ಬಾಲಿವುಡ್ ತಾರೆ ಹೃತಿಕ್ ರೋಷನ್ ಅವರ ಫಿಟ್ನೆಸ್ ಮತ್ತು ಸ್ಟೈಲ್ ಜೊತೆಗೆ, ಅವರು ಮೆದುಳಿನ ಗಾಯ, ಸ್ಕೋಲಿಯೋಸಿಸ್ ಮತ್ತು ತೊದಲುವಿಕೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೇಗೆ ಜಯಿಸಿದರು ಎಂಬುದನ್ನು ತಿಳಿಯಿರಿ. ಅವರ ಸ್ಫೂರ್ತಿದಾಯಕ ಹೋರಾಟದ ಕಥೆ ನಿಮ್ಮನ್ನು ಬೆರಗುಗೊಳಿಸುತ್ತದೆ.
ಬಾಲಿವುಡ್‌ನ ಫಿಟ್‌ನೆಸ್ ಐಕಾನ್ ಮತ್ತು ಸ್ಟೈಲಿಶ್ ನಟ ಹೃತಿಕ್ ರೋಷನ್‌ರ್ ಬಲಾಡ್ಯ ದೇಹ, ದೈಹಿಕ ಶಕ್ತಿ, ಅವರ ಸಕತ್ ಡ್ಯಾನ್ಸ್‌ಗೆ ಕೋಟ್ಯಂತರ ಫ್ಯಾನ್ಸ್ ಇದ್ದಾರೆ. ಆದರೆ, ತೆರೆಮರೆಯಲ್ಲಿ ಅವರು ಎದುರಿಸಿದ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಕಡಿಮೆ ಜನರಿಗೆ ತಿಳಿದಿದೆ. ಮೆದುಳಿನ ಗಾಯ, ಸ್ಕೋಲಿಯೋಸಿಸ್, ಮತ್ತು ತೊದಲುವಿಕೆಯಂತಹ ವಿಚಿತ್ರ ಕಾಯಿಲೆಗಳ ವಿರುದ್ಧ ಹೋರಾಡಿ, ಹೃತಿಕ್ ತನ್ನ ಛಲದಿಂದ ಎಲ್ಲವನ್ನೂ ಜಯಿಸಿದ್ದಾರೆ.
ಮೆದುಳಿನ ಗಾಯ:
2013ರಲ್ಲಿ ‘ಬ್ಯಾಂಗ್ ಬ್ಯಾಂಗ್’ ಚಿತ್ರೀಕರಣದ ವೇಳೆ ಹೃತಿಕ್‌ರ ತಲೆಗೆ ತೀವ್ರ ಗಾಯವಾಯಿತು. ಆರಂಭದಲ್ಲಿ ಲಘುವಾಗಿ ಕಂಡಿದ್ದ ಈ ಗಾಯ, ತಲೆನೋವು ತೀವ್ರಗೊಂಡಾಗ ಗಂಭೀರವೆಂದು ತಿಳಿಯಿತು. ಎಂಆರ್‌ಐ ಸ್ಕ್ಯಾನ್‌ನಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಯಿತು, ಇದು ಜೀವಕ್ಕೆ ಅಪಾಯಕಾರಿಯಾಗಿತ್ತು. ತಕ್ಷಣ ಶಸ್ತ್ರಚಿಕಿತ್ಸೆಗೆ ಒಳಗಾದ ಹೃತಿಕ್, ವಾರಗಳ ಕಾಲ ವಿಶ್ರಾಂತಿ ಪಡೆದರು. ಈ ಘಟನೆ ಅವರ ವೃತ್ತಿಜೀವನ ಮತ್ತು ಮಾನಸಿಕ-ದೈಹಿಕ ಶಕ್ತಿಯನ್ನು ಪರೀಕ್ಷಿಸಿತು, ಆದರೆ ಅವರು ಕ್ಯಾಮೆರಾದಿಂದ ದೂರ ಉಳಿಯಲಿಲ್ಲ.
ಸ್ಕೋಲಿಯೋಸಿಸ್:
21ನೇ ವಯಸ್ಸಿನಲ್ಲಿ ಹೃತಿಕ್‌ಗೆ ಸ್ಕೋಲಿಯೋಸಿಸ್ ಎಂಬ ಬೆನ್ನುಮೂಳೆ ಕಾಯಿಲೆ ಇರುವುದು ದೃಢಪಟ್ಟಿತು. ಈ ಕಾಯಿಲೆಯಿಂದ ಬೆನ್ನುಮೂಳೆ ಬಾಗುತ್ತದೆ, ನಿರಂತರ ನೋವು ಮತ್ತು ಆಯಾಸವನ್ನು ಉಂಟುಮಾಡುತ್ತದೆ. ವೈದ್ಯರು ಆಕ್ಷನ್ ದೃಶ್ಯಗಳು ಅಥವಾ ನೃತ್ಯವನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಹೃತಿಕ್ ಈ ಸವಾಲನ್ನು ಸ್ವೀಕರಿಸಿ, ವ್ಯಾಯಾಮ, ಚಿಕಿತ್ಸೆ, ಮತ್ತು ಶಿಸ್ತಿನ ಜೀವನಶೈಲಿಯಿಂದ ಕಾಯಿಲೆಯನ್ನು ಮೆಟ್ಟಿನಿಂತು ಬಾಲಿವುಡ್‌ನ ಅತ್ಯುತ್ತಮ ಡ್ಯಾನ್ಸರ್ ಆಗಿ ಮೆರೆದರು.
ತೊದಲುವಿಕೆ:
ಬಾಲ್ಯದಿಂದಲೂ ಹೃತಿಕ್ ತೊದಲುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಶಾಲೆಯಲ್ಲಿ ಗೇಲಿಗೊಳಗಾದ ಅವರು, ಸಾರ್ವಜನಿಕವಾಗಿ ಮಾತನಾಡಲು ಹಿಂಜರಿಯುತ್ತಿದ್ದರು. ಆದರೆ, ಭಾಷಣ ಚಿಕಿತ್ಸೆ ಮತ್ತು ನಿರಂತರ ಅಭ್ಯಾಸದ ಮೂಲಕ ಈ ದೌರ್ಬಲ್ಯವನ್ನು ಜಯಿಸಿದರು. ಇಂದು, ವೇದಿಕೆಯ ಮೇಲೆ ಆತ್ಮವಿಶ್ವಾಸದಿಂದ ಮಾತನಾಡುವ ಹೃತಿಕ್, ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ.
ಹೃತಿಕ್ ರೋಷನ್ ಛಲ:
ಈ ಎರಡು ವಿಚಿತ್ರ ಕಾಯಿಲೆಗಳು ಮತ್ತು ತೊದಲುವಿಕೆಯ ಸವಾಲುಗಳ ಹೊರತಾಗಿಯೂ, ಹೃತಿಕ್ ರೋಷನ್ ತಮ್ಮ ದೃಢಸಂಕಲ್ಪದಿಂದ ಎಲ್ಲವನ್ನೂ ಮೀರಿದ್ದಾರೆ. ಅವರ ಈ ಹೋರಾಟದ ಕಥೆ, ಕೇವಲ ಚಿತ್ರರಂಗದ ಯಶಸ್ಸಿಗೆ ಮಾತ್ರವಲ್ಲ, ಜೀವನದ ಸವಾಲುಗಳನ್ನು ಎದುರಿಸುವ ಧೈರ್ಯಕ್ಕೂ ಸಾಕ್ಷಿಯಾಗಿದೆ.
