Ravianna Reveals His Favorite Raj B Shetty Scene  'ಸು ಫ್ರಮ್ ಸೋ' ಕಿರುತೆರೆಯಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ, ಚಿತ್ರದ ಪ್ರಮುಖ ಪಾತ್ರಧಾರಿ 'ರವಿಯಣ್ಣ' ಖ್ಯಾತಿಯ ಶಾನಿಲ್‌ ಗೌತಮ್‌ ಅವರು ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅಭಿನಯದ  ಬಗ್ಗೆ ಮಾತನಾಡಿದ್ದಾರೆ.

ವರ್ಷದ ಮೊದಲ ಬ್ಲಾಕ್‌ಬಸ್ಟರ್‌ ಕನ್ನಡ ಸಿನಿಮಾ ಸು ಫ್ರಮ್ ಸೋ ಕಿರುತೆರೆಯಲ್ಲಿ ಪ್ರದರ್ಶನ ಕಾಣಲು ಸಜ್ಜಾಗಿದೆ. ಭಾವ ಕಿರುತೆರೆಗೆ ಬರುವ ಹೊತ್ತಿನಲ್ಲಿ ಸಿನಿಮಾದ ಕೆಲವೊಂದು ದೃಶ್ಯಗಳನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ. ಬರೀ 4 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಪ್ಯೂರ್‌ ಎಂಟರ್‌ಟೇನರ್‌ ಸಿನಿಮಾ, ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕಮಾಯಿ ಮಾಡಿತ್ತು. ಕರ್ನಾಟಕ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ರಿಲೀಸ್‌ ಹಾಗೂ ಡಬ್ಬಿಂಗ್‌ ಆಗಿ ಸಿನಿಮಾ ರಂಜನೆ ನೀಡಿತ್ತು.

ಭಾನುವಾರ ಕಲರ್ಸ್‌ ಕನ್ನಡದಲ್ಲಿ ಸಂಜೆ 6 ಗಂಟೆಗೆ ಸಿನಿಮಾ ಪ್ರದರ್ಶನ ಕಾಣಲಿದೆ. ಇದರ ನಡುವೆ ಸಿನಿಮಾದಲ್ಲಿ ಪ್ರಮುಖ 'ರವಿಯಣ್ಣ' ಪಾತ್ರದಲ್ಲಿ ಅಭಿನಯಿಸಿದ್ದ ಕಲಾವಿದ ಹಾಗೂ ಬರಹಗಾರ ಶಾನಿಲ್‌ ಗೌತಮ್‌ ಸು ಫ್ರಮ್‌ ಸೋ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದಲ್ಲಿ ರವಿಯಣ್ಣ ತೆರೆಯ ಮೇಲೆ ಕಂಡಷ್ಟು ನಕ್ಕು ನಕ್ಕು ಜನ ಸುಸ್ತಾಗುತ್ತಾರೆ. ಅದರಲ್ಲೂ ರವಿಯಣ್ಣ ಬೈಕ್‌ ಪಾರ್ಕ್‌ ಮಾಡಿದ್ದ ರೀತಿಯನ್ನು ಜನ ನೆನಪಿಸಿಕೊಂಡು ನಗುತ್ತಾರೆ. ಈ ನಡುವೆ ಸ್ವತಃ ರವಿಯಣ್ಣ ಸು ಫ್ರಮ್‌ ಸೋ ಸಿನಿಮಾದಲ್ಲಿ ತಮ್ಮ ಫೇವರಿಟ್‌ ಸೀನ್‌ ಯಾವುದು ಅನ್ನೋದನ್ನ ಬಹಿರಂಗಪಡಿಸಿದ್ದಾರೆ.

Scroll to load tweet…

ಕರುಣಾಕರ್‌ ಗುರೂಜಿ ಪಾತ್ರದಲ್ಲಿದ್ದ ರಾಜ್‌ ಬಿ ಶೆಟ್ಟಿ

ಸುಲೋಚನಾ ಫ್ರಮ್‌ ಸೋಮೇಶ್ವರದಲ್ಲಿ ನನ್ನ ಫೇವರಿಟ್‌ ಸೀನ್‌ ಅಂದ್ರೆ, ರಾಜ್‌ ಬಿ ಶೆಟ್ಟಿ ಅವರು ಕರುಣಾಕರ್‌ ಗುರೂಜಿ ಆಗಿ ಮನೆಗೆ ಬಂದ ನಂತರ ಅವರು ಪಡುವಂಥ ಕಷ್ಟಗಳಲ್ಲಿ ಒಂದಾದಂಥ ಅಶೋಕ ಹಾಗೂ ಕರುಣಾಕರ್‌ ಗುರೂಜಿಯ ಮೀಟ್‌. ಅಶೋಕ ಬೆತ್ತದಲ್ಲಿ ಕರುಣಾಕರ್‌ ಗುರೂಜಿಗೆ ಹೊಡೆಯುವ ಸೀನ್‌. ಅಶೋಕನ ರೂಮ್‌ನ ಬಾಗಿಲು ಮುಚ್ಚಿ ಅವರು ಹೊರಗೆ ಬರುವ ಸೀನ್‌ಗೆ ರಾಜ್‌ ಬಿ ಶೆಟ್ಟಿ ತೋರಿದ ಪರ್ಫಾಮೆನ್ಸ್‌ ನನಗೆ ತುಂಬಾ ಇಷ್ಟ' ಎಂದು ಶಾನಿಲ್‌ ಗೌತಮ್‌ ಹೇಳಿದ್ದಾರೆ.

ಒಂದೆಡೆ ಕಾಂತಾರ-1 ಸಿನಿಮಾದ ಮೂಲಕ ಚಿತ್ರಮಂದಿರಗಳು ಗಿಜಿಗುಡುತ್ತಿದ್ದರೆ, ಟಿವಿ ಕೂಡ ಈ ವಾರಾಂತ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಚಿತ್ರಮಂದಿರಕ್ಕೆ ಜನರನ್ನು ತರಲು ಯಶಸ್ವಿಯಾಗಿದ್ದ ಸು ಫ್ರಮ್‌ ಸೋ ಸಿನಿಮಾವನ್ನು ಟಿವಿಯಲ್ಲಿ ನೋಡಲು ಜನರು ಕಾತರದಿಂದ ಇದ್ದಾರೆ.

100 ಕೋಟಿ ಗಳಿಸಿದ ಸು ಫ್ರಂ ಸೋ

ಈ ವರ್ಷದ ಮೊದಲಾರ್ಧ ಕನ್ನಡ ಚಲನಚಿತ್ರೋದ್ಯಮಕ್ಕೆ ನೀರಸವಾಗಿತ್ತು, ಹಲವಾರು ಚಿತ್ರಗಳು ಬಿಡುಗಡೆಯಾದರೂ ಚಿತ್ರಮಂದಿರಗಳು ಖಾಲಿಯಾಗಿದ್ದವು. ಆದರೆ, ದ್ವಿತೀಯಾರ್ಧವು ಉದ್ಯಮಕ್ಕೆ ದೊಡ್ಡ ಉತ್ಸಾಹ ನೀಡಿದೆ. ಸ್ಯಾಂಡಲ್‌ವುಡ್‌ನ ಸುವರ್ಣ ದಿನಗಳನ್ನು ಮರಳಿ ತಂದಿದೆ.

ರಾಜ್ ಬಿ ಶೆಟ್ಟಿ ನಿರ್ಮಿಸಿ, ಜೆ.ಪಿ. ತುಮಿನಾಡು ನಿರ್ದೇಶಿಸಿದ 'ಸು ಫ್ರಮ್ ಸೋ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿತು. ಈ ಚಿತ್ರವು ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತಂದಿದ್ದು ಮಾತ್ರವಲ್ಲದೆ, ಸುಮಾರು 100 ಕೋಟಿ ರೂಪಾಯಿಗಿಂತ ಅಧಿಕ ಮೊತ್ತ ಕಲೆಹಾಕಿದೆ.

ಹಾಸ್ಯ ಮತ್ತು ಬಲವಾದ ಸಾಮಾಜಿಕ ಸಂದೇಶದ ವಿಶಿಷ್ಟ ಮಿಶ್ರಣವು ವೀಕ್ಷಕರನ್ನು ಆಕರ್ಷಿಸಿತು. ಇದನ್ನು ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಯಿತು, ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು.

ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಹಾಗೂ ಒಟಿಟಿಯಲ್ಲಿ ಮಿಂಚಿದ ಬಳಿಕ ಸು ಫ್ರಮ್ ಸೋ ಈಗ ಅಕ್ಟೋಬರ್ 12 ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.