ಬಾಲಿವುಡ್ ನಟ ಅನುಪಮ್ ಖೇರ್ ಅವರು ಅದ್ಭುತವಾದ ನಟನೆ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಎರಡನೇ ಮದುವೆಯಾದ್ರೂ ಕೂಡ, ಬಯೋಲಾಜಿಕಲ್ ಮಗು ಇಲ್ಲ ಎಂದು ಅವರು ಹೇಳಿದ್ದಾರೆ.
540ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ವಯಸ್ಸು 70 ಆದರೂ ಕೂಡ, ಬಯೋಲೋಜಿಕಲ್ ಮಗು ಮಾಡಿಕೊಂಡಿಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಅನುಪಮ್ ಖೇರ್‌ಗೆ ಸ್ವಂತ ಮಗು ಇಲ್ಲ!
ಅನುಪಮ್ ಖೇರ್ ಹಾಗೂ ಮಧುಮಾಲ್ತಿ ಕಪೂರ್ ಅವರು ಮದುವೆಯಾಗಿ, ಡಿವೋರ್ಸ್ ಪಡೆದಿದ್ದಾರೆ. ಆ ಬಳಿಕ 1985ರಲ್ಲಿ ಕಿರಣ್ ಖೇರ್ ಅವರನ್ನು ಮದುವೆಯಾದರು. ಆದರೆ ಈ ದಂಪತಿಗೆ ಮಕ್ಕಳಿಲ್ಲ. ಈ ಬಗ್ಗೆ ಅನುಪಮ್ ಮಾತನಾಡಿದ್ದಾರೆ. “ನಮ್ಮದೇ ಆದ ಮಗು ಇಲ್ಲದಿರೋದು, ಒಂದು ರೀತಿಯ ಖಾಲಿತನದ ಭಾವನೆ ಕಾಡುತ್ತದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಮಗು ಇಲ್ಲದಿರೋದು ಕೊರತೆ ತರತ್ತೆ!
1985ರಲ್ಲಿ ವಿವಾಹವಾದ ಅನುಪಮ್, ಕಿರಣ್ ಖೇರ್, ಆರಂಭದಲ್ಲಿ ಫ್ರೆಂಡ್ಸ್ ಆಗಿದ್ದರು, ಆ ಬಳಿಕ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಆದರೂ, ನಮ್ಮ ಸ್ವಂತ ಮಕ್ಕಳ ಬೆಳವಣಿಗೆಯನ್ನು ಕಣ್ಣಾರೆ ಕಾಣದಿರೋದು ಒಂದು ರೀತಿಯ ಕೊರತೆ ಎಂದು ಹೇಳಿದ್ದಾರೆ.
ಗರ್ಭಪಾತ ಆಯ್ತು!
ರಾಜ್ ಶಮಾನಿಯವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ, "ಕಿರಣ್ ಗರ್ಭದಲ್ಲಿ ಮಗು ಸರಿಯಾಗಿ ಬೆಳೆಯುತ್ತಿರಲಿಲ್ಲ. ಹೀಗಾಗಿ ಗರ್ಭಪಾತ ಮಾಡಬೇಕಾಯಿತು. ನಾನು ದೊಡ್ಡ ದೊಡ್ಡ ಗುರಿ ಇಟ್ಕೊಂಡು ತುಂಬಾ ಬ್ಯುಸಿಯಾಗಿದ್ದೆ. ವೈಯಕ್ತಿಕ ವಿಷಯಕ್ಕಿಂತ ವೃತ್ತಿ ಜೀವನದ ಕಡೆಗೆ ಜಾಸ್ತಿ ಟೈಮ್ ಕೊಟ್ಟಿದ್ದೆ” ಎಂದು ಹೇಳಿದ್ದಾರೆ.
ನನ್ನ ಹೆಂಡ್ತಿ ಮಗನ ಜೊತೆ ಯಾವುದೇ ಸಮಸ್ಯೆ ಇಲ್ಲ!
ಕಿರಣ್ ಖೇರ್ ಅವರು ಮೊದಲು ಗೌತಮ್ ಬೆರ್ರಿ ಜೊತೆಗೆ ಮದುವೆಯಾಗಿದ್ದರು. ಇವರಿಗೆ ಓರ್ವ ಮಗ ಇದ್ದಾನೆ. ಆ ಬಳಿಕ ಅವರು ಅನುಪಮ್ ಖೇರ್‌ರನ್ನು ಮದುವೆಯಾಗಿದ್ದರು. “ಅನುಪಮ್ ಅವರು ಸಿಕಂದರ್‌ಗೆ ಕೇವಲ ನಾಲ್ಕು ವರ್ಷ ಇದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದರು. ಇಷ್ಟು ವರ್ಷಗಳಲ್ಲಿ ಇಬ್ಬರೂ ಸುಂದರ ಆತ್ಮೀಯತೆ ಬೆಳೆಸಿಕೊಂಡಿದ್ದೇವೆ. ನಾನು ಸಿಕಂದರ್‌ನೊಂದಿಗೆ ತುಂಬಾ ಸಂತೋಷವಾಗಿದ್ದೇನೆ. ಸಿಕಂದರ್ ಜೊತೆ ನನಗೆ ಯಾವುದೇ ಸಮಸ್ಯೆಯಿಲ್ಲ, ಆದರೆ ಮಗುವೊಂದು ಬೆಳೆಯುವುದನ್ನು ನೋಡುವುದು ಒಂದು ವಿಶೇಷ ಆನಂದ” ಎಂದು ಅನುಪಮ್ ಖೇರ್ ಹೇಳಿದ್ದಾರೆ.
ವೃತ್ತಿ ಜೀವನದ ಕಡೆಗೆ ಮುಖ ಮಾಡಿದೆ!
"ನಾನು ಮಕ್ಕಳನ್ನು ತುಂಬಾ ಇಷ್ಟಪಡುತ್ತೇನೆ, ನನ್ನ ಫೌಂಡೇಶನ್ ಮಕ್ಕಳಿಗಾಗಿ ಸಾಕಷ್ಟು ಕೆಲಸ ಮಾಡುತ್ತದೆ. ಕೆಲವೊಮ್ಮೆ, ನಮ್ಮದೇ ಮಗುವನ್ನು ಸಾಕುವುದು ಒಳ್ಳೆಯದು ಅಂತ ಅನಿಸುತ್ತದೆ. ಇದನ್ನು ನನ್ನ ಜೀವನದಲ್ಲಿ ಒಂದು ದುರಂತವೆಂದು ಪರಿಗಣಿಸೋದಿಲ್ಲ. ನಮ್ಮ ಕುಟುಂಬದ ಸಕಾರಾತ್ಮಕ ಅಂಶಗಳು, ವೃತ್ತಿಪರ ಸಾಧನೆಗಳ ಮೇಲೆ ಗಮನ ಹರಿಸುವೆ” ಎಂದು ಹೇಳಿದ್ದಾರೆ.
ಅನುಪಮ್ ಖೇರ್ ನಿರ್ದೇಶನದ ಸಿನಿಮಾ ರಿಲೀಸ್
ಅನುಪಮ್ ಖೇರ್ ನಿರ್ದೇಶನದ ಮೊದಲ ಸಿನಿಮಾ, ವಿಮರ್ಶಕರಿಂದ 'ತನ್ವಿ: ದಿ ಗ್ರೇಟ್' ಸಿನಿಮಾವು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಜುಲೈ 18, 2025ರಂದು ಈ ಸಿನಿಮಾವು ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ.
ಅನುಪಮ್ ಖೇರ್‌ರ ಸಾಧನೆಗಳು
ಭಾರತೀಯ ಚಿತ್ರರಂಗದಲ್ಲಿ 40 ವರ್ಷಗಳಿಗೂ ಅಧಿಕ ಕಾಲ ತೊಡಗಿಸಿಕೊಂಡಿರುವ ಅನುಪಮ್ ಖೇರ್, 540ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸಾರಾಂಶ್', 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ', 'ಎ ವೆಡ್‌ನೆಸ್‌ಡೇ', 'ದ ಕಾಶ್ಮೀರ್ ಫೈಲ್ಸ್'ನಂತಹ ಸಿನಿಮಾಗಳ ಮೂಲಕ ಅವರು ದೇಶ-ವಿದೇಶಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ. 'ಆಕ್ಟರ್ ಪ್ರಿಪೇರ್ಸ್' ಮೂಲಕ ಹೊಸ ಪೀಳಿಗೆಯ ಕಲಾವಿದರಿಗೆ ತರಬೇತಿ ನೀಡುವ ನಟನಾ ಶಾಲೆ ಆರಂಭಿಸಿದ್ದಾರೆ. ಅಂದಹಾಗೆ ಕಿರಣ್ ಖೇರ್ ಅವರು ನಟಿ, ರಾಜಕಾರಣಿ, ರಿಯಾಲಿಟಿ ಶೋ ಜಡ್ಜ್ ಆಗಿ ಕೆಲಸ ಮಾಡಿದ್ದಾರೆ.
