ಕಿರುತೆರೆ ನಟಿ ಆತ್ಮಹತ್ಯೆ; ಡೆತ್ ನೋಟ್ ಓದಿ ಫೋಷಕರು ಶಾಕ್!
ಲಾಕ್‌ಡೌನ್‌ನಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ಖ್ಯಾತ ನಟಿ ಪ್ರೇಕ್ಷಾ ಮೆಹ್ತಾ ಸಾವಿಗೂ ಮುನ್ನ ಬರೆದ ಪತ್ರವನ್ನು ಪೋಷಕರು ಓದಿ, ಗಾಬರಿಯಾಗಿದ್ದಾರೆ.
ಮೂಲತಃ ಮಧ್ಯ ಪ್ರದೇಶದವರಾಗಿರುವ ಪ್ರೇಕ್ಷಾ 25 ವರ್ಷಕ್ಕೇ ಕಿರುತೆರೆಯ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. ಕ್ರೈಮ್ ಪ್ಯಾಟ್ರೋಲ್, ಆಶಿಕಿ, ಲಾಲ್ ಇಶ್ಕ್ ಹಾಗೂ ಮೇರಿ ದುರ್ಗಾ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.
ಕೊರೋನಾ ಲಾಕ್ ಡೌನ್; ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ
ಲಾಕ್‌ಡೌನ್‌ನಿಂದ ಆತ್ಮಹತ್ಯೆ:
ಕೊರೋನಾ ವೈರಸ್ ಭೀತಿಯಿಂದ ಭಾರದಲ್ಲಿ ಲಾಕ್‌ಡೌನ್ 1.o ಘೋಷಿಸುವ ಮುನ್ನವೇ ಕಿರುತೆರೆ ಹಾಗೂ ಸಿನಿಮಾಗಳು ಶೂಟಿಂಗ್ ನಿಲ್ಲಿಸುವಂತೆ ಸರಕಾರ ಆದೇಶ ಹೊರಡಿಸಿತ್ತು. ಅಂದಿನಿಂದ ಮನೆಯಲ್ಲಿಯೇ ಪೋಷಕರ ಜೊತೆ ಕಾಲ ಕಳೆಯುತ್ತಿದ್ದ ಪ್ರೇಕ್ಷಾ, ದಿನೆ ದಿನೇ ಸೋಮಾರಿಯಾಗುತ್ತಿದ್ದರು. ಹಾಗೆ ಲಾಕ್‌ಡೌನ್ ಹಂತ ಹಂತವಾಗಿ ಮುಂದುವರೆದದ್ದನ್ನು ಮಾಧ್ಯಮದ ಮೂಲಕ ತಿಳಿದುಕೊಂಡು, ಬೇಸರ ವ್ಯಕ್ತಪಡಿಸುತ್ತಿದ್ದರು, ಎನ್ನುತ್ತಾರೆ ಪೋಷಕರು. ಇದಕ್ಕೆಲ್ಲ ಆತಂಕಗೊಳ್ಳುವ ಆಗತ್ಯವಿಲ್ಲ, ನಿನ್ನಂತೆ ಅನೇಕ ನಟ-ನಟಿಯರಿಗೆ ತೊಂದರೆಯಾಗಿದೆ ಎಂದು ಹೇಳುತ್ತಲೇ, ಮಗಳಿಗೆ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಿದ್ದರು ಪೋಷಕರು. ಆದರೂ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪ್ರೇಕ್ಷಾ. ನಿಜಕ್ಕೂ ಪೋಷಕರಿಗೆ ಇದು ಅರಗಿಸಿಕೊಳ್ಳಾಗದ ಶಾಕ್.
ಡೆತ್ ನೋಟ್ ಬರೆದ ಪ್ರೇಕ್ಷಾ:
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪ್ರೇಕ್ಷಾ ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್ ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ್ದರು. 'ನಮ್ಮ ಕನಸುಗಳನ್ನು ಸಾಯವುದಕ್ಕೆ ಬಿಡುವುದೇ ಘನ ಘೋರ' ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲದೇ ಸಾವಿಗೆ ಕಾರಣ ತಿಳಿಸಿ ಡೆತ್ ನೋಟ್ ಸಹ ಬರೆದಿಟ್ಟಿದ್ದಾರೆ.
'ನನ್ನ ಕನಸುಗಳು ನುಚ್ಚು ನೂರಾಗಿದ್ದು, ನನ್ನ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವಂತೆ ಮಾಡಿದೆ. ಈ ಕೆಟ್ಟ ಕನಸಿನೊಂದಿಗೆ ನನಗೆ ಜೀವನ ನಡೆಸಲು ಸಾಧ್ಯವಿಲ್ಲ. ಇಷ್ಟಲ್ಲಾ ನೆಗೆಟಿವಿಟಿ ಇದ್ದರೆ, ಯಾರೇ ಅದರೂ ಹೇಗೆ ಬದುಕುತ್ತಾರೆ? ಕಳೆದ ಒಂದು ವರ್ಷಗಳಿಂದ ಪ್ರಯತ್ನ ಪಟ್ಟು ವಿಫಲವಾಗಿದ್ದೇನೆ. ಇದು ನನಗೆ ಸಾಕಾಗಿದೆ,' ಎಂದು ಬರೆದುಕೊಂಡಿದ್ದಾರೆ.
ಪೋಷಕರ ಮಾತು:
ಪ್ರೇಕ್ಷಾ ತಂದೆಯ ಮುದ್ದಿನ ಮಗಳಾದರೂ, ಎಲ್ಲ ವಿಚಾರಗಳನ್ನು ತಾಯಿಯ ಜೊತೆ ಹಂಚಿಕೊಳ್ಳುತ್ತಿದ್ದರು. ಆದರೆ ಇದೇನು ಎಂಬುದು ಅವರಿಗೂ ತಿಳಿಯದಂತಾಗಿದೆ. 'ಆಕೆ ಬರೆದಿರುವ ಪತ್ರವನ್ನು ಓದಿದ ನಮಗೆ ಏನೆಂದೂ ತಿಳಿಯುತ್ತಿಲ್ಲ' ಎಂದು ಪ್ರೇಕ್ಷಾ ತಂದೆ ಹೇಳಿಕೊಂಡಿದ್ದಾರೆ.
ಲಾಕ್‌ಡೌನ್ ಟೈಂನಲ್ಲಿ ಲೈವ್ ಚಾಟ್ ಮಾಡಿದ ಪ್ರೇಕ್ಷಾ ಅಭಿಮಾನಿಗಳು ಮದುವೆಯ ಬಗ್ಗೆ ಪ್ರಶ್ನಿಸಿದ್ದಾಗ 'ನಮ್ಮ ಮನೆಯಲ್ಲಿ ಮದುವೆ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಇನ್ನು 2-3 ವರ್ಷ ಅಷ್ಟೇ ಮಾಡುತ್ತೇವೆ, ಅಷ್ಟರಲ್ಲಿ ಏನು ಬೇಕಾದರೂ ಸಾಧನೆ ಮಾಡು ಎಂದು ಹೇಳಿದ್ದಾರೆ,' ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಆದರೆ ಪೋಷಕರಾಗಿ ನಮ್ಮ ಕರ್ತವ್ಯದ ಬಗ್ಗೆ ಪ್ರೇಕ್ಷಾಗೆ ಹೇಳುತ್ತಿದ್ದೆವು. ಆದರೆ ಯಾವುದೇ ರೀತಿಯ ಒತ್ತಡವನ್ನು ಯಾವತ್ತೂ ಹಾಕುತ್ತಿರಲಿಲ್ಲ ಎಂದು ಪ್ರೇಕ್ಷಾ ಅಪ್ಪ-ಅಮ್ಮ ತಿಳಿಸಿದ್ದಾರೆ.
ಇನ್ನು ಚಿಕ್ಕ ವಯಸ್ಸು. ಜೀವನದಲ್ಲಿ ಬೇಕಾದ್ದನ್ನು ಸಾಧಿಸಲು ಸಮಯವಿತ್ತು. ಮನಸ್ಸು ಗಟ್ಟಿ ಇರಬೇಕು ಅಷ್ಟೇ. ಎಲ್ಲರಿಗೂ ಕಷ್ಟ ಸುಖಗಳು ಸಾಮಾನ್ಯ. ಬಂದದ್ದನ್ನು ಧೈರ್ಯವಾಗಿ ಎದುರಿಸವ ಮನೋಸ್ಥೈರ್ಯ ಎಲ್ಲರಿಗೂ ಇರಬೇಕು ಅಷ್ಟೇ. ಅದು ಬಿಟ್ಟು ಹೆತ್ತವರಿಗೆ ಇಂಥದ್ದೊಂದನ್ನು ನೋವು ಕೊಟ್ಟು, ಎಲ್ಲವನ್ನೂ ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರೇಕ್ಷಾಳಂಥ ಮನಸ್ಥಿತಿಯವರು ಎಲ್ಲವನ್ನೂ ಯೋಚಿಸುವ ಅಗತ್ಯವಿದೆ.