ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಲಾಕ್‌ಡೌನ್‌ ತೆರವು ಚಿತ್ರಮಂದಿರಗಳ ಪುನಾರಂಭಕ್ಕೆ ಅನುಮತಿ ನೀಡಲು ಮನವಿ ವಿದ್ಯುತ್‌ ಹಾಗೂ ನೀರಿನ ಶುಲ್ಕ, ಆಸ್ತಿ ತೆರಿಗೆಯಲ್ಲಿ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಕೋರಿಕೆ

 ಬೆಂಗಳೂರು (ಜು.07): ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿರುವ ಚಿತ್ರಮಂದಿರಗಳ ಪುನಾರಂಭಕ್ಕೆ ಅನುಮತಿ ಮತ್ತು ಚಿತ್ರಮಂದಿರಗಳಿಗೆ ವಿದ್ಯುತ್‌ ಹಾಗೂ ನೀರಿನ ಶುಲ್ಕ, ಆಸ್ತಿ ತೆರಿಗೆಯಲ್ಲಿ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಮಾಡಿದೆ.

ಮಂಡಳಿಯ ಅಧ್ಯಕ್ಷ ಡಿ.ಅರ್‌.ಜೈರಾಜ್‌ ನೇತೃತ್ವದ ನಿಯೋಗವು ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಕೊರೋನಾ ಏರಿಕೆ: ಹೆಚ್ಚಿದ ಆತಂಕ ..

ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಂಡಳಿ ಅಧ್ಯಕ್ಷ ಜೈರಾಜ್‌, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಲನಚಿತ್ರ ಮಂದಿರಗಳನ್ನು ತೆರೆಯಲು ಅವಕಾಶ ಕೋಡಲಾಗಿದೆ. ಒಳಾಂಗಣ ಚಿತ್ರೀಕರಣಕ್ಕೂ ಅನುಮತಿ ಕೇಳಿದ್ದೇವೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನು 4-5 ದಿನದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದರು.

ಕೊರೋನಾ: ಎರಡೂ ಅಲೆಯಿಂದ ಪಾರಾದವರಿಗೆ 3ನೇ ಅಲೆ ಕಂಟಕ ..

ಚಿತ್ರರಂಗದವರಿಗೆ ಲಸಿಕೆ ಹಾಕಿಸಲು ಮಾಡಿದ ಮನವಿಗೆ ಸರ್ಕಾರವು ಸ್ಪಂದಿಸಿ ಚಿತ್ರರಂಗದವರನ್ನು ಆದ್ಯತೆ ಮೇರೆಗೆ ಪರಿಗಣಿಸಿ ಉಚಿತವಾಗಿ ಕೋವಿಡ್‌ ಲಸಿಕೆ ಮತ್ತು ಪರಿಹಾರವಾಗಿ ವಿಶೇಷ ಆರ್ಥಿಕ ಪ್ಯಾಕೇಜ್‌ ಹಾಗೂ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಸರ್ಕಾರಕ್ಕೆ ಚಿತ್ರರಂಗ ಅಭಾರಿಯಾಗಿದೆ. ಕೋವಿಡ್‌ನಿಂದಾಗಿ ಚಿತ್ರಮಂದಿರಗಳು 12 ತಿಂಗಳುಗಳ ಕಾಲ ಸ್ಥಗಿತಕೊಂಡು ಸಾಕಷ್ಟುಆರ್ಥಿಕ ಸಮಸ್ಯೆ, ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರದಿಂದ ಆರ್ಥಿಕ ಸಹಾಯ ದೊರಕಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗೆ ನೆರೆ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್‌ ಮತ್ತು ಇತರೆ ರಾಜ್ಯದಲ್ಲಿ ಕೋವಿಡ್‌ನಿಂದ ಉಂಟಾದ ನಷ್ಟಕ್ಕೆ ಅಲ್ಲಿನ ಸರ್ಕಾರಗಳು ಚಿತ್ರಮಂದಿರಗಳಿಗೆ ವಿದ್ಯುತ್‌ ಶುಲ್ಕ, ನೀರಿನ ಶುಲ್ಕ ಮತ್ತು ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಿವೆ. ಹೀಗಾಗಿ ರಾಜ್ಯ ಸರ್ಕಾರವು ಸಹ ರಾಜ್ಯದಲ್ಲಿ ಚಲನಚಿತ್ರ ಮಂದಿರಗಳ ಪುನರಾರಂಭಕ್ಕೆ ಮತ್ತು ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಬೇಕು. ಅಲ್ಲದೇ, ಚಿತ್ರಮಂದಿರಗಳಿಗೆ ವಿದ್ಯುತ್‌, ನೀರಿನ ಶುಲ್ಕ ಮತ್ತು ಆಸ್ತಿ ತೆರಿಗೆಯಲ್ಲಿ ಸಂಪೂರ್ಣ ವಿನಾಯಿತಿ ನೀಡುವ ಮೂಲಕ ಚಲನಚಿತ್ರೋದ್ಯಮ ಉಳಿದು, ಬೆಳೆಯಲು ಸಹಕರಿಸಬೇಕು ಎಂದು ಕೋರಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona