ನಟ ಸೈಫ್ ಅಲಿ ಖಾನ್‌ಗೆ 6 ಕಡೆ ಚಾಕು ಇರಿತ, 2.5 ಇಂಚಿನ ಚೂರಿಯನ್ನು ಹೊರತೆಗೆಯಲಾಗಿದೆ. ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಸೈಫ್ ಅಪಾಯದಿಂದ ಪಾರಾಗಿದ್ದಾರೆ.
ಮುಂಬೈ: ಅನಾಮಿಕ ವ್ಯಕ್ತಿಯೊಬ್ಬ ನಡೆಸಿದ ಚೂರಿ ಇರಿತದಿಂದ ನಟ ಸೈಫ್ ಅಲಿಖಾನ್‌ಗೆ ಒಟ್ಟು 6 ಕಡೆ ಗಾಯಗಳಾಗಿದೆ. ಈ ಪೈಕಿ 2 ಸಾಮಾನ್ಯ, 2 ಮಧ್ಯಮ, 2 ಆಳವಾದ ಇರಿತಗಳಾಗಿದೆ. ಸದ್ಯ ಅವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, 2.5 ಇಂಚು ಉದ್ದದ ಚೂರಿಯನ್ನು ಹೊರಕ್ಕೆ ತೆಗೆಯಲಾಗಿದೆ. ಸದ್ಯ ಸೈಫ್ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಪ ಪಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸೈಫ್ ದಾಖಲಾಗಿರುವ ಮುಂಬೈನ ಲೀಲಾವತಿ ಆಸ್ಪತ್ರೆಯ ವೈದ್ಯರು, ‘ಚಾಕು ಇರಿತದಿಂದ ಬೆನ್ನು ಮೂಳೆಗೆ ಗಾಯಗಳಾಗಿವೆ. ಬೆನ್ನು ಮೂಳೆಯಿಂದ 2.5 ಇಂಚಿನ ಚಾಕುವನ್ನು ತೆಗೆದು ಹಾಕಿದ್ದೇವೆ. ನಟನಿಗೆ ಎರಡು ತೀವ್ರ, ಎರಡು ಮಧ್ಯಮ ಮತ್ತು ಎರಡು ಆಳವಾದ ಇರಿತಗಳಾಗಿವೆ. ಗಾಯಗಳು ಆಳವಾಗಿದ್ದವು, ಆದರೂ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾದರು. ಅವರಿಗೆ ನ್ಯೂರೋಸರ್ಜರಿ ಮತ್ತು ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಐಸಿಯುನಲ್ಲಿದ್ದು, ಒಂದೆರೆಡು ದಿನಗಳಲ್ಲಿ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು’ ಎಂದಿದ್ದಾರೆ.
ಆರೋಪಿ ಪರಾರಿ ದೃಶ್ಯ ಸಿಸಿಟಿವಿ ಸೆರೆ
ನಟ ಸೈಫ್ ಅಲಿ ಖಾನ್ ಅವರ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದ ಆರೋಪಿಯು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿವೆ. 12ನೇ ಮಹಡಿಯಲ್ಲಿ ದಾಳಿ ಮಾಡಿ ಕಾಲ್ನಡಿಗೆ ಮೂಲಕ 6ನೇ ಮಹಡಿಗೆ ಬಂದು ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಸೈಫ್ ಆಲಿ ಖಾನ್ ಪ್ರಕರಣ, ಮಗುವಿನೊಂದಿಗೆ ಆಸ್ಪತ್ರೆಗೆ ಆಗಮಿಸಿ ದಾಳಿಗೆ ಕಾರಣ ಬಿಚ್ಚಿಟ್ಟ ಮಹಿಳೆ
ದಾಳಿಗೂ 2 ತಾಸು ಮುನ್ನ ಪಾರ್ಟಿಗೆ ತೆರಳಿದ್ದ ಕರೀನಾ
ಸೈಫ್ ಮೇಲಿನ ದಾಳಿ ವೇಳೆ ಅವರ ಪತ್ನಿ ಕರೀನಾ ಪಾರ್ಟಿಯಲ್ಲಿದ್ದರು ಎನ್ನಲಾಗಿದೆ. ದಾಳಿಗೂ 2 ತಾಸು ಮುನ್ನ ಕರೀನಾ ಕಪೂರ್ ತಮ್ಮ ಸೋದರಿ ಕರೀಷ್ಮಾ ಮತ್ತು ಗೆಳತಿ ಸೋನಂ, ರಿಯಾ ಕಪೂರ್ ಅವರೊಂದಿಗೆ ಪಾರ್ಟಿಗೆ ತೆರಳಿದ್ದರು. ಇದರ ಚಿತ್ರಗಳನ್ನು ಸಹ ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಆಟೋದಲ್ಲಿ ತಂದೆ ಸೈಫ್ ಆಸ್ಪತ್ರೆಗೆ ಕರೆದೊಯ್ದ ಪುತ್ರ
ಆಗಂತುಕನ ದಾಳಿಗೆ ತುತ್ತಾಗಿ ತೀವ್ರವಾಗಿ ಗಾಯಗೊಂಡಿದ್ದ ಸೈಫ್ ಅವರನ್ನು ಸ್ವತಃ ಅವರ ಪುತ್ರ ಇಬ್ರಾಹಿಂ ಅಟೋದಲ್ಲಿ ಕರೆದೊಯ್ದು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ನಡೆದ ಬಳಿಕ ತಕ್ಷಣವೇ ಸೈಫ್‌ರನ್ನು ಕರೆದೊಯ್ಯಲು ಯತ್ನಿಸಿದ ವೇಳೆ ಮನೆಯಲ್ಲಿದ್ದ ಯಾವುದೇ ಕಾರುಗಳು ನಾನಾ ಕಾರಣದಿಂದ ಲಭ್ಯವಾಗಲಿಲ್ಲ. ಹೀಗಾಗಿ ಮನೆಯ ಹೊರಗಿದ್ದ ಆಟೋ ಮೂಲಕ ಸೈಫ್‌ರನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಯ್ತು.
ಇದನ್ನೂ ಓದಿ: ಬಾಲಿವುಡ್ ತಾರೆಯರ ಮೇಲೆ ದಾಳಿಗಳು: ಸೈಫ್ ಅಲಿ ಖಾನ್ ಹೊಸ ಗುರಿಯೇ?
