ಪುಷ್ಪ 2 ಚಿತ್ರ ನೋಡಲು ಧಾವಂತದಲ್ಲಿ ತೆರಳಿದ ಬೆಂಗಳೂರಿನ 19 ವರ್ಷದ ಯುವಕ ರೈಲಿಗೆ ಬಲಿ!
ಪುಷ್ಪಾ 2 ಚಿತ್ರ ದೇಶ ವಿದೇಶದಲ್ಲಿ ಪ್ರದರ್ಶನ ಕಾಣುತ್ತಿದೆ. ಆದರೆ ಅಭಿಮಾನಿಗಳ ಧಾವಂತ ದುರಂತಕ್ಕೆ ಕಾರಣವಾಗುತ್ತಿದೆ. ನೂಕು ನುಗ್ಗಲಿನಲ್ಲಿ ಮಹಿಳಾ ಅಭಿಮಾನಿ ಮೃತಪಟ್ಟ ಬೆನ್ನಲ್ಲೇ ಇದೀಗ ಬೆಂಗಳೂರಲ್ಲಿ ಪುಷ್ಪಾ2 ಚಿತ್ರಕ್ಕಾಗಿ ತೆರಳಿದ ಯುವಕ ರೈಲಿಗೆ ಬಲಿಯಾದ ದುರಂತ ಘಟನೆ ನಡೆದಿದೆ.
ಬೆಂಗಳೂರು(ಡಿ.07) ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ 2 ಚಿತ್ರಕ್ಕೆ ದೇಶ ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುನಿರೀಕ್ಷಿತ ಚಿತ್ರ ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹಲವು ದಾಖಲೆ ಪುಡಿ ಮಾಡಿದೆ. ಪುಷ್ಪಾ 2 ಚಿತ್ರವನ್ನು ಫಸ್ಟ್ ಡೇ, ಫಸ್ಟ್ ಶೋದಲ್ಲೇ ವೀಕ್ಷಿಸಲು ತೆರಳಿದ ಕಟುಂಬ ಈಗಾಗಲೇ ಆಘಾತಕ್ಕೊಳಗಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ದುರ್ಘಟನೆ ನಡೆದಿದೆ. ಪುಷ್ಪಾ 2 ಚಿತ್ರ ವೀಕ್ಷಿಸಲು ಧಾವಂತದಲ್ಲಿ ತೆರಳಿದ 19 ವರ್ಷದ ಯುವಕ ರೈಲಿಗೆ ಬಲಿಯಾದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
19 ವರ್ಷದ ಪ್ರವೀಣ್ ತಮಚಲಮ್ ದೊಡ್ಡಬಳ್ಳಾಪುರದ ಹಶೆಟ್ಟಿಳ್ಳಿಯಲ್ಲಿ ಐಟಿಐ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ. ಮೂಲತಃ ಆಂಧ್ರ ಪ್ರದೇಶದ ಶ್ರೀಕಾಕುಳಂ. ಆದರೆ ಐಟಿಐ ಡಿಪ್ಲೋಮಾ ವ್ಯಾಸಾಂಗ ಹಾಗೂ ಸಣ್ಣ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರವೀಣ್ ಪುಷ್ಪಾ 2 ಚಿತ್ರ ನೋಡಲ ಕಾತರದಿಂದ ಕಾಯುತ್ತಿದ್ದು. ಆಂಧ್ರ ಪ್ರದೇಶದ ಮೂಲದವನಾಗಿದ್ದ ಕಾರಣ ತೆಲುಗು ನಟ ಅಲ್ಲು ಅರ್ಜುನ್ ಈತನ ಫೇವರಿಟ್ ಆಗಿದ್ದ. ಆಧರೆ ಮೊದಲ ದಿನ ಮೊದಲ ಶೋನಲ್ಲೇ ಚಿತ್ರ ವೀಕ್ಷಿಸಲು ಭಾರಿ ಕಸರತ್ತು ನಡೆಸಿದ್ದ. ಆದರೆ ಸಾಧ್ಯವಾಗಿರಲಿಲ್ಲ.
Pushpa 2:ರೇವತಿ ಸಾವು ಪ್ರಕರಣ ದೂರು ದಾಖಲು, ಅಲ್ಲು ಅರ್ಜುನ್ ಇಂದೇ ಆರೆಸ್ಟ್ ಆಗ್ತಾರಾ?
ಮೊದಲ ಚಿತ್ರ ನೋಡಲು ಸಾಧ್ಯವಾಗದ ಕಾರಣ 2ನೇ ದಿನ ಚಿತ್ರ ನೋಡಲೇಬೇಕು ಎಂದು ಎಲ್ಲಾ ತಯಾರಿ ಮಾಡಿಕೊಂಡಿದ್ದ. ಬಶೆಟ್ಟಿಹಳ್ಳಿಯಲ್ಲಿ ಇಬ್ಬರು ಗೆಳೆಯರೊಂದಿಗೆ ಬಾಡಿಗೆ ಮನಯಲ್ಲಿದ್ದ ಪ್ರವೀಣ್ ಇಂದು ಪುಷ್ಪಾ 2 ಚಿತ್ರ ವೀಕ್ಷಿಸಲು ಮುಂದಾಗಿದ್ದಾನೆ. ಇಬ್ಬರು ಗಳೆಯರ ಜೊತೆ ಗಾಂಧಿನಗರದ ವೈಭವ್ ಸಿನಿಮಾ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಿದ್ದಾನೆ. ಬೆಳಗ್ಗೆ 10 ಗಂಟೆಗೆ ಶೋ ಆರಂಭಗೊಳ್ಳುತ್ತಿತ್ತು. ಆದರೆ ಪ್ರವೀಣ್ ಹಾಗೂ ಆತನ ಗೆಳೆಯರು ತಕ್ಕ ಸಮಯಕ್ಕೆ ಥಿಯೇಟರ್‌ಗೆ ತಲುಪಲು ಧಾವಂತದಲ್ಲಿ ತೆರಳಿದ್ದಾರೆ.
ಬಶೆಟ್ಟಿಹಳ್ಳಿ ರೈಲ್ವೇ ಕ್ರಾಸಿಂಗ್ ಬಳಿ ದೂರದಿಂದ ರೈಲು ಬರುತ್ತಿತ್ತು. ಆದರೆ ಮೊದಲೇ ವಿಳಂಬವಾಗಿದ್ದ ಕಾರಣ ಪ್ರವೀಣ್ ಸುತ್ತ ಮುತ್ತ ನೋಡದೆ ರೈಲು ಕ್ರಾಸಿಂಗ್ ದಾಟಲು ಮುಂದಾಗಿದ್ದಾನೆ. ಇತ್ತ ಈತನ ಹಿಂದೆ ಇಬ್ಬರು ಗೆಳೆಯರು ವೇಗವಾಗಿ ಸಾಗಿದ್ದಾರೆ. ಆದರೆ ಎಕ್ಸ್‌ಪ್ರೆಸ್ ರೈಲು ಒಂದೇ ಸಮನೆ ಆಗಮಿಸಿದೆ. ಗೆಳೆಯರು ಕೊಂಚ ಹಿಂದೆ ಇದ್ದ ಕಾರಣ ಬಚಾವ್ ಆಗಿದ್ದಾರೆ.ಆದರೆ ಪ್ರವೀಣ್ ರೈಲಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗ್ಗೆ 9 ಗಂಟೆಗೆ ಈ ಘಟನೆ ನಡೆದಿದೆ. ಗೆಳೆಯರು ಕಣ್ಣ ಮುಂದೆ ಈ ಘಟನೆ ನಡೆದಿದೆ. ಆತಂಕಗೊಂಡ ಇನ್ನಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಪ್ರವೀಣ್ ರೈಲಿಗೆ ಬಲಿಯಾಗಿದ್ದಾನೆ.
ಪುಷ್ಪಾ 2 ಚಿತ್ರ ವೀಕ್ಷಿಸಲು ಧಾವಂತದಲ್ಲಿ ತೆರಳಿದ 19 ವರ್ಷದ ಯುವಕ ರೈಲು ಡಿಕ್ಕಿಯಾಗಿ ಅಸುನೀಗಿದ್ದಾನೆ. ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಇತ್ತ ಪೋಷಕರಿಗೆ ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರು ಕಂಗಾಲಾಗಿದ್ದಾರೆ.
ಪುಷ್ಪಾ 2 ಚಿತ್ರ ವೀಕ್ಷಿಸುವ ಧಾವಂತ ಅಭಿಮಾನಿಗಳಿಗೆ ಮುಳುವಾಗುತ್ತಿದೆ. ಹೈದರಾಬಾದ್‌ನಲ್ಲಿ ಪುಷ್ಪಾ 2 ಚಿತ್ರ ವೀಕ್ಷಿಸಲು ಕುಟುಂಬ ಸಮೇತ ತೆರಳಿದ್ದ ಅಭಿಮಾನಿ ರೇವತಿ ದಾರುಣವಾಗಿ ಅಂತ್ಯಕಂಡ ಘಟನೆ ನಡೆದಿದೆ. ಪತಿ, ಪುತ್ರನ ಜೊತೆ ಥಿಯೇಟರ್‌ಗೆ ಆಗಮಿಸಿದ್ದ ರೇವತಿ ಚಿತ್ರ ವೀಕ್ಷಿಸಲು ಥಿಯೇಟರ್ ಮುಂದೆ ಸಾಲಾಗಿ ನಿಂತಿದ್ದಾರೆ. ಆದರೆ ಥಿಯೇಟರ್ ಒಳಗೆ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಿದ್ದಂತೆ ನೂಕು ನುಗ್ಗಲು ಸೃಷ್ಟಿಯಾಗಿದೆ. ಇದರಿಂದ ರೇವತಿ, ಆಕೆಯ ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ರೇವತಿ ಸ್ಥಳದಲ್ಲೇ ಮೃತಪಟ್ಟರೆ, 9 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಿಸಿದ ಘಟನೆ ನಡೆದಿತ್ತು.