ಸದ್ಗುರು ನೋಡಿ ದೇವರೇ ಕುಸಿದು ಬಿದ್ದಂತೆ ಭಾಸವಾಯ್ತು: ಕಂಗನಾ ಭಾವುಕ- ಆರೋಗ್ಯದ ಮಾಹಿತಿ ನೀಡಿದ ಪುತ್ರಿ
ಆಸ್ಪತ್ರೆಯಲ್ಲಿದ್ದ ಸದ್ಗುರು ನೋಡಿ ದೇವರೇ ಕುಸಿದು ಬಿದ್ದಂತೆ ಭಾಸವಾಯ್ತು ಎಂದು ಕಂಗನಾ ಭಾವುಕ ಪೋಸ್ಟ್ ಹಾಕಿದ್ದಾರೆ. ಈಗ ಸದ್ಗುರು ಹೇಗಿದ್ದಾರೆ? ಆರೋಗ್ಯದ ಮಾಹಿತಿ ನೀಡಿದ ಪುತ್ರಿ
ಮಿದುಳಿನಲ್ಲಿ ರಕ್ತಸ್ರಾವ ಆಗಿರುವುದಕ್ಕೆ ಸಂಬಂಧಿಸಿದಂತೆ ಸದ್ಗುರು ಜಗ್ಗಿ ವಾಸುದೇವ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ವಿಷಯ ದೇಶ-ವಿದೇಶದ ಸದ್ಗುರು ಅಭಿಮಾನಿಗಳನ್ನು ದಂಗುಬಡಿಸಿವೆ. ಇದಾಗಲೇ ಹಲವರು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಇನ್ನು, ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸದ್ಗುರು ಜಗ್ಗಿ ವಾಸುದೇವ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಗ್ಗಿ ವಾಸುದೇವ್ ಅವರ ಪುತ್ರಿ ರಾಧೆ ಜಗ್ಗಿ ಮಾಹಿತಿ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಸದ್ಗುರು ಆರೋಗ್ಯದ ಬಗ್ಗೆ ಯಾರೆಲ್ಲಾ ಕೇಳುತ್ತಿದ್ದೀರಿ, ಅವರಿಗೆ ಹೇಳುವುದೇನೆಂದರೆ ಸದ್ಗುರು ಅವರು ಆರೋಗ್ಯವಾಗಿದ್ದು, ಬೇಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ನಡುವೆಯೇ ಸದ್ಗುರು ಅವರ ಅಭಿಮಾನಿಗಳಲ್ಲಿ, ಅವರ ಫಾಲೋವರ್ಗಳಲ್ಲಿ ಒಬ್ಬರಾಗಿರುವ ನಟಿ, ಕಂಗನಾ ರಣಾವತ್ ಆಸ್ಪತ್ರೆಗೆ ಧಾವಿಸಿದ್ದಾರೆ. ಸದ್ಗುರು ಅವರನ್ನು ನೋಡಿ ಭಾವುಕರಾಗಿರುವ ನಟಿ, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನೋವಿನ ನುಡಿ ಬರೆದುಕೊಂಡಿದ್ದಾರೆ. ಐಸಿಯು ಬೆಡ್ ಮೇಲೆ ಸದ್ಗುರು ಅವರನ್ನು ನೋಡಿದೆ. ಆಕಾಶವೇ ಕಳಚಿ ಬಿದ್ದಂತಾಯಿತು. ನನ್ನ ತಲೆ ತಿರುಗಿತು. ದೇವರೇ ಕುಸಿದಂತೆ ಭಾಸವಾಯಿತು ಎಂದು ನಟಿ ಹೇಳಿದ್ದಾರೆ. ಈ ಮೊದಲು ಸದ್ಗುರು ನಮ್ಮಂತೆ ಮೂಳೆಗಳು, ರಕ್ತ, ಮಾಂಸ ಹೊಂದಿದ್ದಾರೆ ಎಂದು ನನಗೆ ಎಂದಿಗೂ ಅನಿಸಿರಲಿಲ್ಲ. ಆದ್ದರಿಂದ ದೇವರೆ ಕುಸಿದಂತೆ ಭಾಸವಾಯಿತು. ಭೂಮಿ ಪಲ್ಲಟಗೊಂಡಿತೇನೋ ಅನಿಸಿತು. ಆಕಾಶವು ನನ್ನನ್ನು ಕೈಬಿಟ್ಟಿದೆ ಎಂದು ಭಾಸವಾಯಿತು. ನನ್ನ ತಲೆ ತಿರುಗುತ್ತಿದೆ ಎಂದು ನನಗೆ ಅನಿಸಿತು. ನಾನು ಈ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎನಿಸಿತು. ಇದನ್ನು ನಂಬಬಾರದು ಎಂದುಕೊಂಡೆ. ನಂತರ ಕಣ್ಣೀರು ಬಂತು. ಅದಲ್ಲದೇ ಸದ್ಗುರು ಚೇತರಿಸಿಕೊಳ್ತಾರೆ, ಇಲ್ಲದಿದ್ದರೆ ಸೂರ್ಯ ಉದಯಿಸಲ್ಲ, ಭೂಮಿ ಚಲಿಸಲ್ಲ ಎಂದು ನಟಿ ಹೇಳಿದ್ದಾರೆ.
ಸದ್ಗುರು ಅವರಿಗೆ ಕಳೆದ ಕೆಲವು ವಾರಗಳಿಂದ ವಿಪರೀತ ತಲೆನೋವು ಕಾಣಿಸಿಕೊಂಡಿತ್ತು. ವೈದ್ಯರ ಸಲಹೆಯನ್ನು ಅವರು ನಿರ್ಲಕ್ಷಿಸಿದ್ದರು. ತೀವ್ರ ನೋವಿನಲ್ಲೂ ಬೃಹತ್ ಶಿವರಾತ್ರಿ ಕಾರ್ಯಕ್ರಮ ಆಯೋಜಿಸಿದ್ದರು. ಅದಲ್ಲದೇ ಯಾವುದೇ ಸಭೆಯನ್ನು ಅವರು ತಪ್ಪಿಸಿಕೊಂಡಿರಲಿಲ್ಲ. ಇದರಿಂದ ಅವರಿಗೆ ಒಂದೇ ಸಲ ಮಿದುಳಿನ ಸಮಸ್ಯೆ ಹೆಚ್ಚಾಗಿ ರಕ್ತಸ್ರಾವ ಆಗಿದೆ ಎನ್ನಲಾಗಿದೆ.
ಅಮೆರಿಕದಿಂದ ಅಯೋಧ್ಯೆಗೆ ಬಂದ ನಟಿ ಪ್ರಿಯಾಂಕಾ ಚೋಪ್ರಾ: ಪತಿ, ಮಗಳ ಜೊತೆ ವಿಶೇಷ ಪೂಜೆ
‘ನನ್ನ ನೋವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಇಂದು ಲಕ್ಷಾಂತರ ಭಕ್ತರು ನನ್ನ ಈ ದುಃಖವನ್ನು ಹಂಚಿಕೊಳ್ಳುತ್ತಾರೆ. ಅದನ್ನು ತಡೆದುಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಅವರು ಆರೋಗ್ಯವಾಗಿ ಇರಲಿದ್ದಾರೆ. ಹಾಗಾಗದೇ ಇದ್ದಲ್ಲಿ ಸೂರ್ಯ ಉದಯಿಸುವುದಿಲ್ಲ, ಭೂಮಿ ಚಲಿಸುವುದಿಲ್ಲ. ಈ ಕ್ಷಣವು ನಿರ್ಜೀವ ಮತ್ತು ನಿಶ್ಚಲ ಎನಿಸುತ್ತದೆ’ ಎಂದಿದ್ದಾರೆ ಕಂಗನಾ. ಅಂದಹಾಗೆ ಸದ್ಗುರು ಅವರಿಗೆ 66 ವರ್ಷ ವಯಸ್ಸು. ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ (Emergency brain surgery) ನಡೆಸಲಾಗಿದೆ, ಆರೋಗ್ಯ ಸುಧಾರಿಸುತ್ತಿದೆ ಎಂದು ಇಶಾ ಫೌಂಡೇಶನ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹುಟ್ಟುಹಬ್ಬದ ದಿನ ಮಂತ್ರಾಲಯದಿಂದಲೇ ಕ್ಷಮೆ ಕೋರಿದ ನಟ ಜಗ್ಗೇಶ್: ಸಿನಿಮಾದ ಕುರಿತೂ ನಟ ಹೇಳಿದ್ದೇನು?