ಪಠಾಣ್ ಚಿತ್ರದ ಯಶಸ್ಸಿನ ಬಳಿಕ ಜವಾನ್​ ಖುಷಿಯಲ್ಲಿರುವ ನಟ ಶಾರುಖ್​ ಖಾನ್​, ಕೊನೆಗೂ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ.  

ಒಂದರ ಮೇಲೊಂದರಂತೆ ಸೋಲನ್ನುಂಡು ನಾಲ್ಕೈದು ವರ್ಷ ತೆರೆಮರೆಗೆ ಸರಿದಿದ್ದ ನಟ ಬಾಲಿವುಡ್ ನಟ ಶಾರುಖ್​ ಖಾನ್​ (Shah Rukh Khan) , ಕೊನೆಗೂ ಪಠಾಣ್​ ಚಿತ್ರದ ಭರ್ಜರಿ ಯಶಸ್ಸಿನಿಂದ ಚಿಗುರಿಕೊಂಡಿದ್ದಾರೆ. ಜೊತೆಗೆ ಮಕಾಡೆ ಮಲಗಿದ್ದ ಬಾಲಿವುಡ್​ಗೂ ಜೀವ ತುಂಬಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸತತ ಸೋಲು ಅನುಭವಿಸಿದ್ದ ಅವರು ಈಗ ಭರ್ಜರಿ ಗೆಲುವು ಕಂಡಿದ್ದಾರೆ. ‘ಪಠಾಣ್​’ ಚಿತ್ರದಿಂದ ಶಾರುಖ್​ ಅದ್ದೂರಿಯಾಗಿ ಕಮ್​ಬ್ಯಾಕ್​ ಮಾಡಿದ್ದಾರೆ. ಈ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಮೂಲಕ ಶಾರುಖ್​ ಖಾನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಸಾಬೀತಾಗಿದೆ. ಇದೀಗ ಶಾರುಖ್​ ಅವರ ಬಹು ನಿರೀಕ್ಷಿತ ಜವಾನ್​ಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಶಾರುಖ್ ಖಾನ್ ಮತ್ತು ನಯನತಾರಾ (Nayanatara) ಅಭಿನಯದ ಜವಾನ್ ಚಿತ್ರ 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಸೌತ್ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಾರುಖ್ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಶಾರುಖ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ತಿಂಗಳು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು.

ದಕ್ಷಿಣದ ನಟಿ ನಯನತಾರಾ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಅತಿಥಿ ಪಾತ್ರವೂ ಕಾಣಿಸಿಕೊಳ್ಳಲಿದೆ. ದೀಪಿಕಾ ಕಳೆದ ವರ್ಷ ಆಗಸ್ಟ್‌ನಲ್ಲಿ ಚೆನ್ನೈನಲ್ಲಿ ಚಿತ್ರದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ, ರಾಜಸ್ಥಾನ ಮತ್ತು ಔರಂಗಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಪಠಾಣ್​ ಭರ್ಜರಿ ಗೆಲುವಿನ ಬೆನ್ನಲ್ಲೇ ಸಹಜವಾಗಿ ಜವಾನ್​ ಮೇಲೆ ನಿರೀಕ್ಷೆ ಹೆಚ್ಚಿದೆ. ಕಾಲಿವುಡ್ ನಿರ್ದೇಶಕ ಅಟ್ಲಿ ಕುಮಾರ್ (Atlee Kumar)​ ಜೊತೆಗಿನ ‘ಜವಾನ್​’ ಚಿತ್ರಕ್ಕೆ ಫ್ಯಾನ್ಸ್​ ಕಾಯುತ್ತಿದ್ದಾರೆ. ತಮಿಳಿನಲ್ಲಿ ಅಟ್ಲಿ ಕುಮಾರ್ (Atly Kumar) ಅವರು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಈಗ ಅವರು ಶಾರುಖ್​ ಖಾನ್​ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ಹೈಪ್​ ಹೆಚ್ಚಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ ನೋಡಿ ಫ್ಯಾನ್ಸ್​ ವಾವ್​ ಎಂದಿದ್ದಾರೆ. ಜೂನ್​ 2ರಂದು ‘ಜವಾನ್​’ ಸಿನಿಮಾವನ್ನು ತೆರೆ ಕಾಣಿಸಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಅದರ ಮುಂದೂಡಿಕೆಯಾಗಿತ್ತು.

JAWAN ಸೆಟ್​ನಲ್ಲಿ ನಯನತಾರಾ- ಶಾರುಖ್​ ರೊಮಾನ್ಸ್​ ದೃಶ್ಯ ಲೀಕ್​!

ಜವಾನ್ ಸೆಟ್‌ನಿಂದ ಕಳೆದ ತಿಂಗಳು ವಿಡಿಯೋ ಸೋರಿಕೆಯಾಗಿತ್ತು. ಶಾರುಖ್ ಖಾನ್ ಮತ್ತು ನಯನತಾರಾ ವಿಹಾರ ನೌಕೆಯಲ್ಲಿ ನೃತ್ಯ ಮಾಡುತ್ತಿದ್ದರು. ಡ್ಯಾನ್ಸ್ ಸೀಕ್ವೆನ್ಸ್‌ನಲ್ಲಿ ಇಬ್ಬರೂ ರೋಮ್ಯಾನ್ಸ್ (Romance) ಮಾಡುವುದನ್ನು ಸಹ ಕಾಣಬಹುದಾಗಿತ್ತು. ಈ ನೃತ್ಯವನ್ನು ಫರಾ ಖಾನ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ, ಅವರು ಮೊದಲು ಶಾರುಖ್ ಅವರೊಂದಿಗೆ ಬಾಂದ್ರಾ -ವರ್ಲಿ ಸಮುದ್ರ ಸಂಪರ್ಕದಲ್ಲಿ ಕಾಣಿಸಿಕೊಂಡಿದ್ದರು. ದೂರದಿಂದ ತೆಗೆದ ಈ ವಿಡಿಯೋ ವೈರಲ್ ಆಗಿತ್ತು. ನಯನತಾರಾ ಕೆಂಪು ಸೀರೆಯನ್ನು ಧರಿಸಿರುವ ಶಾರುಖ್ ಬಿಳಿ ಪ್ಯಾಂಟ್ ಧರಿಸಿರುವುದನ್ನು ಕಾಣಬಹುದು. ಶಾರುಖ್ ನಯನತಾರಾ ಜೊತೆ ರೋಮ್ಯಾಂಟಿಕ್ ಆಗಿ ಕಾಣುತ್ತಿದ್ದರು ಅವರು ತಮ್ಮ ಸಿಗ್ನೇಚರ್​ ಪೋಸ್ ಕೂಡ ನೀಡುತ್ತಿದ್ದುದನ್ನು ನೋಡಿ ಫ್ಯಾನ್ಸ್​ ಹುಚ್ಚೆದ್ದು ಕುಣಿದಿದ್ದರು.

ಅಂದಹಾಗೆ, ಶಾರುಖ್ ಖಾನ್​ ಸಿನಿಮಾಗಳು ಈವರೆಗೂ ಹಿಂದಿಯಲ್ಲಿ ಮಾತ್ರ ತೆರೆಕಾಣುತ್ತಿದ್ದವು. ಇದೀಗ ಅಟ್ಲಿ ಆ್ಯಕ್ಷನ್ ಕಟ್ ಹೇಳಲಿರುವ ಜವಾನ್ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಹಿಂದಿಯ ಜತೆಗೆ ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದೆ. ಜವಾನ್ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ ಇದುವರೆಗೆ ಶಾರುಖ್ ಖಾನ್ ಆಗಲಿ, ಚಿತ್ರತಂಡದವರಾಗಲಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈಗ ಖುದ್ದು ಶಾರುಖ್ ಚಿತ್ರದ ಕುರಿತು ಒಂದು ಮಹತ್ವದ ಸುಳಿವನ್ನು ನೀಡಿದ್ದಾರೆ. ತಮ್ಮ ಫ್ಯಾನ್ಸ್‌ ಜತೆಗೆ ಟ್ವಿಟರ್‌ನಲ್ಲಿ #AskSRK ಎಂಬ ಪ್ರಶ್ನೋತ್ತರ ಸೆಷನ್ ನಲ್ಲಿ ಜವಾನ್‌ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ತಮ್ಮ ಅಭಿಮಾನಿಗಳ ಜೊತೆ ಸಂವಾದ ನಡೆಸುವ #AskSRKನಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಶಾರುಖ್​ ಜವಾನ್​ ಬಿಡುಗಡೆಯ ದಿನಾಂಕದ ಕುರಿತು ಹೇಳಿದ್ದಾರೆ. 

Cannes: ಪತ್ನಿ ಜೊತೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಶಾರುಖ್ 'ಜವಾನ್' ನಿರ್ದೇಶಕ ಅಟ್ಲೀ: ಫೋಟೋ ವೈರಲ್

 ಈ ವರ್ಷದ ಅತೀ ದುಬಾರಿ ಚಿತ್ರ ಎಂದು ಎನಿಸಿಕೊಂಡಿರುವ ‘ಜವಾನ್ ಚಿತ್ರವನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಿಸುತ್ತಿದೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ (Aniruddh Ravichandar), ಈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.