ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ 2023 ಪ್ರಕಟವಾಗಿದೆ. ಅತೀ ಹೆಚ್ಚು ಅಂದರೆ 32 ಗ್ರ್ಯಾಮಿ ಪ್ರಶಸ್ತಿ ಗೆಲ್ಲುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ.

ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ 2023 ಪ್ರಕಟವಾಗಿದೆ. ಅತೀ ಹೆಚ್ಚು ಅಂದರೆ 32 ಗ್ರ್ಯಾಮಿ ಪ್ರಶಸ್ತಿ ಗೆಲ್ಲುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ ನಡೆದ ಅದ್ದೂರಿ ಗ್ರ್ಯಾಮಿ ಪ್ರಶಸ್ತಿ ಸಮಾಂರಭದಲ್ಲಿ ಜಗತ್ತಿನ ಅನೇಕ ಗಣ್ಯರು ಭಾಗಿಯಾಗಿದ್ದರು. ಬೆಯೋನ್ಸ್ ಅವಾರ್ಡ್ ಎತ್ತಿ ಹಿಡಿಯುವ ಮೂಲಕ ದಾಖಲೆ ಬರೆದರು. ಅತ್ಯುತ್ತಮ ಡಾನ್ಸ್/ಎಲೆಕ್ಟ್ರಾನಿಕ್ ಮ್ಯೂಸಿಕ್ ಆಲ್ಬಂಗಾಗಿ ಬೆಯೋನ್ಸ್ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಮೂಲಕ 31 ಪ್ರಶಸ್ತಿಗಳನ್ನು ಗೆದ್ದಿದ್ದ ಕ್ಲಾಸಿಕಲ್ ಸಂಗೀತಗಾರ ದಿವಂಗತ ಜಾರ್ಜ್ ಸೊಲ್ಟಿ ಅವರ ದಾಖಲೆಯನ್ನು ಬ್ರೇಕ್ ಮಾಡಿದರು. 

ಕ್ವೀನ್ ಬೇ ಎಂದೇ ಖ್ಯಾತಿಗಳಿಸಿರುವ ಬೆಯೋನ್ಸ್ ಪ್ರಶಸ್ತಿ ಸ್ವೀಕರಿಸಿ, 'ನಾನು ತುಂಬಾ ಭಾವುಕಳಾಗದಿರಲು ಪ್ರಯತ್ನಿಸುತ್ತಿದ್ದೇನೆ. ನಾನು ಈ ರಾತ್ರಿಯನ್ನು ಸ್ವೀಕರಿಸಲು ಪ್ರಯತ್ನಿಸುತ್ತಿದ್ದೇನೆ' ಎಂದರು. ಮಿರ ಮಿರ ಮಿಂಚುತ್ತಿದ್ದ ಗೌನ ಧರಿಸಿದ್ದ ಕ್ವೀನ್ ಬೇ ಮತ್ಸ್ಯೆಕನ್ಯೆಯಾಗಿ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. 41 ವರ್ಷದ ಬೆಯೋನ್ಸ್ ಈ ಸಾಧನೆಗೆ ಅಭಿಮಾನಿಗಳಿಂದ ಅಭಿನಂದನೆಯಗಳ ಮಹಾಪೂರ ಹರಿದುಬರುತ್ತಿದೆ. 

'ನನ್ನನ್ನು ಪ್ರೀತಿಯ ಪೋಷಕರು, ನನ್ನ ತಂದೆ, ನನ್ನ ತಾಯಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಪತಿ, ನನ್ನ ಸುಂದರ ಮೂವರು ಮಕ್ಕಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಬೆಯೋನ್ಸ್ ಪ್ರಶಸ್ತಿ ಗೆದ್ದ ಬಳಿಕ ತನ್ನ ಕುಟುಂಬಕ್ಕೆ ಪ್ರೀತಿ ಪಾತ್ರರಿಗೆ ಧನ್ಯವಾದ ತಿಳಿದರು.

ರೆನೆಸಾನ್ಸ್ ಆಲ್ಬಂ ಬೆಯೋನ್ಸ್ ಅವರ 7ನೇ ಸೋಲೋ ಆಲ್ಬಂ ಆಗಿದೆ. ಬಿಲ್‌ಬೋರ್ಡ್‌ನ ಉತ್ತಮ ಹಾಡುಗಳ ಪಟ್ಟಿಯಲ್ಲಿ ಬೆಯೋನ್ಸ್‌ಗೆ ಪ್ರಥಮ ಸ್ಥಾನವನ್ನು ನೀಡಿತ್ತು.

Grammys 2023: 3ನೇ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬೆಂಗಳೂರಿನ ರಿಕಿ ಕೇಜ್: ಈ ಸಾಧನೆ ಮಾಡಿದ ಏಕೈಕ ಭಾರತೀಯ..!

ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ರಿಕಿ ಕೇಜ್ 

ಖ್ಯಾತ ಸಂಗೀತ ಸಂಯೋಜಕ ಬೆಂಗಳೂರು ಮೂಲದ ರಿಕಿ ಕೇಜ್ ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಡಿವೈನ್ ಟೈಡ್ಸ್ ಎಂಬ ಆಲ್ಬಂ ಬೆಸ್ಟ್‌ ಇಮ್ಮರ್ಸೀವ್‌ ಆಡಿಯೋ ಆಲ್ಬಂ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತ್ತು. ಇಂದು ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಮೂಲಕ ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ಖುಷಿಯಲ್ಲಿದ್ದಾರೆ. ರಿಕಿ ಈ ಪ್ರಶಸ್ತಿಯನ್ನು ಸಾಂಪ್ರದಾಯಿಕ ಬ್ರಿಟಿಷ್ ರಾಕ್ ಬ್ಯಾಂಡ್ ದಿ ಪೊಲೀಸ್‌ನ ಡ್ರಮ್ಮರ್‌ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ, ರಿಕಿ ಕೇಜ್ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾರತೀಯರು ಎನಿಸಿಕೊಂಡಿದ್ದಾರೆ. 

ತಮ್ಮ ಮೂರನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನಂತರ, ರಿಕಿ ಕೇಜ್ ಪ್ರಶಸ್ತಿ ಪುರಸ್ಕೃತರೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ ಹಾಗೂ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ಈ ಬಗ್ಗೆ ಟ್ವೀಟ್‌ ಮಾಡಿದ ರಿಕಿ ಕೇಜ್‌, ಈಗಷ್ಟೇ 3ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಅತ್ಯಂತ ಕೃತಜ್ಞನಾಗಿದ್ದೇನೆ, ನಾನು ಮೂಕವಿಸ್ಮಿತನಾಗಿದ್ದೇನೆ ನಾನು ಈ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸುತ್ತೇನೆ' ಎಂದೂ ರಿಕಿ ಕೇಜ್‌ ಬರೆದುಕೊಂಡಿದ್ದಾರೆ.