2025ರ ಸಾಲಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಅಗ್ರಸ್ಥಾನದಲ್ಲಿದ್ದರೆ, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ನಂತರದ ಸ್ಥಾನಗಳಲ್ಲಿದ್ದಾರೆ. 'ಪುಷ್ಪ' ಮತ್ತು 'ಅನಿಮಲ್' ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ಸಂಭಾವನೆ ಏರಿದರೂ ಟಾಪ್-10 ಸ್ಥಾನವಿಲ್ಲ.
ಬೆಂಗಳೂರು (ಜ.18): ಭಾರತೀಯ ಚಿತ್ರರಂಗ ಇಂದು ಕೇವಲ ನಾಯಕ ಪ್ರಧಾನ ಸಿನಿಮಾಗಳಿಗೆ ಸೀಮಿತವಾಗಿಲ್ಲ. ನಟಿಯರೂ ಕೂಡ ತಮ್ಮ ಅದ್ಭುತ ನಟನೆ ಮತ್ತು ಮಾರುಕಟ್ಟೆ ಮೌಲ್ಯದ ಮೂಲಕ ಬಾಕ್ಸ್ ಆಫೀಸ್ ಆಳುತ್ತಿದ್ದಾರೆ. 2025ರ ಸಾಲಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿಯರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿದ್ದು, ಬಾಲಿವುಡ್‌ನಿಂದ ಹಿಡಿದು ಸೌತ್ ಸಿನಿಮಾ ರಂಗದವರೆಗೂ ನಟಿಯರ ಸಂಭಾವನೆ ಗಗನಕ್ಕೇರಿದೆ.
ಅಗ್ರ ಸ್ಥಾನದಲ್ಲಿ ಪ್ರಿಯಾಂಕಾ ಮತ್ತು ಆಲಿಯಾ: ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಪ್ರತಿ ಸಿನಿಮಾಗೆ ಅಂದಾಜು 30 ರಿಂದ 40 ಕೋಟಿ ರೂಪಾಯಿ ಪಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಬೆನ್ನಲ್ಲೇ ಆಲಿಯಾ ಭಟ್ (25-30 ಕೋಟಿ) ಮತ್ತು ದೀಪಿಕಾ ಪಡುಕೋಣೆ (20-30 ಕೋಟಿ) ಸ್ಥಾನ ಪಡೆದಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆಯಿಂದಾಗಿ ನಟಿಯರ ಸಂಭಾವನೆಯೂ ಈಗ ಪುರುಷ ನಟರಿಗೆ ಸರಿಸಮನಾಗಿ ಬೆಳೆಯುತ್ತಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸ್ಥಾನವೇನು?
ಈ ಪಟ್ಟಿಯಲ್ಲಿ ಅತ್ಯಂತ ಗಮನಾರ್ಹ ಬೆಳವಣಿಗೆ ಎಂದರೆ ಅದು ಕರ್ನಾಟಕದ ಬೆಡಗಿ, 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ. ಈ ಹಿಂದೆ ಟಾಪ್ 10 ಪಟ್ಟಿಯಿಂದ ಹೊರಗಿದ್ದ ರಶ್ಮಿಕಾ, 'ಪುಷ್ಪ' ಮತ್ತು 'ಅನಿಮಲ್' ಸಿನಿಮಾಗಳ ಭರ್ಜರಿ ಯಶಸ್ಸಿನ ನಂತರ ತಮ್ಮ ಸಂಭಾವನೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ. ಆದರೂ, ಈವರೆಗೆ ಟಾಪ್ ಟೆನ್ ಒಳಗೆ ಸ್ಥಾನ ಪಡೆಯಲು ಶ್ರಮಿಸುತ್ತಿದ್ದಾರೆ.
ಪ್ರಸ್ತುತ ರಶ್ಮಿಕಾ ಮಂದಣ್ಣ ಪ್ರತಿ ಸಿನಿಮಾಗೆ 10 ರಿಂದ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದು, ಪಟ್ಟಿಯಲ್ಲಿ 13ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸಾಯಿ ಪಲ್ಲವಿ ಮತ್ತು ಕೃತಿ ಸನನ್ ಅವರಂತಹ ಘಟಾನುಘಟಿ ನಟಿಯರಿಗೆ ತೀವ್ರ ಪೈಪೋಟಿ ನೀಡುತ್ತಿರುವ ರಶ್ಮಿಕಾ, ಸದ್ಯದಲ್ಲೇ ಟಾಪ್ 10 ಲಿಸ್ಟ್‌ಗೆ ಲಗ್ಗೆ ಇಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. 'ಪುಷ್ಪ 2' ಬಿಡುಗಡೆಯ ನಂತರ ಅವರ ಮಾರುಕಟ್ಟೆ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ದಕ್ಷಿಣದ ಲೇಡಿ ಸೂಪರ್‌ಸ್ಟಾರ್‌ಗಳು
ನಯನತಾರಾ ಮತ್ತು ತ್ರಿಶಾ ಕೃಷ್ಣನ್ ಅವರು ದಶಕಗಳಿಂದ ತಮ್ಮ ಮಾರುಕಟ್ಟೆಯನ್ನು ಉಳಿಸಿಕೊಂಡಿದ್ದು, ಕ್ರಮವಾಗಿ 11 ಮತ್ತು 12 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಲಿಸ್ಟ್‌ನಲ್ಲಿದ್ದಾರೆ. ಸಮಂತಾ ರೂತ್ ಪ್ರಭು ಕೂಡ 10 ಕೋಟಿ ಸಂಭಾವನೆಯೊಂದಿಗೆ ಅಗ್ರ 20ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್-20 ನಟಿಯರ ಪಟ್ಟಿ ಇಲ್ಲಿದೆ.
1,ಪ್ರಿಯಾಂಕಾ ಚೋಪ್ರಾ,₹30 - 40 ಕೋಟಿ
2,ಆಲಿಯಾ ಭಟ್,₹25 - 30 ಕೋಟಿ
3,ದೀಪಿಕಾ ಪಡುಕೋಣೆ,₹20 - 30 ಕೋಟಿ
4,ಕಂಗನಾ ರಣಾವತ್,₹15 - 25 ಕೋಟಿ
5,ಕರೀನಾ ಕಪೂರ್,₹10 - 20 ಕೋಟಿ
6,ಸಾಯಿ ಪಲ್ಲವಿ,₹05 - 15 ಕೋಟಿ
7,ಕೃತಿ ಸನನ್,₹08 - 15 ಕೋಟಿ
8,ಕತ್ರಿನಾ ಕೈಫ್,₹10 - 14 ಕೋಟಿ
9,ರಾಕುಲ್ ಪ್ರೀತ್ ಸಿಂಗ್,₹07 - 13 ಕೋಟಿ
10,ವಿದ್ಯಾ ಬಾಲನ್,₹10 - 13 ಕೋಟಿ
11,ಭೂಮಿ ಪೆಡ್ನೇಕರ್,₹04 - 13 ಕೋಟಿ
12,ತೃಪ್ತಿ ಡಿಮ್ರಿ,₹10 - 12 ಕೋಟಿ
13,ರಶ್ಮಿಕಾ ಮಂದಣ್ಣ,₹10 - 12 ಕೋಟಿ
14,ಕಿಯಾರಾ ಅಡ್ವಾಣಿ,₹09 - 12 ಕೋಟಿ
15,ತ್ರಿಶಾ ಕೃಷ್ಣನ್,₹07 - 12 ಕೋಟಿ
16,ನಯನತಾರಾ,₹08 - 11 ಕೋಟಿ
17,ಜಾನ್ವಿ ಕಪೂರ್,₹04 - 11 ಕೋಟಿ
18,ಸೋನಾಕ್ಷಿ ಸಿನ್ಹಾ,₹06 - 11 ಕೋಟಿ
19,ಐಶ್ವರ್ಯಾ ರೈ ಬಚ್ಚನ್,₹08 - 10 ಕೋಟಿ
20,ಸಮಂತಾ ರೂತ್ ಪ್ರಭು,₹06 - 10 ಕೋಟಿ


