ನಟ ಸುದೀಪ್, ನಿರ್ಮಾಪಕ ಕುಮಾರ್ ನಡುವೆ ರವಿಚಂದ್ರನ್ ರಾಜಿ ಸಂಧಾನ
ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟ ಸುದೀಪ್ ಹಾಗೂ ನಿರ್ಮಾಪಕ ಎಂ.ಎನ್.ಕುಮಾರ್ ನಡುವಿನ ವಿವಾದ ಇತ್ಯರ್ಥಕ್ಕೆ ಮುಂದಾಗಿರುವ ಖ್ಯಾತ ನಟ, ನಿರ್ಮಾಪಕ ರವಿಚಂದ್ರನ್, ಎರಡು ಬಣಗಳ ವಾದವನ್ನು ಆಲಿಸಿದ್ದು, ಈ ಕುರಿತು ಒಂದು ನಿರ್ಧಾರಕ್ಕೆ ಬರಲು ಸಮಯ ಕೇಳಿದ್ದಾರೆ. ಆದರೆ ಈ ಇಬ್ಬರ ವಾದಗಳೇನಾಗಿದ್ದವು ಎಂಬ ವಿವರ ಬಹಿರಂಗವಾಗಿಲ್ಲ.
ಬೆಂಗಳೂರು (ಜು.23) : ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟ ಸುದೀಪ್ ಹಾಗೂ ನಿರ್ಮಾಪಕ ಎಂ.ಎನ್.ಕುಮಾರ್ ನಡುವಿನ ವಿವಾದ ಇತ್ಯರ್ಥಕ್ಕೆ ಮುಂದಾಗಿರುವ ಖ್ಯಾತ ನಟ, ನಿರ್ಮಾಪಕ ರವಿಚಂದ್ರನ್, ಎರಡು ಬಣಗಳ ವಾದವನ್ನು ಆಲಿಸಿದ್ದು, ಈ ಕುರಿತು ಒಂದು ನಿರ್ಧಾರಕ್ಕೆ ಬರಲು ಸಮಯ ಕೇಳಿದ್ದಾರೆ. ಆದರೆ ಈ ಇಬ್ಬರ ವಾದಗಳೇನಾಗಿದ್ದವು ಎಂಬ ವಿವರ ಬಹಿರಂಗವಾಗಿಲ್ಲ.
ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್, ಸುದೀಪ್ ಅವರ ಮ್ಯಾನೇಜರ್ ಹಾಗೂ ನಿರ್ಮಾಪಕ ಜಾಕ್ ಮಂಜು ಹಾಜರಿದ್ದರು.
ಲೆಕ್ಕಾಚಾರ ಬಿಟ್ಟು ಬೇರೆ ವಿಷಯ ಮಾತನಾಡಿ ಬಗೆಹರಿಸುತ್ತೇವೆ: ಸುದೀಪ್-ಕುಮಾರ್ ಮನಸ್ಥಾಪಕ್ಕೆ ಶಿವಣ್ಣ ಎಂಟ್ರಿ!
ಮತ್ತೆ ಇಂದು- ನಾಳೆ ಸಭೆ:
ಶುಕ್ರವಾರ ನಡೆದ ಸಭೆಯಲ್ಲಿ ಮೌಖಿಕ ಹಾಗೂ ದಾಖಲೆ ರೂಪದಲ್ಲಿ ಸುದೀಪ್ ಹಾಗೂ ಎಂ.ಎನ್.ಕುಮಾರ್ ಅವರಿಂದ ರವಿಚಂದ್ರನ್ ದೂರು ಪಡೆದಿದ್ದಾರೆ. ಈ ಕುರಿತು
ಭಾನುವಾರ (ಜು.23) ಅಥವಾ ಸೋಮವಾರ (ಜು.24) ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಹೀಗಾಗಿ ಸುದೀಪ್ ಹಾಗೂ ಎಂ.ಎನ್.ಕುಮಾರ್ ನಡುವಿನ ಕಾಲ್‌ಶೀಟ್ ವಿವಾದ ಸೋಮವಾರದ ಹೊತ್ತಿಗೆ ಅಂತ್ಯ ಕಾಣಲಿದೆ ಎಂಬುದು ಸದ್ಯ ಚಿತ್ರರಂಗದ ಭರವಸೆ.
ವಿವಾದದ ಹಿನ್ನೆಲೆ ಏನು?:
ಈ ಹಿಂದೆ ಎಂ.ಎನ್.ಕುಮಾರ್ ನಿರ್ಮಾಣ, ಸುದೀಪ್ ಅಭಿನಯದಲ್ಲಿ ‘ಮಾಣಿಕ್ಯ’ ಸಿನಿಮಾ ಬಂದಿತ್ತು. ಈ ಚಿತ್ರದ ಬಳಿಕ ಕುಮಾರ್ ಮತ್ತೆ ಸುದೀಪ್‌ಗೆ ಸಿನಿಮಾ ನಿರ್ಮಿಸುವ ಮಾತುಕತೆ ನಡೆದಿತ್ತು. ಇದಕ್ಕೆ ಸಂಬಂಧಿಸಿ ದೊಡ್ಡ ಮೊತ್ತದ ಹಣವನ್ನು ಕುಮಾರ್, ಸುದೀಪ್‌ಗೆ ನೀಡಿದ್ದರು ಎನ್ನಲಾಗಿದೆ. ‘ಆದರೆ ಬಳಿಕ ಸುದೀಪ್ ಬೇರೆ ಬೇರೆ ನಿರ್ಮಾಪಕರಿಗೆ ಕಾಲ್‌ಶೀಟ್ ಕೊಟ್ಟರು. ನನಗೆ ಡೇಟ್ಸ್ ಕೊಡಲಿಲ್ಲ’ ಎನ್ನುವುದು ಕುಮಾರ್ ಆರೋಪ. ಈ ನಡುವೆ ಸುದೀಪ್ ಇತ್ತೀಚೆಗೆ ತಮಿಳು ನಿರ್ಮಾಪಕರಿಗೆ ಕಾಲ್‌ಶೀಟ್ ಕೊಟ್ಟಾಗ ನಿರ್ಮಾಪಕ ಕುಮಾರ್ ಸಿಡಿದೆದ್ದಿದ್ದರು. ತನಗೆ ಸುದೀಪ್ ಅವರಿಂದ ಅನ್ಯಾಯವಾಗಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿ, ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ ಮತ್ತೊಂದೆಡೆ ಸುದೀಪ್ ಮ್ಯಾನೇಜರ್ ಜಾಕ್ ಮಂಜುನಾಥ್ ಅವರು ಪತ್ರಿಕಾಗೋಷ್ಟಿನಡೆಸಿ ಕುಮಾರ್ ಆರೋಪ ಅಲ್ಲಗಳೆದಿದ್ದರು.
ಸುದೀಪ್ ಕೋರ್ಚ್‌ಗೆ:
ಎಂ.ಎನ್.ಕುಮಾರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಎನ್.ಎಂ.ಸುರೇಶ್, ಸ್ಟಾರ್ ನಟರಿಂದ ಕಾಲ್‌ಶೀಟ್ ಸಿಗದ ಕಾರಣ ಸಾಲಗಾರರ ಕಾಟ ತಾಳಲಾಗದೇ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದಿದ್ದು ವಿವಾದಕ್ಕೆ ತುಪ್ಪ ಸುರಿದಂತಾಯಿತು. ಕೂಡಲೇ ನಟ ಸುದೀಪ್ ಮಾನನಷ್ಟಮೊಕದ್ದಮೆ ದಾಖಲಿಸಿದರು.
ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದು ಬೇಡ; ಸುದೀಪ್-ಕುಮಾರ್ ಮನಸ್ಥಾಪದ ಬಗ್ಗೆ ರವಿಚಂದ್ರನ್ ಮಾತು!
ಸಂಧಾನಕ್ಕೆ ರವಿಚಂದ್ರನ್, ಶಿವಣ್ಣ:
ವಿವಾದ ಹೆಚ್ಚಾಗುತ್ತಿರುವಂತೆಯೇ ಚಿತ್ರರಂಗದವರ ಮನವಿ ಮೇರೆಗೆ ರವಿಚಂದ್ರನ್ ಹಾಗೂ ಶಿವರಾಜ್‌ಕುಮಾರ್ ಸಂಧಾನಕ್ಕೆ ಮುಂದಾಗಿದ್ದಾರೆ. ಸದ್ಯ ರವಿಚಂದ್ರನ್ ಸುದೀಪ್ ಹಾಗೂ ಎನ್.ಕುಮಾರ್ ಅವರನ್ನು ಕರೆಸಿ ಮಾತನಾಡಿದ್ದು, ಇಬ್ಬರ ವಾದ ಕೇಳಿದ್ದಾರೆ. ಭಾನುವಾರ ಅಥವಾ ಸೋಮವಾರ ನಡೆಯಲಿರುವ ಸಂಧಾನ ಸಭೆಯಲ್ಲಿ ಈ ವಿವಾದ ಅಂತ್ಯ ಕಾಣುವ ಸಾಧ್ಯತೆ ಇದೆ.