ಬಾಲ ನಟನಾಗಿ ಮಿಂಚಿದ್ದ 27ಹರೆಯದ ಸಿನಿಮಾ ನಟ ಹರಿ ಮುರಳಿ ಶವವಾಗಿ ಪತ್ತೆ, ಪೋಷಕರು ಕಂಗಾಲಾಗಿದ್ದಾರೆ. 15 ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಹರಿ ಮುರಳಿ ದಿಢೀರ್ ಸಾವು ಚಿತ್ರರಂಗಕ್ಕೆ ಮತ್ತೊಂದು ಆಘಾತ ನೀಡಿದೆ. 

ಕಣ್ಣೂರು (ಮಾ.12) ಬಾಲನಟನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟು ಬಳಿಕ ಹಲವು ಸಿನಿಮಾಗಳ ಮೂಲಕ ಜನರ ಮನಸ್ಸು ಗೆದ್ದ 27ರ ಹರೆಯದ ನಟ ಹರಿ ಮುರಳಿ ದುರಂತ ಸಾವು ಕಂಡಿದ್ದಾರೆ. ಮಲೆಯಾಳಂ ಚಿತ್ರರಂಗದಲ್ಲಿ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿದ್ದ ಹರಿ ಮರುಳಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಮಲೆಯಾಳಂ ಸಿನಿಮಾ ರಂಗ ಬೆಚ್ಚಿ ಬಿದ್ದಿದೆ. ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡ ಹರಿ ಮರುಳಿ ಸಾವಿಗೆ ಹಲವು ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನೆಯಲ್ಲಿ ಮೃತದೇಹ ಪತ್ತೆ

ಕೇರಳದ ಪಯ್ಯನ್ನೂರಿನ ಅನ್ನೂರ್‌ನಲ್ಲಿರುವ ಮನೆಯಲ್ಲಿ ಹರಿ ಮುರಳಿ ಅವರ ಮೃತದೇಹ ಪತ್ತೆಯಾಗಿದೆ. ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಹರಿ ಮುರಳಿ ಅವರು 'ರಸಿಕನ್ ಸೇರಿದಂತೆ ಸುಮಾರು 15 ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ಅವರು ವೃತ್ತಿಯಲ್ಲಿ ವಿಎಫ್‌ಎಕ್ಸ್ ಆರ್ಟಿಸ್ಟ್ ಆಗಿದ್ದರು. ಸಿನಿಮಾ ಕ್ಷೇತ್ರದಲ್ಲಿ ವಿಎಫ್‌ಎಕ್ಸ್ ಕಲಾವಿದನಾಗಿ, ನಟನಾಗಿ ಗುರುತಿಸಿಕೊಂಡಿದ್ದರು.

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರಾ ನಟ?

ರಂಗಭೂಮಿ ನಟ ಪಯ್ಯನ್ನೂರು ಮುರಳಿ ಅವರ ಪುತ್ರರಾಗಿದ್ದ ಹರಿ ಮುರಳಿ, ತಮ್ಮ ನಾಲ್ಕೂವರೆ ವರ್ಷ ವಯಸ್ಸಿನಲ್ಲೇ ಎ.ಎಂ. ನಸೀರ್ ಅವರ ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಲಾಲ್ ಜೋಸ್ ನಿರ್ದೇಶನದ 'ರಸಿಕನ್' ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಹರಿ ಮುರಳಿ ಅವರು ಕೆಲವು ಕಾಲದಿಂದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಶಂಕಿಸಲಾಗಿದೆ.

ಮಲೆಯಳಾಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸೇರಿದಂತೆ ಹಲವು ನಟರ ಜೊತೆ ಹರಿ ಮುರಳಿ ಅಭಿನಯಿಸಿದ್ದಾರೆ. ಸಾವಿಗೆ ನಿಖರ ಕಾರಣ ಬಹಿರಂಗವಾಗಿಲ್ಲ. ಹರಿ ಮುರಳಿ ಕಳೆದ ಕೆಲ ತಿಂಗಳಿನಿಂದ ಪೋಷಕರ ಆರೈಕೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಹರಿ ಮರುಳಿ ಕೆಲಸಕ್ಕೂ ತೆರಳದೆ, ನಟನೆಯನ್ನೂ ಮಾಡದೇ ಮನೆಯಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.