Asianet Suvarna News Asianet Suvarna News

Rajkumar Birthday: ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲದಂತೆ ಅಪ್ಪಟ ಕಲಾವಿದರಾಗಿ ಉಳಿದವರು ಡಾ.ರಾಜ್!

"ದಯವಿಟ್ಟು ನನಗೆ ರಾಜಕೀಯ ಪ್ರವೇಶಿಸುವ ಉದ್ದೇಶ ಇಲ್ಲ, ಮೇಲಾಗಿ ನನಗೆ ಇಂಗ್ಲಿಷ್ ಬರೋದಿಲ್ಲ.ನಾನು ಲೋಕಸಭೆಗೆ ಹೋಗಿ ಮಾಡುವುದಾದರೂ ಏನು?' ಡಾ.ರಾಜ್‌ರನ್ನು ರಾಜಕೀಯಕ್ಕೆ ಬರುವಂತೆ ನಾಯಕರು ಕೇಳಿದಾಗಗ ಉತ್ತರಿಸಿದ್ದು ಹೀಗೆ. ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲದಂತೆ ಅಪ್ಪಟ ಕಲಾವಿದರಾಗಿ ಬದುಕಿದವರು ಡಾ.ರಾಜ್.

Dr. Raj birthday special Dr. Raj perfect artist without entering politics rav
Author
First Published Apr 24, 2023, 6:50 PM IST | Last Updated Apr 24, 2023, 7:01 PM IST

ರವಿ ಜಾನೇಕಲ್

ಕರ್ನಾಟಕ ವಿಧಾನಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ, ಪ್ರಚಾರದ ಅಬ್ಬರ ಜೋರಾಗಿ ನಡೆಯುತ್ತಿದೆ. ಮೂರು ಪಕ್ಷಗಳೂ ಉರಿಬಿಸಿಲಲ್ಲಿ ಪೈಪೋಟಿಗೆ ಬಿದ್ದು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸುತ್ತಿದ್ದಾರೆ. ಇಷ್ಟು ಸಾಲದ್ದಕ್ಕೆ ಮತದಾರರನ್ನು ಸೆಳೆಯಲು, ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಚಿತ್ರರಂಗದ ಸ್ಟಾರ್ ನಟರನ್ನು ಕರೆಸಿದ್ದಾರೆ. ನಟ ಸುದೀಪ್ ದರ್ಶನ್ ಇನ್ನೂ ಹಲವರು ಒಂದೊಂದು ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಅಕ್ಷರಶಃ ಚುನಾವಣಾ ಕಣ ರಣರಂಗವಾಗಿ ಬದಲಾಗಿದೆ. 

ರಾಜಕೀಯ ಮತ್ತು ಸಿನಿಮಾಕ್ಕೆ ಎಲ್ಲಿಲ್ಲದ ನಂಟು. ಚಿತ್ರರಂಗದಲ್ಲಿ ಜನಪ್ರಿಯರಾದ ನಟರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ; ಇಲ್ಲವೇ ರಾಜಕೀಯ ಪಕ್ಷಗಳು ಇಂಥ ನಟರನ್ನು ಹಣ, ಅಧಿಕಾರದ ಆಮಿಷೆ ತೋರಿಸಿ ತಮ್ಮ ಪಕ್ಷಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಾರೆ.. ಇದಕ್ಕೆ ಮುಖ್ಯಕಾರಣ ಸ್ಟಾರ್ ನಟರ ಹಿಂದೆ ಇರುವ ಕೋಟ್ಯಂತರ ಅಭಿಮಾನಿಗಳು. ಇಷ್ಟೊಂದು ಪ್ರಮಾಣದ ಅಭಿಮಾನಿಗಳು ರಾಜಕೀಯ ಪಕ್ಷಗಳಿಗೆ ಮತಗಳಾಗಿ ಕಣ್ಣು ಕುಕ್ಕುತ್ತದೆ. ಕೆಲವರು ತಮಗಿರುವ ಜನಪ್ರಿಯತೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನೇ ಬಂಡವಾಳ ಮಾಡಿಕೊಂಡು ಚುನಾವಣೆಗಿಳಿದು ಯಶಸ್ಸು ಕಂಡವರೂ ಇದ್ದಾರೆ, ಸೋತವರೂ ಇದ್ದಾರೆ. 

ಡಾ.ರಾಜ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ತಲೆಗೆ ಹುಳಬಿಟ್ಟ ಡಾಲಿ; ಸಿನಿಮಾ ಯಾವ್ದು ಗೆಸ್ ಮಾಡಿ ಎಂದ ಧನಂಜಯ್

ಸಿನಿಮಾರಂಗ ಮತ್ತು ರಾಜಕೀಯಕ್ಕೆ ಉತ್ತಮ ಉದಾಹರಣೆ ಎಂದರೆ ಆಂಧ್ರಪ್ರದೇಶ ಮತ್ತು ತಮಿಳುನಾಡು. ತೆಲುಗು ಚಿತ್ರರಂಗದ ಸ್ಟಾರ್ ನಟರಾಗಿದ್ದ ಎನ್‌ಟಿ ರಾಮರಾವ್, ರಾಜಕಾರಣಕ್ಕೂ ಪ್ರವೇಶ ಮಾಡಿ ಭರ್ಜರಿ ಯಶಸ್ಸು ಕಂಡರು. ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು. ಚುನಾವಣೆ ಪ್ರಚಾರದಲ್ಲಿ ಸಿನಿಮಾಗಳಲ್ಲಿ ಡೈಲಾಗ್ ಹೊಡೆದಂತೆ ಅಬ್ಬರಿಸುತ್ತಿದ್ದರು.

ತಮಿಳುನಾಡಿನ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ,  ನಟ ಎಂಜಿಆರ್ ಕೂಡ ತೆಲುಗಿನ ಎನ್‌ಟಿಆರ್ ರೀತಿಯಲ್ಲೇ ರಾಜಕೀಯ ಪ್ರವೇಶ ಮಾಡಿ ಭರ್ಜರಿ ಯಶಸ್ಸು ಸಾಧಿಸಿದವರು. ಸ್ಟೈಲಿಶ್, ಡೈಲಾಗ್ ಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. ಎಂಜಿಆರ್ ಸಿನಿಮಾ ಶೂಟಿಂಗ್ ಮುಗಿಸಿ ಅದೇ ಮೇಕಪ್‌, ಡ್ರೆಸ್‌ನಲ್ಲೇ ರಾಜಕೀಯ ಸಭೆ ಸಮಾರಂಭಗಳಿಗೆ, ಮೀಟಿಂಗ್ ಗೆ ಹೋಗುತ್ತಿದ್ದರಂತೆ! ಇನ್ನೂ ತಮಿಳುನಾಡಿನ "ಅಮ್ಮ" ಎಂದೇ ಖ್ಯಾತರಾದ ನಟಿ ಜಯಲಲಿತಾರ ಬಗ್ಗೆ ನಿಮಗೆ ಗೊತ್ತಿರುವಂಥದ್ದೆ. ಇವರು ತಮ್ಮ ಜನಪ್ರಿಯತೆ, ಅಭಿಮಾನಿ ಬಳಗವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಭರ್ಜರಿ ಯಶಸ್ಸು ಸಾದಿಸಿದವರು. 

ಮೇಲಿನ ಎರಡೂ ರಾಜ್ಯಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗದ ನಟರು ರಾಜಕೀಯ ಪ್ರವೇಶ ಮಾಡಿ ಯಶಸ್ಸು ಕಂಡಿದ್ದುಕಡಿಮೆ; ಇಲ್ಲವೇ ಇಲ್ಲ ಎನ್ನಬಹುದು. ಶಂಕರ್‌ನಾಗ ರವಿಚಂದ್ರನ್ ರಿಂದಿಡಿದು ಇಂದಿನ ಸುದೀಪ್‌ ದರ್ಶನ್ ವರೆಗೆ ರಾಜಕೀಯದಲ್ಲಿ ತೊಡಗಿಕೊಂಡವರ ದೊಡ್ಡ ಪಟ್ಟಿಯೇ ಇದೆ. ಆದರೆ ಇಲ್ಲಿ ಯಶಸ್ಸು ಸುಲಭದ ಮಾತಲ್ಲ. ಅದಕ್ಕೆ ಮುಖ್ಯ ಕಾರಣ, ತಮಿಳು ತೆಲುಗು ಜನರಂತೆ ಸಿನಿಮಾ ಮತ್ತು ರಾಜಕೀಯವನ್ನು ಒಂದೇ ತಕ್ಕಡಿಯಲ್ಲಿಟ್ಟು ಕನ್ನಡಿಗರು ತೂಗುವವರಲ್ಲದಿರುವುದು.

 ಡಾ ರಾಜ್‌ಕುಮಾರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ನಡೆದಿತ್ತು!

ಯೋಚನೆ ಮಾಡಿ, ಒಂದು ವೇಳೆ ಎಂಜಿಆರ್, ಎನ್‌ಟಿಆರ್ ರಂತೆ ಕರ್ನಾಟಕದಲ್ಲಿ ಡಾ.ರಾಜ್ ತಮಗಿರುವ ಜನಪ್ರಿಯತೆ, ಕೋಟ್ಯಂತರ ಅಭಿಮಾನಿಬಳಗ ಬಳಸಿಕೊಂಡು ರಾಜಕೀಯ ಪ್ರವೇಶ ಮಾಡಿದ್ದರೆ ಚುನಾವಣೆಯಲ್ಲಿ ಗೆದ್ದು ಈ ರಾಜ್ಯದ ಮುಖ್ಯಮಂತ್ರಿ ಆಗಿಬಿಡಬಹುದಿತ್ತು. ಅವರಿಗೆ ಎಲ್ಲ ಪಕ್ಷಗಳಿಂದಲೂ ರಾಜಕೀಯ ಸೇರುವಂತೆ ಒತ್ತಡ ಬಂದಾಗ ಡಾ ರಾಜ್ ಹೇಳ್ತಿದ್ದು ಒಂದೇ ಮಾತು, ಅಭಿಮಾನಿ ದೇವರು ನನ್ನನ್ನು ನಟನಾಗಿ ಆಯ್ಕೆ ಮಾಡಿದ್ದಾರೆ. ಆ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ನೀವು ಕೂಡ ನನ್ನನ್ನು ಪೂರ್ಣ ಹೃದಯದಿಂದ ನಟನಾಗಿ ಸ್ವೀಕರಿಸಿದ್ದೀರಿ ಮತ್ತು ನನ್ನ ಮೇಲೆ ತುಂಬಾ ಪ್ರೀತಿಯನ್ನು ಧಾರೆ ಎರೆದಿದ್ದೀರಿ.  ರಾಜಕೀಯ ನನ್ನ ಕ್ಷೇತ್ರ ಅಲ್ಲ ದಯವಿಟ್ಟು ನನ್ನನ್ನು ಬಲವಂತ ಮಾಡಬೇಡಿ.' ಎಂದು ನಯವಾಗಿ ತಿರಸ್ಕರಿಸುತ್ತಿದ್ದರು.

ಹೌದು, ಡಾ.ರಾಜ್ ಅವರೆಂದು ರಾಜಕೀಯ ನಾಯಕನಾಗಬೇಕಂಬ ಮಹಾತ್ವಾಕಾಂಕ್ಷೆ ಇಟ್ಟುಕೊಂಡವರಲ್ಲ, ಅಷ್ಟಕ್ಕೂ ರಾಜಕೀಯ ಬಗ್ಗೆ ಯೋಚಿಸಿದವರೂ ಅಲ್ಲ. ಅಭಿಮಾನಿಗಳನ್ನು ಮತಗಳನ್ನಾಗಿ ನೋಡದೆ ದೇವರಂತೆ ಕಂಡವರು ಡಾ.ರಾಜ್.  ತಮ್ಮ ಜೀವನವನ್ನು ಅಭಿನಯ ಕಲೆಗೆ ಮುಡಿಪಾಗಿಟ್ಟ ಅಪ್ಪಟ ಕಲಾವಿದರು ಡಾ.ರಾಜ್, ಇಂಥವರನ್ನು ರಾಜಕೀಯ ರಂಗಕ್ಕೆ ಎಳೆದು ತರಲು ಸಾಕಷ್ಟು  ಪ್ರಯತ್ನಗಳು ನಡೆದವು. ಊಹೂಂ, ಅವೆಲ್ಲವೂ ನಿರರ್ಥಕವಾದವು. ರಾಜಕೀಯ ಒತ್ತಡದಿಂದ ಪಾರಾಗಲು ಅವರು ಅನುಸರಿಸಿದ ದಾರಿಯೇ ಒಂದು ರೋಚಕ.

 1978ರಲ್ಲಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ ಸಮಯ. ಇಂದಿರಾಳನ್ನು ಸೋಲಿಸುವ ಪ್ರಬಲ ಅಭ್ಯರ್ಥಿ ಇದ್ದರೆ ಅದು ಡಾ.ರಾಜ್ ಎಂದು ತಿಳಿದ ಆಗಿನ  ಕರ್ನಾಟಕದ ಜನತಾ ಪಾರ್ಟಿ ಇತರೆ ಪಕ್ಷಗಳು ಡಾ.ರಾಜ್‌ರನ್ನು ಇಂದಿರಾಗಾಂಧಿ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದರು. ಅಷ್ಟೇ ಅಲ್ಲ, ಕೇಂದ್ರದಲ್ಲಿ ಆಡಳಿತಾರೂಢ ಮುಖಂಡರು ಶತ ಪ್ರಯತ್ನ ನಡೆಸಿದ್ದರು. ಮೈಸೂರು ಸಮೀಪ ಕರಿಘಟ್ಟದಲ್ಲಿ 'ತಾಯಿಗೆ ತಕ್ಕ ಮಗ' ಚಿತ್ರದ ಹೊರಾಂಗಣ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣ ಮುಗಿಸಿ ಮೈಸೂರಿನ ಸುಜಾತಾ ಹೋಟೆಲ್‌ಗೆ ಹಿಂದಿರುಗಿದಾಗ ರಾಜ್‌ಕುಮಾರ್ ಅವರಿಗಾಗಿ ಹೊರಗಡೆ ಕೆಲವು ಮಂದಿ ಕಾದಿದ್ದರು.

ರಾಜಕುಮಾರ್ ಅವರು ಬಂದಿದ್ದೇ ತಡ, ' ಸರ್,ನೀವು ದಯವಿಟ್ಟು ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಲೋಕಸಭೆಗೆ ಸ್ಪರ್ಧಿಸಬೇಕು. ನಾವೆಲ್ಲ ನಿಮ್ಮ ಬೆಂಬಲಕ್ಕಿದ್ದೇವೆ.' ಹೇಳಿದರಂತೆ. ಮೊದಲೇ ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲದಂತೆ ಬದುಕಿದ್ದ ಡಾ.ರಾಜ್‌ರಿಗೆ ಇದರಿಂದ ತುಸು ಕಸಿವಿಸಿಯಾಯಿತು. "ದಯವಿಟ್ಟು ನನಗೆ ರಾಜಕೀಯ ಪ್ರವೇಶಿಸುವ ಉದ್ದೇಶ ಇಲ್ಲ, ಮೇಲಾಗಿ ನನಗೆ ಇಂಗ್ಲಿಷ್ ಬರೋದಿಲ್ಲ. ಹಾಗಾಗಿ ನಾನು ಲೋಕಸಭೆಗೆ ಹೊಗಿ ಮಾಡುವುದಾದರೂ ಏನು?' ಎಂದು ನಯವಾಗಿ ತಿರಸ್ಕರಿಸಿದರಂತೆ. ಆದರೆ ಬಂದವರು ಬಿಡಬೇಕಲ್ಲ?  'ಯೋಚಿಸಿ ನೋಡಿ. ನಾವು ನಾಳೆ ಬರುತ್ತೇವೆ' ಎಂದು ಹೊರಟರಂತೆ!

ಇನ್ನೂ ಇಲ್ಲಿದ್ದರೆ ಕೆಲಸ ಕೆಡುತ್ತದೆಂದು ಡಾ.ರಾಜ್ ರಾತ್ರೋರಾತ್ರಿ ಶೂಟಿಂಗ್ ಪ್ಯಾಕಪ್ ಮಾಡಿ ಅಲ್ಲಿಂದ ಬೆಂಗಳೂರಿಗೆ ಹೋಗಿ, ಅಲ್ಲಿಯೂ ತಮ್ಮನು ಕಾಣಲು ಜಾರ್ಜ್ ಫರ್ನಾಂಡಿಸ್ ಬರುವರೆಂದು ತಿಳಿದಾಗ ಮದರಾಸಿಗೆ ಹೋದರಂತೆ. ಅಲ್ಲಿಗೂ ರಾಜಕೀಯ ನಾಯಕರು ಬರುವರೆಂದು ಸುದ್ದಿ ತಿಳಿದಾಗ ಡಾ.ರಾಜ್ ವಿಚಲಿತರಾಗಿದ್ದರಂತೆ ಕೊನೆಗೆ ಅವರ ಸಹೋದರ ವರದಪ್ಪ ಅವರು ನಟನಿಗೆ ಆಪ್ತರಾಗಿದ್ದ ಚಲನಚಿತ್ರ ನಿರ್ಮಾಪಕ ವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ತಮಿಳುನಾಡಿನಿಂದ ರಾಣಿಪೇಟೆಯಿಂದ 21ಕಿಮೀ ದೂರ ಅರಣ್ಯ ಅತಿಥಿಗೃಹದಲ್ಲಿ ಉಳಿಯಲು ಸೂಚಿಸಿದರಂತೆ.

ನಿರ್ಜನ ಪ್ರದೇಶವಾದ ತಮಿಳಿನ ಹಾರ್ಸ್‌ ಲೀಡಿಲ್ ಪ್ರವಾಸಿ ಮಂದಿರದಲ್ಲಿ ನಾಲ್ಕು ದಿನ ಅನ್ನಾಹಾರಗಳಿಲ್ಲದೆ ಅವಸ್ಥೆ ಪಟ್ಟಿದ್ದರು ಡಾ.ರಾಜ್. ಬ್ರೆಡ್ ಹಾಲು ತರಲು ರಾಣಿಪೇಟೆಗೆ ಹೋಗಬೇಕಿತ್ತಂತೆ. ರಾತ್ರಿ ಹೊತ್ತು ವಿಪರೀತ ಕಾಡು ಸೊಳ್ಳೆಗಳಿಂದ ಕಡಿಸಿಕೊಂಡು ಅಲ್ಲೇ ತಂಗಿದ್ದ ಡಾ.ರಾಜ್‌ರು ನಾಮ ಪತ್ರ ಸಲ್ಲಿಸುವ ಕೊನೆಯ ದಿನ ಮುಗಿದ ನಂತರ ಮದರಾಸಿಗೆ ಹಿಂದಿರುಗಿದರಂತೆ. ಹೀಗೆ ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲವೆಂದು ಬದುಕಿ ಅಪ್ಪಟ ಕಲಾವಿದರಾಗಿಯೇ ಉಳಿದವರು ವರನಟ ಡಾ.ರಾಜ್. ಕೊನೆವರೆಗೂ ಯಾರಿಗೂ ಕೇಡು ಬಯಸದವರು. ತಮ್ಮ ಜನಪ್ರಿಯತೆ, ಅಪಾರ ಅಭಿಮಾನಗಳ ಬಳಗವನ್ನು ಯಾರನ್ನೋ ಸೋಲಿಸಲು ಅಸ್ತ್ರವಾಗಿ ಬಳಸಿಕೊಳ್ಳಲು ಬಿಡಲಿಲ್ಲ. ಕೊನೆವರೆಗೂ ಕಲಾವಿದನಾಗಿ ಬದುಕಿ ಬಾಳಿದರು. 

Nandini VS Amul: ಅಣ್ಣಾವ್ರು ನಟಿಸಿದ್ದು ಒಂದೇ ಜಾಹೀರಾತು, ಅಂಥಾ ನಂದಿನಿಗೆ ಬಂದಿತೇಕೆ ಆಪತ್ತು?

( ಆಧಾರ: ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿದ್ದ ರಾಜ್‌ಕುಮಾರರ 91 ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಹಿರಿಯ ನಟ ನಿರ್ಮಾಪಕ ದೊರೈಭಗಾವನ್ ಡಾ.ರಾಜ್‌ರನ್ನು ಸ್ಮರಿಸಿಕೊಂಡಿರುವುದು
 

Latest Videos
Follow Us:
Download App:
  • android
  • ios