Asianet Suvarna News Asianet Suvarna News

Grammys 2023: 3ನೇ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬೆಂಗಳೂರಿನ ರಿಕಿ ಕೇಜ್: ಈ ಸಾಧನೆ ಮಾಡಿದ ಏಕೈಕ ಭಾರತೀಯ..!

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದಿದ್ದಾರೆ ರಿಕಿ ಕೇಜ್‌.

indias famous music composer ricky kej wins third grammy award ash
Author
First Published Feb 6, 2023, 9:58 AM IST

ಲಾಸ್‌ ಏಂಜಲೀಸ್‌ (ಫೆಬ್ರವರಿ 6, 2023): ಖ್ಯಾತ ಸಂಗೀತ ಸಂಯೋಜಕ ಬೆಂಗಳೂರಿನ ರಿಕಿ ಕೇಜ್ ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಡಿವೈನ್ ಟೈಡ್ಸ್ ಎಂಬ ಆಲ್ಬಂ ಬೆಸ್ಟ್‌ ಇಮ್ಮರ್ಸೀವ್‌ ಆಡಿಯೋ ಆಲ್ಬಂ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ಇಂದು ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಮೂರನೇ ಬಾರಿ ಮುಡಿಗೇರಿಸಿಕೊಂಡಿದ್ದಾರೆ.  ಅವರು ಈ ಪ್ರಶಸ್ತಿಯನ್ನು ಸಾಂಪ್ರದಾಯಿಕ ಬ್ರಿಟಿಷ್ ರಾಕ್ ಬ್ಯಾಂಡ್ ದಿ ಪೊಲೀಸ್‌ನ ಡ್ರಮ್ಮರ್‌ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇನ್ನು, ಈ ಸಾಧನೆಯೊಂದಿಗೆ, ರಿಕಿ ಕೇಜ್ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾರತೀಯರು ಎನಿಸಿಕೊಂಡಿದ್ದಾರೆ. 

ತಮ್ಮ ಮೂರನೇ ಗ್ರ್ಯಾಮಿ ಪ್ರಶಸ್ತಿಯನ್ನು (Grammy Award) ಗೆದ್ದ ನಂತರ, ರಿಕಿ ಕೇಜ್ (Ricky Kej) ಪ್ರಶಸ್ತಿ ಪುರಸ್ಕೃತರೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣ (Social Media) ಇನ್ಸ್ಟಾಗ್ರಾಮ್‌ (Instagram) ಹಾಗೂ ಟ್ವಿಟ್ಟರ್‌ನಲ್ಲಿ (Twitter) ಹಂಚಿಕೊಂಡಿದ್ದಾರೆ. ಇನ್ನು, ಈ ಬಗ್ಗೆ ಟ್ವೀಟ್‌ (Tweet) ಮಾಡಿದ ರಿಕಿ ಕೇಜ್‌, ಈಗಷ್ಟೇ ನನ್ನ 3ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಅತ್ಯಂತ ಕೃತಜ್ಞನಾಗಿದ್ದೇನೆ, ನಾನು ಮೂಕವಿಸ್ಮಿತನಾಗಿದ್ದೇನೆ! ನಾನು ಈ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸುತ್ತೇನೆ ಎಂದೂ ರಿಕಿ ಕೇಜ್‌ ಬರೆದುಕೊಂಡಿದ್ದಾರೆ. 

ಇದನ್ನು ಓದಿ: Grammys 2022: ಎರಡನೇ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬೆಂಗಳೂರಿನ ರಿಕಿ ಕೇಜ್!

ಇಮ್ಮರ್ಸೀವ್‌ ಆಡಿಯೋ ಆಲ್ಬಂ ವಿಭಾಗದಲ್ಲಿ ಕ್ರಿಸ್ಟಿನಾ ಅಗುಲೆರಾ (ಅಗುಲೆರಾ), ದಿ ಚೈನ್‌ ಸ್ಮೋಕರ್ಸ್‌ ಮೆಮೊರೀಸ್ ಡು ನಾಟ್‌ ಓಪನ್), ಜೇನ್ ಇರಾಬ್ಲೂಮ್ (ಪಿಕ್ಚರಿಂಗ್ ದಿ ಇನ್ವಿಸಿಬಲ್- ಫೋಕಸ್ 1), ಮತ್ತು ನಿಡಾರೊಸ್ಡೊಮೆನ್ಸ್ ಜೆಂಟೆಕೋರ್ ಮತ್ತು ಟ್ರೊಂಡೆಹೈಮ್ಸೊಲಿಸ್ಟೆನ್ (ಟುವಾಹ್ಯುನ್ - ಬೀಯೆಡಿಟ್ಯೂಡ್ಸ್ ಫಾರ್ ಎ ಡಬ್ಲ್ಯೂ) ಇತರ ನಾಮನಿರ್ದೇಶಿತರಾಗಿದ್ದರು. 

ಇನ್ನು, ಈ ಸಮಾರಂಭದಲ್ಲಿ, ಬೆಂಗಳೂರಿನ ಖ್ಯಾತ ಸಂಗೀತಗಾರ ರಿಕಿ ಕೇಜ್‌, ಸಾಂಪ್ರದಾಯಿಕ ಬಾಂಧ್ಗಾಲಾ ಉಡುಪು ಧರಿಸಿ ಮಿಂಚಿದರು.ಭಾರತೀಯ ಸಂಗೀತಗಾರ 2022 ರಲ್ಲಿ ನಡೆದ 64ನೇ ಗ್ರ್ಯಾಮಿ ಅವಾರ್ಡ್ಸ್ ಸಮಾರಂಭದಲ್ಲಿ ಅತ್ಯುತ್ತಮ ಹೊಸ ಯುಗದ ಆಲ್ಬಮ್ ವಿಭಾಗದಲ್ಲಿ ತಮ್ಮ ಎರಡನೇ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು. ಅವರು ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರ ಜೊತೆಗೆ ಅದೇ ಆಲ್ಬಂಗಾಗಿ ಪ್ರಶಸ್ತಿಯನ್ನು ಗೆದ್ದಿದ್ದರು. ಇದಕ್ಕೂ ಮುನ್ನ 2015 ರಲ್ಲಿ, ಅವರು ವಿಂಡ್ಸ್ ಆಫ್ ಸಂಸಾರಕ್ಕಾಗಿ ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು.

2023 ರ ಫೆಬ್ರವರಿ 6 ರಂದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ Crypto.com ಅಖಾಡದಲ್ಲಿ ಗಾಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. 

ಏಷ್ಯಾನೆಟ್‌ ತಂಡದೊಂದಿಗೆ ಗ್ರ್ಯಾಮಿ ವಿಜೇತ: ಸಂಗೀತವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದ ರಿಕ್ಕಿ ಕೇಜ್‌

ಕರ್ನಾಟಕದ ಅಳಿಯ:
ಅಮೆರಿಕದ ನಾರ್ತ್‌ ಕೆರೋಲಿನಾದಲ್ಲಿ ಭಾರತೀಯ ದಂಪತಿಗೆ 1981ರಲ್ಲಿ ಜನಿಸಿದ ರಿಕಿ ತಮ್ಮ 8ನೇ ವಯಸ್ಸಿನಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಕ್ಸ್‌ಫರ್ಡ್‌ ಕಾಲೇಜಿನಿಂದ ದಂತ ವೈದ್ಯಕೀಯ ಪದವಿ ಪಡೆದಿರುವ ಇವರು ದಂತವೈದ್ಯರಾಗಿ ಕೆಲಸ ಮಾಡದೇ ಸಂಗೀತ ಕ್ಷೇತ್ರದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು, ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು 30ಕ್ಕೂ ಹೆಚ್ಚು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 2003ರಿಂದ ‘ರೆವೊಲ್ಯೂಷನ್‌’ ಹೆಸರಿನ ಸ್ವಂತ ಸ್ಟುಡಿಯೋ ಆರಂಭಿಸಿದ್ದು, 3000ಕ್ಕೂ ಹೆಚ್ಚು ಜಾಹೀರಾತು ಜಿಂಗಲ್‌ಗಳನ್ನು ರೂಪಿಸಿರುವ ಅವರು, ಕೆಲ ಕನ್ನಡದ ಸಿನಿಮಾಗಳಿಗೂ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕದ ಮೂಲದ ಮುದ್ದು ಕೃಷ್ಣ ಅವರ ಮಗಳು ವರ್ಷಾರನ್ನು ವರಿಸಿದ್ದಾರೆ ರಿಕಿ.

ಗ್ರ್ಯಾಮಿ ಎಂದರೇನು?: ಅಮೆರಿಕದ ರೆಕಾರ್ಡಿಂಗ್‌ ಅಕಾಡೆಮಿ ಎಂಬ ಸಂಸ್ಥೆ ಕಳೆದ 62 ವರ್ಷಗಳಿಂದಲೂ ಅತ್ಯುತ್ತಮ ಸಂಗೀತ ಸಾಧಕರಿಗೆ ಕೊಡ ಮಾಡುತ್ತಿರುವ ಪ್ರತಿಷ್ಠಿತ ಪ್ರಶಸ್ತಿ ಇದು. ಗ್ರಾಮೋಫೋನ್‌ ಅವಾರ್ಡ್ಸ್ ಎಂಬುದು ಈ ಪ್ರಶಸ್ತಿಯ ಪೂರ್ಣ ಹೆಸರು. ಸಿನಿಮಾಕ್ಕೆ ಆಸ್ಕರ್‌ ಅಥವಾ ವಿವಿಧ ಕ್ಷೇತ್ರಗಳ ಸಾಧನೆಗೆ ನೊಬೆಲ್‌ ಇರುವಂತೆ ಸಂಗೀತಗಾರರಿಗೆ ಗ್ರ್ಯಾಮಿ ಪ್ರಶಸ್ತಿ ಅತ್ಯಂತ ಹೆಮ್ಮೆಯ ಸಂಗತಿ. ಪ್ರಶಸ್ತಿಯು ಗ್ರಾಮೋಫೋನ್‌ ರೂಪದ ಟ್ರೋಫಿಯನ್ನು ಒಳಗೊಂಡಿರುತ್ತದೆ.

Follow Us:
Download App:
  • android
  • ios