"ನನ್ನಿಂದ ಈ ಏಡಿ ಸ್ಟೈಲ್ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ. ದಯವಿಟ್ಟು ಕ್ಯಾಮರಾವನ್ನು ಇಲ್ಲಿ ಕ್ಲೋಸ್-ಅಪ್ ಆಗಿ ಇಡಿ, ನಾನು ಕೇವಲ ಎಕ್ಸ್‌ಪ್ರೆಶನ್ ಕೊಡುತ್ತೇನೆ" ಎಂದು ಕರೀನಾ ಪಟ್ಟು ಹಿಡಿದಿದ್ದರಂತೆ. ಕರೀನಾ ಮಾತು ಕೇಳಿ ಕರಣ್ ಮತ್ತು ಫರಾ ಇಬ್ಬರಿಗೂ ಏನು ಮಾಡಬೇಕೆಂದು ತೋಚಲಿಲ್ಲ. ಕೊನೆಗೆ ಏನಾಯ್ತು?

"ನನ್ನಿಂದ ಆ ಏಡಿ ಡ್ಯಾನ್ಸ್ ಸಾಧ್ಯವೇ ಇಲ್ಲ!": 'ಪೂ' ಹಠಕ್ಕೆ ಮಣಿದಿದ್ದರೇ ಕರಣ್ ಜೋಹರ್? 23 ವರ್ಷದ ನಂತರ ಹೊರಬಂತು ಆ ರಹಸ್ಯ!

ಬಾಲಿವುಡ್ ಇತಿಹಾಸದಲ್ಲಿ 'ಕಭಿ ಖುಷಿ ಕಭಿ ಗಮ್' (K3G) ಒಂದು ಮೈಲಿಗಲ್ಲು. 2001ರಲ್ಲಿ ತೆರೆಕಂಡ ಈ ಸಿನಿಮಾ ಇಂದಿಗೂ ತನ್ನ ಹಾಡುಗಳು, ಸ್ಟೈಲ್ ಮತ್ತು ಕಲಾವಿದರ ನಟನೆಯಿಂದ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಅದರಲ್ಲೂ ಕರೀನಾ ಕಪೂರ್ ನಿರ್ವಹಿಸಿದ 'ಪೂ' ಪಾತ್ರವಂತೂ ಎವರ್‌ಗ್ರೀನ್. ಆದರೆ, ಈ ಸಿನಿಮಾದ ಸೂಪರ್ ಹಿಟ್ ಹಾಡು ‘ಯೂ ಆರ್ ಮೈ ಸೋನಿಯಾ’ (You Are My Soniya) ಚಿತ್ರೀಕರಣದ ವೇಳೆ ನಡೆದ ಒಂದು ತಮಾಷೆಯ ಘಟನೆಯನ್ನು ನಿರ್ದೇಶಕ ಕರಣ್ ಜೋಹರ್ ಈಗ ಬಿಚ್ಚಿಟ್ಟಿದ್ದಾರೆ.

ಏನದು 'ಕೇಕಡಾ' (ಏಡಿ) ಸ್ಟೈಲ್ ಡ್ಯಾನ್ಸ್?

ಕರಣ್ ಜೋಹರ್ ಇತ್ತೀಚೆಗೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಹಾಡಿನ ಚಿತ್ರೀಕರಣದ ವೇಳೆ ನೃತ್ಯ ನಿರ್ದೇಶಕಿ ಫರಾ ಖಾನ್ ಅವರು ತುಂಬಾ ಕಷ್ಟದ ಮತ್ತು ವಿಶಿಷ್ಟವಾದ ಸ್ಟೆಪ್ಸ್‌ಗಳನ್ನು ಸಿದ್ಧಪಡಿಸಿದ್ದರು. ಅದರಲ್ಲೂ ಹೃತಿಕ್ ರೋಷನ್ ಅವರ ವೇಗಕ್ಕೆ ತಕ್ಕಂತೆ ಕಾಲುಗಳನ್ನು ಏಡಿಯಂತೆ (Kekda Style) ಚಲಿಸುವ ನೃತ್ಯ ಅದಾಗಿತ್ತು. ಈ ಸ್ಟೆಪ್ ಅನ್ನು ನೋಡಿದ ಕೂಡಲೇ ಕರೀನಾ ಕಪೂರ್ ಅಕ್ಷರಶಃ ಕೆರಳಿ ಕೆಂಡವಾಗಿದ್ದರಂತೆ!

"ನನ್ನಿಂದ ಈ ಏಡಿ ಸ್ಟೈಲ್ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ. ದಯವಿಟ್ಟು ಕ್ಯಾಮರಾವನ್ನು ಇಲ್ಲಿ ಕ್ಲೋಸ್-ಅಪ್ ಆಗಿ ಇಡಿ, ನಾನು ಕೇವಲ ಎಕ್ಸ್‌ಪ್ರೆಶನ್ ಕೊಡುತ್ತೇನೆ" ಎಂದು ಕರೀನಾ ಪಟ್ಟು ಹಿಡಿದಿದ್ದರಂತೆ. ಕರೀನಾ ಮಾತು ಕೇಳಿ ಕರಣ್ ಮತ್ತು ಫರಾ ಇಬ್ಬರಿಗೂ ಏನು ಮಾಡಬೇಕೆಂದು ತೋಚಲಿಲ್ಲ. ಕೊನೆಗೆ ಕರೀನಾ ಇಷ್ಟದಂತೆಯೇ ಹಾಡಿನ ಚಿತ್ರೀಕರಣ ಮಾಡಲಾಯಿತು. ನೀವು ಆ ಹಾಡನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹೃತಿಕ್ ರೋಷನ್ ಅವರು ಕಾಲುಗಳಿಂದ ಕಠಿಣವಾದ ಸ್ಟೆಪ್ಸ್ ಮಾಡುತ್ತಿದ್ದರೆ, ಕರೀನಾ ಕೇವಲ ಕೈಗಳ ಮೂವ್‌ಮೆಂಟ್ ಮತ್ತು ಕ್ಲೋಸ್-ಅಪ್ ಶಾಟ್‌ಗಳ ಮೂಲಕ ಸಿನಮಾದಲ್ಲಿ ಮಿಂಚಿದ್ದಾರೆ. "ಅವಳು ಕ್ಯಾಮರಾವನ್ನೇ ತನ್ನ ಸೋನಿಯಾ ಎಂದು ಭಾವಿಸಿ ಹಾಡುತ್ತಿದ್ದಳು, ಎದುರಿಗಿದ್ದ ಹೃತಿಕ್‌ನನ್ನಲ್ಲ" ಎಂದು ಕರಣ್ ನಗುತ್ತಾ ನೆನಪಿಸಿಕೊಂಡಿದ್ದಾರೆ.

'ಬೋಲೆ ಚೂಡಿಯಾ' ಮತ್ತು ಬಜೆಟ್ ಗದ್ದಲ:

ಕೇವಲ ಕರೀನಾ ಅವರ ಡ್ಯಾನ್ಸ್ ಮಾತ್ರವಲ್ಲ, ಸಿನಿಮಾದ ಮತ್ತೊಂದು ಹಿಟ್ ಹಾಡು ‘ಬೋಲೆ ಚೂಡಿಯಾ’ (Bole Chudiyan) ಚಿತ್ರೀಕರಣದ ವೇಳೆಯೂ ದೊಡ್ಡ ರಂಪಾಟವೇ ನಡೆದಿತ್ತು. ಈ ಹಾಡಿಗೆ ಸುಮಾರು 3 ಕೋಟಿ ರೂಪಾಯಿ ಬಜೆಟ್ ನಿಗದಿಪಡಿಸಲಾಗಿತ್ತು. ಆದರೆ ಸೆಟ್ ಹಾಕುವಷ್ಟರಲ್ಲೇ ಹಣವೆಲ್ಲ ಖಾಲಿಯಾಗಿತ್ತು! ಶೂಟಿಂಗ್ ವೇಳೆ ಅತೀವ ಒತ್ತಡದಿಂದಾಗಿ ನಿರ್ದೇಶಕ ಕರಣ್ ಜೋಹರ್ ಸೆಟ್‌ನಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅತ್ತ ಕಾಜೋಲ್ ಅವರಿಗೆ ತನ್ನ ಲೆಹೆಂಗಾ ಭಾರವಾಗಿದ್ದರಿಂದ ಡ್ಯಾನ್ಸ್ ಮಾಡಲು ಕಷ್ಟವಾಗುತ್ತಿತ್ತು. ಸೆಟ್‌ನಲ್ಲಿ 200 ನೃತ್ಯಗಾರರು ಮತ್ತು 300 ಜೂನಿಯರ್ ಆರ್ಟಿಸ್ಟ್‌ಗಳ ನಡುವೆ ದೊಡ್ಡ ಗೊಂದಲವೇ ಏರ್ಪಟ್ಟಿತ್ತು.

ಕೊನೆಗೆ ಪರಿಸ್ಥಿತಿಯನ್ನು ನೋಡಿದ ನಿರ್ಮಾಪಕ ಯಶ್ ಜೋಹರ್ ಅವರು ಬಜೆಟ್ ಲೆಕ್ಕದ ಕಾಗದವನ್ನು ಹರಿದು ಹಾಕಿ, "ಹಣದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಸಿನಿಮಾವನ್ನು ಅದ್ಧೂರಿಯಾಗಿ ಮಾಡಿ" ಎಂದು ಧೈರ್ಯ ತುಂಬಿದರಂತೆ.

ಅಜರಾಮರ ಸಿನಿಮಾ:

ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಶಾರುಖ್ ಖಾನ್, ಕಾಜೋಲ್, ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಅಂತಹ ದೈತ್ಯ ತಾರಾಗಣವಿದ್ದ ಈ ಸಿನಿಮಾ ಇಂದಿಗೂ ಫ್ಯಾಮಿಲಿ ಡ್ರಾಮಾಗಳಿಗೆ ಮಾದರಿಯಾಗಿದೆ. ತೆರೆಮರೆಯ ಇಂತಹ ಸಣ್ಣಪುಟ್ಟ ಕತೆಗಳು ಈಗ ಹೊರಬರುತ್ತಿದ್ದು, ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುತ್ತಿವೆ. ಕರೀನಾ ಅಂದು ಹಠ ಹಿಡಿದು ಆ ಡ್ಯಾನ್ಸ್ ಮಾಡದಿದ್ದರೂ, ಇಂದಿಗೂ ‘ಪೂ’ ಪಾತ್ರದ ಸ್ಟೈಲ್ ಮತ್ತು ಆ ಹಾಡು ಜನರ ಅಚ್ಚುಮೆಚ್ಚಿನ ಪಟ್ಟಿಯಲ್ಲಿದೆ.