ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 86 ಲಕ್ಷ ರೂಪಾಯಿ ಮೌಲ್ಯದ ಮತ್ತೊಂದು ಭೂಮಿಯನ್ನು ಖರೀದಿಸಿದ್ದಾರೆ. ಈ ಹಿಂದೆಯೂ ಅವರು ರಾಮ ಮಂದಿರದ ಬಳಿ ಜಮೀನು ಖರೀದಿಸಿದ್ದರು.

ಬಾಲಿವುಡ್ ಹಿರಿಯ ನಟ ಅಮಿತಾಭ ಬಚ್ಚನ್ ಅವರು ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಮತ್ತೊಂದು ಭೂಮಿ ಖರೀದಿ ಮಾಡಿದ್ದಾರೆ. ತಂದೆಯ ಸ್ಮಾರಕ ನಿರ್ಮಿಸಲು ಅಮಿತಾಬ್ ಬಚ್ಚನ್ ಪವಿತ್ರ ನಗರವಾದ ಅಯೋಧ್ಯೆಯಲ್ಲಿ ಗಮನಾರ್ಹ ಪ್ರಮಾಣದ ಭೂಮಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಬರೋಬ್ಬರಿ 86 ಲಕ್ಷ ವೆಚ್ಚದ ಭೂಮಿಯನ್ನು ಅಲ್ಲಿ ಬಾಲಿವುಡ್ ನಟ ಖರೀದಿ ಮಾಡಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಹರಿವಂಶರಾಯ್ ಬಚ್ಚನ್‌ ಟ್ರಸ್ಟ್‌ನಿಂದ ಭೂಮಿ ಖರೀದಿ

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಅಮಿತಾಭ್ ಬಚ್ಚನ್ ಅವರ ತಂದೆ ಹಿಂದಿಯ ಖ್ಯಾತ ಕವಿ ದಿವಂಗತ ಹರಿವಂಶ್ ರಾಯ್ ಬಚ್ಚನ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಟ್ರಸ್ಟ್‌ ವತಿಯಿಂದ ರಾಮ ಮಂದಿರದಿಂದ 10 ಕಿ.ಮೀ ದೂರದಲ್ಲಿ ಸುಮಾರು 54,454 ಚದರ ಅಡಿ ಜಾಗವನ್ನು ಖರೀದಿ ಮಾಡಿದೆ. ಈ ಜಾಗದಲ್ಲಿ ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಜೀವನ ಮತ್ತು ಸಾಹಿತ್ಯ ಕೊಡುಗೆಗಳಿಗೆ ಮೀಸಲಾಗಿರುವ ಸ್ಮಾರಕವನ್ನು ಸ್ಥಾಪಿಸಲು ಈ ಭೂಮಿಯನ್ನು ಬಳಸಬಹುದು ಎಂಬ ಊಹಾಪೋಹಗಳು ಕೇಳಿ ಬಂದಿವೆ. ಇದು ಅಯೋಧ್ಯೆಯಲ್ಲಿ ಬಚ್ಚನ್ ಕುಟುಂಬ ನಡೆಸುತ್ತಿರುವ 2ನೇ ಭೂ ವ್ಯವಹಾರವಾಗಿದೆ. 

ಇದಕ್ಕೂ ಮೊದಲು 4.54 ಕೋಟಿ ಮೊತ್ತದ ಭೂಮಿ ಖರೀದಿ ಮಾಡಿದ ಅಮಿತಾಭ್

ಕಳೆದ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ಬೃಹತ್‌ ರಾಮ ಮಂದಿರದ ಅದ್ಧೂರಿ ಉದ್ಘಾಟನೆ ಸಮಾರಂಭ ನಡೆದಿತ್ತು. ಇದಕ್ಕೂ ಮೊದಲು ಅಮಿತಾಭ್ ಜನವರಿ 16 ರಂದು ಅಯೋಧ್ಯೆ ಸಮೀಪದ ಹವೇಲಿ ಅವಧ್‌ನಲ್ಲಿ 5,372 ಚದರ ಅಡಿ ವಿಸ್ತೀರ್ಣದ ಜಮೀನನ್ನು 4.54 ಕೋಟಿ ರೂ. ನೀಡಿ ಖರೀದಿಸಿದ್ದರು. ಇದರ ಜೊತೆಗೆ ಈಗ ಅವರು ತಿಹುರಾ ಮಂಜಾದಲ್ಲಿ 86 ಲಕ್ಷ ರೂ. ನೀಡಿ ಮತ್ತೊಂದು ಭೂಮಿ ಖರೀದಿ ಮಾಡಿದ್ದಾರೆ. 

ಅಮಿತಾಭ್ ಬಚ್ಚನ್ Vs ಐಶ್ವರ್ಯಾ ರೈ : ಮಾವ-ಸೊಸೆ ಇಬ್ಬರ ಪೈಕಿ ಯಾರು ಶ್ರೀಮಂತರು?

ಅಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾ ವರದಿಯ ಮೂಲಗಳ ಪ್ರಕಾರ, ರಾಮ ಮಂದಿರದ ಬಳಿ ಇರುವ ಹವೇಲಿ ಅವಧ್‌ನಲ್ಲಿ ಅಮಿತಾಭ್ ಖರೀದಿಸಿದ ಭೂಮಿಯನ್ನು ವಸತಿಗಾಗಿ ಬಳಕೆ ಮಾಡಲು ಉದ್ದೇಶಿಸಿರಬಹುದು. ಹಾಗೆಯೇ ದೊಡ್ಡ ಜಮೀನನ್ನು ಸಾಮಾಜಿಕ ಅಥವಾ ದತ್ತಿ ಕಾರ್ಯಕ್ಕೆ ಮೀಸಲಿಡಬಹುದು ಎಂದು ವರದಿಯಾಗಿದೆ. ಈಗ ತಿಹುರಾ ಮಂಜಾದಲ್ಲಿ ಅಮಿತಾಬ್ ಹೊಸದಾಗಿ ಖರೀದಿಸಿರುವ ಭೂಮಿ ರಾಮ ಮಂದಿರದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿದೆ ಜನವರಿ 31 ರಂದೇ ಈ ಭೂಮಿಯ ನೋಂದಣಿ ಕಾರ್ಯ ಪೂರ್ಣಗೊಂಡಿದೆ ಎಂಬ ಮಾಹಿತಿ ಇದೆ. 

ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿರುವ ನಟ

2023 ರಲ್ಲಿಯೇ ಅಮಿತಾಬ್ ಬಚ್ಚನ್ ಅಯೋಧ್ಯೆಗೆ ಭೇಟಿ ನೀಡಿ ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ದಿ ಹೌಸ್ ಆಫ್ ಅಭಿನಂದನ್ ಲೋಧಾ (HoABL)ಅಭಿವೃದ್ಧಿಪಡಿಸಿದ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದರು. ಮತ್ತೊಂದು ಆಂಗ್ಲ ಮಾಧ್ಯಮ ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದ ವರದಿಯ ಉದ್ಯಮ ಮೂಲಗಳ ಪ್ರಕಾರ, ಈ ಭೂಮಿ ಸುಮಾರು 10,000 ಚದರ ಅಡಿಗಳನ್ನು ಒಳಗೊಂಡಿದೆ ಮತ್ತು 14.5 ಕೋಟಿ ರೂ.ಗೆ ಇದನ್ನು ಖರೀದಿ ಮಾಡಲಾಗಿದೆ. 

ಈ ನಡುವೆ ಪ್ರತ್ಯೇಕ ಬೆಳವಣಿಗೆಯೊಂದರಲ್ಲಿ, ಅಯೋಧ್ಯೆಯಲ್ಲಿ ಮುಂಬರುವ ಗ್ರೀನ್‌ಫೀಲ್ಡ್ ಟೌನ್‌ಶಿಪ್‌ನಲ್ಲಿ ರಾಜ್ಯದ ಪಾಲಿನ ಅತಿಥಿ ಗೃಹವನ್ನು ನಿರ್ಮಿಸಲು ಮಹಾರಾಷ್ಟ್ರ ಸರ್ಕಾರವು ಅಯೋಧ್ಯೆಯ ಆವಾಸ್ ವಿಕಾಸ್ ಪರಿಷತ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದು, ಅದು ಅಂತಿಮ ಹಂತದಲ್ಲಿದೆ.

ಅಮಿತಾಭ್ ಬಚ್ಚನ್ ಕುಟುಂಬದಲ್ಲಿ ಹುಟ್ಟು ಹಬ್ಬಕ್ಕೆ ಕೇಕ್ ಕತ್ತರಿಸಲ್ಲ, ಆಚರಣೆ ಹೇಗೆ?