ನಾನು ಸುದೀಪ್ ಸಹೇಬರ ಪರ; ವಿವಾದಕ್ಕೆ ಅಂತ್ಯ ಹಾಡಿದ ಯೋಗರಾಜ್ ಭಟ್
ಯೋಗರಾಜ್ ಭಟ್ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ದೀರ್ಘವಾದ ಪತ್ರ ಬರೆದು ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ. ಪತ್ರದಲ್ಲಿ ಯೋಗರಾಜ್ ಭಟ್ ಸುದೀಪ್ ಪರ ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ್(Sudeep) ಮತ್ತು ಬಾಲಿವುಡ್ ನಟ ಅಜಯ್ ದೇವಗನ್( Ajay devgan) ನಡುವಿನ ರಾಷ್ಟ್ರಭಾಷಾ ಕಿಡಿ ದೇಶದಾದ್ಯಂತ ಸದ್ದು ಮಾಡುತ್ತಿದೆ. ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ ಅಜಯ್ ದೇವಗನ್ ಟ್ವಿಟ್ಟರ್ ಮೂಲಕ ಕಿಡಿ ಕಾರಿದ್ದರು. ಅಜಯ್ ದೇವಗನ್ ಟ್ವೀಟ್ ಗೆ ಸುದೀಪ್ ಖಡಕ್ ಪ್ರತಿಕ್ರಿಯೆ ನೀಡಿವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದ್ರು. ಆದರೆ ಇಬ್ಬರು ಸ್ಟಾರ್ ನಟರ ನಡುವಿನ ರಾಷ್ಟ್ರಭಾಷಾ ಚರ್ಚೆ ಕ್ಷಣಾರ್ಧದಲ್ಲಿ ವೈರಲ್ ಆಗಿ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಯಿತು.
ಈ ಬಗ್ಗೆ ಅನೇಕ ಕಲಾವಿದರು ಮತ್ತು ರಾಜಕಾರಣಿಗಳು ಪ್ರತಿಕ್ರಿಯೆ ನೀಡಿ ಸುದೀಪ್ ಪರ ನಿಂತಿದ್ದಾರೆ. ಇತ್ತೀಚಿಗಷ್ಟೆ ನಿರ್ದೇಶಕ ಯೋಗರಾಜ್ ಭಟ್(Yogaraj Bhat) ನೀಡಿದ್ದ ಹೇಳಿಕೆ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಷ್ಟ್ರಭಾಷೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಯೋಗರಾಜ್ ಭಟ್ ರಾಷ್ಟ್ರದ ಸಮಸ್ಯೆಯನ್ನು ನನಗೆ ಕೇಳಿದ್ರೆ ಗೊತ್ತಿಲ್ಲ ಎನ್ನುವ ಮೂಲಕ ಕನ್ನಡಿಗರ ಕೋಪಕ್ಕೆ ಕಾರಣರಾಗಿದ್ದರು. ಇದೀಗ ಭಟ್ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ದೀರ್ಘವಾದ ಪತ್ರ ಬರೆದು ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ. ಪತ್ರದಲ್ಲಿ ಯೋಗರಾಜ್ ಭಟ್ ಸುದೀಪ್ ಪರ ಎಂದು ಹೇಳಿದ್ದಾರೆ.
'ನಮಸ್ತೆ, ರಾಷ್ಟ್ರೀಯ ಭಾಷೆ ವಿವಾದ ವಿಚಾರವಾಗಿ ಮಾಧ್ಯಮ ಮಿತ್ರರು ಪ್ರಶ್ನಿಸಿದಾಗ ಅದರ ಬಗ್ಗೆ ಪ್ರತಿಕ್ರಿಯೆ ನೀಡುವಷ್ಟು ತಿಳಿದವನು ನಾನಲ್ಲ ಎಂದು ಹೇಳಿದ್ದೇನೆ ಹೊರತು ಹಿಂದಿಯೇ ರಾಷ್ಟ್ರಭಾಷೆ ಎಂದು ನಾ ಹೇಳಿಲ್ಲ. ಹೇಳುವುದೂ ಇಲ್ಲ. ಸಂವಿಧಾನ ಪ್ರಕಾರವಾಗಿ ರಾಷ್ಟ್ರಭಾಷೆ ಎನ್ನುವುದೇ ಇಲ್ಲವಾದ್ದರಿಂದ ಈ ಕುರಿತ ಚರ್ಚೆ ಎಲ್ಲಗೂ ಹೋಗಿ ಮುಟ್ಟುವುದಿಲ್ಲ. ಹಾಗಾಗಿ ಯಾರೇ ಆಗಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದ ಮಾತ್ರಕ್ಕೆ ಅದು ರಾಷ್ಟ್ರಭಾಷೆ ಆಗುವುದಿಲ್ಲ. ಈ ಕಾರಣಕ್ಕೆ ನಾನು ಇದನ್ನೆಲ್ಲವನ್ನು ಗಂಭೀರವಾಗಿ ಪರಿಗಣಿಸದೇ ಇಡೀ ವಿವಾದಕ್ಕೆ ಅಚ್ಚಗನ್ನಡದಲ್ಲಿ ಅಂತ್ಯ ಹಾಡಲೆತ್ನಿಸಿದ್ದೇನೆಯೇ ಹೊರತು ಬೇರೇನು ಇಲ್ಲ. ನನ್ನ ಕನ್ನಡ, ನನ್ನ ಕನ್ನಡ ಭಾಷಾಭಿಮಾನ, ಕನ್ನಡ ಸೇವೆ ಕನ್ನಡತನದ ಬಗ್ಗೆ ತಮಗೆಲ್ಲ ತಿಳಿದೇ ಇದೆ. ಹಾಗೂ ನಾನು ನನ್ನ ಸನ್ಮಿತ್ರರಾದ ಸುದೀಪ್ ಸಹೇಬರ ಪರವಾಗಿ ಎಂದು ತಮಗೆಲ್ಲ ಪ್ರತ್ಯೇಕವಾಗಿ ಹೇಳಬೇಕೆ? ಕನ್ನಡವೇ ನನ್ನ ಪಾಲಿನ, ನನ್ನ ಬಾಳಿನ ಏಕೈಕ ರಾಷ್ಟ್ರಭಾಷೆ. ಸಿರಿ ಗನ್ನಡಂ ಗೆಲ್ಗೆ..' ಎಂದು ಹೇಳಿದ್ದಾರೆ.
ಹಿಂದಿ ರಾಷ್ಟ್ರಭಾಷೆಯಲ್ಲ, ಹಿಂದಿ ಸಿನಿಮಾಗಳನ್ನು ದಕ್ಷಿಣದಲ್ಲಿ ರಿಲೀಸ್ ಮಾಡಲು ಒದ್ದಾಡುತ್ತಿದ್ದಾರೆ- ಸುದೀಪ್
ಯೋಗರಾಜ್ ಭಟ್ ಸದ್ಯ ಗಾಳಿಪಟ-2 ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಜೊತೆಗೆ ಗರುಡ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನನ್ನ ಪಾಲಿನ ಏಕೈಕ ಭಾಷೆ ಕನ್ನಡ ಎನ್ನುವ ಮೂಲಕ ಕನ್ನಡತನ ಮೆರೆದಿದ್ದಾರೆ. ಈ ಪತ್ರಕ್ಕೆ ಸಹೃದಯಿ ಸ್ನೇಹಿತರಿಗೆ ಒಂದು ಸ್ಪಷ್ಟನೆ ಎನ್ನುವ ಕ್ಯಾಪ್ಷನ್ ಮೂಲಕ ಬರೆದಿದ್ದಾರೆ.
ಅಜಯ್ ದೇವಗನ್ ಗೆ ಅಕ್ಷಯ್ ಕುಮಾರ್ ಸಾಥ್; ಗುಟ್ಕಾ ಗ್ಯಾಂಗ್ ಎಂದು ಕಾಲೆಳೆದ ನೆಟ್ಟಿಗರು
ಇನ್ನು ಸುದೀಪ್ ಮಾತಿಗೆ ಕನ್ನಡ ಸ್ಟಾರ್, ರಾಜಕಾರಣಿಗಳ ಜೊತೆಗೆ ಪರಭಾಷೆಯಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಸುದೀಪ್ ಅವರ ಮಾತಿಗೆ ಕನ್ನಡದ ನಟ ನೀನಾಸಂ ಸತೀಶ್ (Ninasam Satish), ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (siddaramaiah), ನಟಿ ಹಾಗೂ ರಾಜಕಾರಣಿ ರಮ್ಯಾ (Ramya), ಸಿಎಂ ಬೊಮ್ಮಾಯಿ, ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಸುದೀಪ್ ಮಾತಿಗೆ ದನಿಗೂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದಾರೆ.