಈ ಸಿನಿಮಾ ಈಗಾಗಲೇ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ 1000 ಕೋಟಿಯತ್ತ ಮುನ್ನುಗ್ಗುತ್ತಿದೆ.
ಟಿಕೆಟ್ ಬುಕ್ಕಿಂಗ್‌ನಲ್ಲೂ ದಾಖಲೆ ಮಾಡಿದ ಕೆಜಿಎಫ್ ಚಾಪ್ಟರ್ 2!
ಎರಡು ಸೂಪರ್ ಹಿಟ್ ಸಿನಿಮಾಗಳ ಬಳಿಕ ದಕ್ಷಿಣ ಭಾರತ ಸಿನಿಮಾರಂಗದಿಂದ ಕೆಜಿಎಫ್-2 ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್-2 ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.