2025ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಕನ್ನಡದ 'ಸು ಫ್ರಮ್ ಸೋ' ಚಿತ್ರವು ಈಗ 'ತುಂಬಾಡ್ಚಿ ಮಂಜುಳಾ' ಎಂಬ ಹೆಸರಿನಲ್ಲಿ ಮರಾಠಿ ಭಾಷೆಗೆ ಅಧಿಕೃತವಾಗಿ ರಿಮೇಕ್ ಆಗಿದೆ. ಜೀ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಮರಾಠಿಯ ಖ್ಯಾತ ತಾರಾಗಣವಿದ್ದು, ಜೂನ್ 5 ರಂದು ಬಿಡುಗಡೆಯಾಗಲಿದೆ.

ಮುಂಬೈ (ಮೇ.25): ಒಂದು ಕಾಲದಲ್ಲಿ ಪರಭಾಷೆಯ ಸಿನಿಮಾಗಳು ಸಾಲು ಸಾಲಾಗಿ ಕನ್ನಡಕ್ಕೆ ರಿಮೇಕ್ ಆಗುತ್ತಿದ್ದ ದಿನಗಳಿದ್ದವು. ಆದರೆ ಈಗ ಕಾಲ ಬದಲಾಗಿದೆ. ಸ್ಯಾಂಡಲ್‌ವುಡ್‌ನ ವಿಶಿಷ್ಟ ಕಂಟೆಂಟ್ ಆಧಾರಿತ ಸಿನಿಮಾಗಳು ಪರಭಾಷೆಗಳಿಗೆ ರಿಮೇಕ್ ಆಗುತ್ತಿರುವುದು ಚಂದನವನದ ಚಿತ್ರಪ್ರೇಮಿಗಳು ಹೆಮ್ಮೆಪಡುವ ಸಂಗತಿಯಾಗಿದೆ. ಈ ಸಾಲಿಗೆ ಈಗ ಹೊಸ ಸೇರ್ಪಡೆ, ಕಳೆದ 2025ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಕನ್ನಡದ ಸೂಪರ್ ಹಿಟ್ ಸಿನಿಮಾ 'ಸು ಫ್ರಮ್ ಸೋ' (Su From So). ಈ ಚಿತ್ರವೀಗ ಅಧಿಕೃತವಾಗಿ ಮರಾಠಿ ಭಾಷೆಗೆ ರಿಮೇಕ್ ಆಗಿದ್ದು, ಬಿಡುಗಡೆಗೆ ಸಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖ್ಯಾತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ನಿರ್ಮಾಣದಲ್ಲಿ ಹಾಗೂ ಜೆ.ಪಿ. ತುಮಿನಾಡ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಸು ಫ್ರಮ್ ಸೋ' ಸಂಪೂರ್ಣ ಕಾಮಿಡಿ ಜಾನರ್‌ನ ಸಿನಿಮಾವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆ ಮಾಡಿದ್ದ ಈ ಚಿತ್ರ, ಸಿನೆಮಾದ ಗೆಲುವಿಗೆ ಕೋಟಿ ಕೋಟಿ ಬಜೆಟ್ ಅಥವಾ ದೊಡ್ಡ ಸ್ಟಾರ್ ಕಾಸ್ಟ್‌ಗಿಂತಲೂ ಗಟ್ಟಿಯಾದ 'ಕಂಟೆಂಟ್' ಮುಖ್ಯ ಎಂಬುದನ್ನು ಸಾಬೀತುಪಡಿಸಿತ್ತು. ಕನ್ನಡ ಮಾತ್ರವಲ್ಲದೆ ಮಾಲಿವುಡ್ (ಮಲಯಾಳಂ) ಮತ್ತು ಟಾಲಿವುಡ್ (ತೆಲುಗು) ಪ್ರೇಕ್ಷಕರನ್ನೂ ನಗಿಸಿ ಗೆದ್ದಿದ್ದ ಈ ಚಿತ್ರವೀಗ ಮರಾಠಿ ವೀಕ್ಷಕರನ್ನು ರಂಜಿಸಲು ಸಜ್ಜಾಗಿದೆ.

'ತುಂಬಾಡ್ಚಿ ಮಂಜುಳಾ' ಟೈಟಲ್‌ನಲ್ಲಿ ಮರಾಠಿ ರಿಮೇಕ್; ಟ್ರೇಲರ್ ಹಿಟ್

ಮರಾಠಿ ಭಾಷೆಗೆ ರಿಮೇಕ್ ಆಗಿರುವ ಈ ಚಿತ್ರಕ್ಕೆ 'ತುಂಬಾಡ್ಚಿ ಮಂಜುಳಾ' (Tumbadchi Manjula) ಎಂದು ನಾಮಕರಣ ಮಾಡಲಾಗಿದೆ. ವಿಶೇಷವೆಂದರೆ, ಇದು ಕನ್ನಡದ ರಿಮೇಕ್ ಆದರೂ ಕೂಡ ಚಿತ್ರದಲ್ಲಿ ಸಂಪೂರ್ಣವಾಗಿ ಮರಾಠಿ ಚಿತ್ರರಂಗದ ಹೆಸರಾಂತ ಕಲಾವಿದರೇ ಬಣ್ಣ ಹಚ್ಚಿದ್ದಾರೆ. ನಾಲ್ಕು ದಿನಗಳ ಹಿಂದೆ ಬಿಡುಗಡೆಯಾಗಿರುವ ಈ ಚಿತ್ರದ ಅಧಿಕೃತ ಟ್ರೇಲರ್ ಭಾರಿ ಗಮನ ಸೆಳೆದಿದ್ದು, ಹಾರರ್ ಮತ್ತು ಕಾಮಿಡಿ ಸಮ್ಮಿಶ್ರಣದ ಝಲಕ್ ನೋಡಿ ಮರಾಠಿ ಸಿನಿಪ್ರೇಮಿಗಳು ಸಖತ್ ಎಕ್ಸೈಟ್ ಆಗಿದ್ದಾರೆ.

ಸ್ಟಾರ್ ತಾರಾಗಣ ಹಾಗೂ ಪ್ರಮುಖ ಪಾತ್ರಗಳು

ಈ ವಿಶಿಷ್ಟ ಸಿನಿಮಾವನ್ನು ವಿವಿಥ್ ಕೊರ್ಗಾಷ್ಕರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಜಿತೇಂದ್ರ ಜೋಶಿ, ಓಂ ಭೂತ್ಕರ್, ಮಕರಂದ್ ಅನಾಸ್ಸುರೆ, ಸಾಯಿ ತಮ್ಹಾಂಕರ್ ಮತ್ತು ಹಿರಿಯ ನಟಿ ಉಷಾ ನಾಡಕರ್ಣಿ ಮುಂತಾದ ಘಟಾನುಘಟಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಮೂಲ ಚಿತ್ರದಲ್ಲಿ ಹೈಲೈಟ್ ಆಗಿದ್ದ ಪ್ರಮುಖ ಪಾತ್ರಗಳು ಮರಾಠಿಯಲ್ಲಿ ಹೇಗೆ ರೂಪಾಂತರಗೊಂಡಿವೆ ಅನ್ನೋದನ್ನು ನೋಡೋದಾದರೆ, ಮೂಲ ಚಿತ್ರದಲ್ಲಿದ್ದ ಪ್ರಮುಖ 'ರವಿಯಣ್ಣ'ನ ಪಾತ್ರವನ್ನು ಮರಾಠಿಯಲ್ಲಿ ಖ್ಯಾತ ನಟ ಜಿತೇಂದ್ರ ಜೋಶಿ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಸ್ವತಃ ರಾಜ್ ಬಿ. ಶೆಟ್ಟಿ ನಟಿಸಿ ಸೈ ಎನಿಸಿಕೊಂಡಿದ್ದ 'ಕರುಣಾಕರ ಗುರೂಜಿ' ಪಾತ್ರಕ್ಕೆ ಮರಾಠಿಯಲ್ಲಿ ಗಣೇಶ್ ಪಂಡಿತ್ ಬಣ್ಣ ಹಚ್ಚಿದ್ದಾರೆ.

ಜೂನ್ 5ಕ್ಕೆ ಜೀ ಸ್ಟುಡಿಯೋಸ್‌ನಿಂದ ಅದ್ದೂರಿ ರಿಲೀಸ್

ಭಾರತೀಯ ಚಿತ್ರರಂಗದ ದೈತ್ಯ ಸಂಸ್ಥೆಯಾದ 'ಜೀ ಸ್ಟುಡಿಯೋಸ್' (Zee Studios) ಈ ಚಿತ್ರದ ಅಧಿಕೃತ ರಿಮೇಕ್ ಹಕ್ಕನ್ನು (Remake Rights) ಭಾರೀ ಮೊತ್ತಕ್ಕೆ ಖರೀದಿ ಮಾಡಿತ್ತು. ಅದರಂತೆ ಜೀ ಸ್ಟುಡಿಯೋಸ್ ಸಂಸ್ಥೆಯೇ ಈ ವಿಶಿಷ್ಟ ಹಾರರ್-ಕಾಮಿಡಿ ಚಿತ್ರವನ್ನು ಅತ್ಯಂತ ಅದ್ದೂರಿಯಾಗಿ ನಿರ್ಮಿಸಿದೆ. ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಕೊಂಡಿರುವ 'ತುಂಬಾಡ್ಚಿ ಮಂಜುಳಾ' ಸಿನಿಮಾ ಮುಂಬರುವ ಜೂನ್ 5 ರಂದು ಮಹಾರಾಷ್ಟ್ರದಾದ್ಯಂತ ಹಾಗೂ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ.