ಇನ್ನು ಮೇಲೆ ವರ್ಷಕ್ಕೆ ಮೂರು ಸಿನಿಮಾ ಮಾಡುವೆ: ಪುನೀತ್ ರಾಜ್‌ಕುಮಾರ್
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಹಾಗೂ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ದೊರಕಿದ ರಾಜ್ಯ ಪ್ರಶಸ್ತಿ ಬಗ್ಗೆ ಮಾತನಾಡಿದ್ದಾರೆ.....
ಆರ್ ಕೇಶವಮೂರ್ತಿ
ಡಾ. ರಾಜ್‌ಕುಮಾರ್ ಕುಟುಂಬದ ಎಲ್ಲರಿಗೂ ರಾಜ್ಯ ಪ್ರಶಸ್ತಿ ಬಂತಲ್ಲಾ?
ಖುಷಿಯ ವಿಚಾರ. ಒಂದೇ ಕುಟುಂಬದಲ್ಲಿ ಎಲ್ಲಾ ಕಲಾವಿದರು ಅತ್ಯುತ್ತಮ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿರುವುದು ಭಾರತದಲ್ಲೇ ಮೊದಲು ಅಂತಿದ್ದಾರೆ. ಹಾಗೆ ಅತಿ ಹೆಚ್ಚು ರಾಜ್ಯ ಪ್ರಶಸ್ತಿ ಪಡೆದುಕೊಂಡಿರುವುದು ಕೂಡ ದಾಖಲೆ ಎಂದು ತಿಳಿದು ಹೆಮ್ಮೆ ಮೂಡಿತು. ನಾನು ರಾಘಣ್ಣ ಅವರ ಅಭಿಮಾನಿಯಾಗಿ ಹೇಳುವುದಾದರೆ ಅವರಿಗೆ ‘ಗಜಪತಿ ಗರ್ವಭಂಗ’ ಹಾಗೂ ‘ನಂಜುಂಡಿ ಕಲ್ಯಾಣಿ’ ಚಿತ್ರಗಳಿಗೇ ಬರಬೇಕಿತ್ತು.
ನೀವು ಈ ಪ್ರಶಸ್ತಿ ನಿರೀಕ್ಷೆ ಮಾಡಿದ್ರಾ?
ನಾನು ಮಾತ್ರವಲ್ಲ, ರಾಘಣ್ಣ ಕೂಡ ನಿರೀಕ್ಷೆ ಮಾಡಿರಲಿಲ್ಲ. ಪ್ರಶಸ್ತಿ, ಗೌರವ ಮತ್ತು ಸನ್ಮಾನಗಳು ನಿರೀಕ್ಷೆ ಮಾಡುವುದಲ್ಲ. ಅವು ನಮ್ಮನ್ನ ಹುಡುಕಿ ಬರಬೇಕು. ಅದೇ ನಂಬಿಕೆಯಲ್ಲಿ ನಾವು ಕಲಾವಿದರಾಗಿ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದೇವೆ. ಗುರುತಿಸಿ, ಗೌರವಿಸಿದಾಗ ಖುಷಿ ಪಡುತ್ತೇವೆ.
ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಾಯ್ತು 'ಜೇಮ್ಸ್' ಪವರ್; ಮುಹೂರ್ತ ಹೀಗಿತ್ತು ನೋಡಿ!
‘ಯುವರತ್ನ’ ಚಿತ್ರೀಕರಣ ಎಲ್ಲಿವರೆಗೂ ಬಂದಿದೆ?
ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಹಾಡು ಮಾತ್ರ ಬಾಕಿ ಇದೆ.
ಶೂಟಿಂಗ್ ಅನುಭವ ಹೇಗಿತ್ತು? ಇಲ್ಲಿ ನಿಮ್ಮ ಪಾತ್ರವೇನು?
ತುಂಬಾ ಚೆನ್ನಾಗಿತ್ತು. ಇತ್ತೀಚಿಗೆ ಧಾರವಾಡದಂತಹ ಪ್ರದೇಶಗಳಲ್ಲಿ ಅತಿ ಹೆಚ್ಚು ಚಿತ್ರೀಕರಣ ಮಾಡಿದ ಸಿನಿಮಾ ನನ್ನದು. ಕಾಲೇಜು, ನಗರ, ಹಳ್ಳಿ ಹಿನ್ನೆಲೆ ಬೇರೆ ರೀತಿಯಾಗಿದೆ. ಪಾತ್ರದ ಬಗ್ಗೆ ಹೇಳುವುದಾದರೆ ಯೂತ್ ಐಕಾನ್ ಆಗಿ ಕಾಣಿಸಿಕೊಂಡಿರುವೆ. ಅದರಲ್ಲಿ ಕ್ರೀಡಾ ಪಟು ಎಂಬುದು ಒಂದು ಎಪಿಸೋಡ್.
ಮೊದಲ ಬಾರಿಗೆ ಕ್ರೀಡಾ ಪಟುವಿನ ಪಾತ್ರ ಮಾಡಿದ್ದೀರಲ್ಲ?
ಹೌದು. ನನಗೆ ಕ್ರೀಡೆ, ಫಿಟ್ನೆಸ್ ಎಂದರೆ ಇಷ್ಟ. ಆದರೆ, ರಗ್ಬಿ ಆಡುವ ದೃಶ್ಯಗಳನ್ನು ಚಿತ್ರೀಕರಣ ಮಾಡುವಾಗ ಇಷ್ಟುಚೆನ್ನಾಗಿ ಬರುತ್ತದೆ ಅಂತ ನಾನು ನಿರೀಕ್ಷೆ ಮಾಡಿರಲಿಲ್ಲ. ಆ ಮೇಲೆ ಅದನ್ನು ಫಸ್ಟ್ ಲುಕ್ ಹಾಗೂ ಟೀಸರ್ ನೋಡಿದಾಗ ನಾನೇ ಥ್ರಿಲ್ಲಾದೆ. ನನ್ನ ಹೇರ್ ಸ್ಟೈಲ್ ಬದಲಾಗಿದೆ. ಹೊಸ ರೀತಿಯ ಇಮೇಜ್ ನೀಡಬಹುದಾದ ಸಿನಿಮಾ ಎಂದುಕೊಳ್ಳುತ್ತಿದ್ದೇನೆ.
ಅಭಿಮಾನಿ ದೇವರ ಚಿನ್ನದ ಗಿಫ್ಟ್ ತಿರಸ್ಕರಿಸಿದ ಪುನೀತ್!
ಎರಡನೇ ಪೋಸ್ಟರ್ ನೋಡಿದಾಗ ಮೆಡಿಕಲ್ ಮಾಫಿಯಾ ಕತೆ ಅನಿಸುತ್ತಿದೆಯಲ್ಲ?
ಪೋಸ್ಟರ್‌ನಲ್ಲಿ ಅಸ್ಥಿಪಂಜರ ಇದೆ. ಆ ಕಾರಣಕ್ಕೆ ಎಲ್ಲರು ಹಾಗೆ ಅಂದುಕೊಳ್ಳುತ್ತಿದ್ದಾರೆ. ಅದೇನು ಅಂತ ಈಗ ಹೇಳಲಾಗದು. ಸಿನಿಮಾ ನೋಡಿ. ಆದರೆ, ಚಿತ್ರದ ಟೀಸರ್, ಫಸ್ಟ್ ಲುಕ್ ಪ್ರೇಕ್ಷಕರ ಗಮನ ಸೆಳೆಯುಂತೆ ಕುತೂಹಲಕಾರಿ ಆಗಿರಬೇಕು. ಆ ಕಾರಣಕ್ಕೆ ಡೈನೋಸಾರ್ ಕೂಡ ಪೋಸ್ಟರ್‌ನಲ್ಲಿದೆ. ನಿಮಗೆ ನಿಜಕ್ಕೂ ಕುತೂಹಲ ಮೂಡಿಸಿದ್ದರೆ ನಮ್ಮ ಕೆಲಸ ಸಾರ್ಥಕ ಅನಿಸುತ್ತದೆ.
ಸಂತೋಷ್ ಆನಂದ್‌ರಾಮ್ ಜತೆಗಿನ ಕೆಲಸ ಅನುಭವ ಹೇಗಿತ್ತು?
ಸಂತೋಷ್ ಆನಂದ್‌ರಾಮ್, ನಾನು ಸೋದರರಂತೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಬ್ಯಾನರ್, ನಮ್ಮ ಮನೆಯ ನಿರ್ಮಾಣದ ಸಂಸ್ಥೆ ಇದ್ದಂತೆ. ಸಿನಿಮಾ ಯಶಸ್ಸು ಪ್ರೇಕ್ಷಕರಿಗೆ ಸೇರಿದ್ದು. ಆದರೆ, ಖುಷಿ ಕೊಡುವ ತಂಡ ಇರಬೇಕು.
ಚೇತನ್ ಕುಮಾರ್ ‘ಜೇಮ್ಸ್’ ಸಿನಿಮಾ ತಡವಾಗಿದ್ದು ಯಾಕೆ?
ಹೌದು, ಎರಡು ವರ್ಷಗಳ ಹಿಂದೆ ಅದರ ಹೆಸರಿನ ಜತೆಗೆ ಒಂದು ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು. ಆ ಮೇಲೆ ಆ ಸಿನಿಮಾ ಶುರುವಾಗುವುದಕ್ಕೆ ತಡವಾಗುತ್ತ ಹೋಯಿತು. ಕತೆ, ಸಮಯ ಕೂಡಿ ಬರಲಿಲ್ಲ. ಈಗ ಎಲ್ಲವೂ ಆಗಿದೆ. ಚಿತ್ರಕ್ಕೆ ಮುಹೂರ್ತ ಆಗಿದೆ. ಸೂರಿ, ಯೋಗರಾಜ್ ಭಟ್, ಸಂತೋಷ್ ಆನಂದ್‌ರಾಮ್, ಚೇತನ್ ಕುಮಾರ್ ಇವರ ಜತೆ ನಾನು ಯಾವಾಗ ಬೇಕಾದರೂ ಸಿನಿಮಾ ಮಾಡಬಲ್ಲೆ. ಕತೆ ಇದ್ದರೆ ಸಾಕು.
ಸೋಷಿಯಲ್ ಮೀಡಿಯಾಗೆ ಬಂದಿದ್ದರ ಗುಟ್ಟೇನು?
ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಅದಕ್ಕೆ ಟ್ವಿಟ್ಟರ್, ಫೇಸ್‌ಬುಕ್‌ಗೆ ಬಂದೆ. ನಾನು ಸೋಷಿಯಲ್ ಮೀಡಿಯಾದಲ್ಲಿ ನನ್ನ ಸಿನಿಮಾ, ಬೇರೆಯವರ ಒಳ್ಳೆಯ ಚಿತ್ರಗಳು, ಫಿಟ್ನಸ್, ಆರೋಗ್ಯದ ಕಾಳಜಿಯನ್ನು ಒಳಗೊಂಡಿರುವ ವಿಚಾರಗಳನ್ನು ಮಾತ್ರ ಹಾಕುತ್ತೇನೆ. ಅಭಿಮಾನಿಗಳ ಜತೆ ನೇರ ಸಂಪರ್ಕದಲ್ಲಿದ್ದೇನೆಂಬ ಭಾವನೆ ಮೂಡುತ್ತಿದೆ. ಒಳ್ಳೆಯ ವಿಚಾರಗಳಿಗೆ ಸೋಷಿಯಲ್ ಮೀಡಿಯಾ ದೊಡ್ಡ ವೇದಿಕೆ ಅನ್ನಬಹುದು.
ನಿರ್ಮಾಣದ ಅನುಭವಗಳು ಹೇಗಿವೆ?
ನಮ್ಮ ಪಿಆರ್‌ಕೆ ಸಂಸ್ಥೆಯಲ್ಲಿ ನಿರ್ಮಾಣ ಆಗುವ ಚಿತ್ರಗಳಲ್ಲಿ ನಾನು ಕತೆ ಮಾತ್ರ ಕೇಳುತ್ತೇನೆ. ಉಳಿದಂತೆ ನನ್ನದೇನು ಪಾತ್ರ ಇರಲ್ಲ. ಎಲ್ಲವೂ ಅಶ್ವಿನಿ ಅವರೇ ನೋಡಿಕೊಳ್ಳುತ್ತಾರೆ. ನಮ್ಮ ತಾಯಿ ಅವರ ಆಸೆಯನ್ನು ಈಡೇರಿಸುವುದಕ್ಕೆ ಮಾಡಿರುವ ನಿರ್ಮಾಣ ಸಂಸ್ಥೆ ಇದೆ. ಕಂಟೆಂಟ್ ಇರುವ ಸಿನಿಮಾಗಳಿಗೆ ಅದ್ಯತೆ ಕೊಡುವುದು ಇದರ ಮುಖ್ಯ ಉದ್ದೇಶ.
ನಿಮ್ಮ ನಿರ್ಮಾಣದ ಮಾಯಾಬಜಾರ್ ಚಿತ್ರದಲ್ಲಿ ನೀವು ಅಭಿನಯಿಸಿದ್ದೀರಲ್ವಾ?
ಒಂದು ಹಾಡಿಗೆ ನಾನೇ ಡ್ಯಾನ್ಸ್ ಮಾಡಿದ್ದೇನೆ. ಎಸ್ ಪಿ ಬಾಲಸುಬ್ರಮಣ್ಯಂ ಹಾಡಿರುವ ಹಾಡು. ಟೈಟಲ್ ಸಾಂಗ್. ತುಂಬಾ ಚೆನ್ನಾಗಿದೆ. ವಿಶೇಷವಾದ ಡ್ಯಾನ್ಸ್‌ನಲ್ಲಿ ನೋಡುತ್ತೀರಿ.