ಟಿವಿ ಧಾರಾವಾಹಿ ಮತ್ತು ಸಿನಿಮಾ ನಟ ಮುಕುಲ್ ದೇವ್ (54) ನಿಧನರಾಗಿದ್ದಾರೆ. ಅವರ ಸಹನಟರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ಕನ್ನಡದ 'ನಾಗರಹಾವು', 'ರಜನಿ' ಸಿನಿಮಾಗಳಲ್ಲಿ ನಟಿಸಿದ್ದರು.
ಹಿಂದಿ, ಪಂಜಾಬಿ, ತೆಲುಗು, ತಮಿಳು ಸೇರಿದಂತೆ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದ ಮುಕುಲ್ ದೇವ್ (54) ನಿಧನರಾಗಿದ್ದಾರೆ. ಅವರ ಮರಣದ ಬಗ್ಗೆ ನಿಖರವಾದ ಕಾರಣ ಏನು ಎಂದು ತಿಳಿದುಬಂದಿಲ್ಲ.
ಸಹನಟರು ಏನಂದ್ರು?
ನಟಿ ವಿಂದು ದಾರಾ ಸಿಂಗ್ ಅವರು, “ನನ್ನ ಸಹೋದರ ಮುಕುಲ್ ದೇವ್‌ಗೆ ಶಾಂತಿಯುತ ವಿಶ್ರಾಂತಿ ಸಿಗಲಿ. ನಿನ್ನೊಂದಿಗೆ ಕಳೆದ ಸಮಯವನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ತೀನಿ. ಸನ್ ಆಫ್ ಸರ್ದಾರ್ 2 ನಿನ್ನ ಕೊನೆಯ ಕೊಡುಗೆ ಆಗಿರುತ್ತದೆ, ಅದರಲ್ಲಿ ನೀನು ಪ್ರೇಕ್ಷಕರಿಗೆ ಸಂತೋಷ ಕೊಡ್ತೀಯಾ, ನಗು ಮೂಡಿಸ್ತೀಯಾ ಎಂದು ನಾನು ನಂಬಿದ್ದೇನೆ” ಎಂದಿದ್ದಾರೆ.
ನಟಿ ವಿಂದು ಅವರು “ತಮ್ಮ ತಂದೆ-ತಾಯಿಯ ನಿಧನದ ನಂತರ, ಮುಕುಲ್ ಒಂಟಿಯಾಗಿದ್ದರು. ಅವರು ಮನೆಯಿಂದ ಹೊರಗೆ ಬರಲಿಲ್ಲ, ಯಾರನ್ನೂ ಭೇಟಿಯಾಗಲಿಲ್ಲ. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಕ್ಷೀಣಿಸಿತು, ಹೀಗಾಗಿ ಅವರು ಆಸ್ಪತ್ರೆಯಲ್ಲಿದ್ದರು. ಇಡೀ ಕುಟುಂಬಕ್ಕೆ ನಾನು ಸಂತಾಪ ಸೂಚಿಸುವೆ. ಮುಕುಲ್ ಅದ್ಭುತ ವ್ಯಕ್ತಿಯಾಗಿದ್ದರು, ನಾವೆಲ್ಲರೂ ಅವರನ್ನು ಕಳೆದುಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ನಟಿ ದೀಪ್ಶಿಖಾ ನಾಗ್ಪಾಲ್ ಕೂಡ “ಮುಕುಲ್ ಇನ್ನಿಲ್ಲ ಎಂದು ನಂಬಲಾಗದು,” ಎಂದಿದ್ದಾರೆ.
ನಟ ಮನೋಜ್ ಬಾಜಪೇಯಿ ಅವರು, “ನಾನು ಏನು ಅನುಭವಿಸ್ತಿದ್ದೀನಿ ಎನ್ನೋದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಮುಕುಲ್ ನನಗೆ ಸಹೋದರನಂತೆಯೇ ಇದ್ದ, ಅವರ ಉತ್ಸಾಹ, ಆತ್ಮೀಯತೆಗೆ ಸರಿ ಸಾಟಿಯಿಲ್ಲ. ತುಂಬ ಬೇಗ, ತುಂಬಾ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಅವರ ಕುಟುಂಬ, ದುಃಖದಲ್ಲಿರುವ ಎಲ್ಲರಿಗೂ ಶಕ್ತಿ, ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ನಿನ್ನನ್ನು ಕಳೆದುಕೊಂಡೆ, ನನ್ನ ಪ್ರೀತಿಯ ಮುಕುಲ್… ಮತ್ತೆ ಭೇಟಿಯಾಗುವವರೆಗೆ, ಓಂ ಶಾಂತಿ.”
ಮುಕುಲ್ ದೇವ್ ಅವರು ಹಿಂದಿ, ಪಂಜಾಬಿ, ತೆಲುಗು, ತಮಿಳು, ಕನ್ನಡ, ಬಂಗಾಳಿ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. 1996ರಲ್ಲಿ ‘ಮುಮ್ಕಿನ್’ ಧಾರಾವಾಹಿಯೊಂದಿಗೆ ಕರಿಯರ್ ಆರಂಭಿಸಿದ್ದ ಮುಕುಲ್ ದೇವ್ ಅವರು, ಅದೇ ವರ್ಷ ಸುಷ್ಮಿತಾ ಸೇನ್ ಜೊತೆಗೆ ‘ದಸ್ತಕ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ‘ಯಮ್ಲಾ ಪಗ್ಲಾ ದೀವಾನಾ’, ‘ಆರ್... ರಾಜ್‌ಕುಮಾರ್’, ‘ಸನ್ ಆಫ್ ಸರ್ದಾರ್’, ‘ಜೈ ಹೋ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ಸೇಂಟ್ ಕೊಲಂಬಸ್ ಶಾಲೆಯಲ್ಲಿ ಶಿಕ್ಷಣ ಪಡೆದ ಮುಕುಲ್, ರಾಯ್‌ಬರೇಲಿಯ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್‌ನಿಂದ ಏರೋನಾಟಿಕ್ಸ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಕನ್ನಡದಲ್ಲಿ ‘ರಜನಿ’, ನಟಿ ರಮ್ಯಾ ಅವರ ‘ನಾಗರಹಾವು’ ಸಿನಿಮಾಗಳಲ್ಲಿ ಅವರು ನಟಿಸಿದ್ದರು.
2021ರಲ್ಲಿ ನೀಡಿದ ಸಂದರ್ಶನದಲ್ಲಿ, “ನಾನು ಇಷ್ಟಪಟ್ಟರೂ ಕೂಡ ಚಿತ್ರರಂಗದ ಬಗ್ಗೆ ನಾನು ದೂರು ಹೇಳಲಾರೆ. ‘ದಸ್ತಕ್’ ಸಿನಿಮಾದಿಂದ ನನಗೆ ದೊರೆತ ಆರಂಭ, ನಂತರ ಮಾಡಿದ ಸಿನಿಮಾಗಳು, ಧಾರಾವಾಹಿ ಇವೆಲ್ಲವೂ ತುಂಬಾ ತೃಪ್ತಿ ನೀಡಿವೆ. ಇಂದಿನ ಸ್ಪರ್ಧೆಯನ್ನು ನೋಡಿದಾಗ, ನಾನು ಸಾಕಷ್ಟು ಚೆನ್ನಾಗಿ ಮಾಡಿದ್ದೇನೆ ಎನಿಸುತ್ತದೆ” ಎಂದಿದ್ದರು.
“ನನಗೆ ಗೊತ್ತಿಲ್ಲದೇ, ಚಿತ್ರರಂಗದಲ್ಲಿ ನಾನು ಒಂದು ವಿಶಿಷ್ಟ ಸ್ಥಾನವನ್ನು ರೂಪಿಸಿಕೊಂಡಿದ್ದೇನೆ. ‘ಯಮ್ಲಾ ಪಗ್ಲಾ ದೀವಾನಾ’ ಅಥವಾ ‘21 ಸರ್ಫರೋಶ್ - ಸರಗರ್ಹಿ 1897’ ಸಿನಿಮಾದಲ್ಲಿನ ಪಾತ್ರಗಳಿಗೆ ನನ್ನನ್ನೇ ಕರೆಯುತ್ತಾರೆ, ಏಕೆಂದರೆ ಆ ಪಾತ್ರಗಳಿಗೆ ನಾನೇ ಸೂಕ್ತ ಎಂದು ಅವರಿಗೆ ಗೊತ್ತಿದೆ” ಎಂದು ಮುಕುಲ್ ಹೇಳಿದ್ದಾರೆ.
