ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನವೆಂಬರ್ ತಿಂಗಳ ಆರಂಭದಲ್ಲಿ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಹೆಣ್ಣು ಮಗುವಿನ ಪೋಷಕರಾಗಿರುವ ಸೆಲೆಬ್ರೆಟಿ ದಂಪತಿ ಇದೀಗ ಮಗುವಿನ ನಾಮಕರಣ ಮಾಡಿದ್ದಾರೆ. ಮಗುವಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿನ ಅರ್ಥವೇನು
ಮುಂಬೈ(ನ.24): ಬಾಲಿವುಡ್‌ನ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ನಾಮಕರಣ ಮಾಡಿದ್ದಾರೆ. ಮಗಳಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ನವೆಂಬರ್ 6 ರಂದು ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಅಭಿಮಾನಿಗಳು ಹೆಸರಿನ ಕುರಿತು ತೀವ್ರ ಚರ್ಚೆ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ರಣಬೀರ್ ಹಾಗೂ ಆಲಿಯಾ ಹೆಸರು ಜೋಡಿಸಿ ಹಲವು ಹೆಸರುಗಳನ್ನು ಸೂಚಿಸಿದ್ದರು. ಇದೇ ವೇಳೆ ರಣಬೀರ್ ಹಾಗೂ ಆಲಿಯಾ ಮಗಳಿಗೆ ಇಡುವ ಹೆಸರೇನು ಅನ್ನೋ ತಿಳಿದುಕೊಳ್ಳುವ ಕುತೂಹಲವೂ ಹೆಚ್ಚಾಗಿತ್ತು. ಕೊನೆಗೂ ರಣಬೀರ್ ಹಾಗೂ ಆಲಿಯಾ ಮಗಳ ಹೆಸರು ಬಹಿರಂಗ ಪಡಿಸಲಾಗಿದೆ. ವಿಶೇಷ, ಅಪರೂಪದ ಹಾಗೂ ಚಂದದ ಹೆಸರನ್ನು ರಣಬೀರ್ ಹಾಗೂ ಆಲಿಯಾ ತಮ್ಮ ಮಗಳಿಗೆ ಇಟ್ಟಿದ್ದಾರೆ.
ಮಗಳ ಹೆಸರನ್ನು ಅಲಿಯಾ ಭಟ್ ಇನ್‌ಸ್ಟಾಗ್ರಾಂ ಮೂಲಕ ಬಹಿರಂಗ ಪಡಿಸಿದ್ದಾರೆ. ರಾಹಾ ಪದದ ಅರ್ಥವನ್ನು ಅಲಿಯಾ ಭಟ್ ವಿವರಿಸಿದ್ದಾರೆ. ರಾಹಾ ಹಲವು ಅರ್ಥಗಳನ್ನು ಹೊಂದಿದೆ. ರಾಹಾ ಎಂದರೆ ದೈವಿಕ ಮಾರ್ಗ ಎಂದರ್ಥ. ಸ್ವಾಹಿಲಿ ಭಾಷೆಯಲ್ಲಿ ಸಂತೋಷ. ಇನ್ನು ಸಂಸ್ಕೃತದಲ್ಲಿ ಕುಲ ಎಂದರ್ಥ. ಬಂಗಾಳಿ ಭಾಷೆಯಲ್ಲಿ ವಿಶ್ರಾಂತಿ, ಸೌಕರ್ಯ, ಪರಿಹಾರ ಎಂದರ್ಥ, ಅರೆಬಿಕ್ ಭಾಷೆಯಲ್ಲಿ ರಾಹಾ ಎಂದರೆ ಶಾಂತಿ, ಸಂತೋಷ ಹಾಗೂ ಸ್ವಾತಂತ್ರ್ಯ ಎಂಬ ಅರ್ಥವಿದೆ. ನಾವು ರಾಹಾಳನ್ನು ಕೈಯಲ್ಲಿ ಹಿಡಿದ ದಿನದಿಂದ ನಾವು ಸಂತೋಷ, ಶಾಂತಿ ಅನುಭವಿಸುತ್ತಿದ್ದೇವೆ. ನಮ್ಮ ಕುಟುಂಬವನ್ನು ಜೀವಂತವಾಗಿಸಿದ, ಸಂತೋಷವಾಗಿರಿಸಿದ ರಾಹಾಳಿಗೆ ಧನ್ಯವಾದ. ನಮ್ಮ ಜೀವನ ಈಗಷ್ಟೇ ಆರಂಭವಾದಂತಿದೆ ಎಂದು ಅಲಿಯಾ ಭಟ್ ಹೇಳಿದ್ದಾರೆ.
ಮಗುವಿನ ಗೌಪ್ಯತೆ ಕಾಪಾಡಲು ನೋ ಫೋಟೋ ಪಾಲಿಸಿ ಆರಿಸಿಕೊಂಡ ಆಲಿಯಾ ಭಟ್
ನವೆಂಬರ್ 6ಕ್ಕೆ ಹೆಣ್ಣುಮುಗುವಿಗೆ ಜನ್ಮ ನೀಡಿದ್ದ ಆಲಿಯಾ
ಬಾಲಿವುಡ್‌ನ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‌ಗೆ ನವೆಂಬರ್ 6 ರಂದು ಪೋಷಕರಾಗಿದ್ದಾರೆ. ಈ ಸುದ್ದಿಯನ್ನು ಸ್ಟಾರ್ ಜೋಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆಲಿಯಾ ಭಟ್‌ಗೆ ಮುಂಬೈನ ಸರ್ ಎಚ್‌ಎನ್ ರಿಲಾಯನ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಆಲಿಯಾ ಭಟ್ ತಾಯಿ ಸೋನಿ ರಜ್ಡಾನ್, ರಣಬೀರ್ ತಾಯಿ ನೀತು ಕಪೂರ್ ಮತ್ತು ಸಹೋದರಿ ರಿದ್ದಿಮ ಕೂಡಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು. ಸುದ್ದಿ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ತಾರೆಯರಾದ ಅಕ್ಷಯ್‌ಕುಮಾರ್, ಸೋನಮ್ ಕಪೂರ್, ಝೋಯಾ ಅಕ್ತರ್ ಮತ್ತು ಮಾಧುರಿ ದೀಕ್ಷಿತ್ ಸೇರಿದಂತೆ ಚಿತ್ರರಂಗದವರು ಮತ್ತು ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಎಪ್ರಿಲ್ 14 ರಂದು ಮುಂಬೈಯ ಬಾಂದ್ರಾ ವಾಸ್ತು ಅಪಾರ್ಚ್‌ಮೆಂಟ್‌ನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದರು. ರಣಬೀರ್ ತಾಯಿ ನೀತು ಕಪೂರ್, ಸಹೋದರಿ ರಿದ್ಧಿಮಾ ಕಪೂರ್ ಸಹಾನಿ, ಶಶಿ ಕಪೂರ್ ಅವರ ಮಕ್ಕಳಾದ ಕುನಾಲ್ ಹಾಗೂ ಕರಣ್ ಕಪೂರ್, ರಿಮಾ ಜೈನ್, ರಣಧೀರ್ ಕಪೂರ್, ಕರಿಶ್ಮಾ ಹಾಗೂ ಕರೀನಾ ಕಪೂರ್, ಸೈಫ್ ಅಲಿ ಖಾನ್, ಶಮ್ಮಿ ಕಪೂರ್ ಅವರ ಪತ್ನಿ ನೈಲಾ ದೇವಿ, ಅರ್ಮಾನ್ ಜೈನ್, ನವ್ಯಾ ನಂದಾ ಭಾಗಿಯಾಗಿದ್ದರು.
